ವಾಷಿಂಗ್ಟನ್(ಜ.07): ವಿಶಾಲ ಬ್ರಹ್ಮಾಂಡದಲ್ಲಿ ಜೀವಿಗಳಿರಬಹುದಾದ ಅಥವಾ ಜೀವಿಗಳು ಬದುಕುಲು ಸಾಧ್ಯವಿರುವ ವಾತಾವರಣ ಹೊಂದಿರುವ ಗ್ರಹವೊಂದರ ಅನ್ವೇಷಣೆ ಮಾನವನ ಕನಸು.

ವಿಜ್ಞಾನ  ಕ್ಷೇತ್ರ ಅಭಿವೃದ್ಧಿ ಹೊಂದಿದಂತೆಲ್ಲಾ ಮತ್ತೊಂದು ಭೂಮಿಯ ಅನ್ವೇಷಣೆಯ ಸಾಧ್ಯತೆ ಕೂಡ ಹೆಚ್ಚಾಗತೊಡಗಿದೆ. ಈಗಾಗಲೇ ಭೂಮಿಯನ್ನು ಹೋಲುವ ಅನೇಕ ಗ್ರಹಗಳನ್ನು ಕಂಡುಹಿಡಿಯಲಾಗಿದ್ದು, ಈ ಪಟ್ಟಿಗೆ ಮತ್ತೊಂದು ಗ್ರಹ ಸೇರ್ಪಡೆಯಾಗಿದೆ.

ಹೌದು, ನಾಸಾದ TESS ಟೆಲಿಸ್ಕೋಪ್ ಭೂಮಿಯ ಅವಳಿ ಗ್ರಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಭೂಮಿಯಿಂದ ಬರೋಬ್ಬರಿ 100 ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ರಹಕ್ಕೆ TOI 700 d ಎಂದು ಹೆಸರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹವಾಯಿಯ ಹೊನೊಲುಲುದಲ್ಲಿರುವ ನಾಸಾದ ವೀಕ್ಷಣಾಲಯ, TOI 700 d ಗ್ರಹ ತನ್ನ ಮಾತೃ ನಕ್ಷತ್ರದಿಂದ ಜೀವ ಸಂಕುಲ ಸಲುಹಲು ಅಗತ್ಯವಾಗಿರುವ ದೂರದಲ್ಲಿದೆ ಎಂದು ಹೇಳಿದೆ.

ಈ ಗ್ರಹದ ಮೇಲ್ಮೈಯಲ್ಲಿ ನೀರು ಇರುವ ಸಾಧ್ಯತೆ ಹೆಚ್ಚಾಗಿದ್ದು, ಜೀವ ಸಂಕುಲ ಬದುಕಲು ಬೇಕಾದ ಎಲ್ಲ ಅಗತ್ಯ ವಾತಾವರಣ ಇರುವುದು ಖಚಿತ ಎಂದು ನಾಸಾ ಹೇಳಿದೆ.

ಮಾತೃ ನಕ್ಷತ್ರ TOI 700 ನಮ್ಮ ಸೂರ್ಯನಿಗಿಂತ ಶೇ.40 ಪಟ್ಟು ಚಿಕ್ಕದಾಗಿದ್ದು, ಸೂರ್ಯನಿಗಿಂತ ಕಡಿಮೆ ಉಷ್ಣಾಂಶವನ್ನು ಹೊಂದಿದೆ ಎನ್ನಲಾಗಿದೆ.

ಸಿಕ್ತೊಂದು ಸೂಪರ್ ಅರ್ಥ್: ಸಾಧ್ಯವೇ ಜೀವಿಗಳ ಬರ್ತ್?

ಈ ನಕ್ಷತ್ರ ವ್ಯವಸ್ಥೆಯಲ್ಲಿ ಇದುವರೆಗೂ ಒಟ್ಟು ಮೂರು ಗ್ರಹಗಳನ್ನು ಕಂಡುಹಿಡಿಯಲಾಗಿದ್ದು, TOI 700 b, TOI 700 c ಹಾಗೂ TOI 700 d ಎಂದು ಹೆಸರಿಸಲಾಗಿದೆ.

ಇದರಲ್ಲಿ TOI 700 d ಗ್ರಹ ಭೂಮಿಯನ್ನು ಹೋಲುತ್ತಿದ್ದು, ಗಾತ್ರದಲ್ಲಿ ಭೂಮಿಗಿಂತ ಶೇ.20ರಷ್ಟು ದೊಡ್ಡದಿದೆ. ಇದು ತನ್ನ ಮಾತೃ ನಕ್ಷತ್ರ TOI 700 ನ್ನು ಕೇವಲ 37 ದಿನದಲ್ಲಿ ಸುತ್ತುತ್ತಿದೆ.

ಅಲ್ಲದೇ TOI 700 d ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯನತ್ತ ತಿರುಗಿದ್ದು, ಇದು ಭೂಮಿ-ಚಂದಿರ ನಡುವಿನ ಸಂಬಂಧದಂತೆಯೇ ಇದೆ ಎನ್ನಲಾಗಿದೆ.