ಬೆಂಗಳೂರು(ಸೆ.01): ಹೊಸ ಹೊಸ ಹೆಸರಿಟ್ಟುಕೊಂಡು ಬರುತ್ತಿರುವ ಸ್ಮಾರ್ಟ್‌ಫೋನುಗಳ ಪೈಕಿ ಮುಕ್ಕಾಲು ಪಾಲು ಚೈನಾಮೇಡ್ ಫೋನುಗಳೇ ಆಗಿರುತ್ತವೆ. ಆರೇಳು ವರ್ಷಗಳ ಹಿಂದೆ ಬ್ರಾಂಡ್‌ನೇಮ್ ಇಲ್ಲದೇ, ಚೈನಾ ಸೆಟ್ ಅಂತ ಸಾರಾಸಗಟಾಗಿ ಕರೆಸಿಕೊಳ್ಳುತ್ತಿದ್ದ ಫೋನುಗಳೆಲ್ಲವೂ ಇವತ್ತು ಚಂದದ ಹೆಸರಿಟ್ಟಕೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಈ ಫೋನುಗಳ ಅನುಕೂಲವೆಂದರೆ ಇವೆಲ್ಲದರ ಬೆಲೆಗಳೂ ಹತ್ತುಸಾವಿರ  ರೂಪಾಯಿಗಿಂತ ಕಡಿಮೆ. ಹಾಗಂತ ನೋಡುವುದಕ್ಕೂ ಇವು ಚಂದವಿರುತ್ತವೆ. ಇದೀಗ ನಮ್ಮ ಕೈಗೆ ಬಂದಿರುವ ಇನ್‌ಫಿನಿಕ್ಸ್ ನೋಟ್ 5 ಕೂಡ ಮುದ್ದಾದ ಫೋನು.  ಹೊಳೆಯುವ ಬಣ್ಣ, ಗಟ್ಟಿ ದೇಹ, ವರ್ಣರಂಜಿತ ಡಿಸ್‌ಪ್ಲೇ, ಅಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್, ಒಂದು ವಾರಕ್ಕೆ ಸಾಕಾಗುವಷ್ಟು ದೊಡ್ಡ ಬ್ಯಾಟರಿ, ಬೆಳ್ಳಗೆ ಮಾಡಿ ಫೋಟೋ ತೆಗೆಯುವ ಆಪ್ಷನ್ನು, ಫಿಂಗರ್‌ಪ್ರಿಂಟ್ ಅನ್‌ಲಾಕ್, ಸಾಕಷ್ಟು ಸ್ಪೇಸು, ಎರಡು ವೇರಿಯಂಟ್, ಸಾಧಾರಣ ಹಿಂಬದಿಯ ಕೆಮರಾ, ಅದ್ಭುತ ಸೆಲ್ಫೀ ಕೆಮರಾ.

ಆಗಸ್ಟ್ 31 ರಿಂದ ಫ್ಲಿಪ್‌ಕಾರ್ಟಲ್ಲಿ ಈ ಫೋನು ಸಿಗುತ್ತದೆ. ಐಸ್ ಬ್ಲೂ, ಮಿಲಾನ್ ಬ್ಲಾಕ್ ಮತ್ತು ಬರ್ಲಿನ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಸಿಗುತ್ತವೆ. ಈ ಬಣ್ಣಗಳು ಯಾವುವು ಎಂದು ಹೆಸರಿನಿಂದ ಪತ್ತೆಹಚ್ಚುವ ಬದಲು ನೋಡಿಯೇ ಕಣ್ತುಂಬಿಕೊಂಡರೆ ವಾಸಿ. ನಮಗೆ ಸಿಕ್ಕ ಫೋನ್ ಐಸ್‌ಬ್ಲೂ ಬಣ್ಣದ್ದು. ಈ ಫೋನಿನ ಹಿಂಬದಿಯಲ್ಲೂ ಮುಖ ನೋಡಿಕೊಳ್ಳಬಹುದು. ಅಷ್ಟು ನಯವಾಗಿದೆ ಬ್ಯಾಕ್ ಕವರ್. ಪಾಲಿಕಾರ್ಬೋನೇಟ್ ಕವರ್‌ಗೆ ಹತ್ತು ಲೇಯರ್ ಪೇಂಟ್ ಹಚ್ಚಲಾಗಿದೆ ಅಂತಲೂ ಮಾಹಿತಿ ಇದೆ.

ಹೀಗಾಗಿ ಹತ್ತು ಸಾವಿರ ರೂಪಾಯಿಯೊಳಗಿನ ಫೋನುಗಳ ಪೈಕಿ ಇದೇ ಅತೀ ಚೆಂದ. ಫೋನ್ ಹಿಂಬಾಗದಲ್ಲೇ ಬೆರಳಚ್ಚಿನ ಮೂಲಕ ಫೋನ್ ಅನ್‌ಲಾಕ್ ಮಾಡುವ ಆಪ್ಷನ್ ಕೂಡ ಇದೆ. ಆದರೆ ಫೋನು ಮಾತ್ರ ನಿಮ್ಮ ಬೆರಳ ಗುರುತು ಹಿಡಿಯುತ್ತದೆ ಎಂಬ ಖಾತ್ರಿಯಿಲ್ಲ. ನೀವು ದಾಖಲಿಸಿದ ಬೆರಳೇ ನಿಮ್ಮದಲ್ಲ ಅಂತ ಅದು ಪದೇ ಪದೇ ನಿರಾಕರಿಸುತ್ತದೆ. ಹೀಗಾಗಿ ಪಿನ್ ಹಾಕಿ ಫೋನ್ ಚಾಲೂ ಮಾಡುವುದೇ ಸೇಫ್ ಆಪ್ಷನ್.

32 ಜಿಬಿ ಸ್ಪೇಸು 3 ಜಿಬಿ ರ‍್ಯಾಮ್ , 64 ಜಿಬಿ ಸ್ಪೇಸು 4 ಜಿಬಿ ರ‍್ಯಾಮ್ ಹೀಗೆ ಎರಡು ವೇರಿಯಂಟ್‌ಗಳಿವೆ. ಮಿಕ್ಕಂತೆ 18:9 ಆ್ಯಸ್ಪೆಕ್ಟ್ ರೇಷಿಯೋ ಡಿಸ್‌ಪ್ಲೇ, 1080-2160  ಪಿಕ್ಸೆಲ್, ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಮುಂತಾದ ಅನುಕೂಲಗಳಿವೆ. ಈ ಗೊರಿಲ್ಲಾ ಗ್ಲಾಸಿನಿಂದ ಏನುಪಯೋಗ ಎಂದು ಕೇಳಿದರೆ ಆಕಾಶ
ನೋಡಬೇಕಾಗುತ್ತದೆ. ಫೋನ್ ಕೆಳಗೆ ಬಿದ್ದಾಗ ಗೊರಿಲ್ಲಾ ಕೂಡ ಕಾಪಾಡಲಾರದು. ಶಾರ್ಪ್‌ನೆಸ್ ಚೆನ್ನಾಗಿದೆ. ಸೂರ್ಯನ ಬೆಳಕಿನಲ್ಲೂ ಸ್ಕ್ರೀನು ಸರಿಯಾಗಿ ಕಾಣಿಸುತ್ತದೆ.

ಈ ಹಿಂದೆ ಇದೇ ಅಂಕಣದಲ್ಲಿ ಆನರ್, ಆಸೂಸ್ ಝೆನ್‌ಫೋನ್ ಮಂತಾದ ಕೆಲವು ಬ್ರಾಂಡುಗಳನ್ನು ಪರಿಚಯಿಸಿದ್ದೆವು. ಅವುಗಳಿಗೆ ಹೋಲಿಸಿದರೆ ಇದು ಕೊಂಚ
ಮೇಲಿದೆ.  ಆದರೆ ದಕ್ಷತೆಯ ಮಟ್ಟಿಗೆ ಆಸೂಸ್ ಬೆಸ್ಟು. 12 ಮೆಗಾಪಿಕ್ಸೆಲ್ ಬ್ಯಾಕ್ ಕೆಮರಾ, ಡಬಲ್ ಫ್ಲಾಶ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸು, ಆಟೋ ಸೀನ್ ಡಿಟೆಕ್ಷನ್ ಮುಂತಾದ ಸೌಲಭ್ಯಗಳಿವೆ. ನಾರ್ಮಲ್, ಬ್ಯೂಟಿ, ಪೋಟ್ ರೇರ್ಟ್, ಪ್ರೊಫೆಷಶನಲ್, ಪನೋರಮಾ, ನೈಟ್, ಟೈಮ್‌ಲ್ಯಾಪ್ಸ್- ಹೀಗೊಂದಷ್ಟು ಶೂಟಿಂಗ್ ಮೋಡ್‌ಗಳೂ ಲಭ್ಯ. 

ಆದರೆ ಕೆಮರಾದ ಗುಣಮಟ್ಟದ ಅಷ್ಟಕಷ್ಟೆ. ಕಾಸಿಗೆ ತಕ್ಕ ಕಜ್ಜಾಯ ಅನ್ನುವುದಕ್ಕೆ ಅಡ್ಡಿಯಿಲ್ಲ. 4500 ಎಂಎಎಚ್ ಬ್ಯಾಟರಿ ಈ ಫೋನಿನ ಹೈಲೈಟ್. ನಾವಿದನ್ನು ಐದು ದಿನ ರೀಚಾರ್ಜ್ ಮಾಡದೇ ಇದ್ದರೂ ಜೀವ ಹಿಡಿದುಕೊಂಡಿತ್ತು. ಎರಡು ಗಂಟೆಯಲ್ಲಿ ಪೂರ್ತಿ ರೀಚಾರ್ಜ್ ಆಗುತ್ತದೆ. ಟ್ರಾನ್ಸಿಷನ್ ಹೋಲ್ಡಿಂಗ್ ಸಂಸ್ಥೆ ಇದನ್ನು ಕೇವಲ ಆನ್‌ಲೈನ್ ಮಾರುಕಟ್ಟೆಗೆಂದೇ ಬಿಟ್ಟಂತಿದೆ. ಬೆಂಗಳೂರಿನ ಅಂಗಡಿಗಳಲ್ಲಿ ಇದು ಲಭ್ಯವಿಲ್ಲ.