ಬೆಂಗಳೂರು[ಫೆ.11]: ತುಮಕೂರು ಜಿಲ್ಲೆ ಪಾವಗಡ ತಾಲೂಕು ವಿಶ್ವದ ಅತಿ ದೊಡ್ಡ ಸೋಲಾರ್‌ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಈ ಪಾರ್ಕ್ಗಾಗಿ ಜಮೀನು ನೀಡಿರುವ ರೈತರು ಮಾತ್ರ ಸೋಲಾರ್‌ ಫಲಕಗಳಿಂದ ಉಂಟಾಗುತ್ತಿರುವ ಉಷ್ಣಾಂಶದಿಂದ ತೀವ್ರ ಬಳಲುವಂತಾಗಿದೆ ಎಂದು ‘ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ’ ಆರೋಪಿಸಿದೆ.

ಸೋಲಾರ್‌ ಪಾರ್ಕ್ ಸುತ್ತಮುತ್ತಲೂ ಹಾನಿಕಾರಕ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದು, ಚರ್ಮ ರೋಗ, ಮೂತ್ರಪಿಂಡ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುವ ಆತಂಕದಲ್ಲಿ ಜನ ಬದುಕು ದೂಡುವಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಏಷ್ಯಾ ಖಂಡದ ಅತೀ ದೊಡ್ಡ ಸೋಲಾರ್ ಪಾರ್ಕ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಪರಿಸರ ವಿಜ್ಞಾನಿಯೂ ಆಗಿರುವ ಸಂಘದ ಸಂಚಾಲಕ ಡಾ.ಡಿ.ಪರಮೇಶ್‌ ನಾಯಕ್‌, ಈ ಪಾರ್ಕ್ ನಿರ್ಮಾಣಕ್ಕಾಗಿ ಅಳವಡಿಸುವ ಬ್ಯಾಟರಿಗಳು ಮತ್ತು ಸೂರ್ಯನ ಕಿರಣಗಳಿಂದ ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಿರುವ ಫಲಕಗಳಲ್ಲಿನ ಹಾನಿಕಾರಕ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿಯಲಾಗುತ್ತಿದೆ. ಪರಿಣಾಮ ಪಾರ್ಕ್ನ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಲಾರ್‌ ಉತ್ಪನ್ನಗಳ ತ್ಯಾಜ್ಯ ಹರಡಿಕೊಂಡಿದ್ದು, ಇದು ಮಳೆ ನೀರಿನೊಂದಿಗೆ ಸೇರಿ ಅಂತರ್ಜಲ ಸೇರುತ್ತಿದೆ. ಪರಿಣಾಮ ಕುಡಿಯುವ ನೀರು ಮತ್ತು ಮಣ್ಣು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಈ ಭಾಗಗಳಲ್ಲಿನ ಗ್ರಾಮಸ್ಥರಿಗೆ ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸೋಲಾರ್‌ ಫಲಕಗಳಿಗೆ ಫೋಟೋ ವೊಲ್ಟಾಯಿಕ್‌ ಸೆಲ್ಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ಲೆಡ್‌ (ಸೀಸ), ಜಿಂಕ್‌(ಸತುವಿನ ಅಂಶ), ಮಕ್ರ್ಯುರಿ(ಪಾದರಸ) ಅಂಶಗಳು ಇರಲಿವೆ. ಇವು ಮನುಷ್ಯನ ದೇಹಕ್ಕೆ ಅತ್ಯಂತ ಅಪಾಯಕಾರಿಯಾಗಿವೆ. ಇದು ನೀರು ಮತ್ತು ಮಣ್ಣಿನ ಮೂಲಕ ಮನುಷ್ಯನ ದೇಹಕ್ಕೆ ಹೋಗುತ್ತಿದ್ದು, ಮೂತ್ರಪಿಂಡ ಸಂಬಂಧಿ, ಹೃದಯ ಸಂಬಂಧಿ ಸಮಸ್ಯೆಗಳು, ಕಣ್ಣು ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುವ ಸಾಧ್ಯತೆಯಿದೆ. ಅಲ್ಲದೆ, ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ವಾಂತಿ- ಭೇದಿಯು ಕಾಣಿಸಿಕೊಳ್ಳಲಿದೆ ಎಂದಿದ್ದಾರೆ.

ಉಷ್ಣತಾ ಮಾಪಕ ಅಳವಡಿಸಿಲ್ಲ:

ಪಾವಗಡ ತಾಲೂಕು ಶಾಶ್ವತ ಬರ ಪೀಡಿತವಾಗಿದೆ. ಬೇಸಿಗೆಯಲ್ಲಿ ಈ ಭಾಗದಲ್ಲಿ 40 ಡಿಗ್ರಿ ಉಷ್ಣಾಂಶ ದಾಖಲಾಗುತ್ತದೆ. ಸೋಲಾರ್‌ ಫಲಕಗಳಿಂದ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಈ ಭಾಗದಲ್ಲಿ ಉಷ್ಣತಾ ಮಾಪಕ ಅಳವಡಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಅಮೆರಿಕ ಪ್ರವಾಸ: ಭಾರತದ ಭವಿಷ್ಯಕ್ಕೆ ಮೋದಿ ವಿಶ್ವಾಸ!

ರೈತರ ಜಮೀನುಗಳ ಗಡಿ ಗುರುತಿಸಿ:

ಸೋಲಾರ್‌ ಯೋಜನೆಗಾಗಿ ಪಾವಗಡ ತಾಲೂಕಿನ ಬಳಸಮುದ್ರ, ಕ್ಯಾತಗಾನಚೆರ್ಲು, ರಾಯಚೆರ್ಲು, ತಿರುಮಣಿ ಮತ್ತು ವಳ್ಳೂರು ಗ್ರಾಮಗಳ ರೈತರು ಸುಮಾರು 3 ಸಾವಿರ ಎಕರೆ ಜಮೀನು ನೀಡಿದ್ದಾರೆ. ಆದರೆ, ಇದೀಗ ಎಲ್ಲವೂ ಒಂದಾಗಿ ಹೋಗಿದ್ದು, ಯಾವ ಭಾಗ ಯಾವ ಗ್ರಾಮಕ್ಕೆ ಸೇರಿದ್ದು ಎಂಬುದರ ಕುರಿತಂತೆ ಮಾಹಿತಿ ಇಲ್ಲವಾಗಿದೆ. ಆದ್ದರಿಂದ ವೈಮಾನಿಕ ಸಮೀಕ್ಷೆ ಮಾಡಿ ಜಮೀನುಗಳ ಗಡಿಗಳನ್ನು ಗುರುತಿಸಬೇಕು ಎಂದು ಸೋಲಾರ್‌ ಪಾರ್ಕ್ಗೆ ಜಮೀನು ನೀಡಿರುವ ರೈತರನ್ನು ಒಳಗೊಂಡ ‘ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ’ದ ಪ್ರಧಾನ ಕಾರ್ಯದರ್ಶಿ ಆರ್‌.ಪಿ. ಸಾಂಬಶಿವಾರೆಡ್ಡಿ ಆಗ್ರಹಿಸಿದ್ದಾರೆ.

ಸೋಲಾರ್‌ ಫಲಕ ಅಳವಡಿಕೆ ಮಾಡಲು ಗುತ್ತಿಗೆ ಪಡೆದಿರುವ ಕಂಪನಿಗಳು ತಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ಅನುದಾನದಲ್ಲಿ ಈ ಭಾಗದ ಗ್ರಾಮಗಳ ಅಭಿವೃದ್ಧಿ ಮತ್ತು ಅರಣ್ಯೀಕರಣ ಮಾಡಬೇಕು ಎಂಬ ನಿಯಮವಿದೆ. ಆದರೆ, ಈವರೆಗೂ ಆ ಕಾರ್ಯ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.