Chandru Murder Case: ಚಂದ್ರು ಹತ್ಯೆಗೆ ‘ಭಾಷೆ’ ಕಾರಣವಲ್ಲ: ಗುಪ್ತಚರ ಇಲಾಖೆ
ಇತ್ತೀಚೆಗೆ ಜೆ.ಜೆ.ನಗರದ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಮಿಕ ಚಂದ್ರು ಕೊಲೆ ಕೃತ್ಯವು ಬೈಕ್ ಅಪಘಾತದಿಂದ ನಡೆದಿದೆ ಹೊರತು ಉರ್ದು ಭಾಷೆ ಕಾರಣಕ್ಕೆ ಅಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ಕೇಂದ್ರ ಗುಪ್ತಚರವು ವರದಿ ಸಲ್ಲಿಸಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಏ.23): ಇತ್ತೀಚೆಗೆ ಜೆ.ಜೆ.ನಗರದ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಮಿಕ ಚಂದ್ರು ಕೊಲೆ ಕೃತ್ಯವು (Chandru Murder Case) ಬೈಕ್ ಅಪಘಾತದಿಂದ ನಡೆದಿದೆ ಹೊರತು ಉರ್ದು ಭಾಷೆ ಕಾರಣಕ್ಕೆ ಅಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ಕೇಂದ್ರ ಗುಪ್ತಚರವು ವರದಿ (Central Intelligence Report) ಸಲ್ಲಿಸಿದೆ. ಈ ವರದಿಗೆ ಪೂರಕವಾಗಿ ಹತ್ಯೆ ನಡೆದ ದಿನ ಮೃತ ಚಂದ್ರು ಜೊತೆಯಲ್ಲಿದ್ದ ಆತನ ಸ್ನೇಹಿತ ಸೈಮನ್ ರಾಜು ಜೆ.ಜೆ.ನಗರ ಠಾಣೆ ಪೊಲೀಸರಿಗೆ (JJ Nagar Police) ನೀಡಿದ್ದ ವಿಡಿಯೋ (Video) ಹೇಳಿಕೆಯನ್ನು ಸಹ ಕೇಂದ್ರಕ್ಕೆ ಗುಪ್ತದಳ ಸಲ್ಲಿಸಿದೆ.
ಈ ಸಂಗತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಗಮನಕ್ಕೂ ಬಂದಿದೆ ಎಂದು ರಾಜ್ಯದ ಗೃಹ ಇಲಾಖೆ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ನಗರದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಏ.5ರಂದು ಹಿಂದೂ ಯುವಕನ ಹತ್ಯೆ ವಿಚಾರ ತಿಳಿದ ಕೇಂದ್ರ ಗುಪ್ತದಳ ತಂಡವು, ತಕ್ಷಣವೇ ಜೆ.ಜೆ.ನಗರಕ್ಕೆ ತೆರಳಿ ಹತ್ಯೆ ಹಿಂದಿನ ಕಾರಣ ಹುಡುಕಾಡಿದರು. ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಸೈಮನ್ ರಾಜು ಹಾಗೂ ಸ್ಥಳೀಯರ ವಿಚಾರಣೆ ನಡೆಸಿ ಗುಪ್ತದಳ ಹೇಳಿಕೆ ದಾಖಲಿಸಿತು. ಆಗ ಬೈಕ್ ತಾಕಿದ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳ ನಡೆದು ಕೊನೆಗೆ ಚಂದ್ರು ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ಗೊತ್ತಾಯಿತು. ಈ ಮಾಹಿತಿಯನ್ನೇ ಆಧರಿಸಿ ಕೇಂದ್ರಕ್ಕೆ ಐಬಿ ವರದಿ ಸಲ್ಲಿಸಿತು.
Chandru Murder Case: ಗೃಹ ಸಚಿವರಿಂದಲೇ ಪೊಲೀಸರು ಸುಳ್ಳು ಹೇಳಿಸಿದ್ದಾರೆ: ಸಿ.ಟಿ. ರವಿ
ಆದರೆ, ಮರು ದಿನ ನಗರ ಪೊಲೀಸರ ಹೇಳಿಕೆಗೆ ಗೃಹ ಸಚಿವರು ವ್ಯತಿರಿಕ್ತ ಹೇಳಿಕೆ ನೀಡಿದ್ದು ಗೊಂದಲ ಉಂಟಾಯಿತು. ಈ ವಿವಾದದಿಂದಾಗಿ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳಕ್ಕೆ ವಹಿಸಲಾಗಿದೆ. ಘಟನೆ ನಡೆದಾಗ ಬೆಂಗಳೂರಿನಿಂದ ಮುಖ್ಯಮಂತ್ರಿಗಳು ಹೊರಗೆ ಇದ್ದರು. ಬೆಂಗಳೂರಿಗೆ ಮರಳಿದ ಬಳಿಕ ಪೊಲೀಸ್ ಆಯುಕ್ತರಿಂದ ಸವಿಸ್ತಾರವಾಗಿ ವಿವರ ಪಡೆದರು. ಆಗ ಮೊಬೈಲ್‌ನಲ್ಲಿ ಚಂದ್ರು ಸ್ನೇಹಿತ ವಿಡಿಯೋ ಹೇಳಿಕೆಯನ್ನು ಮುಖ್ಯಮಂತ್ರಿಗಳಿಗೆ ಸಹ ತೋರಿಸಲಾಯಿತು ಎನ್ನಲಾಗಿದೆ.
ಉಲ್ಟಾ ಹೊಡೆದಿದ್ದ ಸ್ನೇಹಿತ ಸೈಮನ್: ‘ಏ.5ರಂದು ರಾತ್ರಿ ನನ್ನ ಹುಟ್ಟುಹಬ್ಬ ಇತ್ತು. ಆಗ ಮನೆ ಸಮೀಪ ಕೇಕ್ ಕತ್ತರಿಸಿ ರಾತ್ರಿ 12ಕ್ಕೆ ಸ್ನೇಹಿತರೊಟ್ಟಿಗೆ ಹುಟ್ಟುಹಬ್ಬ ಆಚರಿಸಿದೆ. ಆಗ ಚಂದ್ರು, ನನಗೆ ಚಿಕನ್ ರೋಲ್ ಕೊಡಿಸುವಂತೆ ಕೇಳಿದೆ. ನಾನು ಬೆಳಗ್ಗೆ ತಿನ್ನೋಣ ಎಂದೂ ಹೇಳಿದರೂ ಆತ ಕೇಳಿಲ್ಲ. ನನಗೆ ಈಗಲೇ ಬೇಕು ಅಂತ ಹಠ ಹಿಡಿದ. ಹಾಗಾಗಿ ಚಿಕನ್ ರೋಲ್ ತಿನ್ನುವ ಸಲುವಾಗಿ ಚಾಮರಾಜಪೇಟೆಗೆ ಹೋದೆವು. ಆಗ ರಾತ್ರಿ 1.45 ಗಂಟೆ ಆಗಿತ್ತು. ಅಷ್ಟರಲ್ಲಿ ಅಂಗಡಿ ಬಾಗಿಲು ಮುಚ್ಚಿತ್ತು. ಆಗ ರಂಜಾನ್ ಆಗಿರುವ ಕಾರಣ ಹಳೇ ಗುಡ್ಡದಹಳ್ಳಿ ಮಸೀದಿ ಸಮೀಪ ಚಿಕನ್ ರೋಲ್ ಸಿಗುತ್ತದೆ ಎಂದು ಹೇಳಿ ಕರೆದುಕೊಂಡು ಬಂದೆ.
ಬಿಜೆಪಿ ನಾಯಕರು ಸರ್ಕಾರ, ಸಿಎಂಗೆ ಅಗೌರವ ತೋರುತ್ತಿದ್ದಾರೆ: ಭಾಸ್ಕರ್ ರಾವ್ ಆಕ್ರೋಶ
ಹಳೇ ಗುಡ್ಡದಹಳ್ಳಿ ಹೋದಾಗ ಆಗಲೇ ರಾತ್ರಿ 2 ಗಂಟೆ ಆಗಿತ್ತು. ಅಲ್ಲೂ ಸಹ ಅಂಗಡಿ ಬಂದ್ ಆಗಿತ್ತು. ಅಲ್ಲಿಂದ ಮರಳುವಾಗ ಎದುರಿನಿಂದ ಬೈಕ್‌ನಲ್ಲಿ ಬಂದ ಶಾಹೀದ್, ನನ್ನ ಬೈಕ್‌ಗೆ ಗುದ್ದಿಸಿದ. ನಾನು ಆಕ್ಷೇಪಿಸಿದೆ. ಅಷ್ಟಕ್ಕೇ ಆತ ಸಿಟ್ಟಿಗೆದ್ದು ನಮ್ಮ ಏರಿಯಾಗೆ ಬಂದು ನನಗೆ ಅವಾಜ್ ಹಾಕ್ತೀರಾ ಎಂದು ಏಕಾಏಕಿ ಗಲಾಟೆ ಶುರು ಮಾಡಿದೆ. ತನ್ನಲ್ಲಿದ್ದ ಚಾಕುವಿನಿಂದ ಚಂದ್ರು ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾದ’ ಎಂದು 10 ನಿಮಿಷ ವಿಡಿಯೋ ಹೇಳಿಕೆಯನ್ನು ಘಟನೆ ನಡೆದ ಚಂದ್ರು ಸ್ನೇಹಿತ ಸೈಮನ್ ರಾಜು ಜೆ.ಜೆ.ನಗರ ಪೊಲೀಸರ ಮುಂದೆ ನೀಡಿದ್ದ. ಆದರೆ ಎರಡು ದಿನಗಳ ಬಳಿಕ ಆತ, ತನ್ನ ಹೇಳಿಕೆಯನ್ನು ಬದಲಾಯಿಸಿ ಉರ್ದು ಭಾಷೆ ಪ್ರಸ್ತಾಪಿಸಿದ ಎಂದು ಮೂಲಗಳು ಹೇಳಿವೆ.