ಬೆಂಗಳೂರು(ಅ.02): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಗುರುವಾರ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್‌. ದಲಿತ ಹಕ್ಕುಗಳ ಸಮಿತಿ, ಅಖಿಲ ಭಾರತ ವಕೀಲರ ಸಂಘ ಹಾಗೂ ಎಸ್‌ಯುಸಿಐ ಸಂಘಟನೆಗಳ ಕಾರ್ಯಕರ್ತರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸ್‌ ಮತ್ತು ರಾಜಕೀಯ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯುವತಿ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ದುರುದ್ದೇಶದಿಂದ ಯುವತಿ ನಾಲಿಗೆ ಕತ್ತರಿಸಿ ಪೈಶಾಚಿಕವಾಗಿ ನಡೆದುಕೊಂಡಿದ್ದಾರೆ. ಯುವತಿಯು ಸೆ.14ರಿಂದ 29ರ ವರೆಗೆ ಸಾವು ಬದುಕಿನ ನಡುವೆ ಹೋರಾಟ ಮಾಡಿ ಸಾವನ್ನಪ್ಪಿದ್ದಾಳೆ. ಇಂತಹ ಘಟನೆಯಲ್ಲಿ ನೊಂದವರ ಪರವಾಗಿ ನಿಲ್ಲಬೇಕಿದ್ದ ಪೊಲೀಸ್‌ ಇಲಾಖೆ ಅಮಾನುಷವಾಗಿ ನಡೆದುಕೊಂಡಿದೆ. ಆರೋಪಿಗಳಿಗೆ ಸಹಕಾರ ನೀಡಿರುವ ಪೊಲೀಸ್‌ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡಲು ಕುಟುಂಬದವರಿಗೆ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದೆ ರಾತ್ರೋರಾತ್ರಿ ಚಿತೆಗೆ ಬೆಂಕಿ ಇಟ್ಟಿರುವುದು ಸಮಾಜವನ್ನು ಆತಂಕಕ್ಕೆ ಗುರಿ ಮಾಡಿದೆ. ಇಂತಹ ದುರ್ನಡತೆ ತೋರಿಸಿದ ಪೊಲೀಸರನ್ನು ತಕ್ಷಣವೇ ಬಂಧಿಸಬೇಕು. ಸರಿಯಾಗಿ ಪ್ರಕರಣ ದಾಖಲಿಸಿಕೊಳ್ಳದೇ ಕಾನೂನಿಗೆ ಅಪಚಾರ ಮಾಡಿದ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಹತ್ರಾಸ್ ಗ್ಯಾಂಗ್‌ ರೇಪ್, ಮೃತ ಸಂತ್ರಸ್ತೆಯ ಪೋಸ್ಟ್‌ ಮಾರ್ಟಂ ರಿಪೋರ್ಟ್ ಬಹಿರಂಗ!

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕು. ಈ ಘಟನೆಗಳಿಗೆ ಕಾರಣವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಉತ್ತರ ಪ್ರದೇಶ ಗೂಂಡಾ ರಾಜ್ಯವಾಗಿದ್ದು, ಕಾನೂನುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮನುಧರ್ಮ ಶಾಸ್ತ್ರದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾಗವಾಗಿ ನಡೆಯುತ್ತಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.