ಬೆಂಗಳೂರು :  ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದ ಜಾಡು ಹಿಡಿದು ಹಂತಕರ ಬಂಧಿಸಿ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ರಾಜ್ಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದೆ!

ಹೌದು, ಅರಮನೆ ರಸ್ತೆಯಲ್ಲಿರುವ ಕಾರ್ಲಟನ್‌ ಹೌಸ್‌ನ ಸಿಐಡಿ (ಅಪರಾಧ ತನಿಖಾ ದಳ) ಕಚೇರಿಯ ಆವರಣದಲ್ಲಿ ಚಾಮುಂಡೇಶ್ವರಿ ದೇವಾಲಯವಿದ್ದು, ಇಲ್ಲಿನ ದೇವರ ಮೇಲೆ ಪೊಲೀಸರಿಗೆ ಅಪಾರವಾದ ನಂಬಿಕೆ.

ಈ ದೇವಸ್ಥಾನದಲ್ಲಿ ಪ್ರತಿ ದಿನ ಪೂಜೆ ನಡೆಯಲಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ಪೊಲೀಸರಿಂದಲೇ ವಿಶೇಷ ಪೂಜೆ ನೇರವೇರುತ್ತದೆ. ಸಿಐಡಿಯ ಪ್ರತಿಯೊಂದು ಘಟಕದ ತನಿಖಾಧಿಕಾರಿಗಳು ಪ್ರಕರಣದ ತನಿಖೆ ಆರಂಭಕ್ಕೂ ಮುನ್ನ ದೇವಿ ಮೊರೆ ಹೋಗುತ್ತಾರೆ. ಯಾವುದೇ ಪ್ರಕರಣದ ಜಾಡು ಹಿಡಿದು ಹೋಗುವ ಮುನ್ನ ಚಾಮುಂಡೇಶ್ವರಿ ದೇವಿ ಬಳಿ ಪ್ರಾರ್ಥನೆ ಮಾಡಿದರೆ ತನಿಖೆಗೆ ಯಶಸ್ಸು ಕಾಣುವುದು ನಿಶ್ಚಿತ ಎಂಬುದು ಪೊಲೀಸರ ನಂಬಿಕೆ. ಅದರಂತೆ ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಹೀಗಾಗಿಯೇ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಭಾಗಶಃ ಪೂರ್ಣಗೊಳಿಸಿರುವ ಎಸ್‌ಐಟಿ ತಂಡ ಶುಕ್ರವಾರ ಸಂಜೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಪೂಜೆ ಸಲ್ಲಿಸಿತು. ಈ ವೇಳೆ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ಕಾನ್ಸ್‌ಟೇಬಲ್‌ನಿಂದ ಎಸ್ಪಿ ಮಟ್ಟದ ಅಧಿಕಾರಿಗಳು ದೇವಿ ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ.

ಸಿಐಡಿ ಪೇದೆ ಅರ್ಚಕ

ಸಿಐಡಿಯ ಪೇದೆಯೊಬ್ಬರು ಪ್ರತಿ ಬಾರಿ ಆರ್ಚಕರಾಗಿ ಕೆಲಸ ಮಾಡುತ್ತಾರೆ. ಇನ್ನು ವಿಶೇಷ ಪೂಜೆ ವೇಳೆ ದೇವಿಗೆ ಪೂಜೆ ಮಾಡಿಸುವವರು ಹೊರಗಿನಿಂದ ಆರ್ಚಕರನ್ನು ಕರೆ ತರುತ್ತಾರೆ. ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜೆಗೆ ಬರುವ ಭಕ್ತರ ಪ್ರಸಾದಕ್ಕೆಂದು (ಕೇಟರಿಂಗ್‌ ಮೂಲಕ) ಸುಮಾರು .30 ಸಾವಿರದಿಂದ .50 ಸಾವಿರದ ತನಕ ಹಣ ವಿನಿಯೋಗಿಸುತ್ತಿದ್ದಾರೆ. ಇದನ್ನು ಪ್ರಕರಣದ ತನಿಖೆ ಹೊಣೆ ಹೊತ್ತ ತನಿಖಾಧಿಕಾರಿಯೇ ಭರಿಸುತ್ತಿದ್ದಾರೆ.

ಇಲ್ಲಿನ ದೇವಿಯ ಮಹಿಮೆ ಕಂಡು ಸಿಐಡಿಯ ಕಚೇರಿಯ ಪೊಲೀಸರು ಹೊರತುಪಡಿಸಿ ಕೆಪಿಎಸ್ಸಿ ಸಿಬ್ಬಂದಿ ಹಾಗೂ ಬಹುಮಡಿ ಕಟ್ಟಡದ ಸಿಬ್ಬಂದಿ ಕೂಡ ಬಂದು ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಈ ವಿಶೇಷ ಪೂಜೆ ವೇಳೆ 700ರಿಂದ 1000 ಮಂದಿ ಪ್ರಸಾದ ಸ್ವೀಕರಿಸುತ್ತಾರೆ. ಎಸ್‌ಐಟಿ ಜೊತೆಗೆ ಎಸ್ಪಿ ಸೌಮ್ಯಲತಾ ಅವರು ಬೇರೆ ಕಡೆ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕೋಲಾರದಿಂದ ತಂದಿದ್ದ ವಿಗ್ರಹ!

ಸುಮಾರು 30 ವರ್ಷಗಳ ಹಿಂದೆ ಕೋಲಾರದಲ್ಲಿ ಚಾಮುಂಡೇಶ್ವರಿ ದೇವಿಯ ವಿಚಾರಕ್ಕೆ ಎರಡು ಕೋಮಿನವರ ನಡುವೆ ಸಂಘರ್ಷ ಏರ್ಪಟ್ಟಿತ್ತು. ವಿಚಾರ ದೊಡ್ಡದಾಗಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರು ಕೋಲಾರದಲ್ಲಿನ ಪುರಾತನ ಕಾಲದ ಚಾಮುಂಡೇಶ್ವರಿ ಕಲ್ಲಿನ ವಿಗ್ರಹ ಮೂರ್ತಿಯನ್ನು ತಂದು ಸಿಐಡಿಯ ಕಚೇರಿ ಆವರಣದಲ್ಲಿ ಇರಿಸಿದ್ದರು. ಕ್ರಮೇಣ ಕಾಲ ಕಳೆದಂತೆ ವಿಗ್ರಹ ಮೂರ್ತಿಗೆ ಕೈ ಮುಗಿದು ಪೂಜೆ ಮಾಡುವುದು ಪ್ರಾರಂಭಗೊಂಡಿತ್ತು.

ಚಾಮುಂಡೇಶ್ವರಿ ದೇವಿ ಬಳಿ ಪ್ರಾರ್ಥನೆ ಮಾಡಿದವರು ನಮ್ಮ ಕೆಲಸ ಯಶಸ್ಸು ಆಗುತ್ತಿದೆ ಎಂದು ಹೇಳಲು ಶುರು ಮಾಡಿದರು. ದಿನ ಕಳೆದಂತೆ ಈ ನಂಬಿಕೆ ಅಲ್ಲಿನ ಪೊಲೀಸರಲ್ಲಿ ಹೆಚ್ಚಾಯಿತು. ಹೀಗೆ ಪ್ರತಿ ವಾರ ದೇವಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ದೇವಿ ಪೂಜೆಯಿಂದ ನಮಗೆ ಒಳಿತೇ ಆಗುತ್ತಿದೆ ಎಂದು ಸಿಐಡಿಯ ಡಿವೈಎಸ್ಪಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

2 ವರ್ಷದ ಹಿಂದೆ ದೇಗಲು ನಿರ್ಮಾಣ

ಮೊದಲು ಸಣ್ಣದಾದ ಶೆಡ್‌ನಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪೂಜೆ ಮಾಡಲಾಗುತ್ತಿತ್ತು. ದೇವಿಯ ಶಕ್ತಿ ಎಲ್ಲೆಡೆ ಪಸರಿಸುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಡಿಜಿಪಿಯಾಗಿದ್ದ ಸುಶಾಂತ್‌ ಮಹಾಪಾತ್ರ ಅವರಿಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ವಿಚಾರ ತಿಳಿದಿತ್ತು. ಇತರ ಅಧಿಕಾರಿಗಳ ಬಗ್ಗೆ ಚರ್ಚಿಸಿದ ಅಂದಿನ ಡಿಜಿಪಿ ಅವರು ದೇವಸ್ಥಾನಕ್ಕೆ ನಕ್ಷೆ ಸಿದ್ಧಪಡಿಸಿ ಲಕ್ಷಾಂತರ ರು. ವ್ಯಯಿಸಿ ದೇವಸ್ಥಾನ ನಿರ್ಮಾಣವಾಗಲು ನೆರವಾದರು ಎಂದು ಸುಮಾರು ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯೊಬ್ಬರು ‘ಕನ್ನಡಪ್ರಭ’ಕ್ಕೆ ಹೇಳಿದರು.


ಸಿಐಡಿಯಲ್ಲಿರುವ ಚಾಮುಂಡೇಶ್ವರಿಗೆ ದೇವಿಗೆ ನಂಬಿಕೆಯಿಂದ ಪೂಜೆ ಮಾಡಿಸಲಾಗುತ್ತದೆ. ವಿಶೇಷ ತನಿಖಾ ತಂಡ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಸೆರೆ ಹಿಡಿದಿದೆ. ಶ್ರಮದ ಜತೆಗೆ ನಂಬಿಕೆ ಹಿನ್ನೆಲೆಯಲ್ಲಿ ಪೂಜೆ ನೇರವೇರಿಸಲಾಯಿತು. ಪೂಜೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಮ್ಮೊಂದಿಗೆ ಎಸ್ಪಿ ಸೌಮ್ಯಲತಾ ಅವರು ಪೂಜೆ ಸಲ್ಲಿಸಿದ್ದಾರೆ. ನಮಗೂ ಎಲ್ಲರಂತೆ ದೈವ ಭಕ್ತಿ ಇರುತ್ತದೆ ಅಲ್ಲವೇ?

-ಹೆಸರು ಹೇಳಲು ಇಚ್ಚಿಸದ ಎಸ್‌ಐಟಿ ತನಿಖಾಧಿಕಾರಿ.

ವರದಿ : ಎನ್‌.ಲಕ್ಷ್ಮಣ್‌