ಕಾಳಿ ನದಿಗಾಗಿ ಉ.ಕ. ರೈತರಿಂದ ಹೋರಾಟದ ರೂಪರೇಷೆ!
ಕಾಳಿ ನದಿ ಜೋಡಣೆ ಯೋಜನೆಗಾಗಿ ಶುರುವಾಯ್ತು ಹೋರಾಟ| ಬಾಗಲಕೋಟೆಯಲ್ಲಿ ಹೋರಾಟಗಾರರಿಂದ ರೆಡಿಯಾಗಿದೆ ನದಿ ಜೋಡಣೆ ಯೋಜನೆ| ಉದ್ದಿಮೆದಾರ ಸಂಗಮೇಶ್ ನಿರಾಣಿ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜು| ಕುಡಿಯುವ ನೀರಿಗಾಗಿ ಕಾಳಿ ನದಿಗೆ ಉತ್ತರ ಕರ್ನಾಟಕದ ರೈತರ ಮೊರೆ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಮೇ.02): ರಾಜ್ಯದಲ್ಲಿ ಮಹದಾಯಿ ನದಿ ನೀರಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ಮಾಡುತ್ತಲೇ ಇದ್ದಾರೆ. ಇದರಬೆನ್ನಲ್ಲೇ ಇದೀಗ ಕಾಳಿ ನದಿ ತಿರುವು ಯೋಜನೆಗಾಗಿ ರೈತರ ಹೋರಾಟವೊಂದು ಶುರುವಾಗಲಿದ್ದು, ಇದಕ್ಕಾಗಿ ಬೆಳಗಾವಿ, ಬಾಗಲಕೋಟೆ ರೈತರು ಸಜ್ಜಾಗಿದ್ದಾರೆ.
ಮೊದಲ ಹಂತದಲ್ಲಿ ಈ ಕುರಿತು ಯೋಜನಾ ವರದಿ ಹಾಗೂ ಚರ್ಚೆ ಸಂವಾದ ನಡೆಸಿರುವ ರೈತರು, ಹೋರಾಟಗಾರು ಮತ್ತು ಸ್ವಾಮೀಜಿಗಳ ನಡೆಗೆ ಅತ್ತ ಕಾರವಾರದ ಪರಿಸರವಾದಿಗಳು ಅಪಸ್ವರ ಎತ್ತಿದ್ದಾರೆ.
ಇದರಿಂದ ಕಾಳಿ ನದಿ ತಿರುವು ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದಿಡುವುದು ಒಂದೊಮ್ಮೆ ಒಪ್ಪದೇ ಹೋದಲ್ಲಿ ಉಗ್ರ ಹೋರಾಟಕ್ಕೂ ಹೋರಾಟಗಾರರು ನಿರ್ಧರಿಸಿದ್ದಾರೆ.
ಬೇಸಿಗೆ ಶುರುವಾದರೆ ಸಾಕು ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುತ್ತದೆ. ಮಹದಾಯಿ ನದಿ ನೀರಿಗಾಗಿ ಹೋರಾಟ ಒಂದು ಹಂತದಲ್ಲಿ ನಡಿಯುತ್ತಿದ್ದರೆ, ಇಂದಿಗೂ ಅಂತರ್ ನದಿ ನೀರು ಹಂಚಿಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ರೈತರು ಮತ್ತೊಂದು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
"
ಕಾರವಾರದ ಬಳಿಯ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಜೀವನದಿಗಳಾಗಿರುವ ಮಲಪ್ರಭಾ, ಘಟಪ್ರಭಾ ನದಿಗೆ ಹರಿಸಲು ರೈತರು ಯೋಜನಾ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ.
ಬೆಳಗಾವಿಯಲ್ಲಿ ಈಚೆಗೆ ಉದ್ದಿಮೆದಾರ ಸಂಗಮೇಶ್ ನಿರಾಣಿ ಮತ್ತು ನಾಗನೂರು ಮಠದ ಹಾಗೂ ಹುಕ್ಕೇರಿ ಮಠದ ಶ್ರೀಗಳು ಸೇರಿದಂತೆ ರೈತರು ಸ್ವಾಮೀಜಿಗಳು ಸಂವಾದ ನಡೆಸಿ ಕಾಳಿ ನದಿ ತಿರುವಿನ ಬಗ್ಗೆ ಸಾಧಕ ಬಾಧಕ ಬಗ್ಗೆ ಚರ್ಚಿಸಿದ್ದಾರೆ.
ಕಾಳಿ ನದಿಗೆ 5 ಆಣೆಕಟ್ಟಿನ ಮೂಲಕ ಜಲವಿದ್ಯುತ್ ಉತ್ಪಾದನೆ ಹಾಗೂ ಕುಡಿಯಲು ನೀರು ಬಳಸಲಾಗುತ್ತಿದೆ. ಕಾಳಿ ನದಿ ಒಟ್ಟು 193 ಕಿ.ಮೀ. ಹರಿದು 200 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ.
"
ಇದರಲ್ಲಿ ಕೇವಲ 20 ಟಿಎಂಸಿ ನೀರನ್ನು ದಾಂಡೇಲಿ ಅಳ್ನಾವರ ಬಳಿಯ ಕಾಳಿ ನದಿಯಿಂದ ಬರೋಬ್ಬರಿ 73 ಕಿ.ಮೀ. ಪರಿಸರಕ್ಕೆ ಹಾನಿ ಮಾಡದೇ ರಸ್ತೆ ಮಾರ್ಗವಾಗಿ ಪೈಪ್ ಲೈನ್ ಮೂಲಕ ನವಿಲು ತೀರ್ಥ ಡ್ಯಾಂಗೆ ನೀರು ತರುವುದರ ಜೊತೆಗೆ ಮುಂದೆ ಘಟಪ್ರಭಾ ನದಿಗೆ ನೀರು ಹರಿಸಲು ಕಾಳಿ ನದಿ ತಿರುವು ಯೋಜನೆ ಸಿದ್ಧಪಡಿಸಿ, ರೈತರು , ಸ್ವಾಮೀಜಿಗಳು ಚರ್ಚಿಸಿದ್ದಾರೆ.
ಈ ಮಧ್ಯೆ ಈ ಕಾಳಿ ನದಿ ತಿರುವು ಯೋಜನೆಗೆ ಕಾರವಾರದ ಪರಿಸರವಾದಿಗಳು ಸಂವಾದ ಸಭೆಯ ಮೂಲಕ ಆರಂಭಿಕ ಹಂತದಲ್ಲೇ ತಗಾದೆ ತೆಗೆದಿದಿದ್ದು, ಕಾಳಿ ನದಿ ಮೂಲಕ ಸಮುದ್ರಕ್ಕೆ ಸೇರುವ ಸಿಹಿ ನೀರನ್ನು ಮಲಪ್ರಭಾ, ಘಟಪ್ರಭಾ ನದಿಗೆ ಹರಿಸಿದರೆ ಸಮುದ್ರದಲ್ಲಿರುವ ಜಲಚರಗಳುಗೆ ತೊಂದರೆ ಆಗುತ್ತದೆ. ಪಶ್ಚಿಮ ಘಟ್ಟದಲ್ಲಿನ ಪ್ರಾಣಿಗಳಿಗೂ ಸೇರಿ ಪರಿಸರಕ್ಕೂ ಹಾನಿ ಆಗುತ್ತದೆ ಎಂದು ಪರಿಸರವಾದಿಗಳು ಅಪಸ್ವರ ತೆಗೆದಿದ್ದಾರೆ.
"
ಒಟ್ಟಿನಲ್ಲಿ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳಿಗೆ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸೋ ನಿಟ್ಟಿನಲ್ಲಿ ಹೊಸದಾಗಿ ಚಿಂತನೆಗೆ ಕಾರಣವಾಗಿರೋ ಕಾಳಿ ನದಿ ತಿರುವು ಯೋಜನೆ ಮಹತ್ವದ್ದಾಗಿದ್ದು, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಕಾರವಾರ ಹಾಗೂ ಬೆಳಗಾವಿ, ಬಾಗಲಕೋಟೆ ರೈತರೊಂದಿಗೆ ರಾಜ್ಯ ಸರ್ಕಾರ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬೇಕಿದೆ.