ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಬೆಳಕು ನೀಡಿದ ಮಹಾನ್ ಕವಿ ಕುವೆಂಪು
ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ, ನಾಡು-ನುಡಿ, ದೇಶಪ್ರೇಮ, ಬ್ರಾತೃತ್ವ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿ, ಆಧ್ಯಾತ್ಮಿಕತೆಯನ್ನು ಎಲ್ಲರೆದೆಯೊಳಗೂ ತುಂಬಿಸುತ್ತಾ, ಕಂದಾಚಾರ, ಮೂಢತೆ, ದುರುಳತೆಯನ್ನು ಸರ್ವರ ಮನಸ್ಸಿನಿಂದ ಬಡಿದೋಡಿಸುವ ಎಲ್ಲಾ ಪ್ರಯತ್ನ ಮಾಡಿದ ಶತಮಾನದ ಶ್ರೇಷ್ಠ ವ್ಯಕ್ತಿ ಕುವೆಂಪು.
ನೂರು ಮತದ ಹೊಟ್ಟತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ...
ಇಂತಹ ಅತ್ಯದ್ಭುತ ಸಾಲುಗಳನ್ನು ನೀಡಿ, ಇಡೀ ಮನುಕುಲಕ್ಕೇ ವಿಶ್ವ ಮಾನವ ಸಂದೇಶ ಸಾರಿದ ಸಾಹಿತ್ಯ ಕ್ಷೇತ್ರದ ಮಹಾನ್ ದೈತ್ಯ ಪ್ರತಿಭೆ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪನವರ ಮಗ ಪುಟ್ಟಪ್ಪ (ಕುವೆಂಪು). ಮಲೆನಾಡಿನ ಕುಪ್ಪಳ್ಳಿ ಎಂಬ ಹೊರಜಗತ್ತಿಗೆ ಪರಿಚಯವೇ ಇಲ್ಲದಿದ್ದ ಕುಗ್ರಾಮದಲ್ಲಿ ಹುಟ್ಟಿ, ಮುಂದೆ ರಸ ಋುಷಿಯಾಗಿ, ಕಥೆ, ಕಾದಂಬರಿ, ಕವನ, ಮಹಾಕಾವ್ಯ, ನಾಟಕ, ಮಕ್ಕಳ ಕವನ, ವಿಮರ್ಶೆ ಹೀಗೆ ಸಾಹಿತ್ಯ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ಕೃಷ್ಟಸಾಧನೆ ಮಾಡಿದವರು ಮತ್ತು ಇಡೀ ವಿಶ್ವವೇ ತೀರ್ಥಹಳ್ಳಿ ತಾಲೂಕಿನ ಸಣ್ಣ ಗ್ರಾಮ ಕುಪ್ಪಳ್ಳಿಯ ಕಡೆ, ಕನ್ನಡ ಸಾಹಿತ್ಯದ ಕಡೆ ತಿರುಗಿ ನೋಡುವಂತೆ ಮಾಡಿದ ಮೇರು ಸಾಹಿತಿ ನಮ್ಮ ಕುವೆಂಪು. ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕಷ್ಟೇ ಅಲ್ಲದೆ ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಮಹಾಬೆಳಕು ನೀಡಿದ ಮಹಾನ್ ಯುಗ ಪುರುಷ.
ಶತಮಾನದ ಶ್ರೇಷ್ಠ ಕವಿ
ಸಾಹಿತ್ಯದ ಮೂಲಕವೇ ಇಡೀ ಸಮಾಜದ ಚಿಂತನೆಯನ್ನು ಸಂಪೂರ್ಣ ಬದಲಾಯಿಸಿಬಿಡಬಹುದೆಂಬುದನ್ನು ಕುವೆಂಪು ಸಾಹಿತ್ಯ ಪ್ರಸ್ತುತಪಡಿಸುತ್ತದೆ. ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ, ನಾಡು-ನುಡಿ, ದೇಶಪ್ರೇಮ, ಬ್ರಾತೃತ್ವ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿ, ಆಧ್ಯಾತ್ಮಿಕತೆಯನ್ನು ಎಲ್ಲರೆದೆಯೊಳಗೂ ತುಂಬಿಸುತ್ತಾ, ಕಂದಾಚಾರ, ಮೂಢತೆ, ದುರುಳತೆಯನ್ನು ಸರ್ವರ ಮನಸ್ಸಿನಿಂದ ಬಡಿದೋಡಿಸುವ ಎಲ್ಲಾ ಪ್ರಯತ್ನ ಮಾಡಿದ ಶತಮಾನದ ಶ್ರೇಷ್ಠ ವ್ಯಕ್ತಿ ಕುವೆಂಪು. ‘ಶ್ರೀ ರಾಮಾಯಣ ದರ್ಶನಂ’ ಎಂಬ ಮಹಾಕಾವ್ಯವನ್ನು ಕೊಟ್ಟಕುವೆಂಪುರವರು ತಮ್ಮ ಇದೊಂದೇ ಕೃತಿಯಿಂದ ತನ್ನ ಶಕ್ತಿಯೇನು ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ‘ನೂರು ದೇವರನೆಲ್ಲ ನೂಕಾಚೆ ದೂರ. ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ ಎನ್ನುತ್ತಾ ಕುರುಡು ಭಕ್ತಿಯನ್ನು ಕಿತ್ತೆಸೆದು, ದೇಶಭಕ್ತಿಯನ್ನು ಬಿತ್ತುವ ಪ್ರಯತ್ನ ಮಾಡಿದ್ದಾರೆ..
ವೈಚಾರಿಕತೆ, ಬ್ರಾತೃತ್ವದ ಪಾಠ
‘ಗುಡಿ, ಚರ್ಚು, ಮಸೀದಿಗಳನು ಬಿಟ್ಟು ಹೊರಬನ್ನಿ... ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’ ಎನ್ನುತ್ತಾ ಮೌಢ್ಯತೆಯ ಬೆನ್ನು ಮುರಿದು, ವೈಚಾರಿಕತೆಯ ಬೇರನ್ನು ಭದ್ರಗೊಳಿಸಲು ತಯಾರಾಗುತ್ತಾರೆ. ‘ಸ್ವರ್ಗವೇ ಭೂಮಿಯೊಳಿರದೆ ಮೇಲೆಲ್ಲಿಯೂ ನೀನಿಲ್ಲ’ ಎನ್ನುತ್ತಲೇ ಜನಸಾಮಾನ್ಯರ ಸ್ವರ್ಗ ನರಕಗಳ ಕಲ್ಪನೆಯನ್ನು ಬದಲಿಸಿ, ಭೂಮಿಯ ಮೇಲಿನ ಪ್ರಕೃತಿ ಸೌಂದರ್ಯವನ್ನೇ ಸ್ವರ್ಗವೆಂಬ ಪರಿಕಲ್ಪನೆಯನ್ನು ಮೂಡಿಸುತ್ತಾರೆ. ‘ಕೊಳಲನೂದಿ ಮೋಹಿಪುದನು ಕಲಿಸು ಎನಗೆ ಚೆನ್ನ’ ಎಂದು ಸಾಮಾನ್ಯ ಗೊಲ್ಲನ ಅದ್ಭುತ ಪ್ರತಿಭೆಯನ್ನು ಜಗತ್ತಿಗೆ ಅನಾವರಣ ಮಾಡುತ್ತಾರೆ.
ಮಾತಿಗೂ ಕೃತಿಗೂ ಹೇಗೆ ಸಂಬಂಧ?
ದೊಡ್ಡವರು, ಬುದ್ಧಿಜೀವಿಗಳು, ರಾಜಕಾರಣಿಗಳು, ಬಡವ ನಿಸ್ಸಹಾಯಕರಿಗಾಗಿ ಮರುಗುವವರು, ಸಮಾಜ ಸೇವಕರು ಎಂದು ಹೇಳಿಕೊಂಡು ಓಡಾಡುವವರೆಲ್ಲರೂ ನಿಜವಾಗಿಯೂ ನುಡಿದಂತೆ ನಡೆಯುತ್ತಾರೆಯೇ? ಅನೇಕರ ಮಾತಿಗೂ, ಕೃತಿಗೂ ಸಂಬಂಧವೇ ಇರುವುದಿಲ್ಲ ಎಂಬುದನ್ನು ಕುವೆಂಪುರವರು ಕೇವಲ 25ರ ಹರೆಯದಲ್ಲೇ ತಮ್ಮ ‘ಜಲಗಾರ’ ಎಂಬ ಅಪೂರ್ವ ನಾಟಕದ ಈ ಕೆಳಗಿನ ಒಂದು ದೃಶ್ಯದಲ್ಲಿ ಅದೆಷ್ಟುಪರಿಣಾಮಕಾರಿಯಾಗಿ ಮತ್ತು ಸರಳವಾಗಿ ವ್ಯಕ್ತಪಡಿಸಿದ್ದಾರೆಂದು ನೋಡಿದರೆ ಅವರ ಶಕ್ತಿಯೇನೆಂದು ತಿಳಿಯುತ್ತದೆ.
ತರುಣ 1: ದೇಗುಲದೊಳಗಡಗಿಹನಂತೆ ಪರಶಿವನು, ಜಗವೆಲ್ಲ ದೇವನಿಹ ಗುಡಿಯಲ್ಲವೇ ಗೆಳೆಯ? ಮತದ ಮದ್ಯವ ಕುಡಿದು ತಲೆಕೆಟ್ಟಿಹುದು ಮಂದಿ..
ತರುಣ 2: ನಮ್ಮ ಪೂರ್ವಜರ ಮೂಢತನಕೆ ಆದಿಯೆಂಬುದೆಲ್ಲಿ, ಅಂತ್ಯವೆಂಬುದೆಲ್ಲಿ? ಹೇಳುವುದು ಒಂದು, ಮಾಡುವುದು ಮತ್ತೊಂದು! ನುಡಿಗೂ ನೆಗಳ್ತೆಗೂ ಸಂಬಂಧವೇ ಇಲ್ಲ! ಇದೆ ನಮ್ಮ ಭಾರತಾಂಬೆಯ ದುರ್ಗತಿಗೆ ಕಾರಣ. ಬಡಜನರ ಕಣ್ಣೆತ್ತಿ ನೋಡದಿಹ, ಮರುಗದಿಹ ಹಾಳು ಪೂಜೆಯದೇತಕೆ? ಹಸಿದ ಜನಗಳಿಗೆ ಕೊಡರೊಂದು ಕಾಸ; ತಣ್ಣಗಿಹ ಕಲ್ಲುಗಳ ಮೇಲೆ ಎಣ್ಣೆಯನು ಬೆಣ್ಣೆಯನು ಸುರಿಯುವರು...ಜೀವದ ದರಿದ್ರನಾರಾಯಣರ ಸೇವೆಯಲ್ಲವೇ ಪರಮ ಪೂಜೆ?
ತಿರುಕ: ಧರ್ಮರೇ! ಕಣ್ಣಿಲ್ಲ, ಹಸಿದಿಹೆನು, ಸಾಯುತಿಹೆನಪ್ಪಾ! ಪುಣ್ಯಾತ್ಮರೇ, ತಾಯ್ತಂದೆ, ಕಾಸು ಕೊಡಿರಪ್ಪಾ!
ಎರಡನೆಯ ತರುಣ 2: ಕಾಸಿದೆಯೆ ನಿನ್ನ ಬಳಿ? (ಎಂದು ತಟಕ್ಕನೆ ಮೊದಲನೆಯ ತರುಣನ ಕಡೆಗೆ ತಿರುಗುತ್ತಾನೆ. ಜೇಬಿನಲ್ಲಿ ಹಣದ ಸದ್ದಾಗುತ್ತದೆ)
ಮೊದಲನೆಯ ತರುಣ: ಹಾಗಲ್ಲ ಮಿತ್ರ! ಕೊಡುವುದನು ನೋಡಿ ಕೊಡಬೇಕು! ಇವನೇನು ಕುರುಡನೇ? ಇವನು ಬಲು ಸೋಮಾರಿ! ನೋಡೆನಿತು ಬಲಶಾಲಿಯಾಗಿಹನು? ನೋಡು! ದುಡಿಯಬಾರದೆ ಇವನು? ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! (ಕುರುಡನ ಬಳಿ ಸಾರಿ) ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ! (ಕಣ್ಣಿನ ರೆಪ್ಪೆ ಎಳೆದು ನೋಯಿಸುತ್ತಾನೆ). ಕೊನೆಗೆ ಆ ಭಿಕ್ಷುಕನ ಕಣ್ಣು ಚುಚ್ಚಿ, ಹಿಂಸೆ ಕೊಟ್ಟು ತೆರಳುತ್ತಾರೆ.
ಸಮಾನತೆಯ ಪ್ರತಿಪಾದನೆ
‘ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುತ್ತಾ ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಸಮಾನ ಪ್ರಾಮುಖ್ಯತೆ ಸಿಗಬೇಕೆಂದು ಪ್ರತಿಪಾದಿಸುತ್ತಾ, ಇಡೀ ಸಮಾಜದ ಮೇಲು-ಕೀಳು, ಮುಖ್ಯ-ಅಮುಖ್ಯಗಳೆಂಬ ತರತಮಗಳನ್ನು ಕುವೆಂಪುರವರು ತಮ್ಮ ಬರಹದ ಮೂಲಕವೇ ಬಡಿದಟ್ಟುತ್ತಾರೆ. ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಎಂಬ ಎರಡು ಮಹಾನ್ ಕಾದಂಬರಿಗಳನ್ನು ನೀಡಿ, ಮಲೆನಾಡು, ಅಲ್ಲಿಯ ಪರಿಸರ, ಸಂಸ್ಕೃತಿ, ಆಚಾರ-ವಿಚಾರಗಳೇನು ಎಂಬುದನ್ನು ನಾಯಿಗುತ್ತಿ, ಹೂವಯ್ಯ, ರಾಮಯ್ಯ, ಸುಬ್ಬಮ್ಮ ಹೆಗ್ಗಡತಿಯರ ಮೂಲಕ ಕಟ್ಟಿಕೊಟ್ಟರೀತಿ ಕುವೆಂಪುರವರಿಗೆ ಮಾತ್ರ ಸಾಧ್ಯವೇನೋ ಎನ್ನುವ ಅಚ್ಚರಿ ಹುಟ್ಟಿಸುವಂಂಥದ್ದು. ಶೂದ್ರನೆಂಬ ಕಾರಣಕ್ಕೆ ರಾಮಾಯಣದಲ್ಲಿ ಶಂಬೂಕನನ್ನು ವಧಿಸಿದ್ದ ರಾಮನನ್ನು ಬದಲಿಸಿ, ಸಮಾಜದ ಎಲ್ಲಾ ವಿರೋಧಗಳನ್ನೂ ಮೀರಿ, ರಾಮನಿಂದ ಶಂಭೂಕನನ್ನು ಉಳಿಸಿ, ತಮ್ಮ ‘ಶೂದ್ರತಪಸ್ವಿ’ಯಲ್ಲಿ ರಾಮನಿಗೊಂದು ಹೊಸ ಆಯಾಮ ನೀಡುತ್ತಾರೆ. ‘ಮರ್ಯಾದಾ ಪುರುಷೋತ್ತಮ’ ಎಂಬ ಅವನ ಹೆಸರಿಗೆ ಕಳಶವಿಡುತ್ತಾರೆ.
ಸರಳ ವಿವಾಹಕ್ಕೆ ಬುನಾದಿ
‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’, ‘ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’, ‘ಭಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ’, ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ನಾಡು-ನುಡಿಯನ್ನು ಕನ್ನಡ ನಾಡಿನ ಪ್ರತಿಯೊಬ್ಬರ ನರ-ನಾಡಿಗಳಲ್ಲಿ ಮಿಡಿಯುವಂತೆ ನುಡಿದವರು ಕುವೆಂಪುರವರು. ‘ತನುವೂ ನಿನ್ನದು ಮನವೂ ನಿನ್ನದು, ಎನ್ನ ಜೀವನ ಧನವೂ ನಿನ್ನದು’ ಎನ್ನುತ್ತಾ ಮನುಷ್ಯನ ಖಾಲಿತನವನ್ನು ಪ್ರಚುರಪಡಿಸಿದ ಕವಿ ಇವರು. ‘ಆನಂದಮಯ ಈ ಜಗಹೃದಯ’ ಎನ್ನುತ್ತಾ ಪ್ರಪಂಚದಲ್ಲಿ ಕಷ್ಟಮೀರಿ ಬಾಳಬೇಕಾದ ಪರಿಯನ್ನು ನಿರೂಪಿಸುತ್ತಾರೆ. ಮದುವೆಯೆಂದರೆ ಜನಜಂಗುಳಿ, ಗದ್ದಲ, ವ್ಯರ್ಥ ಕಾಲಹರಣ, ಅಂತಸ್ತಿನ ಪ್ರದರ್ಶನವೆಂಬಂತಿದ್ದ ಸಮಾಜಕ್ಕೆ ‘ಮಂತ್ರ ಮಾಂಗಲ್ಯ’ವೆಂಬ ದಿವ್ಯ ಮಂತ್ರವನ್ನು ಪಠಿಸಿ, ಸರಳ ವಿವಾಹದ ಬುನಾದಿಯನ್ನು ಹಾಕಿಹೋದವರು ಕುವೆಂಪುರವರು.
ಕನ್ನಡ ಸಾಹಿತ್ಯದ ಶಕ್ತಿ
ಕೇವಲ ಒಬ್ಬ ವ್ಯಕ್ತಿಯಾಗಿ ಅಲ್ಲದೆ, ಕನ್ನಡ ನಾಡಿನ ಸಾಹಿತ್ಯದ ಶಕ್ತಿಯಾಗಿ, ಎವರೆಸ್ಟಿನೆತ್ತರಕ್ಕೇರಿದರೂ ಸರಳವಾಗಿಯೇ ಬದುಕುತ್ತಾ, ಹಮ್ಮು-ಬಿಮ್ಮುಗಳಿಂದ ದೂರವುಳಿದು, ಒಬ್ಬ ಮಹಾನ್ ಋುಷಿಯಾಗಿ, ವರಕವಿ ಬೇಂದ್ರೆಯವರಿಂದ ‘ಜಗದ ಕವಿ ಯುಗದ ಕವಿ’ ಎಂದು ಹೊಗಳಿಸಿಕೊಂಡ ಮಹಾನ್ ಸಂತ. ‘ಮನುಜಮತ, ವಿಶ್ವ ಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ’ ಎಂಬ ಐದು ಸಾರ್ವಕಾಲಿಕ ಶ್ರೇಷ್ಠ ಸೂತ್ರಗಳನ್ನು ಕೊಟ್ಟು ಪ್ರತಿಯೊಬ್ಬ ಮನುಷ್ಯನೂ ಹೊಂದಬೇಕಾದ ಉದ್ದೇಶವನ್ನು ಉದ್ದೀಪಿಸಿದ ಶಕ್ತಿ ಕುವೆಂಪು.
ಇಂತಹ ಶ್ರೇಷ್ಠಾತಿ ಶ್ರೇಷ್ಠ ಕವಿಯನ್ನು, ನಾಟಕಕಾರರನ್ನು, ಕಾದಂಬರಿಕಾರರನ್ನು, ಸಾಹಿತಿಯನ್ನು, ಮಹಾನ್ ಋುಷಿಯನ್ನು ಪಡೆದ ಯಾವುದೇ ದೇಶವೂ ಧನ್ಯ. ನನ್ನದೇ ದೇಶದ, ನನ್ನದೇ ರಾಜ್ಯದೊಳಗಿರುವ, ನನ್ನ ಜಿಲ್ಲೆಯವರೇ ಕುವೆಂಪುರವರು ಎಂಬುದಂತೂ ಎಷ್ಟೋ ಜನ್ಮದ ಪುಣ್ಯದ ಫಲವೇ ಸರಿ. ಕುವೆಂಪುರವರಂತಹ ಮಹಾನ್ ಚೇತನವನ್ನು ಪಡೆದೂ, ಅವರ ಸಾಹಿತ್ಯದ ಪ್ರಭಾವಕ್ಕೊಳಗಾಗಿಯೂ ದಾರಿ ತಪ್ಪಿ ನಡೆಯುತ್ತಿರುವ, ಜಾತಿ-ಧರ್ಮಗಳ ತಾರತಮ್ಯವನ್ನು ಭೂಮಿಯಿಂದಲೇ ಕಿತ್ತೋಡಿಸಲು ಹೋರಾಡಿದ ಕುವೆಂಪುರವರನ್ನೇ ಒಂದು ಜಾತಿಯೊಳಗೆ ಬಂಧಿಸುವ ಇಂದಿನ ಸಮಾಜದಲ್ಲಿ ಮತ್ತೆ ಹುಟ್ಟಿ, ದೇಶದ ತುಂಬಾ ತುಂಬಿರುವ ಆರಾಜಕತೆಯನ್ನು ಓಡಿಸಬೇಕೇನೋ ಎಂಬ ಆತಂಕ. ಆದರೂ ಯುವಜನತೆಯ ಎದೆಯೊಳಗೆ ಕುವೆಂಪು ಸಂಪೂರ್ಣ ಇಳಿದುಬಿಟ್ಟರೆ ಒಂದು ಸುಂದರ ಸಮಾಜ ಖಂಡಿತಾ ಸೃಷ್ಟಿಯಾಗಬಲ್ಲದು.
Close