*   ಕೋವಿಡ್‌ನ ರೋಗ ಲಕ್ಷಣ ಕಾಣಿಸಿಕೊಂಡ ದಿನ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು*   ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯುವುದು ಅನಿವಾರ್ಯ *   ಮನೆ ಬಾಗಿಲಿಗೆ ತೆರಳಿ ಸೋಂಕಿತರ ತಪಾಸಣೆ 

ಬೆಂಗಳೂರು(ಜ.23): ಕೋವಿಡ್‌-19(Covid-19) ಬಂದವರು ರೋಗ ಲಕ್ಷಣ ಕಾಣಿಸಿಕೊಂಡ ದಿನದಿಂದ 8ನೇ ದಿನ ಅತ್ಯಂತ ಜಾಗರೂಕರಾಗಿ ಇರಬೇಕು. 8ನೇ ದಿನದ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಡಾ.ಅನಿಲ್‌ ಕುಮಾರ್‌ ಆವುಲಪ್ಪ(Dr Anil Kumar Avulappa) ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಆಯೋಜಿಸಿದ್ದ ‘ಕೋವಿಡ್‌ ಮೂರನೇ ಅಲೆ(Covid 3rd Wave) ಒಮಿಕ್ರೋನ್‌ಗೆ(Omicron) ಹೆದರಬೇಕೇ? 8ನೇ ದಿನ- ಏನದು’ ಎಂಬ ವರ್ಚುವಲ್‌ ಸಂವಾದದಲ್ಲಿ ಅವರು ಮಾತನಾಡಿದರು.

Karnataka: ರಾಜ್ಯದಲ್ಲಿ 6 ಕೋಟಿ ದಾಟಿದ ಕೋವಿಡ್‌ ಟೆಸ್ಟ್‌: ದೇಶದಲ್ಲೇ 3ನೇ ಸ್ಥಾನ

ಕೋವಿಡ್‌ನ ರೋಗ ಲಕ್ಷಣ ಕಾಣಿಸಿಕೊಂಡ ದಿನವನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲ ಏಳು ದಿನ ಸೋಂಕಿತರಲ್ಲಿ ಸಮಸ್ಯೆ ಆಗುವುದಿಲ್ಲ. ಬಹುತೇಕ ಮಂದಿ ಮೊದಲ ಏಳು ದಿನದಲ್ಲೇ ಗುಣ ಹೊಂದುತ್ತಾರೆ. ಆದರೆ 8ನೇ ದಿನದಂದು ಸೋಂಕಿತರಲ್ಲಿ ಸೋಂಕಿನ ಲಕ್ಷಣಗಳು ಉಲ್ಬಣಿಸಿದರೆ, ಹೊಸ ರೋಗ ಲಕ್ಷಣ ಕಾಣಿಸಿಕೊಂಡರೆ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ(Treatment) ಪಡೆಯುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.

8ನೇ ದಿನ ಪರಿಸ್ಥಿತಿ ಬಿಗಡಾಯಿಸಿದರೆ ಆಗ ಮೂರು ದಿನಗಳ ಕಾಲ ವೈದ್ಯರ(Doctors) ಸಲಹೆಯ ಮೇರೆಗೆ ಸ್ಟಿರಾಯಿಡ್‌ ಚಿಕಿತ್ಸೆ(Steroid Treatment) ಪಡೆಯಬೇಕು. 12 ದಿನದ ಬಳಿಕ ಆರೋಗ್ಯ ಬಿಗಡಾಯಿಸಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸೋಂಕು ಲಕ್ಷಣ ಕಾಣಿಸಿಕೊಂಡ 8ನೇ ದಿನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕೆಲವರು ಸೋಂಕಿನ ಲಕ್ಷಣ ಕಾಣಿಸಿಕೊಂಡ ಸಂದರ್ಭದಲ್ಲಿ ಔಷಧಿ ತೆಗೆದುಕೊಂಡು ಸೋಂಕು ಕಡಿಮೆ ಆಯಿತು ಎಂದು ಭಾವಿಸುತ್ತಾರೆ. ಆಮೇಲೆ 8ನೇ ದಿನ ಸೋಂಕು ಜಾಸ್ತಿಯಾದರೆ ಮತ್ತೆ ಅದೇ ಮದ್ದಿನ ಮೊರೆ ಹೋಗುತ್ತಾರೆ. ಎರಡು ದಿನ ಕಳೆದರೂ ವಾಸಿಯಾಗದಿದ್ದರೆ ಆಗ ವೈದ್ಯರಲ್ಲಿಗೆ ದೌಡಾಯಿಸುತ್ತಾರೆ. ಆಮೇಲೆ ಆರ್‌ಟಿಪಿಸಿಆರ್‌(RTPCR) ಪರೀಕ್ಷೆ ನಡೆಸಿ ವರದಿ ಬಂದು ಚಿಕಿತ್ಸೆ ಪ್ರಾರಂಭಿಸುವಾಗ ತೀರಾ ತಡವಾಗಿ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂವಾದ ನಡೆಸಿಕೊಟ್ಟರು. ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಸಂಘದ ಪದಾಧಿಕಾರಿಗಳು ಇದ್ದರು.

ಮನೆ ಬಾಗಿಲಿಗೆ ತೆರಳಿ ಸೋಂಕಿತರ ತಪಾಸಣೆ

ಪಾಲಿಕೆ(BBMP) ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಾಗಿದ್ದು ಇತರೆ ಕಾಯಿಲೆಗಳಿಂದ(ಬಿಪಿ, ಶುಗರ್‌, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿ) ಬಳಲುತ್ತಿರುವವರಿಗೆ ಟ್ರಯಾಜಿಂಗ್‌(ಆರೋಗ್ಯ ತಪಾಸಣೆ) ಮಾಡುವ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಿತ್ಯ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ.

ಆಸ್ಪತ್ರೆಗೆ ದಾಖಲು ಆಗಲೇಬೇಕೆಂಬ ಪರಿಸ್ಥಿತಿ ಇರುವ ಸೋಂಕಿತ ವ್ಯಕ್ತಿಗಳ ಮನೆಗಳಿಗೆ ವೈದ್ಯರು ಭೇಟಿ ನೀಡಿ ಭೌತಿಕ ಟ್ರಯಾಜಿಂಗ್‌(ಆರೋಗ್ಯ ತಪಾಸಣೆ) ನಡೆಸುತ್ತಿದ್ದಾರೆ. ಪ್ರಸ್ತುತ ಕೊರೋನಾ(Coronavirus) ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದರೂ ಶೇ.70ರಷ್ಟು ಮಂದಿ 50 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಉಳಿದಂತೆ ಶೇ.30ರಷ್ಟು ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದು ಅವರಿಗೆ ಟ್ರಯಾಜಿಂಗ್‌ ಮಾಡಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Covid 3rd Wave: ಗರ್ಭಿಣಿಯರಿಗೆ ಹೆಚ್ಚು ಕಾಡದ ವೈರಸ್‌..!

ಮೊದಲ ಎರಡು ಅಲೆಯ ನಂತರ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದರಿಂದ ಟ್ರಯಾಜಿಂಗ್‌ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಪುನಃ ಟ್ರಯಾಜಿಂಗ್‌ ಆರಂಭಿಸಲಾಗಿತ್ತು. ಕಳೆದೊಂದು ವಾರದಿಂದ ಸೋಂಕಿನ ಪ್ರಮಾಣ 25 ಸಾವಿರಕ್ಕೂ ಹೆಚ್ಚಾಗಿದ್ದರಿಂದ ಭೌತಿಕ ಟ್ರಯಾಜಿಂಗ್‌ ಪ್ರಮಾಣವನ್ನು ಇನ್ನಷ್ಟುಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಲೇಬೇಕು ಎಂಬ ಪರಿಸ್ಥಿತಿ ಇರುವರನ್ನು ಕೂಡ ಟ್ರಯಾಜಿಂಗ್‌ಗೆ ಒಳಪಡಿಸಲಾಗುತ್ತಿದೆ. ಅದಕ್ಕಾಗಿ ಪ್ರತಿ ವಲಯಗಳಲ್ಲಿ 35ರಿಂದ 60ಕ್ಕೂ ಹೆಚ್ಚು ಟ್ರಯಾಜಿಂಗ್‌ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಓರ್ವ ವೈದ್ಯ ಮತ್ತು ಒಬ್ಬ ಆರೋಗ್ಯ ಸಿಬ್ಬಂದಿ ಇರುತ್ತಾರೆ. ಕೋವಿಡ್‌ ಪರೀಕ್ಷೆಯಲ್ಲಿ(Covid Test) ಪಾಸಿಟಿವ್‌ ವರದಿ ಬಂದ ವ್ಯಕ್ತಿಯನ್ನು ಸ್ಟೆಪ್‌ಒನ್‌ ಸಂಸ್ಥೆ ಮತ್ತು ಆಯಾ ವಲಯಗಳಲ್ಲಿರುವ ನಿಯಂತ್ರಣ ಕೊಠಡಿಗಳ ಮೂಲಕ ಟೆಲಿ ಟ್ರಯಾಜಿಂಗ್‌ಗೆ ಒಳಪಡಿಸಲಾಗುತ್ತಿದೆ. ಬಿಯು ಸಂಖ್ಯೆ ಬಂದ ಬಳಿಕ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿ ಆರೋಗ್ಯ ಪರಿಸ್ಥಿತಿ ವಿಚಾರಿಸಲಾಗುತ್ತಿದೆ. ಒಂದು ವೇಳೆ ಪಾಸಿಟಿವ್‌ ಬಂದ ವ್ಯಕ್ತಿಗೆ ಇತರೆ ಕಾಯಿಲೆಗಳು ಇದ್ದಲ್ಲಿ ಅವರ ಮನೆಗೆ ವೈದ್ಯರ ತಂಡ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಲಿದೆ. ಆ ನಂತರ ಆಸ್ಪತ್ರೆಗೆ ದಾಖಲಾಗುವಂತ ಪರಿಸ್ಥಿತಿ ಇದ್ದರೆ ಹಾಸಿಗೆ ಕಾಯ್ದಿರಿಸಿ ರೋಗಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಿದೆ.

ಪಾಸಿಟಿವ್‌ ಬಂದವರ ಪೈಕಿ ವಯೋಮಾನ ಮತ್ತು ರೋಗಿಯ ಆರೋಗ್ಯ ಪರಿಸ್ಥಿತಿ ಆಧಾರದ ಮೇಲೆ ಟ್ರಯಾಜಿಂಗ್‌ ನಡೆಸಲಾಗುತ್ತಿದ್ದು ಪ್ರತಿ ವಲಯದಲ್ಲಿ ತಲಾ ಶೇ.20ರಷ್ಟು ಜನರಿಗೆ ಟ್ರಯಾಜಿಂಗ್‌ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.