ಜ್ಞಾನಕ್ಕೆ ಪರಿಭಾಷೆ ಶತವಧಾನಿ ಆರ್ ಗಣೇಶ್, ಸರ್ವವನ್ನೂ ಅರಿತ ಜ್ಞಾನಿಗೆ ಜನ್ಮ ದಿನದ ಶುಭಾಶಯಗಳು!

ಶತವಧಾನಿ ಗಣೇಶ್ ಅವರ ಜ್ಞಾನಕ್ಕೆ ಅವರೇ ಸರಿಸಾಟಿ. ಮನುಷ್ಯನೊಬ್ಬನಿಗೆ ಇಷ್ಟು ಜ್ಞಾನವಿರೋದು ಸಾಧ್ಯವೇ ಎಂಬ ಅನುಮಾನ ಬರುವಷ್ಟು ಜ್ಞಾನಿ. ಸರಳತೆಯನ್ನು ಹೊದ್ದವರು. ಇಂಥ ಸರ್ವಜ್ಞನಿಗೆ 60ರ ಹುಟ್ಟು ಹಬ್ಬದ ಸಂಭ್ರಮ. ಜನ್ಮ ದಿನದ ಶುಭಾಶಯಗಳೊಂದಿಗೆ ಏಷ್ಯಾನೆಟ್ ನ್ಯೂಸ್ ಸುವರ್ಣ ಶತವಧಾನಿ ಆರ್.ಗಣೇಶ್ ಅವರಿಗೆ ಅಕ್ಷರ ನಮನ ಸಲ್ಲಿಸುತ್ತಿದೆ. 

Shatavadhani R Ganesh celebrating 60th birthday on Dec 4th

-ಶ್ರೀಕಂಠ ಶಾಸ್ತ್ರಿಗಳು, ಏಷ್ಯಾನೆಟ್ ಸುವರ್ಣ ನ್ಯೂಸ್

ಅದು ಸತ್ಯಲೋಕದ ವಿದ್ವತ್ ಸಭೆ. ದೇವಾನು ದೇವತೆಗಳು, ಅಸಾಧ್ಯ ಸಾಧನೆ ಮಾಡಿದ ಬ್ರಹ್ಮರ್ಷಿಗಳು ಸಕಲ ಶಾಸ್ತ್ರಕೋವಿದರೆಲ್ಲ ಭಾಗಿವಹಿಸಿದ್ದ ಸಭೆಯಲ್ಲಿ ಸಾಕ್ಷಾತ್ ಸರಸ್ವತಿಯೇ ಅಧ್ಯಕ್ಷಳು. ಅಲ್ಲಿ ಕಶ್ಯಪ ಮಹರ್ಷಿಗಳು ಲೋಕ ವ್ಯವಸ್ಥೆಯ ಕುರಿತಾದ ಮಹತ್ವದ ಸಂಗತಿಗಳನ್ನು, ಮಾನವ ಪ್ರತಿಭೆಗಳನ್ನು ದೇವಗಣವೇ ತಲೆದೂಗುವ ಹಾಗೆ ಕಾವ್ಯಾತ್ಮಕವಾಗಿ ವರ್ಣಿಸುತ್ತಿದ್ದರು. ಮಾನವನ ಸ್ವಭಾವ-ವರ್ತನೆ-ಪ್ರತಿಭಾ ಚಾತುರ್ಯತೆಗಳ ಕುರುತಾದ ವಿವರಣೆ ಅದಾಗಿತ್ತು. ಯಾವುದೇ ಅಗೋಚರ ಶಕ್ತಿಯ ಸಹಾಯವಿಲ್ಲದೆ ಮಾನವರು ಹೇಗೆ ಸ್ವಯಂ ಪ್ರಭಾ ಚೇತನಗಳಾಗಿ ಬೆಳಗುತ್ತಿದ್ದಾರೆ ಎಂಬುದನ್ನು ವಿವರಿಸುತ್ತಾ ಕನ್ನಡ ನಾಡಿನ ಅನೇಕ ರಂಗದ ವ್ಯಕ್ತಿಗಳ ಕುರಿತಾದ ವಿಶೇಷತೆ ತಿಳಿಸುವಾಗ ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದ ಸರಸ್ವತಿ ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಕಶ್ಯಪರು ಯಾವ ರಂಗದ ಬಗ್ಗೆ ಮಾತಾಡುವಾಗಲೂ ಒಬ್ಬ ವ್ಯಕ್ತಿಗೆ ಇಷ್ಟೇ ಚೌಕಟ್ಟಾ? ಇಷ್ಟೇನಾ ಪ್ರತಿಭೆ? ಇಷ್ಟೇನಾ ಸಾಮರ್ಥ್ಯ ಎನ್ನಿಸುತ್ತಿತ್ತು. ಅಲ್ಲಿ ಪೂರ್ಣತೆಯ ಕೊರತೆ ಕಾಣುತ್ತಿತ್ತು ಸರಸ್ವತಿಗೆ. ಕ್ಷಣಕಾಲ ವಾಗ್ದೇವಿ ಕಣ್ಮುಚ್ಚಿದಳು. ಅಂತರಂಗದಿಂದ ಬೆಳಕಿನ ಕಿಡಿಯೊಂದು ಭುವಿಗೆ ಚಿಮ್ಮಿತು. ಕತ್ತಲು ಸರಿದು, ಬೆಳಕು ಆವರಿಸಲಿಕ್ಕೆ ತುದಿಗಾಲಲ್ಲಿ ನಿಂದಿದ್ದ ಸಮಯ. ಸತ್ಯಲೋಕದಿಂದ ಚಿಮ್ಮಿದ ಬೆಳಕು ಬಂದು ಕೋಲಾರದಲ್ಲಿದ್ದ ಅಲಮೇಲಮ್ಮವರ ಗರ್ಭವನ್ನು ಸೇರಿತು. ಅಂದು ಡಿಸೆಂಬರ್ 4 1962.  

ವಿಸ್ಮಯವೆನ್ನುವ ಹಾಗೆ ಅಲಮೇಲಮ್ಮನವರ ಗರ್ಭ ಸೇರಿದ್ದು ಸರಸ್ವತಿ ಶಕ್ತಿಯಾದರೂ ಹುಟ್ಟಿದ್ದು ಪುರುಷ ಸರಸ್ವತಿ. ಹೆಸರು ರಾ ಗಣೇಶ್. ಮನುಷ್ಯನಾಗಿ ಹುಟ್ಟಿದವನು ಪೂರ್ಣವಾಗುವುದು ಹೇಗೆ ಎಂಬುದನ್ನು ತೋರಿಸಲಿಕ್ಕೆ ಸಾಕ್ಷಾತ್ ಸರಸ್ವತಿಯೇ ಪುರುಷನಾಗಿ ಹುಟ್ಟಿದಳೇನೋ ಎಂಬ ಈ ಕಲ್ಪನೆ ಮೂಡಲಿಕ್ಕೆ ಕಾರಣ ರಾ ಗಣೇಶ್ ಅವರ ದೇವೋಜ್ವಲ ಪ್ರತಿಭಾ ಶಕ್ತಿ.ಓದಿದ್ದ ಲೋಹಶಾಸ್ತ್ರ, ಯಂತ್ರಶಾಸ್ತ್ರಗಳನ್ನ ಆದ್ರೆ ಜೀವನಾನಂದ ಕಂಡುಕೊಂಡದ್ದು ಕಲೆಯಲ್ಲಿ, ತತ್ವದಲ್ಲಿ. ಅವರಿಗೆ ಸರ್ವವನ್ನೂ ತಿಳಿಯುವ ಕುತೂಹಲ, ಆಸಕ್ತಿ, ಅಗಾಧ ಶ್ರದ್ಧೆ. ಪೂರ್ಣತೆಯ ಫಲಕ್ಕಾಗಿಯೋ ಏನೋ ಅವರು ಅಭ್ಯಾಸ ಮಾಡದ ಕ್ಷೇತ್ರಗಳಿಲ್ಲ ಎನ್ನಬಹುದು. ಸಂಸ್ಕೃತ ಸಾಹಿತ್ಯ, ಸಂಗೀತ, ಕಾವ್ಯ ಮೀಮಾಂಸೆ, ಛಂದ:ಶಾಸ್ತ್ರ, ಭಾಷಾ ಮೀಮಾಂಸೆ, ದರ್ಶನ ಶಾಸ್ತ್ರ, ಧರ್ಮ ಶಾಸ್ತ್ರ, ಕಲಾ ಮೀಮಾಂಸೆ, ಇತಿಹಾಸ, ಸಸ್ಯಶಾಸ್ತ್ರ, ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಪುರಾಣ, ವೇದ, ವೇದಾಂತ ಇನ್ನೂ ಏನೇನು ಅವರೇ ಕಂಡುಕೊಂಡ ಶಾಸ್ತ್ರಗಳಿವೆಯೋ ಅವರೇ ಬಲ್ಲರು. ಅತ್ಯತ್ತಿಷ್ಟದ್ದಶಾಂಗುಲಂ ಅನ್ನೋ ಹಾಗೆ ಬೆರೆಲ್ಲರಿಗಿಂತ ಅವರು ಹತ್ತಲ್ಲ ನೂರಾರು ಅಂಗುಲ ಎತ್ತರವಿದ್ದಾರೆ.ಯಾಕೆಂದರೆ ಅವರ ಅನುಪಮವಾದ ಘನ ಅಧ್ಯಯನದ ಆಳ-ಅಗಲಗಳಿಂದ.

ಅವರು ಅಭ್ಯಾಸ ಮಾಡಿದ ಕ್ಷೇತ್ರಗಳ ಹರಹು ಸಮುದ್ರದಷ್ಟು. ಅದು ವಿಸ್ತಾರವೂ ಹೌದು, ಆಳವೂ ಹೌದು. ಅವರು ಕವಿಯೆಂದರೆ ಕವಿ, ವಿಮರ್ಷಕರೆಂದರೆ ವಿಮರ್ಷಕರು, ಕಾದಂಬರಿಕಾರರೆಂದರೆ ಕಾದಂಬರಿಕಾರರು, ಉಪನ್ಯಾಸಕಾರರೆಂದರೆ ಉಪನ್ಯಾಸ ಚಕ್ರವರ್ತಿಗಳು. ಸಾಮಾನ್ಯವಾಗಿ ಇವರು ಅವಧಾನಗಳಿಂದ ಜನತೆಗೆ ಹೆಚ್ಚು ಪ್ರಸಿದ್ಧಿ. ಸಾವಿರಾರು ಅಷ್ಟಾವಧಾನಗಳನ್ನು ನಡೆಸಿಕೊಟ್ಟಿದ್ದಾರೆ. ಅವಧಾನ ಕಲೆ ಉಳಿದಿರುವುದೇ ಇಂದು ಅವರಿಂದ ಹಾಗೂ ಅವರ ಮಿತ್ರವೃಂದದಿಂದ. ಆ ಕಲೆಯೇ ಒಂದು ಅದ್ಭುತ ವಿದ್ವಲ್ಲೀಲಾ ವಿನೋದ. ಈವರೆಗೆ ಅವರು 5 ಬಾರಿ ಶತಾವಧಾನವನ್ನು ನಡೆಸಿಕೊಟ್ಟಿದ್ದಾರೆ. ಆ ಕಾರಣದಿಂದಲೇ ಅವರಿಗೆ ಶತಾವಧಾನಿ ಎಂಬ ಬಿರುದು ಬಂದಿದೆ. ಇವರ ವಿದ್ವತ್ಸಾಧನೆಯನ್ನು ಇಂಥ ಪುಟ್ಟ ಲೇಖನದಲ್ಲಿ ಹಿಡಿದಿಡುವುದು ಸಾಸಿವೆಯೊಳಗೆ ಸಾಗರವನ್ನು ತುರುಕಿದಂತಾಗುತ್ತದೆ. ಇವರ ಹಿಮಾಲಯ ವಿದ್ವದ್ದರ್ಶನ  ಮಾಡಬೇಕಾದರೆ ವಿದ್ವಾಂಸರಾದ ಬಿ ಎನ್ ಶಶಿಕಿರಣ್ ಅವರು ಇತ್ತೀಚೆಗೆ ಹೊರತಂದಿರುವ "ರಾಗಭಾರತೀ" ಎಂಬ ಗ್ರಂಥವನ್ನು ಒಮ್ಮೆ ತಾವು ಓದಬೇಕು. (ಇವರೇ ರಚಿಸಿರುವ ಶತಾವಧಾನಿಗಳ ಜೀವನ ಸಧನೆ ಕುರಿತಾದ ವಿಶೇಷ ಪುಸ್ತಕ 'ವ್ಯಕ್ತಿ ವಿಭೂತಿ'ಯನ್ನೂ ಓದಬೇಕು.)

ಅಷ್ಟವಧಾನ ಎಂದರೇನು?

ನನಗಂತೂ ಸದಾ ಅವರು ಓರ್ವ ಗೀತಾಚಾರ್ಯನ ಹಾಗೆ ಕಾಣುತ್ತಾರೆ. ಅವರ ಉಪನ್ಯಾಸಗಳು ನನಗಿಷ್ಟ. ಉಪನ್ಯಾಸಗಳನ್ನು ಕೇಳಿದಾಗೆಲ್ಲ ನನಗೆ ಶ್ರೀಕೃಷ್ಣನೇ ನೆನಪಾಗುತ್ತಾನೆ. ಒಂದೊಂದೂ ಪುಟವಿಟ್ಟ ಬಂಗಾರದ ಉಪನ್ಯಾಸಗಳು. ಒಂದು ವಸ್ತುವಿನ ಕುರಿತಾದ ಉಪನ್ಯಾಸಕ್ಕೆ ಅವರು ಮಾಡಿಕೊಳ್ಳುವ ಸಿದ್ಧತೆಯೇ ಊಹಾತೀತ. ಕಾವ್ಯವೊಂದನ್ನೋ, ಕಾದಂಬರಿಯನ್ನೋ ವಿವರಿಸಬೇಕಾದರೆ ಅಲ್ಲಿ ಬರುವ ಶಾಸ್ತ್ರವಿಚಾರ, ಅಲ್ಲಿ ರಚಿತವಾಗಿರುವ ಅಲಂಕಾರ, ಅಲ್ಲಿ ಕಾಣುವ ಸೌಂದರ್ಯ, ಅದರ ಔಚಿತ್ಯ, ಅದರ ಧ್ವನಿ-ರಸ ಹೀಗೆ 360 ಡಿಗ್ರಿಯ ಕೋನದಲ್ಲಿ ಆ ಕಾವ್ಯ ಹೇಗೆ ಕಾಣುತ್ತದೆ, ಹೇಗೆ ಕಾಣಬೇಕು ಎಂಬುದನ್ನು ಪರಿಚಯಿಸುವ ಶಕ್ತಿ ಇರುವುದು ಈಗಿನ ಕಾಲದಲ್ಲಿ ಕೇವಲ ರಾ ಗಣೇಶರಿಗೆ ಮಾತ್ರವೇ ಅನ್ನಿಸುತ್ತದೆ. ಇದು ಯಾವ ಅತಿಶಯೋಕ್ತಿ ಅಲಂಕಾರವೂ ಅಲ್ಲ, ಇಲ್ಲದ್ದನ್ನ ಇದೆಯೋ ಎಂಬಂತೆ ಹೇಳುವ ಉತ್ಪ್ರೇಕ್ಷೆಯೂ ಅಲ್ಲ. ಅಪ್ಪಟ ಸತ್ಯ ಸತ್ಯ ಸತ್ಯ.  ಒಂದು ಕೃತಿ ರಚನೆಯಾಗುವಾಗ ಕವಿಯ ಮನಸ್ಸು ಯಾವ ಯಾವ ಭಾವಗಳಲ್ಲಿ ಮಿಂದೇಳಿರಬಹುದು ಎಂಬುದನ್ನು ಶತಾವಧಾನಿಗಳು ಕಂಡುಕೊಳ್ಳುವ ಬಗೆ ಇದೆಯಲ್ಲಾ ಅದೇ ಅವರ ಅಧ್ಯಾತ್ಮಿಕ ಶಕ್ತಿ. ರವಿ ಕಾಣದ್ದನ್ನ ಕವಿ ಕಾಣುತ್ತಾನೆ ನಿಜ. ಕವಿ ಕಾಣುವುದನ್ನು ದರ್ಶನ ಮಾಡುವ ಶಕ್ತಿ ಯಾವುದು..? ಅದೇ ಪುರುಷ ಸರಸ್ವತಿ.

ಶ್ರೀ ರಾ ಗಣೇಶ್ ಅವರೆಡೆಗಿನ ಯಾವ ಪ್ರೇಮ-ಭಕ್ತಿಗಳ ಉನ್ಮಾದದಲ್ಲಿ ಈ ಮಾತನ್ನ ಹೇಳಿಲ್ಲ. ಸಾಧ್ಯವಾದರೆ ತಾವೊಮ್ಮೆ ದೇವುಡು ಅವರ ಮಹಾ ಬ್ರಾಹ್ಮಣ ಹಾಗೂ ಮಹಾ ದರ್ಶನ ಉಪನ್ಯಾಸವನ್ನ ಒಮ್ಮೆ ಕೇಳಿ ನೋಡಿ.

ದೇವುಡು ಅವರ ಅನನ್ಯ ಪ್ರತಿಭಾಶಕ್ತಿ ತಿಳಿಯುವುದು ಅವರ ಮಹಾದರ್ಶನ, ಮಹಾಬ್ರಾಹ್ಮಣ, ಮಹಾ ಕ್ಷತ್ರಿಯ ಕೃತಿಗಳಿಂದ. ಅವರು ಆ ಕೃತಿಗಳನ್ನ ಬರೆಯುವ ವೇಳೆಗೆ ಅವರು ಸಂಪಾದಿಸಿಕೊಂಡಿದ್ದ ತಪಸ್ಸು ಎಂಥದ್ದು? ಅರಮನೆ - ಗುರುಮನೆಯ ಪರಂಪರೆಗಳು ಹೇಗೆ ವರ್ತಿಸುತ್ತವೆ, ಅವರು ಅನುಸರಿಸುವ ಶಾಸ್ತ್ರೀಯ ವಿಚಾರ, ಸಂಪ್ರದಾಯಗಳ ವಿವರ, ಇಷ್ಟಿ-ಹೋಮ-ಹವನಗಳ ವ್ಯತ್ಯಾಸಗಳ ಜೊತೆ ಜೊತೆಗೆ ಕಾಂಡದ್ವಯಗಳ (ಕರ್ಮಕಾಂಡ-ಜ್ಞಾನಕಾಂಡಗಳ ) ವಿಚಾರಗಳ ತಳಸ್ಪರ್ಶಿ ಅಧ್ಯಯನ, ಅವುಗಳ ತಾತ್ಪರ್ಯವನನ್ನೆಲ್ಲಾ ಹೀರಿಕೊಂಡು, ಅವುಗಳ ಮೌಲ್ಯಗಳು, ಸೌಂದರ್ಯ, ಸಂವೇದನೆ, ಜೊತೆಗೆ ಮನುಷ್ಯನ ಸಮಸ್ತ ಚಿತ್ತ ವೃತ್ತಿಗಳ ಭಾವ-ಸ್ವಭಾವ ಎಲ್ಲದರ ಸಾರ ಎರೆದು ಆ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ಶ್ರೀ ಶ್ರೀ ಶಂಕರಾಚಾರ್ಯರ ಆದಿಯಾಗಿ ಎಲ್ಲ ಭಾಷ್ಯಕಾರರ ವಿವರಣೆಗಳಲ್ಲಿ ಅರ್ಥವಾಗದ ಉಪನಿಷದ್ವಿವರಗಳನ್ನ ದೇವುಡು ಅವರು ಅವರ ಕೃತಿಗಳಲ್ಲಿ ಸರಳವಾಗಿ ತಿಳಿಸಿದ್ದಾರೆ. ಆದರೆ ಈ ಯಾವ ವಿಚಾರಗಳೂ ಸಾಮಾನ್ಯ ಓದುಗನಿಗೆ ತಿಳಿಯುವುದೇ ಇಲ್ಲ. ದೇವುಡು ಅವರ ಈ ತಪಸ್ಸು ಅರಿವಿಗೆ ಬರುವುದೇ ಇಲ್ಲ. ಕಾರಣ ಓದುಗರ ದುರ್ಬಲತೆ. ಬೇರೆ ಬೇರೆ ವಿಚಾರಗಳ ಅಧ್ಯಯನ ಕೊರತೆ. ಈ ಕೃತಿಗಳಲ್ಲಿರುವ ಇಂಥ ಶಾಸ್ತ್ರ-ಸಂಪ್ರದಾಯ-ವೇದಾಂತ ತತ್ವಗಳ ವಿಚಾರ ತಿಳಿದುಕೊಂಡು, ಇದು ದೇವುಡು ಅವರ ಶಕ್ತಿ ಅಂತ ತೋರಿಸಿಕೊಡಲಿಕ್ಕೆ ಒಂದು ಬೆಳಕು ಬೇಕಲ್ಲ. ಆ ತಿಳಿ ಬೆಳಕೇ ಈ ಪುರುಷ ಸರಸ್ವತಿ..!

ಆತ್ಮೀಯರೇ, ಲಿಯೋನಿಸ್, ಡೆನೆಬೋಲಾ ಇಂಥ ಗುರ್ತಿಗೆ ಸಿಗದ ನಕ್ಷತ್ರಗಳ ಬಗ್ಗೆ ವಿವರಿಸಿ ಅಂದ್ರೆ ಇವು ಸಿಂಹ ರಾಶಿಗೆ ಒಳಪಡುವಂಥ ನಕ್ಷತ್ರಪುಂಜಗಳಲ್ಲಿ ಒಂದು ಇವುಗಳ ಗುಣ ಹೀಗೆ ಅಂತ ಮಾಹಿತಿ ಸಂಗ್ರಹ ಮಾಡಿ ವಿವರಿಸಬಹುದೇನೋ ಆದರೆ ಸೂರ್ಯನ ಕುರಿತಾಗಿ ವಿವರಿಸಿ ಅಂದ್ರೆ! ಯಾರಿಗೆ  ಗೊತ್ತಿಲ್ಲ ಸೂರ್ಯ ಪರಮಾತ್ಮ? ಹಾಗೆ ವಿದ್ವಲ್ಲೋಕಕ್ಕೆ ರಾ ಗಣೇಶರು ನಿತ್ಯಬೆಳಗುವ ಸೂರ್ಯ. ಅವರ ಬೆಳಕಿನ ಆಲಂಬನದ ಮೇಲೆಯೇ ನಮ್ಮಂಥ ಎಷ್ಟೋ ಜನರು ಬದುಕಿನ ಅಧ್ಯಯನದ ಹಾದಿಯನ್ನು ಕ್ರಮಿಸುತ್ತಿದ್ದಾರೆ. ಅವರ ಒಂದೊಂದು ಉಪನ್ಯಾಸವೂ ಉಪನಿಷದ್ಸಮ. ಅವರ ಮಾತೇ ಒಂದು ರಸಕಾವ್ಯ. ಇಂಥ ಜಾಜ್ವಲ್ಯ ಕವಿ ಪ್ರತಿಭೆಗೆ ಡಿ.4 ಜನ್ಮದಿನ. ಷಷ್ಟಿಪೂರ್ತಿ ಶಾಂತಿ ಆಚರಿಸುವ ಸಮಯ. 60 ಸಂವತ್ಸರಗಳು ಸಂದಿವೆ. ಅವರಿರುವ ಕಾಲದಲ್ಲಿ ಅವರನ್ನು ಕಾಣುತ್ತಾ ಅವರ ಮಾತುಗಳನ್ನು ಹೃದಯಕ್ಕೆ ತುಂಬಿಕೊಳ್ಳುತ್ತಿದ್ದೇವೆ ಎಂಬುದೇ ನಮ್ಮ ಪುಣ್ಯ. ಇಂಥ ಪುಣ್ಯಫಲವನ್ನು ಕರುಣಿಸಿದ್ದಕ್ಕಾಗಿ ಭಗವಂತನಿಗೆ ಋಣಿಯಾಗಿರೋಣ, ಶತಾವಧಾನಿ ರಾ ಗಣೇಶರಿಗೆ ದಂಡ ಪ್ರಣಾಮಗಳನ್ನು ಸಲ್ಲಿಸೋಣ.

ಪ್ರಾಚೀನ ಗ್ರೀಕ್ ಸಹ ಗೊತ್ತು
ಗಣೇಶರಿಗೆ  ಗ್ರೀಕ್ ಭಾಷೆಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕೆಂಬ ತುಡಿತವಿತ್ತು. ಆದರೆ ಸಮರ್ಥ ಅಧ್ಯಾಪಕರು ಸಿಗದ ಕಾರಣ ಏರ್ ಮೆಯ್ಲ್ ಆವೃತ್ತಿಯ ಒಂದು ಕಾರ್ಡಿನಲ್ಲಿ To any professor of Greek, USA ಎಂದು ಬರೆದು ಅಂಚೆಗೆ ಹಾಕಿದ್ದರಂತೆ. ಸುದೈವದಿಂದ ಆ ಕಾಗದ ಟೆಕ್ಸಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ಪ್ರೋ ಎಡ್ವರ್ಡ್ ವಿ ಜಾರ್ಜ್ ಅವರ ಕಣ್ಣಿಗೆ ಬಿದ್ದು ಅವರು ಹಲವು ಪುಸ್ತಕಗಳನ್ನು ಕಳುಹಿಸಿಕೊಟ್ಟರಂತೆ. ಅವುಗಳ ನೆರವಿನಿಂದಲೇ ಅವರು ಪ್ರಾಚೀನ ಗ್ರೀಕ್ ಕಲಿತರು.

ಗಣೇಶರು ಓದುಕೊಂಡದ್ದು ಏನು..?
ವೇದ, ವೇದಾಂಗ, ಉಪವೇದ, ದರ್ಶನಗಳು, ಆಗಮ, ಪುರಾಣ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಸೂಪಶಾಸ್ತ್ರ, ಸಾಹಿತ್ಯ ಶಾಸ್ತ್ರ, ಇತಿಹಾಸ, ಕಾವ್ಯ, ವ್ಯಾಕರಣ, ವಿಜ್ಞಾನ,ನೃತ್ಯ, ನಾಟಕ, ಯಕ್ಷಗಾನ, ತಂತ್ರಜ್ಞಾನ, ಸಂಗೀತ, ಯಂತ್ರಶಾಸ್ತ್ರ, ಗಣಿತ ಶಾಸ್ತ್ರ, ಖಗೋಳ ಶಾಸ್ತ್ರ, ಕಾವ್ಯ ಮೀಮಾಂಸೆ, ಛಂದ:ಶಾಸ್ತ್ರ, ಭಾಷಾ ಮೀಮಾಂಸೆ, ದರ್ಶನ ಶಾಸ್ತ್ರ, ಧರ್ಮ ಶಾಸ್ತ್ರ, ಕಲಾ ಮೀಮಾಂಸೆ, ಇತಿಹಾಸ, ಸಸ್ಯಶಾಸ್ತ್ರ, ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜ್ಯೋತಿಷ, 18 ಪುರಾಣಗಳನ್ನೂ 2 ಕ್ಕಿಂತ ಹೆಚ್ಚುಬಾರಿ ಓದಿದ್ದಾರೆ. ಬೌದ್ಧ, ಜೈನ ಅನ್ಯಮತಗಳ ಗ್ರಂಥಗಳನ್ನೂ ಅಧ್ಯಯನ ಮಾಡಿದ್ದಾರೆ. ಇನ್ನೂ ಕೆಲವನ್ನು ಬಿಟ್ಟಿದ್ದೇನೆ. ಹೀಗಾಗಿಗೇ ಅವರನ್ನು ಪುರುಷ ಸರಸ್ವತಿ ಎನ್ನುತ್ತಾರೆ.

ಇಂದಿನ ಪಂಡಿತ ನಾನು ಹೇಳುತ್ತಿದ್ದೇನಲ್ಲಾ
ಗಣೇಶರು ಒಮ್ಮೆ ಶೃಂಗೇರಿಯಲ್ಲಿ ಅವಧಾನ ಮಾಡುವ ಸಂದರ್ಭದಲ್ಲಿ ಶ್ರೀ ಶ್ರೀ ಭಾರತೀತೀರ್ಥಸ್ವಾಮಿಗಳು ಅಧ್ಯಕ್ಷತೆವಹಿಸಿದ್ದರು. ಶೃಂಗೇರಿ ಸ್ವಾಮಿಗಳ ಘನತೆ ಅವರ ಪ್ರಚಂಡ ವಿದ್ವತ್ತು ಪ್ರಪಂಚಕ್ಕೇ ಗೊತ್ತಿದೆ. ಅವರ ಮುಂದೆ ಅಷ್ಟಾವಧಾನಸಾಗುತ್ತಿದ್ದಾಗ ಅಪ್ರಸ್ತುತ ಪ್ರಸಂಗದ ರೀತಿಯಲ್ಲಿ ಸ್ವಾಮಿಗಳು ಸೂಕ್ಷ್ಮ ಪ್ರಶ್ನೆಗಳನ್ನು ಹಾಕುತ್ತಿದ್ದರು. ಅದಕ್ಕೆಲ್ಲಾ ಶಾಸ್ತ್ರಶುದ್ಧ, ಅನುಭವನಿಷ್ಠವಾದ ಉತ್ತರಗಳನ್ನು ಗಣೇಶರು ಲೀಲಾಜಾಲವಾಗಿ ಕೊಡುತ್ತಿದ್ದರು. ಒಂದು ಗಂಭೀರವಾದ ಪ್ರಶ್ನೆಗೆ ಗಣೇಶರು ಉತ್ತರ ಕೊಟ್ಟರು. ಅದಕ್ಕೆ ಸ್ವಾಮಿಗಳು ಈ ವಿಚಾರದಲ್ಲಿ ಹಿಂದಿನ ಯಾವ ಪಂಡಿತರೂ ಹೀಗೆ ಹೇಳಲಿಲ್ಲವಲ್ಲಾ ಎಂದರು ಅದಕ್ಕೆ ಉತ್ತರವಾಗಿ ಗಣೇಶರು ‘ಇಂದಿನ ಪಂಡಿತ ನಾನು ಹೇಳುತ್ತಿದ್ದೇನಲ್ಲಾ’’ ಎಂದು ದಿಟ್ಟವಾಗಿ ಉತ್ತರಿಸಿದ್ದರಂತೆ.

ಗಣೇಶರು ಕಲಿತ ಭಾಷೆಗಳು
ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಪಾಲಿ, ಪ್ರಾಕೃತ, ಗ್ರೀಕ್, ಗುಜರಾತಿ, ಮಾಗಧಿ, ಅರ್ಧ ಮಾಗಧಿ, ಶೌರಸೇನಿ, ಜೆಂಡವೆಸ್ತಾ, ಲ್ಯಾಟಿನ್, ಇಟಾಲಿಯನ್ ಸುಮಾರು 18 ಭಾಷೆಗಳಲ್ಲಿ ಕವಿತೆ ರಚಿಸುವಷ್ಟು ಶಕ್ತಿ ಗಣೇಶರಿಗಿದೆ.

Latest Videos
Follow Us:
Download App:
  • android
  • ios