ಧಾರವಾಡ[ಡಿ.05]: ಕೆರೆ​ಯಲ್ಲಿ ವ್ಯಕ್ತಿ​ಯೊಬ್ಬ ಆತ್ಮ​ಹತ್ಯೆ ಮಾಡಿ​ಕೊಂಡ ಎಂಬ ಕಾರಣಕ್ಕೆ ಕಳೆದ ಐದಾರು ತಿಂಗಳ ಹಿಂದಷ್ಟೇ ನವ​ಲ​ಗುಂದ ತಾಲೂ​ಕು ನಾವಳ್ಳಿ ಕೆರೆಯ ನೀರನ್ನು ಗ್ರಾಮಸ್ಥರು ಪಂಪ್‌ ಸೆಟ್‌ ಬಳಸಿ ಖಾಲಿ ಮಾಡಿದ್ದರು. ಇದೀಗ ಅದೇ ತಾಲೂ​ಕಿನ ಮೊರಬ ಗ್ರಾಮದ ಕೆರೆ​ಯಲ್ಲಿ ಮಾರಕ ರೋಗ​ಪೀ​ಡಿತ ಮಹಿ​ಳೆಯೊಬ್ಬರು ಆತ್ಮ​ಹತ್ಯೆ ಮಾಡಿಕೊಂಡಿದ್ದು, ಕೆರೆಯ ಸಂಪೂ​ರ್ಣ ನೀರನ್ನು ಹಳ್ಳಕ್ಕೆ ಹೊರ ಹಾಕುವ ಪ್ರಯತ್ನ ನಡೆ​ಯು​ತ್ತಿದೆ.

ಮಾರಕ ರೋಗ ಹೊಂದಿದ್ದ ಗ್ರಾಮದ ಮಹಿ​ಳೆ​ಯೊ​ಬ್ಬರು ಮೊರ​ಬ ಗ್ರಾಮದ ಏಕೈಕ ಕುಡಿ​ಯುವ ನೀರಿನ ಕೆರೆಗೆ ಹಾರಿ ನಾಲ್ಕೈದು ದಿನ​ಗಳ ಹಿಂದೆ ಆತ್ಮ​ಹತ್ಯೆ ಮಾಡಿ​ಕೊಂಡಿದ್ದರು. ಎರಡು ದಿನ​ಗಳ ಹಿಂದೆ ಶವ ಮೇಲೆ​ದ್ದಾಗ ಗ್ರಾಮ​ಸ್ಥ​ರಿಗೆ ವಿಷಯ ತಿಳಿದು ತಮಗೂ ಆ ರೋಗ ಅಂಟ​ಬ​ಹುದು ಎಂಬ ಭಯ​ದಲ್ಲಿ ಇಡೀ ಕೆರೆಯ ನೀರನ್ನು ಸೈಫೋನ್‌ ಪೈಪು​ಗಳ ಮೂಲಕ ಹೊರ ಹಾಕಿಸುತ್ತಿದ್ದಾರೆ. ನೀರು ಪಕ್ಕದ ತುಪರಿ ಹಳ್ಳ ಸೇರು​ತ್ತಿ​ದೆ.

ಅತಿ ದೊಡ್ಡ ಗ್ರಾಪಂಗ​ಳಲ್ಲಿ ಒಂದಾದ ಮೊರಬ 18 ಸಾವಿರ ಜನ​ಸಂಖ್ಯೆ ಹೊಂದಿದ್ದು, 36 ಎಕರೆ ವಿಸ್ತೀರ್ಣದ ಈ ಕೆರೆಯೇ ಗ್ರಾಮದ ಜನ​ರಿಗೆ ಕುಡಿ​ಯು​ವ ನೀರಿನ ಮೂಲವಾಗಿದೆ. ಇದರ ನೀರನ್ನು ಜನರು ನೇರವಾಗಿ ಕುಡಿಯುತ್ತಾರೆ.

ಎರ​ಡ್ಮೂರು ವರ್ಷ​ಗಳ ಹಿಂದೆಯೇ ಈ ಕೆರೆಗೆ ಅಳ​ವ​ಡಿ​ಸಿದ್ದ ಶುದ್ಧೀ​ಕ​ರಣ ಘಟಕ ಸಹ ಕೈಕೊ​ಟ್ಟಿ​ದ್ದ​ರಿಂದ ಗ್ರಾಮ​ಸ್ಥರು ಇದರ ನೀರನ್ನು ನೇರ​ವಾ​ಗಿಯೇ ಕುಡಿ​ಯಲು ಬಳ​ಸು​ತ್ತಿ​ದ್ದರು. ಇದೀಗ ರೋಗ​ಪೀ​ಡಿತ ಮಹಿ​ಳೆಯು ಕೆರೆ​ಯಲ್ಲಿ ಆತ್ಮ​ಹತ್ಯೆ ಮಾಡಿ​ಕೊಂಡಿದ್ದು ಶವ​ವನ್ನು ಮೀನು​ಗಳು ಅಲ್ಲಲ್ಲಿ ಕಚ್ಚಿ ತಿಂದಿವೆ. ಹೀಗಾಗಿ ಗ್ರಾಮ​ಸ್ಥರು ನೀರನ್ನು ಬಳಸಲು ಹಿಂದೇಟು ಹಾಕಿದ ಹಿನ್ನೆ​ಲೆ​ಯಲ್ಲಿ ಗ್ರಾಮ ಪಂಚಾಯಿತಿ ಅನಿ​ವಾ​ರ್ಯ​ವಾಗಿ ನೀರು ಖಾಲಿ ಮಾಡುವ ಪ್ರಯತ್ನ ನಡೆಸುತ್ತಿದೆ.