Asianet Suvarna News Asianet Suvarna News

ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!

ರಸ್ತೆ ಬಳಕೆದಾರರ ಸಹಕಾರವಿಲ್ಲದೆ ಸುರಕ್ಷತಾ ಕ್ರಮಗಳು ಯಶಸ್ಸು ಸಾಧಿಸಲಾರವು. ಕುತೂಹಲಕಾರಿ ಸಂಗತಿಯೆಂದರೆ ಚಳಿಗಾಲದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತವೆ. ಅಧಿಕೃತ ಮಾಹಿತಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಅದರ ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಹೆಚ್ಚು ಅಪಘಾತಗಳು ಸಂಭವಿಸಿರುವುದು ಕಂಡು ಬರುತ್ತದೆ.

Road Accident is more in Winter Season Says Police Inspector Dr Anilkumar P grg
Author
First Published Jan 14, 2024, 12:06 PM IST

ಡಾ.ಅನಿಲ್‌ಕುಮಾರ್ ಪಿ. ಗ್ರಾಮ ಪುರೋಹಿತ್ ಪೊಲೀಸ್‌ ಇನ್ಸ್‌ಪೆಕ್ಟರ್

ಬೆಂಗಳೂರು(ಜ.14): ರಸ್ತೆ ಅಪಘಾತಗಳಿಗೆ ಪ್ರಮುಖವಾಗಿ ಮೂರು ಕಾರಣಗಳಿವೆ. 1. ಮಾನವನ ತಪ್ಪು. 2.ರಸ್ತೆಯ ಸ್ಥಿತಿ. 3.ವಾಹನದ ಸ್ಥಿತಿ. ಇವುಗಳು ಒಂದಕ್ಕೊಂದು ಪರಸ್ಪರ ಪೂರಕ ಮತ್ತು ಮಾರಕವಾಗಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತವೆ. ಅತಿವೇಗದ ಚಾಲನೆಯಿಂದ ಅತಿಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಇಂದು ''ರಸ್ತೆ ಅಪಘಾತಗಳು'' ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಅಪಘಾತಗಳಿಂದ ಸಾವಿರಾರು ಜನರ ಪ್ರಾಣ ಹೋಗುತ್ತಿದೆ. 2022ನೇ ಸಾಲಿನಲ್ಲಿ 4,60,000 ಅಪಘಾತಗಳು ದೇಶದಲ್ಲಿ ಸಂಭವಿಸಿದ್ದು, ಇದರಲ್ಲಿ ಮರಣ ಹೊಂದಿದವರ ಸಂಖ್ಯೆ 1,68,491. ಕಳೆದ ವರ್ಷಕ್ಕಿಂತ 11.9% ಹೆಚ್ಚಾಗಿದ್ದು ಮಾತ್ರವಲ್ಲದೆ ಪ್ರಾಣಹಾನಿ ಶೇ.9.4 ಏರಿಕೆಯಾಗಿದೆ. ಇದು ಆಘಾತಕಾರಿ ಸಂಗತಿ. ರಸ್ತೆ ಸುರಕ್ಷತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗೆ ಸಾಕಷ್ಟು ಒತ್ತು ನೀಡಿದ್ದರೂ ಸಹ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಆತಂಕ ತಂದಿದೆ.

ಮಂಡ್ಯ: ಮೈಸೂರು-ಬೆಂಗಳೂರು ಎಕ್ಸಪ್ರೆಸ್‌ವೇನಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ದುರ್ಮರಣ

ರಸ್ತೆ ಬಳಕೆದಾರರ ಸಹಕಾರವಿಲ್ಲದೆ ಸುರಕ್ಷತಾ ಕ್ರಮಗಳು ಯಶಸ್ಸು ಸಾಧಿಸಲಾರವು. ಕುತೂಹಲಕಾರಿ ಸಂಗತಿಯೆಂದರೆ ಚಳಿಗಾಲದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತವೆ. ಅಧಿಕೃತ ಮಾಹಿತಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಅದರ ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಹೆಚ್ಚು ಅಪಘಾತಗಳು ಸಂಭವಿಸಿರುವುದು ಕಂಡು ಬರುತ್ತದೆ.

ರಸ್ತೆ ಅಪಘಾತಕ್ಕೆ ಕಾರಣವೇನು?

ರಸ್ತೆ ಅಪಘಾತಗಳಿಗೆ ಪ್ರಮುಖವಾಗಿ ಮೂರು ಕಾರಣಗಳಿವೆ. 1. ಮಾನವನ ತಪ್ಪು. 2.ರಸ್ತೆಯ ಸ್ಥಿತಿ. 3.ವಾಹನದ ಸ್ಥಿತಿ. ಇವುಗಳು ಒಂದಕ್ಕೊಂದು ಪರಸ್ಪರ ಪೂರಕ ಮತ್ತು ಮಾರಕವಾಗಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತವೆ. ಭಾರತೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಪ್ರಾಧಿಕಾರದ ಪ್ರಕಾರ ಕಳೆದ ಸಾಲಿನಲ್ಲಿ ಸಂಭವಿಸಿದ ಅಪಘಾತಗಳು ಮುಖ್ಯವಾಗಿ ಅತಿವೇಗದ ಚಾಲನೆಯಿಂದಾಗಿವೆ. ಅತಿವೇಗದ ಚಾಲನೆಯಿಂದ ಉಂಟಾದ ರಸ್ತೆ ಅಪಘಾತಗಳು ಶೇ.71%. ಕಳೆದ ಸಾಲಿಗೆ ಹೋಲಿಸಿದಲ್ಲಿ ಇವು 12% ಏರಿಕೆಯಾಗಿವೆ.

ಸಂಚಾರದ ಹರಿವಿನ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವುದು, ಚಾಲನಾ ಅನುಜ್ಞಾ ಪತ್ರವಿಲ್ಲದೆ ಓಡಿಸುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಆದರೂ ಅಂತಹವರನ್ನು ಸಂಚಾರ ಪೊಲೀಸರೇ ಗುರುತಿಸಿ ದಂಡ ಹಾಕಲಿ ಎಂದು ಭಾವಿಸುವ ಜನರೇ, ಸಂಚಾರ ಪೊಲೀಸರು ವಾಹನ ತಪಾಸಣೆಗೆ ನಿಂತರೆ ಇವರ ಕಾಟ ಶುರುವಾಯಿತೆಂದು ಶಾಪ ಹಾಕುತ್ತಾರೆ. ತಮ್ಮ ಮನೆಯಲ್ಲಿರುವ ವಾಹನವನ್ನು ತಾವು ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು ಎನ್ನುವ ವಿವೇಚನೆ ಇಲ್ಲದಿದ್ದರೆ, ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ. 

ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ಓಡಿಸಲು ಪೋಷಕರೇ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಜಾಹಿರಾತುಗಳು ಯುವಜನತೆಯನ್ನು ವಾಹನ ಓಡಿಸುವಂತೆ ಪ್ರೇರೇಪಿಸುತ್ತವೆ. ಮತ್ತೊಂದು ನಿಯಮ ಉಲ್ಲಂಘನೆ ಎಂದರೆ ಪಾನಮತ್ತ ವಾಹನ ಚಾಲನೆ. ಇತ್ತೀಚೆಗೆ ಅಪಘಾತಗಳಲ್ಲಿ ಪಾನಮತ್ತ ಚಾಲನೆ ಮಾತ್ರವಲ್ಲ, ಮಾದಕ ದ್ರವ್ಯಗಳ ವ್ಯಸನಿಗಳು ಅಪಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಮೊಬೈಲ್ ಫೋನ್‌ಗಳ ಬಳಕೆ ಸಹ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ.

ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಿಸುವ ಪರಿಪಾಠ ಕಡಿಮೆಯಾಗಬೇಕು. ಕೌಟುಂಬಿಕ ಹಂತದಲ್ಲೇ ಇದು ಸಾಧ್ಯ. ಸಂಚಾರ ಪೊಲೀಸರೇ ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಿ ಎಂಬ ಭಾವನೆ ಬೇಡ. ಕಳೆದ ವರ್ಷ ಹೆಲ್ಮೆಟ್‌ ಧರಿಸದೆ ಮರಣ ಹೊಂದಿದವರ ಸಂಖ್ಯೆ 50 ಸಾವಿರ. ಅದರಲ್ಲಿ 35,692 ಜನರು ಸವಾರರಾಗಿದ್ದು, 14,337 ಜನ ಹಿಂಬದಿಯ ಸವಾರರಾಗಿದ್ದಾರೆ. ಕಾರುಗಳಲ್ಲಿ ವಾಹನ ಚಾಲಕರು ಮತ್ತು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಸಹ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸಬೇಕೆಂಬುವ ನಿಯಮವಿದ್ದರೂ ಸಹ ಸೀಟ್‌ಬೆಲ್ಟ್ ಧರಿಸದೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 16,705 ಆಗಿದೆ.

ಭೌಗೋಳಿಕ ಕಾರಣಗಳೂ ಇವೆ

ರಸ್ತೆ ಅಪಘಾತಗಳು ಕೇವಲ ಮಾನವನ ತಪ್ಪುಗಳಿಂದ ಮಾತ್ರವಲ್ಲದೆ, ಭೌಗೋಳಿಕ ಅಥವಾ ಹವಾಮಾನ ಪರಿಸ್ಥಿತಿಯ ಪರೋಕ್ಷ ಕಾರಣಗಳಿಂದಾಗಿಯೂ ಸಂಭವಿಸುತ್ತವೆ. 2022ರ ಅಪಘಾತಗಳ ಅಂಕಿಅಂಶಗಳನ್ನು ಗಮನಿಸುವುದಾದರೆ, 42% ಅಪಘಾತಗಳು ಮತ್ತು ಗಾಯಗಳು ತೆರೆದ ಪ್ರದೇಶದಲ್ಲಿ ಅಂದರೆ ಜನನಿಬಿಡವಲ್ಲದ ಪ್ರದೇಶದಲ್ಲಿ ಸಂಭವಿಸಿವೆ. ಜನವಸತಿ ಪ್ರದೇಶದಲ್ಲಿ ಮತ್ತು ಮಾರುಕಟ್ಟೆ, ಆಸ್ಪತ್ರೆಗಳ ಬಳಿ ಹಾಗೂ ವಾಣಿಜ್ಯ ಕೇಂದ್ರಗಳ ಸುತ್ತಮುತ್ತ ಅಪಘಾತಗಳ ಸಂಖ್ಯೆ 17%. ಶಾಲಾ ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳು ಇರುವ ಸ್ಥಳಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಬಹುದಾಗಿದೆ. ಇಂತಹ ಕಡೆ ವಾಹನಗಳು ನಿಧಾನಗತಿಯಲ್ಲಿ ಚಲಿಸುವುದು ಕಾರಣವಿರಬಹುದು. ರಸ್ತೆಗಳಲ್ಲಿ ಕಡಿದಾದ ತಿರುವು, ಗುಂಡಿಗಳು ಹಾಗೂ ಏರುಪ್ರದೇಶಗಳಲ್ಲಿ ಮತ್ತು ತಗ್ಗಾದ ಪ್ರದೇಶಗಳಲ್ಲಿ ಹೆಚ್ಚಿನ ಅಪಘಾತಗಳಾಗುವುದು ಕಂಡುಬರುತ್ತದೆ. ಏಕೆಂದರೆ, ಸಮತಟ್ಟಾದ ಪ್ರದೇಶದಲ್ಲಿ ವಾಹನವನ್ನು ಓಡಿಸುವುದು ಮತ್ತು ನಿಯಂತ್ರಣ ಮಾಡುವುದು ಸುಲಭ.

ನೇರವಾದ ರಸ್ತೆಗಳಲ್ಲಿ ಅಪಘಾತದ ಪ್ರಮಾಣವು 67% ರಷ್ಟಾಗಿದ್ದರೆ 13%ರಷ್ಟು ರಸ್ತೆ ಅಪಘಾತಗಳು ತಿರುವುಗಳಿರುವೆಡೆ ಸಂಭವಿಸಿರುವುದು ಕಂಡುಬರುತ್ತದೆ. ನೇರ ರಸ್ತೆಗಳಲ್ಲೂ ಸಹ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಈ ರಸ್ತೆಗಳಿದ್ದಲ್ಲಿ ವಾಹನ ಸವಾರರು ಅತೀ ವೇಗವಾಗಿ ಚಾಲನೆ ಮಾಡುತ್ತಾರೆ. ರಸ್ತೆಗಳ ತಿರುವು ಹಾಗೂ ಅಪಾಯಕಾರಿ ಸನ್ನಿವೇಶಗಳನ್ನು ಸಂಬಂಧಪಟ್ಟ ರಸ್ತೆಯ ಉಸ್ತುವಾರಿ ಸಂಸ್ಥೆಗಳು, ರಸ್ತೆ ಬಳಕೆದಾರರಿಗೆ ಅಗತ್ಯ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ನೀಡುವ ಫಲಕಗಳನ್ನು ಹಾಕಿದಲ್ಲಿ ಇಂತಹ ಅಪಘಾತಗಳನ್ನು ತಗ್ಗಿಸಬಹುದು.

ಎಲ್ಲಿ ಅಪಘಾತಗಳು ಹೆಚ್ಚು?

ರಸ್ತೆ ಅಪಘಾತಗಳು ಕೂಡುರಸ್ತೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಸಂಭವಿಸುತ್ತವೆ. ಟಿ ಮಾದರಿಯ ಜಂಕ್ಷನ್‌ನಲ್ಲಿ 39% ಅಪಘಾತಗಳು ಸಂಭವಿಸಿದ್ದರೆ, ನಂತರದ ಸ್ಥಾನವನ್ನು ಅಂದರೆ 19% ಅಪಘಾತಗಳು ಪ್ಲಸ್ ಜಂಕ್ಷನ್‌ಗಳಲ್ಲಿ ಸಂಭವಿಸಿವೆ. ತದನಂತರದ ಸ್ಥಾನ ವೈ ಜಂಕ್ಷನ್ ಮತ್ತು ರೋಟರಿಗಳಿಗೆ.

ಸಂಚಾರ ದೀಪಗಳಿರುವ ಜಂಕ್ಷನ್‌ಗಳಿಗಿಂತ ಸಂಚಾರ ದೀಪಗಳೇ ಇಲ್ಲದ ಜಂಕ್ಷನ್‌ಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿರುವುದನ್ನು ನೋಡಬಹುದಾಗಿದೆ. ಬ್ಲಿಂಕರ್‌ಗಳು ಅಥವಾ ಫ್ಲಾಶಿಂಗ್ ಸಿಗ್ನಲ್ ಇರುವ ಜಂಕ್ಷನ್‌ಗಳಲ್ಲಿ ಅಪಘಾತಗಳ ಪ್ರಮಾಣ ಕಡಿಮೆ. ಸಂಚಾರ ಪೊಲೀಸರು ಭೌತಿಕವಾಗಿ ಸರ್ಕಲ್‌ಗಳಲ್ಲಿ ಪ್ರತಿ ಗಂಟೆಗೆ 800 ವಾಹನಗಳು ಸಂಚರಿಸುವಂತಿದ್ದಲ್ಲಿ ಸಂಚಾರ ನಿಯಂತ್ರಣವನ್ನು ಹ್ಯಾಂಡ್‌ ಸಿಗ್ನಲ್ ಕೊಡುವುದರ ಮುಖಾಂತರ ಮಾಡಬಹುದು. 1200ಕ್ಕೂ ಹೆಚ್ಚು ವಾಹನಗಳು ಓಡಾಡುವಂತಹ ಜಂಕ್ಷನ್‌ಗಳಲ್ಲಿ ಸಿಗ್ನಲ್‌ ಲೈಟ್ ಹಾಕಬೇಕು.

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ 2000 ಅಡಿ ಪ್ರಪಾತಕ್ಕೆ ಬಿದ್ದ ಲಾರಿ

ಮಳೆ ಬರುವಾಗ, ಮಂಜು ಮುಸುಕಿದ ವಾತಾವರಣವಿರುವಾಗ ರಸ್ತೆಗಳು ತುಸು ಹೆಚ್ಚು ಜಾರುತ್ತವೆ. ಈ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವೇಗವು ಒಳ್ಳೆಯದಲ್ಲ. 2022ರ ಅಪಘಾತಗಳ ಅಂಕಿ ಅಂಶಗಳನ್ನು ನೋಡಿದಾಗ 3/4ರಷ್ಟು ಅಪಘಾತಗಳು ಸೂರ್ಯನ ಬೆಳಕಿನಲ್ಲೇ, ಸ್ವಚ್ಛವಾದ ವಾತಾವರಣದಲ್ಲೇ ಸಂಭವಿಸಿರುವುದು ಆಶ್ಚರ್ಯಕರ. ಆದಾಗ್ಯೂ ಮಳೆ ಅಥವಾ ಮಂಜು ಮುಸುಕಿದ ರಸ್ತೆಗಳಲ್ಲಿ ನಿಧಾನಗತಿಯ ವಾಹನ ಚಾಲನೆ ಸುರಕ್ಷಿತ. ಈ ಸಂದರ್ಭಗಳಲ್ಲಿ ವಾಹನ ಚಾಲಕರು ತಮ್ಮ ವಾಹನದ ಹೆಡ್‌ಲೈಟ್‌ಗಳನ್ನು ಪ್ರಜ್ವಲಿಸುವಂತೆ ಮಾಡುವುದು, ಇತರ ರಸ್ತೆ ಬಳಕೆದಾರರಿಗೂ ಅನುಕೂಲಕರ.

ವಾಹನಗಳು ಸುಸ್ಥಿತಿಯಲ್ಲಿರಲಿ

ವರ್ಷಗಳು ಕಳೆದಂತೆ ವಾಹನಗಳು ಕ್ಷಮತೆ ಕಡಿಮೆಯಾಗುತ್ತವೆ. ನಿಯಮಿತವಾಗಿ ವಾಹನಗಳನ್ನು ತಾಂತ್ರಿಕವಾಗಿ ತಪಾಸಣೆ ಮಾಡಿ ಅವುಗಳ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕು. ಸಾವಿರ ರು.ನ ಮೊಬೈಲ್‌ ಕೊಂಡು ಅದಕ್ಕೆ ಕವರ್ ಮತ್ತು ಟೆಂಪರ್ಡ್‌ ಗ್ಲಾಸ್ ಹಾಕಿಸುವ ನಾವು, ವಾಹನದ ಸವೆದ ಟೈಯರ್‌ಗಳನ್ನು ಬದಲಾಯಿಸುವುದಕ್ಕೂ ಮೀನಮೇಷ ಎಣಿಸುತ್ತೇವೆ. ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದರಿಂದ ಅಪಘಾತಗಳನ್ನು ತಗ್ಗಿಸಬಹುದಾಗಿದೆ.
ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ಕೆಲವೊಮ್ಮೆ ವಾಹನಗಳಲ್ಲಿ ಕುಳಿತ ಮೇಲೆ ನಾವು ಮಾಡುವ ಮೊದಲ ತಪ್ಪು ನಮ್ಮ ಕೊನೆಯ ತಪ್ಪು ಆಗಬಹುದು. ಒಮ್ಮೆ ಹೋದ ಅಮೂಲ್ಯ ಜೀವ ಮತ್ತೆ ಲಭಿಸುವುದಿಲ್ಲ.  

Follow Us:
Download App:
  • android
  • ios