ನವದೆಹಲಿ[ಮೇ.21]: ಕಿಲೋಗ್ರಾಂ ಅನ್ನು ಅಳತೆ ಮಾಡುವ ಹೊಸ ಮಾನದಂಡ ಸೋಮವಾರದಿಂದ ವಿಶ್ವದೆಲ್ಲೆಡೆ ಜಾರಿಗೆ ಬಂದಿದೆ. ವಿಶ್ವ ಮಾಪನಶಾಸ್ತ್ರ ದಿನದ ಅಂಗವಾಗಿ ವಿಜ್ಞಾನಿಗಳು ಈ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಅದೇ ರೀತಿ ಭಾರತದಲ್ಲಿಯೂ ಕಿ.ಲೋಗ್ರಾಂನ ನೂತನ ಮಾನದಂಡವನ್ನು ಅಳವಡಿಸಿಕೊಳ್ಳಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕೆ.ಜಿ.ಯನ್ನು ಲೆಕ್ಕ ಹಾಕುವ ವ್ಯವಸ್ಥೆಯನ್ನೇ ಬದಲಿಸಲು ಫ್ರಾನ್ಸ್‌ನಲ್ಲಿ ಸಭೆ ಸೇರಿದ್ದ 60 ರಾಷ್ಟ್ರದ ಪ್ರತಿನಿಧಿಗಳು ನಿರ್ಧರಿಸಿದ್ದರು. ಅಂದು ಕೊಗೊಂಡ ನಿರ್ಣಯ ಇದೀಗ ಜಾರಿಗೆ ಬರುತ್ತಿದೆ. ಹೊಸ ವ್ಯವಸ್ಥೆಯಿಂದ ದೈನಂದಿನ ಜೀವನದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಅಂಗಡಿಯವ ತೂಕ ಮಾಡುವ ವಿಧಾನವೂ ಬದಲಾವಣೆಯಾಗುವುದಿಲ್ಲ. ಆದರೆ ವಿಶ್ವಕ್ಕೆ ಅತ್ಯಂತ ನಿಖರವಾದ ‘ಕಿಲೋಗ್ರಾಂ’ ಲಭ್ಯವಾಗುತ್ತದೆ.

ಯಾಕೆ ಬದಲಾವಣೆ?

1 ಕೆ.ಜಿ. ಎಂದರೆ ಎಷ್ಟುಎಂಬುದನ್ನು ಮಾಪನ ಮಾಡುವುದಕ್ಕೆ 1889ರಿಂದ ಒಂದೇ ವ್ಯವಸ್ಥೆ ಬಳಸಲಾಗುತ್ತಿದೆ. ಅದನ್ನು ‘ಲೇ ಗ್ರ್ಯಾಂಡ್‌ ಕೆ’ ಎಂದು ಕರೆಯಲಾಗುತ್ತದೆ. ಶೇ.90ರಷ್ಟುಪ್ಲಾಟಿನಂ ಹಾಗೂ ಶೇ.10ರಷ್ಟುಇರಿಡಿಯಂ ಅನ್ನು ಮೂರು ಸುತ್ತಿನ ಗಾಜಿನ ಕವಚದಲ್ಲಿ ಸಂರಕ್ಷಿಸಿ, ಅದನ್ನೇ ಮಾಪನವಾಗಿ ಪರಿಗಣಿಸಲಾಗುತ್ತಿದೆ. ಇದರ ಪ್ರಮುಖ ಮಾದರಿ ಫ್ರಾನ್ಸ್‌ನ ಅಂತಾರಾಷ್ಟ್ರೀಯ ತೂಕ ಮತ್ತು ಅಳತೆ ಸಂಸ್ಥೆಯಲ್ಲಿದೆ. ಇದೇ ರೀತಿಯ 67 ಮಾದರಿಗಳು ವಿಶ್ವದ ಮೂಲೆಮೂಲೆಯಲ್ಲಿವೆ. ಆದರೆ ಲೇ ಗ್ರ್ಯಾಂಡ್‌ ಕೆ ಮಾಪನ ಧೂಳು ಹಿಡಿಯುತ್ತದೆ. ವಾತಾವರಣದಿಂದಲೂ ಪ್ರಭಾವಕ್ಕೆ ಒಳಗಾಗುತ್ತದೆ. ಸ್ವಚ್ಛಗೊಳಿಸುವಾಗ ತೂಕ ಬದಲಾವಣೆಯಾಗುವ ಅಪಾಯವಿರುತ್ತದೆ. ಈಗಾಗಲೇ ಈ ಮಾಪನ 50 ಮೈಕ್ರೋ ಗ್ರಾಂನಷ್ಟುತೂಕ ಕಳೆದುಕೊಂಡಿದೆ. ಕಣ್ಣಿನ ರೆಪ್ಪೆಯಲ್ಲಿರುವ 1 ಕೂದಲಿಗೆ ಇದು ಸಮ! ಇದರಿಂದ ಎಚ್ಚೆತ್ತಿರುವ ತಜ್ಞರು, ಮುಂದೆ ಈ ರೀತಿ ತೂಕ ಕಡಿತವಾಗದಂತೆ ನೋಡಿಕೊಳ್ಳಲು ಹೊಸ ವಿಧಾನದ ಮೊರೆ ಹೋಗಿದ್ದಾರೆ.

ಹಿಂದೆ ತೂಕ ಹೇಗಿತ್ತು?

100ಕ್ಕೂ ಹೆಚ್ಚು ದೇಶಗಳು ದ್ರವ್ಯರಾಶಿಯನ್ನು ಅಳೆಯಲು ಮೆಟ್ರಿಕ್‌ ಸಿಸ್ಟಮ್‌ ಅನ್ನು ಅಳವಡಿಸಿಕೊಂಡಿವೆ. ಒಂದು ಲೀಟರ್‌ ನೀರನ್ನು ಮಂಜುಗಡ್ಡೆ ರೂಪಕ್ಕೆ ಇಳಿಸಿ, ಅದನ್ನೇ ಒಂದು ಕೆ.ಜಿ. ಎಂದು ಪರಿಗಣಿಸಲಾಗುತ್ತಿತ್ತು. ಇದೇ ರೀತಿಯ ಬೇರೆ ಬೇರೆ ಮಾಪನಗಳು ವಿಶ್ವಾದ್ಯಂತ ಬಳಕೆಯಲ್ಲಿದ್ದವು.