ಮತದಾರರ ಪಟ್ಟಿಯಲ್ಲಿ ಇನ್ನು ದೋಷವಿರಲ್ಲ; ಏನಿದು ಹೊಸ ತಂತ್ರಜ್ಞಾನ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 11:10 AM IST
Election Commission launches ERONet; Its features are here
Highlights

  • ದೇಶಾದ್ಯಂತ ಬಂದಿದೆ ಇಆರ್‌ಒ ನೆಟ್
  • ಎರಡು ಮೂರು ಕಡೆ ಹೆಸರು ನೋಂದಣಿಗೆ ಬ್ರೇಕ್
  •  ಕರ್ನಾಟಕದಲ್ಲಿ 5 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ

ಬೆಂಗಳೂರು (ಆ. 20): ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ. ನಮ್ಮ ಹೆಸರನ್ನು ಬೇಕಂತಲೇ ಕೈಬಿಡಲಾಗಿದೆ. ಒಂದು ಪಕ್ಷದ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದೆಲ್ಲ ಆರೋಪ ಮಾಡಲು ಇನ್ಮುಂದೆ ಸಾಧ್ಯವಿಲ್ಲ. ಇದಕ್ಕೆಲ್ಲ ಇತಿಶ್ರೀ ಹಾಡಲು ಕೇಂದ್ರ ಚುನಾವಣಾ ಆಯೋಗ ಇಆರ್‌ಒ ನೆಟ್ ಅಳವಡಿಸಿದೆ.

ಆಧಾರ್  ಕಾರ್ಡ್‌ನಂತೆ ಮತದಾರರ ಗುರುತಿನ ಚೀಟಿಗಳನ್ನೆಲ್ಲ ಒಂದೇ ತಂತ್ರಾಂಶದೊಳಗೆ ಅಳವಡಿಸಿ ಯುನಿಕ್ ಕೋಡ್ ಕೊಡುವ ವ್ಯವಸ್ಥೆಯೇ ಇಆರ್‌ಒ ನೆಟ್. 2 ವರ್ಷ ಹಿಂದೆಯೇ ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ಇಆರ್‌ಒ ನೆಟ್‌ಅನ್ನು ಪರಿಚಯಿಸಿದೆ. ಇದರ ಉದ್ದೇಶ ಮತದಾರರ ಪಟ್ಟಿಯಲ್ಲಿನ ಲೋಪ ದೋಷಗಳನ್ನು ಇನ್ನಿಲ್ಲದಂತೆ ಮಾಡುವುದು. ಪ್ರತಿಯೊಬ್ಬರಿಗೂ ಯುನಿಕ್ ಕೋಡ್ ಬರುವುದರಿಂದ ಎರಡ್ಮೂರು ಕಡೆ ಮತದಾರರ ಯಾದಿಯಲ್ಲಿ ಹೆಸರು
ಇರಲು ಸಾಧ್ಯವೇ ಇರುವುದಿಲ್ಲ.

ಕರ್ನಾಟಕ ಹಾಗೂ ಮಹಾರಾಷ್ಟ್ರಗಳನ್ನು ಹೊರತುಪಡಿಸಿ ೨ ವರ್ಷಗಳ ಹಿಂದೆ ಈ ಪದ್ಧತಿಯನ್ನು ಇತರೆ ರಾಜ್ಯಗಳು ಅಳವಡಿಸಿಕೊಂಡಿವೆ. ಆದರೆ, ಕರ್ನಾಟಕ ಚುನಾವಣೆ ಹಿನ್ನೆಲೆ ಇದನ್ನು ಅಳವಡಿಸಿರಲಿಲ್ಲ. ಇದೀಗ ಚುನಾವಣೆ ಮುಗಿದಿರುವುದರಿಂದ ಧಾರವಾಡ, ಉತ್ತರ ಕನ್ನಡ, ಮಂಡ್ಯ, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಈ ಕೆಲಸ ಈ ಐದು ಜಿಲ್ಲೆಗಳಲ್ಲಿ ಭರದಿಂದ ಸಾಗಿದೆ.

ಲೋಕಸಭೆ ಚುನಾವಣೆಯೊಳಗೆ ಈ ಐದು ಜಿಲ್ಲೆಗಳಲ್ಲಿ ಇಆರ್‌ಒ ನೆಟ್ ಮೂಲಕವೇ ಮತದಾರರ ಯಾದಿ ಅಳವಡಿಸುವ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ನಂತರ ಉಳಿದ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಜಾರಿಯಾಗಲಿದೆ.

ಈ ಮುಂಚೆ ಹೇಗಿತ್ತು?:

ಈ ಮುಂಚೆ ಇಆರ್ ಎಂಎಸ್ (ಎಲೆಕ್ಟ್ರೋಲ್ ರೋಲ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ) ಎಂಬುದರಡಿ ಮತದಾರರ ಯಾದಿ ಸಿದ್ಧಪಡಿಸಲಾಗುತ್ತಿತ್ತು. ಅಂದರೆ ಇದು ರಾಜ್ಯ ವ್ಯಾಪ್ತಿಯಲ್ಲಿರುತ್ತಿತ್ತು. ಇದರಲ್ಲಿ ಲೋಪದೋಷಗಳು ಆಗುತ್ತಿದ್ದವು. ಒಬ್ಬೊಬ್ಬರು ಎರಡ್ಮೂರು ಕಡೆ ತಮ್ಮ ಹೆಸರು ವಿಳಾಸ ತೋರಿಸಿ ಗುರುತಿನ ಚೀಟಿ ಪಡೆಯುತ್ತಿದ್ದ ಉದಾಹರಣೆಗಳು ಉಂಟು.

ಇದರ ಕೆಲಸ ಹೀಗೆ?:

ಇಆರ್‌ಒ ನೆಟ್ (ಎಲೆಕ್ಟ್ರೋಲ್ ರೋಲ್ ನೆಟ್) ತಂತ್ರಾಂಶ. ಮತದಾರರಯಾದಿಯನ್ನು ಕೇಂದ್ರೀಕರಣಗೊಳಿಸುವ ಒಂದು ತಂತ್ರಾಂಶವಿದು. ಇದರಲ್ಲೇ ರಾಜ್ಯದಲ್ಲಿ ಇಷ್ಟು ದಿನ ಚಾಲ್ತಿಯಲ್ಲಿದ್ದ ಇಎಂಆರ್‌ಎಸ್ ವಿಲೀನವಾಗುತ್ತದೆ. ಆಗ ಮತದಾರರ ಯಾದಿ ಕೇಂದ್ರೀಕರಣಗೊಳ್ಳುತ್ತದೆ. ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿರುವ ಹೆಸರು ಗೊತ್ತಾಗುತ್ತವೆ. ಉದಾಹರಣೆಗೆ ರಮೇಶ ಎಂಬಾತನ ಹೆಸರು ಬೆಳಗಾವಿ ಹಾಗೂ ಹುಬ್ಬಳ್ಳಿ ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದರೆ ಈ ಇಆರ್‌ಒ ನೆಟ್‌ನಲ್ಲಿ ಹೆಸರು ಸೇರ್ಪಡೆಯಾದ ತಕ್ಷಣ ಗೊತ್ತಾಗುತ್ತದೆ.

ಆಗ ಆತನಿಗೆ ಏಕಕಾಲಕ್ಕೆ ಬೆಳಗಾವಿ ಹಾಗೂ ಹುಬ್ಬಳ್ಳಿ ಎರಡು ಕಡೆ ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆಗೆ ಬರಲು ತಿಳಿಸಲಾಗುತ್ತದೆ. ಆದರೆ, ಏಕಕಾಲಕ್ಕೆ ಎರಡು ಕಡೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಒಂದೇ ಕಡೆ ಹಾಜರಾಗುತ್ತಾನೆ. ಆಗ ಆತನಿಂದ ಸರಿಯಾದ ಮಾಹಿತಿ ಪಡೆದು ಒಂದು ಕಡೆ ಮಾತ್ರ ಉಳಿಸಿ ಮತ್ತೊಂದು ಕಡೆ ಇದ್ದ ಹೆಸರನ್ನು ಡಿಲಿಟ್ ಮಾಡಲಾಗುತ್ತದೆ. ಆಗ ಆತನಿಗೆ ಒಂದೇ ಕಾರ್ಡ್ ಮಂಜೂರು ಮಾಡಿ ಒಂದೇ ಕೋಡ್ ಕೊಡಲಾಗುತ್ತದೆ. ಇನ್ನು ಹೊಸ ಹೆಸರು ಸೇರ್ಪಡೆಗೂ ಇದೇ ಮಾದರಿ ಅನುಸರಿಸಲಾಗುತ್ತದೆ. ಬೂತ್ ಲೆವೆಲ್ ಆಫೀಸರ್‌ಗಳು ಹೊಸ ಮತದಾರರ ಭಾವಚಿತ್ರ, ವಿಳಾಸ ಹಾಗೂ ಗುರುತಿನ ಚೀಟಿಯ ಯಾವುದಾದರೂ ದಾಖಲೆ ಪಡೆದು ಸ್ಕ್ಯಾನ್ ಮಾಡಿ ಇಆರ್‌ಒ ನೆಟ್‌ನೊಳಗೆ ಸೇರ್ಪಡೆ ಮಾಡುತ್ತಾರೆ.

ಉಪಯೋಗವೇನು?:

ನಕಲಿ ಕಾರ್ಡ್, ಕಾರ್ಡ್ ಗಳಲ್ಲಿನ ಲೋಪದೋಷಗಳು ಇರುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟಿವೆ. ಬೇಕಂತಲೇ ಕೈ ಬಿಟ್ಟಿದ್ದಾರೆ ಎಂಬೆಲ್ಲ ಆರೋಪ ಮಾಡಲು ಸಾಧ್ಯವಾಗುವುದಿಲ್ಲ. ಒಬ್ಬರಿಗೆ ಒಂದೇ ಕೋಡ್ ದೊರೆಯುವುದರಿಂದ ಇದು ಆಧಾರ ಕಾರ್ಡ್‌ನಂತೆ ಕಾಯಂ ಗುರುತಿನ ಚೀಟಿಯಾಗುತ್ತದೆ. 

-ಶಿವಾನಂದ ಗೊಂಬಿ 

loader