Asianet Suvarna News Asianet Suvarna News

ರಾಜ್ಯದಲ್ಲಿ ಕೊರೋನಾ ವಿರುದ್ಧ ಸಚಿವ ಡಾ.ಕೆ.ಸುಧಾಕರ್‌ ಸಮರ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರಿಗೆ ವಿಶ್ವಾದ್ಯಂತ 5000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ನಿಯಂತ್ರಿಸುವ ಸವಾಲು ಎದುರಾಗಿದೆ. ಈ ಮಹಾಮಾರಿಯನ್ನು ಹತ್ತಿಕ್ಕಲು ಸುಧಾಕರ್‌ ಹಗಲು- ರಾತ್ರಿ ಎನ್ನದೇ ಶ್ರಮಿಸುತ್ತಿದ್ದು, ಅದರ ವಿರುದ್ಧ ದಿಟ್ಟಕ್ರಮಗಳನ್ನು ಕೈಗೊಂಡಿದ್ದಾರೆ. 

Minister Dr K Sudhakar Take Strict Measures To Control Corona In Karnataka
Author
Bengaluru, First Published Mar 15, 2020, 8:16 AM IST

ಬೆಂಗಳೂರು [ಮಾ.15]: ವೃತ್ತಿಯಲ್ಲಿ ವೈದ್ಯರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರಿಗೆ ವಿಶ್ವಾದ್ಯಂತ 5000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ನಿಯಂತ್ರಿಸುವ ಸವಾಲು ಎದುರಾಗಿದೆ. ಈ ಮಹಾಮಾರಿಯನ್ನು ಹತ್ತಿಕ್ಕಲು ಸುಧಾಕರ್‌ ಹಗಲು- ರಾತ್ರಿ ಎನ್ನದೇ ಶ್ರಮಿಸುತ್ತಿದ್ದು, ಅದರ ವಿರುದ್ಧ ದಿಟ್ಟಕ್ರಮಗಳನ್ನು ಕೈಗೊಂಡಿದ್ದಾರೆ. ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ.

  ರೋಗ ವ್ಯಾಪಿಸುವುದಕ್ಕೂ ಮುಂಚೆಯೇ ರೋಗಿಗೆ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಅವರ ಆಶಯ. ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಡಾ.ಕೆ.ಸುಧಾಕರ್‌ ಅವರಿಗೆ ಮೊದಲಿಗೆ ಎದುರಾಗಿರುವ ಸಮಸ್ಯೆಯೇ ಈ ಕೊರೋನಾ ವೈರಸ್‌ ಅಥವಾ ಕೋವಿಡ್‌-19 ರೋಗ. ಇಂತಹ ರೋಗವನ್ನು ನಿರ್ಮೂಲನೆ ಮಾಡಲು ದಿಟ್ಟಕ್ರಮಗಳನ್ನೇ ಅವರು ತೆಗೆದುಕೊಳ್ಳುತ್ತಿದ್ದಾರೆ.

ಸಚಿವ ಸುಧಾಕರ್‌ ವೈದ್ಯರಾಗಿಯೂ ಅಪಾರ ಅನುಭವಿ. ಈ ಸಮಾಜಕ್ಕೆ ಅಂಟಿದ ಕೊರೋನಾ ಎಂಬ ಪಿಡುಗನ್ನು ಬುಡಮೇಲು ಮಾಡಲು ಪಣ ತೊಟ್ಟಿದ್ದಾರೆ. ಕೊರೋನಾ ಭೀತಿ ಇಡೀ ವಿಶ್ವವನ್ನೇ ವ್ಯಾಪಿಸುತ್ತಿದೆ ಎಂದು ಗೊತ್ತಾದ ಘಳಿಗೆಯಲ್ಲೇ ಅವರು ಮಾಡಿದ ಮೊದಲ ಕೆಲಸ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಕೋವಿಡ್‌ ಸೋಂಕಿತರನ್ನು ಪತ್ತೆ ಹಚ್ಚಲು ದಿಟ್ಟಕ್ರಮ ಕೈಗೊಂಡಿದ್ದರು.

ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ...

ವಿದೇಶಗಳಿಂದ ಬರುವ ಭಾರತೀಯರು ಹಾಗೂ ವಿದೇಶಿ ಪ್ರಜೆಗಳಿಗೆ ರೋಗ ಬಂದಿದೆಯಾ? ಎಂದು ಸ್ಥಳದಲ್ಲೇ ಪತ್ತೆ ಹಚ್ಚಲು ಅವರನ್ನೆಲ್ಲಾ ಥರ್ಮಲ್‌ ಸ್ಯಾನಿಂಗ್‌ಗೆ ಒಳಪಡಿಸಿ ಪ್ರಯಾಣಿಕರನ್ನು ಕೋವಿಡ್‌ ಸೋಂಕಿನಿಂದ ರಕ್ಷಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಿಸುತ್ತಿದ್ದಾರೆ. ಕೊರೋನಾ ರೋಗ ನಿಧಾನಕ್ಕೆ ಕರ್ನಾಟಕವನ್ನು ವ್ಯಾಪಿಸುತ್ತಿದೆ ಎಂದ ಗೊತ್ತಾಗುತ್ತಿದ್ದಂತೆ ವೈದ್ಯಕೀಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ಕರೆದು ದಿನವೂ ಹೆಲ್ತ್‌ ಬುಲೆಟಿನ್‌ ಮೂಲಕ ರಾಜ್ಯದಲ್ಲಿ ವಿಸ್ತಾರಗೊಳ್ಳುತ್ತಿರುವ ರೋಗಿಗಳ ಬಗ್ಗೆ ಎಚ್ಚರವಹಿಸಿ ಜನರಿಗೆ ಮುಂಜಾಗ್ರತಾ ಕ್ರಮಕ್ಕೆ ನಿಯಮಗಳನ್ನು ರೂಪಿಸುತ್ತಿದ್ದಾರೆ.

ಕೊರೋನಾ ಭೀತಿ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆ ಸಹಾಯವಾಣಿ (104) ಸ್ಥಾಪಿಸಿದ್ದು, 40 ಲೈನ್‌ಗಳಿಗೆ ವಿಸ್ತರಿಸಲಾಗಿದೆ. ಕರೆ ಮಾಡಿದ ನಾಗರಿಕರಿಗೆ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಒಂದು ಅದ್ಭುತವಾದ ಕಾರ್ಯವೇ ಸರಿ. ದಿನಕ್ಕೆ ಸಾವಿರಾರು ಜನರು ಕರೆಗಳನ್ನು ಮಾಡುವ ಮೂಲಕ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

ದಂಧೆಕೋರರ ಮೇಲೆ ದಾಳಿ:

ಅಷ್ಟೇ ಅಲ್ಲ, ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ಮೆಡಿಕಲ್‌ ಮಾಫಿಯಾಗೆ ಕಡಿವಾಣ ಹಾಕಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾಡಿದ ಕಾರ್ಯವೇನೆಂದರೆ, ಮಾಸ್ಕ್‌ಗಳು ಹಾಗೂ ಸ್ಯಾನಿಟೈಸ​ರ್‍ಸ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಔಷಧಿ ಅಂಗಡಿಗಳ ಮೇಲೆ ಇಲಾಖೆಯ ಅಧಿಕಾರಿಗಳ ಮೂಲಕ ದಾಳಿ ಮಾಡಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವಂತಹ ಶ್ಲಾಘನೀಯ ಕಾರ್ಯ.

13 ಕೋಟಿ ರು. ಲ್ಯಾಬ್‌:

ಕೋವಿಡ್‌ ರೋಗ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಐದು ಕಡೆ ಅಧಿಕೃತವಾಗಿ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ರೋಗಸೂಕ್ಷ್ಮಾಣುಗಳ ಅಧ್ಯಯನ ಸಂಸ್ಥೆಯ ಘಟಕ, ಬೆಂಗಳೂರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಿಸಲಾಗಿದೆ. ಕೊರೋನಾ ಸೋಂಕು ಶಂಕಿತರಿಗೆ ಹಾಗೂ ಕೋವಿಡ್‌-19 ಪೀಡಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲೇ 13 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ಸುಸಜ್ಜಿತ ಲ್ಯಾಬ್‌ ನಿರ್ಮಿಸಿದ್ದಾರೆ.

ಕೊರೋನಾ ಸೋಂಕಿತರಿಗಾಗಿ 300 ರಿಂದ 400 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆಯನ್ನು ಮೀಸಲಿಡಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿರುವುದು ರೋಗ ನಿಯಂತ್ರಣಕ್ಕೆ ಸಾಕ್ಷಿ. ಸೋಂಕು ಶಂಕಿತರ ರಕ್ತ ಹಾಗೂ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ವಿಮಾನದ ಮೂಲಕ ರವಾನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲ ಕೊರಿಯರ್‌ ಏಜೆನ್ಸಿಗಳನ್ನು ಗುರುತಿಸಲಾಗಿದೆ. ಈ ಹೊಸ ವಿಧಾನದ ಮೂಲಕ ಕೊರೋನಾ ವೈರಸ್‌ ಬಂದ ವ್ಯಕ್ತಿಯನ್ನು ಶೀಘ್ರವೇ ಗುರುತಿಸಿ ಚಿಕಿತ್ಸೆ ನೀಡಬಹುದು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಈ ನೂತನ ಯೋಜನೆ ರೂಪಿಸಿರುವುದು ರೋಗ ನಿಯಂತ್ರಣದ ದೂರದೃಷ್ಟಿ. ಇದೇ ಅಲ್ಲವೇ ಒಬ್ಬ ಸಚಿವರಿಗಿರಬೇಕಾದ ಸಮಯ ಪ್ರಜ್ಞೆ.

ಐಟಿ-ಬಿಟಿ ಸೇರಿದಂತೆ ವಿವಿಧ ಕಂಪನಿಗಳ ಉದ್ಯೋಗಿಗಳು ಫೆ.21ರ ಬಳಿಕ ವಿದೇಶ ಪ್ರವಾಸಕ್ಕೆ ತೆರಳಿರುವ ತಮ್ಮ ಉದ್ಯೋಗಿಗಳು ಹಾಗೂ ಅವರ ಪ್ರವಾಸದ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರಿಂದ ಯಾರಾರ‍ಯರು ವಿದೇಶಕ್ಕೆ ಹೋಗಿದ್ದಾರೆ? ಅವರೊಂದಿಗೆ ಯಾರು ಸಂಪರ್ಕದಲ್ಲಿ ಇದ್ದರು ಎಂಬುದರ ಮೂಲಕ ಅವರನ್ನು ಪತ್ತೆ ಹಚ್ಚಿ ಕೊರೋನಾ ವೈರಸ್‌ ಹಬ್ಬದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಕಾರ್ಯ ಶ್ಲಾಘನೀಯ.

ಕೋವಿಡ್‌-19 ವೈರಸ್‌ ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಸೂಚನೆ ನೀಡಿದ್ದು ರೋಗ ನಿಯಂತ್ರಣಕ್ಕೆ ಹೊಸ ವಿಧಾನ ಎಂದರೆ ತಪ್ಪಾಗಲಾರದು. ರೋಗ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೋಗ ಪತ್ತೆ ಸಮಿತಿ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ರಕ್ತ ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. 2500 ಹಾಸಿಗೆಗಳನ್ನು ಸಿದ್ಧ ಇರಿಸಲಾಗಿದೆ. ಇದು ಕೊರೋನಾ ನಿಯಂತ್ರಣದ ಪೂರ್ವ ಸಿದ್ಧತೆ.

ಸೋಂಕಿನ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸ್ವಾಯತ್ತ ಸಂಸ್ಥೆಗಳು, ಆಸ್ಪತ್ರೆಗಳು ಕನಿಷ್ಠ 3 ತಿಂಗಳಿಗೆ ಸಾಕಾಗುಷ್ಟುಮುಖಗವಸುಗಳು (ಮಾಸ್ಕ್‌) ಹಾಗೂ ಸುರಕ್ಷಾ ಸಾಧನಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆರು ತಿಂಗಳಿಗೆ ಸಾಕಾಗುವಷ್ಟುಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನುಸಾರ ಪ್ರತ್ಯೇಕ ವಾರ್ಡ್‌ಗಳಲ್ಲಿ 10 ಸುಸಜ್ಜಿತ ಉಪಕರಣಗಳುಳ್ಳ ಹಾಸಿಗೆ, ವೆಂಟಿಲೇಟರ್‌ ಸೇರಿದಂತೆ ಅಗತ್ಯ ಸೌಲಭ್ಯ ಇರಬೇಕು ಎಂದು ನಿರ್ದೇಶನ ಮಾಡಿರುವ ಕಾರಣ ಕೋವಿಡ್‌ ರೋಗ ನಿಯಂತ್ರಣದ ಭರವಸೆ ಮೂಡಿಸಿದೆ.

ಕೊರೋನಾ ರೋಗದಿಂದ ಇಡೀ ದೇಶದಲ್ಲೇ ಮೊದಲ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಮೊಹಮದ್‌ ಹುಸೇನ್‌ ಸಿದ್ದಿಕಿ ಎಂಬ ವ್ಯಕ್ತಿಗೆ ಕೊರೋನಾ ಬಂದು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಇನ್ನೂ ಜಾಗೃತಗೊಂಡ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ.ಕೆ.ಸುಧಾಕರ್‌ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಉಭಯ ಸದನಗಳಲ್ಲಿ ಕೊರೋನಾ ಸಾವಿನ ಕುರಿತು ಶೂನ್ಯವೇಳೆಯಲ್ಲಿ ಚರ್ಚೆ ನಡೆದು ಅನೇಕ ಶಾಸಕರು ರೋಗ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದಾಗ ಸಚಿವರಾದ ಡಾ.ಕೆ.ಸುಧಾಕರ್‌ ಕೊಟ್ಟಉತ್ತರ ಸ್ಪಷ್ಟವಾಗಿತ್ತು.

ಸಾವನ್ನಪ್ಪಿದ ವ್ಯಕ್ತಿಗೆ ವೈದ್ಯರು ಕೊಟ್ಟಚಿಕಿತ್ಸೆ, ಅವರ ಕುಟುಂಬದ 46 ಮಂದಿಗೆ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸದನದಲ್ಲಿ ಎಳೆ ಎಳೆಯಾಗಿ ವಿವರಿಸಿದರು. 46 ಮಂದಿ ಪೈಕಿ 31 ಮಂದಿಯನ್ನು ಹೈರಿಸ್ಕ್‌ ಎಂದು ಪರಿಗಣಿಸಲಾಯಿತು. ಅದರಲ್ಲಿ 21 ಜನರನ್ನು ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿಯ ವಿಶೇಷ ವಾರ್ಡ್‌ಗಳಲ್ಲಿ ಹಾಗೂ ಸೋಂಕು ತಗುಲಿರುವ ಶಂಕೆ ಇರುವ ನಾಲ್ವರನ್ನು ಅದೇ ಆಸ್ಪತ್ರೆಯ ಕೊರೋನಾ ಐಸೋಲೇಶನ್‌ ವಾರ್ಡ್‌ಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸದನದಲ್ಲಿ ಪ್ರಶ್ನಿಸಿದ ಶಾಸಕರುಗಳಿಗೆ ಮಾಹಿತಿ ನೀಡಿದ್ದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಮೇಲೆ ಭರವಸೆ ಹೆಚ್ಚಾಗುವಂತೆ ಮಾಡಿದೆ.

ಅಷ್ಟೇ ಅಲ್ಲ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸದನದಲ್ಲಿ ಕೋವಿಡ್‌ ರೋಗ ನಿಯಂತ್ರಣದ ಬಗ್ಗೆ ಮಾತನಾಡಿ, ಎಲ್ಲಾ 30 ಜಿಲ್ಲೆಗಳಲ್ಲಿ ಸುಸಜ್ಜಿತವಾದ ರೋಗ ಪತ್ತೆಯ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಪ್ರತಿ ಪ್ರಜೆಯ ಆರೋಗ್ಯ ರಕ್ಷಣೆ ನಮ್ಮ ಸರ್ಕಾರದ ಹೊಣೆ ಎಂದು ಹೇಳಿದ್ದು ನಿಜಕ್ಕೂ ರಾಜ್ಯದ ಜನರಲ್ಲಿ ಸರ್ಕಾರದ ಮೇಲೆ ಹಾಗೂ ವೈದ್ಯಕೀಯ ಇಲಾಖೆಯ ಸಚಿವರಾದ ಡಾ.ಕೆ.ಸುಧಾಕರ್‌ ಅವರ ಮೇಲೆ ಇರುವ ಭರವಸೆಯನ್ನು ಇಮ್ಮಡಿಗೊಳಿಸಿದೆ.

ಕೊರೋನಾ ಭೀತಿ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ 8 ದಿನಗಳ ಕಾಲ ಮಾಲ್‌, ಚಿತ್ರಮಂದಿರ, ಸಭೆ- ಸಮಾರಂಭ, ಜಾತ್ರೆ, ಮದುವೆ, ಸಂತೆ, ಸಮಾವೇಶ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸುವ ಮೂಲಕ ಕೊರೋನಾ ವೈರಸ್‌ ಹಬ್ಬದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದು ಜನರಲ್ಲಿ ರೋಗ ನಿಯಂತ್ರಣ ಮಾಡುವ ಭರವಸೆಯನ್ನು ಹೆಚ್ಚಿಸಿದೆ.

ರಾಜ್ಯದಲ್ಲಿ ಈವರೆಗೆ 6 ಕೊರೋನಾ ರೋಗ ಇರುವ ಧೃಢ ಪ್ರಕರಣಗಳು ವರದಿಯಾಗಿದ್ದು, ರೋಗ ಲಕ್ಷಣಗಳು ಕಂಡು ಬಂದರೆ 14 ದಿನಗಳವರೆಗೆ ಪ್ರತ್ಯೇಕವಾಗಿರಬೇಕು ಎಂದು ರಾಜ್ಯದ ಜನರಿಗೆ ಸೂಚನೆಗಳನ್ನು ನೀಡಲಾಗಿದೆ. ಪ್ರತಿ ದಿನದ, ಪ್ರತಿ ಗಂಟೆಯ ಕೊರೋನಾ ವೈರೆಸ್‌ ಬಗೆಗಿನ ಮಾಹಿತಿಯನ್ನು ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕ ಕಲೆ ಹಾಕುವ ಕಾರ್ಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾಡುತ್ತಿದ್ದಾರೆ.

ಕೊರೋನಾ ಪರೀಕ್ಷೆಗಾಗಿ ಎ, ಬಿ, ಸಿ ಎಂದು ಮೂರು ಭಾಗ ಮಾಡುವ ಮೂಲಕ ರೋಗಿಗಳನ್ನು ಪರೀಕ್ಷೆಗಳಿಗೆ ಒಳಪಡಿಸುವ ಹೊಸ ವಿಧಾನವನ್ನು ರೂಪಿಸಿದ್ದಾರೆ. ಎ- ಕೊರೋನಾ ರೋಗದ ಲಕ್ಷಣ ಇರುವವರು, ಬಿ- ಹಿರಿಯರಿಗೆ ಮತ್ತು ಕೊರೋನಾ ಸೋಂಕಿತರು ಮತ್ತು ಸಿ-ಯಾವುದೇ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವ ಮಾದರಿಯ ಶೋಧನೆ ಕಾರ್ಯ ಮಾಡುತ್ತಿದ್ದಾರೆ.

ಯಾವುದೇ ವ್ಯಕ್ತಿಗೆ ಸೋಂಕು ತಗುಲದಂತೆ ಮತ್ತು ಒಂದು ವೇಳೆ ಸೋಂಕು ತಗುಲಿದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಕ್ರಮವನ್ನು ತಮ್ಮ ಅಧಿಕಾರಿಗಳಿಗೆ ಸಚಿವರಾದ ಡಾ.ಕೆ.ಸುಧಾಕರ್‌ ನಿರ್ದೇಶಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊರೋನಾ ಸೋಂಕು ತಡೆಗಟ್ಟಲು ಭಾರತದಲ್ಲಿನ ವೈದ್ಯಕೀಯ ಪರೀಕ್ಷೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸುರೇಶ್‌ ಜಾಧವ್‌ ಎನ್ನುವ ವ್ಯಕ್ತಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಾಲ್ಕು ತಾಸು ಭಾರತದ ವಿಮಾನಕ್ಕೆ ಕಾದೆ. ಅಲ್ಲಿ ಯಾವುದೇ ಮಾಹಿತಿ ಕೇಳಲಿಲ್ಲ. ಯಾಕೆಂದರೆ ಬೆಂಗಳೂರಿನಲ್ಲಿ ಎಲ್ಲಾ ವೈದ್ಯಕೀಯ ಪರೀಕ್ಷೆ ಮಾಡಿದ ದಾಖಲೆಗಳನ್ನು ನೀಡಿದೆ. ಹೀಗಾಗಿ ಕಾರಣ ಕೇಳದೆ ನೇರವಾಗಿ ನನ್ನನ್ನು ನನ್ನ ಮನೆಗೆ ಕಳುಹಿಸಿಕೊಟ್ಟರು ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿರುವುದು ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆ ಮುಂಜಾಗ್ರತೆಯ ತಪಾಸಣೆಯ ಬಗ್ಗೆ ಮತ್ತು ಕೊರೋನಾ ನಿಯಂತ್ರಿಸುವಲ್ಲಿ ಕೈಗೊಂಡಿರುವ ಕ್ರಮಕ್ಕೆ ಮೆಚ್ಚುಗೆಗಳು ಹೆಚ್ಚಾಗುತ್ತಿವೆ.

ಒಟ್ಟಾರೆ ಕೊರೋನಾ ವೈರಸ್‌ ದೇಶದ 11 ರಾಜ್ಯಗಳಲ್ಲಿ ಹಬ್ಬಿದರೂ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ, ಕೈಗೊಂಡಿರುವ ಕಾರ್ಯ ರೋಗ ನಿಯಂತ್ರಣದ ಭರವಸೆಯನ್ನು ಹೆಚ್ಚಿಸಿ ರಾಜ್ಯದ ಜನರ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವುದು ಸರ್ಕಾರದ ದೂರದೃಷ್ಟಿಗೆ ಹಿಡಿದ ಕೈಗನ್ನಡಿ.

ವಿಶ್ವ ನಡುಗಿಸಿದ ಹೆಮ್ಮಾರಿ:

ನೋವೆಲ್‌ ಕೊರೋನಾ ಅಥವಾ ಕೋವಿಡ್‌-19 ಈಗ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ. ಹಳ್ಳಿಯಿಂದ ಡಿಲ್ಲಿಯವರೆಗೂ ಇದರದ್ದೇ ಮಾತು. ಕೊರೋನಾ ವೈರಸ್‌ ಪಿಡುಗಾಗಿ ಜಾಗತಿಕ ಆರ್ಥಿಕತೆ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮಗಳ ಅನಿಶ್ಚಿತತೆಯ ಕರಿನೆರಳು ವಿಶ್ವವನ್ನೇ ನಡುಗಿಸುತ್ತಿದೆ.

ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಹುಟ್ಟಿದ ಈ ವೈರಸ್‌ನಿಂದ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಹೆಚ್ಚಿದೆ. ಷೇರು ವಹಿವಾಟಿನ ಮೇಲೆ ಕೊಡಲಿ ಪೆಟ್ಟು ಕೊಟ್ಟಿದೆ. ಒಂದು ದೇಶ ಆರೋಗ್ಯವಾಗಿರಬೇಕೆಂದರೆ ಮೊದಲು ಪ್ರಜೆಯ ಆರೋಗ್ಯ ಸ್ಥಿರವಾಗಿರಬೇಕು. ಆದರೆ ಈ ಕೊರೋನಾ ಎಂಬ ಸೂಕ್ಷ್ಮಾಣು ಜೀವಿ ಬೃಹತ್‌ ದೇಶವಾದ ಭಾರತದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮ ಅಷ್ಟಿಷ್ಟಲ್ಲ. ಮುಂಬೈ ಷೇರುಪೇಟೆಯೇ ತಲ್ಲಣಗೊಂಡಿದೆ. ಮುಂಬೈ ಷೇರುಪೇಟೆಯಲ್ಲಿ 20 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ಕರಗಿದೆ. ಚೀನಾದ ವೈರಸ್‌ ಹರಡುವಿಕೆಗೆ ಕಡಿವಾಣ ಬೀಳಲಿದೆ ಎಂಬ ಆಶಾವಾದ ಭಗ್ನಗೊಂಡಿದೆ.

ವಿಶ್ವದ 121ಕ್ಕೂ ಹೆಚ್ಚು ದೇಶಗಳ ಮೇಲೆ ಕೊರೋನಾ ವೈರಸ್‌ ಪ್ರಹಾರ ಮಾಡಿದ್ದರ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಲಿವೆ ಎನ್ನುವ ನಂಬಿಕೆ ಹುಸಿಯಾಗಿದೆ. ಹೀಗಾಗಿ ಜಾಗತಿಕ ಆರ್ಥಿಕ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ.

ವಿಶ್ವದ ಬೃಹತ್‌ ಜನ ಸಂಖ್ಯೆ ದೇಶವಾದ ಚೀನಾದಲ್ಲೇ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸುಮಾರು 81 ಸಾವಿರ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಚೀನಾದಲ್ಲಿ 3176 (ಮಾಚ್‌ರ್‍ 13ಕ್ಕೆ) ಸಾವನ್ನಪ್ಪಿದ್ದಾರೆ. ಇಟಲಿ, ಇರಾನ್‌, ದಕ್ಷಿಣ ಕೊರಿಯಾ, ಸ್ಪೇನ್‌, ಜರ್ಮನಿ, ಫ್ರಾನ್ಸ್‌, ಅಮೆರಿಕ, ಸ್ವಿಜರ್ಲೆಂಡ್‌, ನೆದರ್ಲೆಂಡ್‌ ದೇಶಗಳಲ್ಲಿ ಒಟ್ಟು 1.37 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 5,088 ಮಂದಿ (ಮಾಚ್‌ರ್‍ 13ಕ್ಕೆ) ಸಾವನ್ನಪ್ಪಿದ್ದಾರೆ. 69,623 ಮಂದಿ ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಮಾಡಿದೆ.

ಚೀನಾದ ಪಕ್ಕದ ರಾಷ್ಟ್ರ ಹಾಗೂ ವಿಶ್ವದಲ್ಲೇ 2ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೋನಾ ವೈರಾಣು ಭೀತಿ ದೇಶದ ಜನರನ್ನು ನಡುಗಿಸುತ್ತಿದೆ. ಭಾರತ ಸರ್ಕಾರ ಆರೋಗ್ಯ ಸಚಿವಾಲಯ ಎಲ್ಲಾ ರೀತಿಯ ನಿಯಂತ್ರಣಕ್ಕೆ ಮುಂದಾಗಿದೆ. ಒಂದು ದುರಾದೃಷ್ಟವೇನೆಂದರೆ, ಇಡೀ ದೇಶದಲ್ಲೇ ಕರ್ನಾಟಕದಲ್ಲೇ ಕೊರೋನಾದಿಂದ ಮೊದಲ ಸಾವು ಬಂದಿದ್ದು. ಹೌದು ಕಲಬುರಗಿ ಜಿಲ್ಲೆಯ ಮೊಹಮದ್‌ ಹುಸೇನ್‌ ಸಿದ್ದಿಕಿ ಎಂಬ 76 ವರ್ಷ ವ್ಯಕ್ತಿ ಕೋವಿಡ್‌ನಿಂದ ಸಾವನ್ನಪ್ಪಿದ್ದು ಇಡೀ ದೇಶವೇ ಕರ್ನಾಟಕದ ಕಡೆ ನೋಡುವಂತೆ ಮಾಡಿದೆ.

ಇಡೀ ವಿಶ್ವಕ್ಕೆ ಐಟಿ-ಸಾಫ್ಟ್‌ವೇರ್‌ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ. 36.50ರಷ್ಟು. ನಮ್ಮ ರಾಜ್ಯ ಸಾಫ್ಟ್‌ವೇರ್‌ ರಫ್ತಿನಲ್ಲಿ ಅತಿ ಹೆಚ್ಚು ಉತ್ಪನ್ನಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಸಿಲಿಕಾನ್‌ ಸಿಟಿ ಬೆಂಗಳೂರು ಕೇವಲ ಸಾಫ್ಟ್‌ವೇರ್‌ ಅಷ್ಟೇ ಅಲ್ಲ ಉನ್ನತ ಶಿಕ್ಷಣ, ಉದ್ಯೋಗ, ಪ್ರವಾಸೋದ್ಯಮ ಹೀಗೆ ವಿಶ್ವದ ಜನರನ್ನೇ ಆಕರ್ಷಿಸುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ಇಲ್ಲಿಗೆ ಹೊರ ದೇಶಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಬರುತ್ತಾರೆ. ಚೀನಾ, ಕೊರಿಯಾ, ಇಟಲಿ, ಫ್ರಾನ್ಸ್‌ ಹೀಗೆ ನಾನಾ ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲ ಇಲ್ಲಿನ ವಿದ್ಯಾರ್ಥಿಗಳು ಹೊರ ದೇಶಗಳಿಗೂ ಹೋಗುತ್ತಾರೆ.

ಸುಧಾಕರ್‌ ಚುರುಕಿನ ಕ್ರಮ

- ವಿಮಾನ ನಿಲ್ದಾಣದಲ್ಲಿ ಸೋಂಕಿತರಿಗೆ ಥರ್ಮಲ್‌  ಸ್ಕ್ಯಾನಿಂಗ್‌

- ದಿನವೂ ಹೆಲ್ತ್‌ ಬುಲೆಟಿನ್‌, ಹಲವು ಮುಂಜಾಗ್ರತಾ ಕ್ರಮ

- ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ದುಬಾರಿ ಬೆಲೆಗೆ ಮಾರುವವರ ವಿರುದ್ಧ ಕ್ರಮ

- ರಾಜ್ಯದ 5 ಕಡೆ ಪ್ರಯೋಗಾಲಯಗಳ ಸ್ಥಾಪನೆ

- ಸೋಂಕಿತರಿಗಾಗಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮೀಸಲು

- ಸೋಂಕಿತರ ಸ್ಯಾಂಪಲ್‌ಗಳು ವಿಮಾನದ ಮೂಲಕ ಲ್ಯಾಬ್‌ಗೆ ರವಾನೆ

- ವಿದೇಶಕ್ಕೆ ತೆರಳಿದ ಐಟಿ ಉದ್ಯೋಗಿಗಳ ಬಗ್ಗೆ ಮಾಹಿತಿ ಸಂಗ್ರಹ

- ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಸ್ಥಗಿತ

- ಆಸ್ಪತ್ರೆಗಳಲ್ಲಿ ಮಾಸ್ಕ್‌, ಸುರಕ್ಷಾ ಸಾಧನಗಳು 3 ತಿಂಗಳಿಗಾಗುವಷ್ಟುಸಂಗ್ರಹ

- 6 ತಿಂಗಳಿಗೆ ಅಗತ್ಯವಿರುವಷ್ಟುಔಷಧಗಳ ದಾಸ್ತಾನು ಮಾಡಲು ನಿರ್ದೇಶನ

Follow Us:
Download App:
  • android
  • ios