ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 59 ರೈಲು ನಿಲ್ದಾಣಗಳು ಮೇಲ್ದರ್ಜೆಗೆ, 7559 ಕೋಟಿ ರೂ ಮೀಸಲು
ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಮೀಸಲಿಟ್ಟ 2.62 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ 7559 ಕೋಟಿ ರೂ ಒದಗಿಸಲಾಗಿದ್ದು, ಇದರಲ್ಲಿ ರಾಜ್ಯದಲ್ಲಿ 59 ರೈಲು ನಿಲ್ದಾಣಗಳ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ.
ಹುಬ್ಬಳ್ಳಿ (ಜು26): ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಮೀಸಲಿಟ್ಟ ₹2.62 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ₹7559 ಕೋಟಿ ಒದಗಿಸಲಾಗಿದ್ದು, ಇದರಲ್ಲಿ ರಾಜ್ಯದಲ್ಲಿ 59 ರೈಲು ನಿಲ್ದಾಣಗಳ ಮೇಲ್ದರ್ಜೆಗೇರಿಸುವುದು ಸೇರಿ ರೈಲ್ವೆ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ರೈಲ್ವೆ ಬಜೆಟ್ ಕುರಿತು ವರ್ಚುವಲ್ ಮೂಲಕ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಎನ್‌ಡಿಎ ಸರ್ಕಾರವು ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ ಒಂಬತ್ತು ಪಟ್ಟು ಹೆಚ್ಚಿನ ಅನುದಾನ ನೀಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ಸರಾಸರಿ ₹835 ಕೋಟಿ ಬರುತ್ತಿತ್ತು. 2023-24ನೇ ಸಾಲಿನಲ್ಲಿ ಕರ್ನಾಟಕಕ್ಕೆ ₹7561 ಕೋಟಿ ಅನುದಾನ ಒದಗಿಸಲಾಗಿತ್ತು ಎಂದರು.
ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ₹47 ಸಾವಿರ ಕೋಟಿ ವೆಚ್ಚದ 31 ಯೋಜನೆಗಳು ಪ್ರಗತಿ ಹಂತದಲ್ಲಿವೆ. 59 ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಮೃತ ಯೋಜನೆಯಡಿ ನಿಲ್ದಾಣಗಳನ್ನೆಲ್ಲ ವಿಶ್ವದರ್ಜೆಯ ಮಟ್ಟಕ್ಕೆ ಏರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. 638 ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಿಸಲಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 2,500 ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ ಎಂದು ತಿಳಿಸಿದರು.
ಕರ್ತವ್ಯದ ಅವಧಿ ಇಳಿಕೆ: ಲೋಕೋ ಪೈಲಟ್‌ಗಳ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪೈಲಟ್‌ಗಳ ಮೇಲಿನ ಒತ್ತಡ ತಗ್ಗಿಸಲು ವಾರದ ಒಟ್ಟು ಕರ್ತವ್ಯದ ಅವಧಿಯನ್ನು 54 ತಾಸುಗಳಿಂದ 52ಕ್ಕೆ ಇಳಿಸಲಾಗಿದೆ. ರನ್ನಿಂಗ್ ರೂಂಗಳನ್ನು ಸಹ ಹೆಚ್ಚಿಸಲಾಗಿದೆ. ಇದರಿಂದ ಪೈಲಟ್‌ಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.
ಬಹುಮಾದರಿ ಸಾರಿಗೆಗಾಗಿ ರಾಜ್ಯ ಸರ್ಕಾರಕ್ಕೆ 45 ಎಕರೆ ಭೂಮಿ ಕೊಡಿ ಎಂದು ಕೇಳಿದ ಮೆಟ್ರೋ!
ವಿದ್ಯುದ್ದೀಕರಣ 18 ಪಟ್ಟು ಹೆಚ್ಚು: 2014ರಿಂದ 2024ರವರೆಗೆ ಸರಾಸರಿ 163 ಕಿಮೀ ವಾರ್ಷಿಕವಾಗಿ ನೂತನ ಮಾರ್ಗ ಹೆಚ್ಚಾಗಿದೆ. 2009ರಿಂದ 2014ರವರೆಗೆ ವರ್ಷಕ್ಕೆ 113 ಕಿಮೀ ಇತ್ತು. ಇದರಿಂದಾಗಿ ಎನ್‌ಡಿಎ ಅವಧಿಯಲ್ಲಿ 1.4 ಪಟ್ಟು ಹೆಚ್ಚಳವಾದಂತಾಗಿದೆ. 2009-2014ರ ಅವಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ 18 ಕಿಮೀ ಆಗುತ್ತಿತ್ತು. 2014-2024ರ ಅವಧಿಯಲ್ಲಿ ಸರಾಸರಿ ವಿದ್ಯುದ್ದೀಕರಣವನ್ನು ವರ್ಷಕ್ಕೆ 317 ಕಿಮೀಗೆ ಹೆಚ್ಚಳ ಮಾಡಲಾಗಿದ್ದು, 18 ಪಟ್ಟು ಹೆಚ್ಚಾದಂತಾಗಿದೆ ಎಂದರು.