ಬೆಂಗಳೂರು(ಏ.05):  ಯುವತಿಯಿಂದ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸೋಮವಾರ ಎಸ್‌ಐಟಿ ಎದುರು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗಬೇಕಿದೆ. ಆದರೆ, ಹಾಜರಾಗುವರೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಒಂದು ವೇಳೆ ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗದಿದ್ದರೆ ರಮೇಶ್‌ ಜಾರಕಿಹೊಳಿ ಅವರಿಗೆ ಮತ್ತೊಮ್ಮೆ ನೋಟಿಸ್‌ ನೀಡಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಏ.1ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ತಂಡ ರಮೇಶ್‌ ಜಾರಕಿಹೊಳಿ ಅವರಿಗೆ ನೋಟಿಸ್‌ ನೀಡಿತ್ತು. ಆದರೆ ಜಾರಕಿಹೊಳಿ ಅವರ ಪರ ವಕೀಲರು ಅನಾರೋಗ್ಯದ ಕಾರಣ ಎರಡು ದಿನ ಸಮಯ ಕೇಳಿದ್ದರು. ಭಾನುವಾರಕ್ಕೆ ಗಡುವು ಮುಗಿದಿದ್ದು, ಸೋಮವಾರ ವಿಚಾರಣೆಗೆ ಹಾಜರಾಗಬೇಕಿದೆ. ಒಂದೊಮ್ಮೆ ವಿಚಾರಣೆಗೆ ಹೋಗದಿದ್ದಲ್ಲಿ ನೋಟಿಸ್‌ ನೀಡಲಾಗುವುದು ಎಂದು ತಿಳಿದು ಬಂದಿದೆ.

ಯುವತಿ ಮೇಲೆ ಒತ್ತಡ ಹಾಕಿಲ್ಲ: ಬಾಲಚಂದ್ರ ಜಾರಕಿಹೊಳಿ

ಈಗಾಗಲೇ ಯುವತಿಯನ್ನು ವಿಚಾರಣೆ ನಡೆಸಿರುವ ತನಿಖಾ ತಂಡ ಯುವತಿ ನೀಡಿರುವ ಪುರಾವೆಗಳನ್ನು ಮುಂದಿಟ್ಟು ಜಾರಕಿಹೊಳಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜಾರಕಿಹೊಳಿ ಅವರಿಗೆ ಕೇಳಬೇಕಿರುವ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿದೆ. ತನಿಖಾಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡದಿದ್ದರೆ ಬಂಧಿಸಬಹುದು ಅಥವಾ ಸಮಯಾವಕಾಶ ಕೊಟ್ಟು ಕಾನೂನು ಕ್ರಮ ಜರುಗಿಸಬಹುದು ಎನ್ನಲಾಗಿದೆ.