ಯಾದಗಿರಿ ರೇಪ್‌ ಕೇಸ್‌ ಬಯಲಿಗೆಳೆದ ಕನ್ನಡಪ್ರಭಕ್ಕೆ ಸದನದಲ್ಲಿ ಶ್ಲಾಘನೆ!

* ‘ಕನ್ನಡಪ್ರಭ’ ನಮ್ಮ ಕಣ್ಣು ತೆರೆಸಿತು, ಆರೋಪಿಗಳನ್ನು ಜೈಲಿಗಟ್ಟಿದ್ದೇವೆ: ಆರಗ

* ಯಾದಗಿರಿ ರೇಪ್‌ ಬಯಲಿಗೆಳೆದ ಕನ್ನಡಪ್ರಭಕ್ಕೆ ಅಭಿನಂದನೆ ಮಳೆ

* ಪೊಲೀಸ್‌ಗೆ ಸುಳಿವೇ ಇಲ್ಲದ ಕೇಸ್‌ ಬಯಲಿಗೆಳೆದ ಪತ್ರಿಕೆಗೆ ಧನ್ಯವಾದ: ಸಿದ್ದು

* ವಿಧಾನಮಂಡಲದಲ್ಲಿ ಸರ್ಕಾರ, ಪ್ರತಿಪಕ್ಷಗಳ ಶಾಸಕರಿಂದ ಪತ್ರಿಕೆಗೆ ಪ್ರಶಂಸೆ

Yadgir rape Case Unveiled By Kannada Prabha Sounds in Karnataka assembly session pod

ಬೆಂಗಳೂರು(ಸೆ.23): ಯಾದಗಿರಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ(Gangrape) ಪ್ರಕರಣವನ್ನು ಬೆಳಕಿಗೆ ತಂದ ‘ಕನ್ನಡಪ್ರಭ’ (kannada Prabha) ಪತ್ರಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲೂ ಬುಧವಾರ ಅಭಿನಂದನೆ ಸಲ್ಲಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಧಾನಸಭೆಯಲ್ಲಿ ಬುಧವಾರವಿಡೀ ನಡೆದ ಚರ್ಚೆಗೆ ಉತ್ತರಿಸುವ ವೇಳೆ ‘ಕನ್ನಡಪ್ರಭ’ ವರದಿಯನ್ನು ಪ್ರಸ್ತಾಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ಕನ್ನಡಪ್ರಭ’ ವರದಿ ಮಾಡದಿದ್ದರೆ ಈ ಪ್ರಕರಣ ಹೊರಗೆ ಬರುತ್ತಲೇ ಇರಲಿಲ್ಲ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯವೂ ಸಿಗುತ್ತಿರಲಿಲ್ಲ. ನಮ್ಮ ಕಣ್ಣು ತೆರೆಸಿದ ‘ಕನ್ನಡಪ್ರಭ’ ಪತ್ರಿಕೆಗೆ ಧನ್ಯವಾದ ಎಂದು ಹೇಳಿದರು.

ಯಾದಗಿರಿ ಮಹಿಳೆಯ ಹಲ್ಲೆ, ಗ್ಯಾಂಗ್‌ರೇಪ್‌: ನಾಲ್ವರು ಕಾಮುಕರು ಅರೆಸ್ಟ್‌!

ಯಾದಗಿರಿ ಘಟನೆ ಎಂಟು ತಿಂಗಳ ಹಿಂದೆ ನಡೆದಿತ್ತು. ಆದರೆ ಯಾರೂ ದೂರು ನೀಡಿರಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಮೇಲೆ ಡಿಜಿ ಬಳಿ ತನಿಖೆ ನಡೆಸಲು ಸೂಚಿಸಿದೆ. ‘ಕನ್ನಡಪ್ರಭ’ ನಮ್ಮ ಕಣ್ಣು ತೆರೆಸಿತು. ಇಲ್ಲದಿದ್ದರೆ ಪ್ರಕರಣ ಪತ್ತೆಯಾಗುತ್ತಿರಲಿಲ್ಲ. ಈಗ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ ಎಂದರು.

ವಿಧಾನಸಭೆಯಲ್ಲಿ(Assembly Session) ಬುಧವಾರ ಮೈಸೂರು ಅತ್ಯಾಚಾರ ಪ್ರಕರಣ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಯಾದಗಿರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಮಾನವೀಯ ಕೃತ್ಯ ನಡೆದು ಹಲವು ತಿಂಗಳುಗಳಾದರೂ ಪೊಲೀಸರಿಗೆ ಸಣ್ಣ ಸುಳಿವೂ ಇರಲಿಲ್ಲ. ವಿಷಯ ಬಹಿರಂಗವಾದರೆ ಕೊಲ್ಲುವುದಾಗಿ ಸಂತ್ರಸ್ತೆಗೆ ಬೆದರಿಕೆ ಒಡ್ಡಿದ್ದರು. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದ ಪೊಲೀಸ್‌ ವ್ಯವಸ್ಥೆ ಎಷ್ಟುನಿಷ್ಕಿ್ರಯವಾಗಿದೆ ಎಂಬುದಕ್ಕೆ ಇದೇ ಉದಾಹರಣೆ. ‘ಕನ್ನಡಪ್ರಭ’ ಪತ್ರಿಕೆಗೆ ಧನ್ಯವಾದ ಹೇಳಬೇಕು ಎಂದರು.

ಘಟನೆ ನೆನೆದು ರೂಪಾ ಗದ್ಗದಿತ:

ಯಾದಗಿರಿ ಘಟನೆಯನ್ನು ಗದ್ಗದಿತರಾಗಿ ಸದನದಲ್ಲಿ ಪ್ರಸ್ತಾಪಿಸಿದ ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌, ಯಾದಗಿರಿಯ ಶಹಾಪುರದಲ್ಲಿ ನಡೆದ ಅಮಾನುಷ, ಅಸಹ್ಯಕರವಾಗಿ ಪೈಶಾಚಿಕ ಕೃತ್ಯ ಎಸಗಿದ ಪ್ರಕರಣವನ್ನು ‘ಕನ್ನಡಪ್ರಭ’ ಬೆಳಕಿಗೆ ತಂದಿದೆ. ಅಷ್ಟುಅಸಹ್ಯವಾಗಿ ಸಿಗರೇಟಿನಿಂದ ಸುಟ್ಟು, ಲೈಂಗಿಕವಾಗಿ ವಿಕೃತಾನಂದ ಅನುಭವಿಸಿ, ಮಾನಸಿಕವಾಗಿ ಕೊಂದಿದ್ದಾರೆ. ಈ ರೀತಿಯ ಹೇಯ ವರ್ತನೆ ಹೇಗೆ ಸಾಧ್ಯ? ನಿಮ್ಮ ತಾಯಿಯೂ ಒಂದು ಹೆಣ್ಣೇ ಅಲ್ಲವೇ? ಅಷ್ಟೊಂದು ಅಮಾನವೀಯ ಗುಣ ಹೇಗೆ ಬರುತ್ತದೆ? ಅದನ್ನು ವಿಡಿಯೋ ಬೇರೆ ಮಾಡಿದ್ದಾರೆ. ನೋಡಿದಾಗ ರಕ್ತ ಕುದಿಯಿತು. ಆ ಕ್ಷಣವೇ ಹೋಗಿ ಚಪ್ಪಲಿ ತೆಗೆದುಕೊಂಡು ಹೊಡೆಯಬೇಕು ಎನಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಕಬ್ಬಿನ ಜಲ್ಲೆಯಿಂದ ಥಳಿತ, ಅಂಗಾಂಗ ಮುಟ್ಟಿ ವಿಕೃತಿ!

‘ಕನ್ನಡಪ್ರಭ’ದಂತಹ ಮಾಧ್ಯಮ ಇಲ್ಲದಿದ್ದರೆ ಇಂತಹ ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಮಾಧ್ಯಮಗಳು ಇಲ್ಲದಿದ್ದರೆ ಇದಲ್ಲದೆ ಇನ್ನೂ ಹಲವು ಪ್ರಕರಣ ಮುಚ್ಚಿ ಹೋಗುತ್ತಿದ್ದವು. ನಾನೂ ಹೆಣ್ಣು, ನನಗೂ ಒಂದು ಹೆಣ್ಣು ಮಗು ಇದೆ. ಇಂತಹ ಘಟನೆಗಳನ್ನು ನೋಡುತ್ತಿದ್ದರೆ, ನಮಗೆಲ್ಲಿ ಸುರಕ್ಷತೆ ಇದೆ ಎನಿಸುತ್ತದೆ. ಮಕ್ಕಳ ಬಗ್ಗೆ ಭವಿಷ್ಯ ಕಾಣುವುದು ಹೇಗೆ ಎನಿಸುತ್ತದೆ ಎಂದು ಕಿಡಿಕಾರಿದರು.

ಪರಿಷತ್ತಲ್ಲೂ ಪ್ರಸ್ತಾಪ:

ಯಾದಗಿರಿ ಕೃತ್ಯ ವಿಧಾನ ಪರಿಷತ್‌ನಲ್ಲೂ ಬುಧವಾರ ಪ್ರತಿಧ್ವನಿಸಿತು. ಸಾರ್ವಜನಿಕ ಮಹತ್ವದ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಸದಸ್ಯ ಆರ್‌.ಬಿ.ತಿಮ್ಮಾಪುರ್‌, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗುವವರೆಗೂ ಪೊಲೀಸರಿಗೆ ವಿಷಯವೇ ಗೊತ್ತಿರಲಿಲ್ಲ ಎಂದರೆ ಪೊಲೀಸ್‌ ವ್ಯವಸ್ಥೆ ಏಕೆ ಇರಬೇಕು ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.

ಯಾದಗಿರಿ ಜಿಲ್ಲೆಯಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹದು. ಘಟನೆ ಬಗ್ಗೆ ಪೊಲೀಸರಿಗೆ ವಿಷಯವೇ ತಿಳಿದಿಲ್ಲ ಎಂದರೆ ಪೊಲೀಸರು ಎಲ್ಲಿದ್ದರು? ಏನು ಮಾಡುತ್ತಿದ್ದರು? ಇಂಟಲಿಜೆನ್ಸ್‌ ಏನು ಮಾಡುತ್ತಿತ್ತು? ಪೊಲೀಸ್‌ ವ್ಯವಸ್ಥೆ ಏಕೆ ಇರಬೇಕು? ಎಂದು ಆವೇಶಭರಿತರಾಗಿ ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios