Asianet Suvarna News Asianet Suvarna News

ವೇಶ್ಯಾವಾಟಿಕೆ ಸಂತ್ರಸ್ತೆಯನ್ನ ಶಿಕ್ಷಿಸುವ ಕಾನೂನಿಲ್ಲ: ಹೈಕೋರ್ಟ್‌

ವೇಶ್ಯಾವಾಟಿಕೆ ಸಂತ್ರಸ್ತೆಯ ಶಿಕ್ಷಿಸಲು ಯಾವುದೇ ಕಾನೂನು ಇಲ್ಲ. ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಅಭಿಯೋಜನೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆ ದುರುಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

No law to punish prostitution victims says karnataka highcourt rav
Author
First Published Jun 24, 2024, 9:26 AM IST

ವಿಶೇಷ ವರದಿ

ಬೆಂಗಳೂರು (ಜೂ.24) :  ವೇಶ್ಯಾವಾಟಿಕೆ ಸಂತ್ರಸ್ತೆಯ ಶಿಕ್ಷಿಸಲು ಯಾವುದೇ ಕಾನೂನು ಇಲ್ಲ. ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಅಭಿಯೋಜನೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆ ದುರುಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಶೃತಿ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಜೊತೆಗೆ ಅರ್ಜಿದಾರೆಯ ವಿರುದ್ಧದ ಕುಂದಾಪುರದ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನೂ ರದ್ದುಪಡಿಸಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನನ್ನೇ ಕೊಂದಿದ್ದ ಹೆಂಡ್ತಿ: ಮಹಿಳೆ ಎಂಬ ಕಾರಣಕ್ಕೆ ಬೇಲ್‌ ನೀಡಿದ ಹೈಕೋರ್ಟ್‌

ವೇಶ್ಯಾವಾಟಿಕೆ ಆರೋಪ ಸಂಬಂಧ ಅರ್ಜಿದಾರೆಯ ವಿರುದ್ಧ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್‌ 5 ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್‌ ತೆಗೆದುಕೊಂಡಿದೆ. ಆದರೆ, ಅರ್ಜಿದಾರೆಯೇ ವೇಶ್ಯಾವಾಟಿಕೆ ಸಂತ್ರಸ್ತೆಯಾಗಿದ್ದಾರೆ ಎನ್ನುವುದು ಸತ್ಯಾಂಶ. ಸಂತ್ರಸ್ತ ಮಹಿಳೆಯನ್ನು ಶಿಕ್ಷಿಸಬೇಕು ಎಂದು ಕಾಯ್ದೆಯ ಸೆಕ್ಷನ್‌ 5ರಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗಾಗಿ, ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಮತ್ತು ಅನ್ಯಾಯಕ್ಕೆ ಕಾರಣವಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಯಾರು ಶಿಕ್ಷಾರ್ಹರು?:

ವೇಶ್ಯಾವಾಟಿಕೆ ಉದ್ದೇಶದಿಂದ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಖರೀದಿಸಿದ ಅಥವಾ ಖರೀದಿಸಲು ಯತ್ನಿಸಿದ ಅಥವಾ ವೇಶ್ಯಾವಾಟಿಕೆಯಲ್ಲಿ ತೊಡಗಲು ಪ್ರೇರೇಪಿಸಿದ ವ್ಯಕ್ತಿ ವೇಶ್ಯಾವಾಟಿಕೆ ಪ್ರಕರಣದಡಿ ಶಿಕ್ಷಾರ್ಹನಾಗುತ್ತಾನೆ. ಅಂತಹ ವ್ಯಕ್ತಿಗೆ ಕನಿಷ್ಠ 3 ವರ್ಷದಿಂದ 7 ಏರ್ಷದವರೆಗೆ ಕಠಿಣ ಜೈಲು, ಒಂದು ಸಾವಿರ ರು.ವರೆಗೆ ದಂಡ ವಿಧಿಸಬಹುದು. ಇನ್ನೂ ಸೆಕ್ಷನ್‌ 5ರ ಉಪ ನಿಯಮಗಳ ಅನ್ವಯ ಬಾಲಕಿ ಅಥವಾ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದರೆ, ವೇಶ್ಯಾವಾಟಿಕೆಗೆ ತಳ್ಳಲು ಖರೀದಿಸಿದರೆ ಅಥವಾ ವೇಶ್ಯಾವಾಟಿಕೆಗೆ ತೊಡಗಲು ಪ್ರೇರೇಪಿಸಿದರೆ, ಅಂತಹ ವ್ಯಕ್ತಿಗೆ 7 ವರ್ಷದಿಂದ 14 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ.

ವೇಶ್ಯಾವಾಟಿಕೆ ಸಂತ್ರಸ್ತೆ ಶಿಕ್ಷಿಸಬೇಕು ಎಂದು ಮಾನವ ಕಳ್ಳ ಸಾಗಣೆ ಕಾಯ್ದೆಯಡಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ, ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಅಭಿಯೋಜನೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್‌ ಆದೇಶಿಸಿದೆ. ವೇಶ್ಯಾವಾಟಿಕೆ ಅಥವಾ ವೇಶ್ಯೆಯನ್ನು ನಿರ್ಮೂಲನೆ ಮಾಡುವುದು ಮಾನವ ಕಳ್ಳ ಸಾಗಣೆಯ ಕಾಯ್ದೆಯ ನಿಬಂಧನೆಗಳ ಉದ್ದೇಶವಲ್ಲ. ವಾಣಿಜ್ಯ ಉದ್ದೇಶದಿಂದ ಲೈಂಗಿಕ ಶೋಷಣೆ ನಡೆಸಿ ಹಣ ಸಂಪಾದಿಸುವುದು ಮತ್ತು ಅದರ ಮೇಲೆ ಜೀವನ ಮಾಡುವುದು ಶಿಕ್ಷಾರ್ಹವಾಗಿದೆ. ಇಂತಹ ಅಪರಾಧ ಕೃತ್ಯ ಎಸಗಿದವರ ವಿರುದ್ಧ ಕಾಯ್ದೆಯಡಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಆದೇಶದಲ್ಲಿ ಪೀಠ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ?:

ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕೆಲ ಹುಡುಗಿಯರನ್ನು ಉಡುಪಿಯಿಂದ ಗೋವಾಗೆ ವಾಹನದಲ್ಲಿ ಅಕ್ರಮವಾಗಿ ಕರೆದೊಯ್ಯುತ್ತಿದ್ದ ಬಗ್ಗೆ ಬಂದ ಮಾಹಿತಿ ಆಧರಿಸಿ 2013ರ ಜ.13ರಂದು ಕುಂದಾಪುರ ಠಾಣಾ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದರು. ಅರ್ಜಿದಾರೆ ಸೇರಿದಂತೆ ಇತರೆ ಹುಡುಗಿಯರನ್ನು ತಲಾ 10 ಸಾವಿರ ರು. ಪಾವತಿಸಿ ವೇಶ್ಯಾವಾಟಿಕೆಲ್ಲಿ ತೊಡಗಿಸಲು ಕರೆದುಕೊಂಡು ಹೋಗುತ್ತಿರುವುದು ತಿಳಿದು ಬಂದಿತ್ತು.

ಪೊಲೀಸರು ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿದಾರೆಯನ್ನು 8ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಮಾನವ ಕಳ್ಳಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್‌ 5 ಅಡಿಯಲ್ಲಿ ಅರ್ಜಿದಾರೆಯ ವಿರುದ್ಧ ಕುಂದಾಪು ನ್ಯಾಯಾಲಯ ಕಾಗ್ನಿಜೆನ್ಸ್‌ ತೆಗೆದುಕೊಂಡಿತ್ತು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದತಿ ಕೋರಿ ಅರ್ಜಿದಾರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮೆಜೆಸ್ಟಿಕ್ ಟಾಯ್ಲೆಟ್‌ನಲ್ಲಿ ಮಹಿಳೆ ನಂಬರ್ ಬರೆದ ಆರೋಪಿಗೆ ಕೋರ್ಟ್ ತಕ್ಕ ಪಾಠ!

ಅರ್ಜಿದಾರೆಯ ಪರ ವಕೀಲರು, ಅರ್ಜಿದಾರೆ ವೇಶ್ಯಾವಾಟಿಕೆಯ ಸಂತ್ರಸ್ತೆಯಾಗಿದ್ದಾರೆ. ಹಾಗಾಗಿ, ಆಕೆಯನ್ನು ಅಭಿಯೋಜನೆಗೆ ಒಳಪಡಿಸಲು ಅನುಮತಿ ನೀಡಬಾರದು ಎಂದು ಕೋರಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕರು, ಅಧೀನ ನ್ಯಾಯಾಲಯದ ವಿಚಾರಣೆಯಿಂದಲೇ ಅರ್ಜಿದಾರೆ ಕ್ಲೀನ್‌ ಚಿಟ್‌ ಪಡೆಯಬೇಕಿರುವ ಕಾರಣ ಅರ್ಜಿ ವಜಾಗೊಳಿಸುವಂತೆ ಕೋರಿದ್ದರು.

Latest Videos
Follow Us:
Download App:
  • android
  • ios