Asianet Suvarna News Asianet Suvarna News

ಬೆಂಗಳೂರು ಹೆಚ್‌ಎಂಟಿ ಸಂಸ್ಥೆ ಬಳಿಯಿದ್ದ 469 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಸಚಿವ ಈಶ್ವರ ಖಂಡ್ರೆ ಆದೇಶ

ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಂದ ಅಕ್ರಮವಾಗಿ ಹೆಚ್‌ಎಂಟಿ ಸಂಸ್ಥೆಗೆ ನೀಡಲಾಗಿದ್ದ 469 ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುವಂತೆ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ.

Minister Eshwar Khandre orders to seize 469 acres of forest land belonging to HMT at Bengaluru sat
Author
First Published Aug 12, 2024, 12:16 AM IST | Last Updated Aug 12, 2024, 12:16 AM IST

ಬೆಂಗಳೂರು (ಆ.11) : ಬೆಂಗಳೂರು ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿ 10 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆಗೆ ಮರಳಿ ಪಡೆಯಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿರುವ ಸಚಿವರು, ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ 1896 ಜೂನ್ 11ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುವ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ಸಂಸ್ಥೆ ಅಕ್ರಮವಾಗಿ ಸರಕಾರಿ ಇಲಾಖೆಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಒಟ್ಟು  599 ಎಕರೆ ಅರಣ್ಯ ಭೂಮಿಯ ಪೈಕಿ 469 ಎಕರೆ 32 ಗುಂಟೆ ಭೂಮಿಯನ್ನು ಎಚ್.ಎಂ.ಟಿ. ನೀಡಲಾಗಿದೆ ಎನ್ನಲಾಗಿದ್ದು, ಇದರಲ್ಲಿ ಖಾಲಿ ಇರುವ 281 ಎಕರೆ ಜಮೀನನ್ನು ಮೊದಲಿಗೆ ವಶಕ್ಕೆ ಪಡೆದು ನಂತರ ಉಳಿದ ಭೂಮಿಯ ವಶಕ್ಕೆ ಪಡೆಯಲು ಕಾನೂನು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಅರಣ್ಯ ಸಂರಕ್ಷಣಾ ಕಾಯಿದೆ ಸೆಕ್ಷನ್ 64ಎ ಅಡಿಯಲ್ಲಿ ಈ ಹಿಂದೆ ಪ್ರಕ್ರಿಯೆ ನಡೆದಿದ್ದು ಭೂಮಿ ತೆರವಿಗೆ ಆದೇಶ ಆಗಿದ್ದರೂ, ಈವರೆಗೆ ಕ್ರಮ ವಹಿಸದ ಅರಣ್ಯಾಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಈ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ. ಅರಣ್ಯ ನಿಯಂತ್ರಣ ಕಾಯಿದೆ 1900ರ ಸೆಕ್ಷನ್ 30ರ ಸಬ್ ಸೆಕ್ಷನ್ (1)ರ ಅಡಿಯಲ್ಲಿ ಯಾವುದೇ ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಯಾವುದೇ ಅರಣ್ಯ ಭೂಮಿಯನ್ನು ಮಂಜೂರಾತಿ ಮಾಡುವ ಮುನ್ನ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಮೊದಲಿಗೆ 'ಡಿ'ನೋಟಿಫೈ ಮಾಡಿ,  ಗೆಜೆಟ್ ಅಧಿಸೂಚನೆ ಮಾಡಬೇಕಾಗಿರುತ್ತದೆ. ಆದರೆ, ಸದರಿ ಜಮೀನನ್ನು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ  ಹನುಮಾನ್ ಅವರು 1963ರಲ್ಲಿ ಎಚ್.ಎಂ.ಟಿ.ಗೆ ದಾನಪತ್ರದ ಮೂಲಕ ವರ್ಗಾವಣೆ ಮಾಡಿರುತ್ತಾರೆ ಎನ್ನಲಾಗಿದೆ. ಈ ದಾನಪತ್ರದ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆಯೂ ಆಗಿರುವುದಿಲ್ಲ. ಸದರಿ ಭೂಮಿ ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಕೂಡ ಆಗಿರುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶರಾವತಿ ಸಂತ್ರಸ್ತರಿಗೆ ಅರಣ್ಯ ಭೂಮಿ ನೀಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಗೋದಾವರ್ಮನ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಇದನ್ನು ಸ್ಪಷ್ಟಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಎಚ್.ಎಂ.ಟಿ. ವಶದಲ್ಲಿರುವ ಮತ್ತು ಎಚ್.ಎಂ.ಟಿ. ವಿವಿಧ ಸಂಸ್ಥೆ, ಇಲಾಖೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಭೂಮಿ ಅರಣ್ಯವೇ ಆಗಿದೆ. ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ Once a Forest is Always a Forest – Environment is more important than civil rights ಎಂದು ಅಭಿಪ್ರಾಯಪಟ್ಟಿದೆ. ಮಿಗಿಲಾಗಿ ಸದರಿ ಜಮೀನಿನ ಪೈಕಿ ಎಚ್.ಎಂ.ಟಿ. ಮಾರಾಟ ಮಾಡಿರುವ 201 ಎಕರೆಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆಯೂ ಆಗಿದ್ದು, ಆ ಆದೇಶದ ವಿರುದ್ಧ ಎಚ್.ಎಂ.ಟಿ. ಈವರೆಗೆ ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ. ಈ ನಿಟ್ಟಿನಲ್ಲಿ ಎಚ್.ಎಂ.ಟಿ. ವಶದಲ್ಲಿರುವ ಭೂಮಿ, ಮಾರಾಟ ಮಾಡಿರುವ ಭೂಮಿ ಇಂದಿಗೂ ಅರಣ್ಯವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ.

ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸಿದ್ದರೆ ಪಾದಯಾತ್ರೆ ಬಗ್ಗೆ ಮರು ಯೋಚಿಸುತ್ತಿದ್ದೆವು: ಆರ್‌.ಅಶೋಕ್‌

ಮಧ್ಯಂತರ ಅರ್ಜಿ (IA) ಹಿಂಪಡೆಯಲೂ ಸೂಚನೆ: ಸದರಿ ಭೂಮಿಯನ್ನು  ಎಚ್.ಎಂ.ಟಿ. ಸಂಸ್ಥೆ ಸರ್ಕಾರಿ ಇಲಾಖೆ/ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮವಾಗಿರುತ್ತದೆ. ಈ ಸಂಬಂಧ ಸಚಿವ ಸಂಪುಟದ ಗಮನಕ್ಕೂ ತಾರದೆ 2020ರಲ್ಲಿ ಡಿನೋಟಿಫೈ ಮಾಡಲು ಅನುಮತಿ  ಕೋರಿ ಸುಪ್ರೀಂಕೋರ್ಟ್ ಗೆ ಅರಣ್ಯ ಇಲಾಖೆ ಐ.ಎ. ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಈ ಹಿನ್ನೆಲೆಯಲ್ಲಿ  ಐ.ಎ.ಯನ್ನು ಹಿಂಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ತನಿಖೆ ನಡೆಸುವಂತೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios