ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟ ಯಾರಿಗೂ ಬೇಡ!
ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟಯಾರಿಗೂ ಬೇಡ!| ರೋಗಿಗಳ ಉಳಿಸಲು ಸತತ 8 ತಾಸು ಪಿಪಿಇ ಕಿಟ್ ಧರಿಸಿ ಕೆಲಸ| ಆದರೂ ಜನರಿಂದ ನಿಂದನೆ, ತಿರಸ್ಕಾರದ ನೋಟ| ಇಂದು ರಾಷ್ಟ್ರೀಯ ವೈದ್ಯರ ದಿನ
ವಿಶೇಷ ವರದಿ
ಬೆಂಗಳೂರು(ಜು.01): ರಾಜ್ಯದಲ್ಲಿ ಕೊರೋನಾ ವೈರಾಣು ಕೇಕೆ ಹಾಕುತ್ತಿದ್ದು ಸಾರ್ವಜನಿಕರನ್ನು ಸೋಂಕಿನಿಂದ ರಕ್ಷಿಸಲು ವೈದ್ಯರು ಅದರಲ್ಲೂ ಪ್ರಮುಖವಾಗಿ ಸರ್ಕಾರಿ ವೈದ್ಯರು ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 35 ಮಂದಿ ವೈದ್ಯರಿಗೆ ಸೋಂಕು ತಗುಲಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹೀಗಿದ್ದರೂ ವೈದ್ಯ ಸಮೂಹ ಕೊರೋನಾ ಸೋಂಕಿತರ ಚಿಕಿತ್ಸೆ ಮುಂದುವರೆಸಿದೆ.
ನಾವು ವೈದ್ಯರಾಗಿ ಪ್ರತಿಜ್ಞೆ ಸ್ವೀಕರಿಸುವಾಗಲೇ ರೋಗಿಯ ಜೀವ ಉಳಿಸುವುದು ಒಂದೇ ಗುರಿಯಾಗಿ ಕೆಲಸ ಮಾಡುವುದಾಗಿ ಹೇಳಿರುತ್ತೇವೆ. ಆದರೆ, ಕಳೆದ 100 ವರ್ಷದಲ್ಲಿ ಇದೊಂದು ಹೊಸ ಅನುಭವ. ನಾವು ಸೋಂಕಿತರ ಜೀವ ಉಳಿಸಲು ಪ್ರಾಣ ಕಳೆದುಕೊಳ್ಳಲೂ ಸಿದ್ಧ ಆದರೆ ಕುಟುಂಬ ಸದಸ್ಯರ ನೆನೆದರೆ ಭಯವಾಗುತ್ತದೆ ಎನ್ನುತ್ತಾರೆ ವೈದ್ಯರು.
ಹೀಗಿದ್ದರೂ, ಸತತ ಎಂಟು ಗಂಟೆಗಳ ಕಾಲ ಪಿಪಿಇ ಕಿಟ್, ಮಾಸ್ಕ್, ಕಾಲು ಹಾಗೂ ಕೈ ಗವಸುಗಳನ್ನು ಧರಿಸಿ ಉಸಿರುಗಟ್ಟಿದ ವಾತಾವರಣದಲ್ಲಿ ರೋಗಿಯ ಕ್ಷೇಮಕ್ಕಾಗಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯರ ದಿನ (ಜು.1)ದ ಅಂಗವಾಗಿ ಕೊರೋನಾ ಚಿಕಿತ್ಸೆ ವೇಳೆ ವೈದ್ಯರು ಪಡುತ್ತಿರುವ ಕಷ್ಟಗಳ ಬಗ್ಗೆ ವೈದ್ಯರೇ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಉಸಿರು ಕಟ್ಟಿದ ವಾತಾವರಣ:
ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸೇವೆ ಮಾಡುವಾಗ ಪಿಪಿಇ ಕಿಟ್ ಧರಿಸಬೇಕು. ಮೂರು ಪದರಗಳುಳ್ಳ ಮಾಸ್ಕ್, ಕೈಗವಸು, ಕಾಲು ಗವಸು ಧರಿಸಬೇಕು. ನಿಯಂತ್ರಿತ ಉಸಿರಾಟದಿಂದಾಗಿ ಆಮ್ಲಜನಕ ಪೂರೈಕೆ ಕಡಿಮೆ ಇರುತ್ತದೆ. ಸತತ 6 ಗಂಟೆ ಪಿಪಿಇ ಕಿಟ್ ಧರಿಸುವುದರಿಂದ ಉಸಿರು ಕಟ್ಟಿದ ವಾತಾವರಣ ಇರುತ್ತದೆ. ಇದು ದೀರ್ಘಕಾಲದ ಉಸಿರಾಟ ಸಮಸ್ಯೆಗಳಿಗೆ ನಾಂದಿಯಾಗಬಹುದು. ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದರೂ ರೋಗಿ ಗುಣಮುಖವಾಗಿ ಬಿಡುಗಡೆಯಾದಾಗ ನಮ್ಮೆಲ್ಲಾ ವೈದ್ಯರು ಕಷ್ಟವನ್ನು ಮರೆಯುತ್ತಿದ್ದೇವೆ ಎನ್ನುತ್ತಾರೆ ವಿಕ್ಟೋರಿಯಾ ತುರ್ತು ಚಿಕಿತ್ಸಾ ವಿಭಾಗದ ಹಿರಿಯ ವೈದ್ಯೆ ಡಾ. ಅಸೀಮಾ ಭಾನು.
ಅಮ್ಮನ ಪಕ್ಕ ಕುಳಿತು 3 ತಿಂಗಳಾಗಿದೆ:
ಕುಟುಂಬ ಸದಸ್ಯರ ನೆನೆದು ಭಾವುಕರಾದ ಅವರು, ನಮಗೆ ನಾವು ಸತ್ತರೂ ಭಯವಿಲ್ಲ. ಆದರೆ ಕುಟುಂಬ ಸದಸ್ಯರ ನೆನೆದರೆ ಭಯವಾಗುತ್ತದೆ. ವಯಸ್ಸಾಗಿರುವ ಅಮ್ಮನ ಪಕ್ಕ ಕುಳಿತು 3 ತಿಂಗಳಾಗಿದೆ. ಕುಟುಂಬದಿಂದ ಅಂತರ ಕಾಯ್ದುಕೊಂಡು ಬದುಕುವುದು ನೋವುಂಟು ಮಾಡುತ್ತದೆ. ಜತೆಗೆ ನಾವೆಷ್ಟೇ ಕಷ್ಟಪಟ್ಟು ಜನರ ಜೀವ ಉಳಿಸಲು ದುಡಿದರೂ ಅಕ್ಕ ಪಕ್ಕದ ಮನೆಯವವರು ನಮ್ಮನ್ನು ಆತಂಕದಿಂದ ನೋಡುತ್ತಾರೆ. ಒಬ್ಬ ವೈದ್ಯರು ಎಂಬ ವೃತ್ತಿಪರ ದೃಷ್ಟಿಗೆ ಬದಲು ಆತಂಕದಿಂದ ನೋಡುವುದು ಬೇಸರ ತರುತ್ತಿದೆ ಎಂದು ಅವರು ಹೇಳುತ್ತಾರೆ.
ಮೂತ್ರ ವಿಸರ್ಜನೆಗೂ ಕಷ್ಟ:
ಪಿಪಿಇ ಕಿಟ್‌ಗಳ ಕೊರತೆಯಿಂದ ಒಂದು ದಿನಕ್ಕೆ ಒಂದು ಕಿಟ್ ಮಾತ್ರ ನೀಡಲಾಗುತ್ತದೆ. ಒಂದು ಬಾರಿ ಕಿಟ್ ತೆಗೆದರೆ ಪುನರ್‌ಬಳಕೆ ಮಾಡುವಂತಿಲ್ಲ. ಹೀಗಾಗಿ ಮೂತ್ರ ವಿಸರ್ಜನೆಗೂ ಹೋಗಲಾಗದ ಸ್ಥಿತಿ ಮೊದಲಿಗೆ ಇತ್ತು. ಆದರೆ, ಈಗ ಪಿಪಿಇ ಕಿಟ್‌ಗಳ ಸಮರ್ಪಕ ಪೂರೈಕೆಯಿಂದಾಗಿ ಈ ಸಮಸ್ಯೆ ಕಳೆದ ಎರಡು ತಿಂಗಳಿಂದ ಇಲ್ಲದಂತಾಗಿದೆ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜು ಹೇಳಿದರು.
ಸರ್ಕಾರಿ ಕಾಯಂ ವೈದ್ಯರು- 4,750
ನೋಂದಾಯಿತ ವೈದ್ಯರು - 1,04,795
13,556 ಮಂದಿಗೆ ಒಬ್ಬ ಸರ್ಕಾರಿ ವೈದ್ಯ
ರಾಷ್ಟ್ರೀಯ ಆರೋಗ್ಯ ವರದಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 13,556 ಜನಕ್ಕೆ ಒಬ್ಬ ಸರ್ಕಾರಿ ವೈದ್ಯರು ಮಾತ್ರ ಇದ್ದಾರೆ. ಕೊರೋನಾದಿಂದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ನೇಮಕಾತಿ ಹಾಗೂ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.