ಹೊಸ ವರ್ಷಕ್ಕೆ ಬಸ್‌ ಪ್ರಯಾಣ ದರ ಹೆಚ್ಚಳ?

ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಕೂಡ ಪ್ರಯಾಣ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಪ್ರಯಾಣ ದರ ಹೆಚ್ಚಿಸದ ಕಾರಣ ನಿಗಮಗಳ ಆದಾಯ ಹೆಚ್ಚಳವಾಗಿಲ್ಲ. ಅದರ ಪರಿಣಾಮ ನಮಗೆ ನೀಡಬೇಕಾದ ಸವಲತ್ತುಗಳು ಕಾಲಕಾಲಕ್ಕೆ ಸಿಗುತ್ತಿಲ್ಲ. ಹೀಗಾಗಿ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

KSRTC Bus Fare Likely Increase in Karnataka New Year 2025 grg

ಬೆಂಗಳೂರು(ಜ.01): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಸಂಕಷ್ಟ ನಿವಾರಿಸಲು ಪ್ರಯಾಣ ದರ ಹೆಚ್ಚಳದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದ್ದು, ಹೊಸ ವರ್ಷದ ಆರಂಭದ ತಿಂಗಳುಗಳಲ್ಲಿ ಈ ಕುರಿತು ಸರ್ಕಾರದಿಂದ ನಿರ್ಧಾರ ಪ್ರಕಟವಾಗುವ ಸಾಧ್ಯತೆಗಳಿವೆ. ಅಲ್ಲದೆ, ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಜ.15ರ ನಂತರ ಮುಖ್ಯಮಂತ್ರಿಗಳ ಜತೆ ನಡೆಯುವ ತಮ್ಮ ಸಭೆಯಲ್ಲಿ ಪ್ರಯಾಣ ದರ ಹೆಚ್ಚಳ ಕುರಿತು ಪ್ರಸ್ತಾಪಿಸುವ ಚಿಂತನೆ ನಡೆಸಿದ್ದಾರೆ.

ದಿನದಿಂದ ದಿನಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಸಂಕಷ್ಟ ಹೆಚ್ಚುತ್ತಿದೆ. ಬಿಎಂಟಿಸಿಯಲ್ಲಿ 10 ವರ್ಷಗಳ ಹಿಂದೆ (2014) ಹಾಗೂ ಕೆಎಸ್ಸಾರ್ಟಿಸಿ, ವಾಯುವ್ಯ ಸಾರಿಗೆ ನಿಗಮ ಮತ್ತು ಕೆಕೆಆರ್‌ಟಿಸಿಯಲ್ಲಿ 5 ವರ್ಷಗಳ ಹಿಂದೆ (2020) ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಅದರಂತೆ ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಮಾಡುವ ಸಂದರ್ಭದಲ್ಲಿ ಡೀಸೆಲ್‌ ಬೆಲೆ 54ರಿಂದ 55 ರು.ವರೆಗೆ ಇತ್ತು. ಅದೇ ರೀತಿ ಉಳಿದ ಮೂರು ನಿಗಮಗಳ ಪ್ರಯಾಣ ದರ ಹೆಚ್ಚಳ ಮಾಡುವಾಗ 70ರಿಂದ 75 ರು.ವರೆಗೆ ಇತ್ತು. ಅದೇ ಈಗ ಡೀಸೆಲ್‌ ದರ ₹89 ಗಳಾಗಿದೆ. ಹೀಗಾಗಿ ನಿಗಮಗಳು ಇಂಧನದ ಮೇಲೆ ಮಾಡುತ್ತಿರುವ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದರೂ ಪ್ರಯಾಣ ದರದಲ್ಲಿ ಹೆಚ್ಚಳವಾಗಿಲ್ಲ. ಈ ಕಾರಣದಿಂದಾಗಿ ನಾಲ್ಕೂ ನಿಗಮಗಳು 6,244.29 ಕೋಟಿ ರು. ಹೊಣೆಗಾರಿಕೆ ಹೊಂದಿದ್ದು, 5 ವರ್ಷಗಳಲ್ಲಿ 5,209.35 ಕೋಟಿ ನಷ್ಟ ಅನುಭವಿಸಿವೆ. ಹೀಗಾಗಿ ಪ್ರಯಾಣ ದರ ಹೆಚ್ಚಳ ಮಾಡಲೇಬೇಕು ಎಂದು ನಿಗಮಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ.

ಶೇ.15ರ ಪ್ರಸ್ತಾವನೆ, ಶೇ.12 ಹೆಚ್ಚಳ ಸಾಧ್ಯತೆ: ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿ ಕಳೆದ ಕೆಲ ವರ್ಷಗಳಿಂದ ಸಾರಿಗೆ ನಿಗಮಗಳು ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸುತ್ತಿವೆ. ಈ ವರ್ಷ ಐದಾರು ತಿಂಗಳ ಹಿಂದೆಯೇ ಶೇ.15ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಲೋಕಸಭಾ ಚುನಾವಣೆ ಸೇರಿ ಜನರಿಂದ ಎದುರಾಗಬಹುದಾದ ವಿರೋಧ ಊಹಿಸಿ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿಸಿಲ್ಲ.
ಇದೀಗ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಕೂಡ ಪ್ರಯಾಣ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಪ್ರಯಾಣ ದರ ಹೆಚ್ಚಿಸದ ಕಾರಣ ನಿಗಮಗಳ ಆದಾಯ ಹೆಚ್ಚಳವಾಗಿಲ್ಲ. ಅದರ ಪರಿಣಾಮ ನಮಗೆ ನೀಡಬೇಕಾದ ಸವಲತ್ತುಗಳು ಕಾಲಕಾಲಕ್ಕೆ ಸಿಗುತ್ತಿಲ್ಲ. ಹೀಗಾಗಿ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಜ.15ರ ನಂತರ ಮುಖ್ಯಮಂತ್ರಿಗಳ ಜತೆಗೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲೂ ನಿರ್ಧರಿಸಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಗಳು ನೌಕರರ ಸಂಘಟನೆಗಳ ಪ್ರಮುಖರ ಒತ್ತಡಕ್ಕೆ ಮಣಿದರೆ ಶೇ.10ರಿಂದ 12ರಷ್ಟು ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

ಪ್ರತಿದಿನ ₹4 ಕೋಟಿ ನಷ್ಟ

ಇಂಧನ ಬೆಲೆ ಹೆಚ್ಚಳದಿಂದಾಗಿ ನಾಲ್ಕೂ ನಿಗಮಗಳಿಗೆ ಪ್ರತಿದಿನ ₹4 ಕೋಟಿ ಹೆಚ್ಚುವರಿ ವೆಚ್ಚವಾಗುತ್ತಿದೆ. 2012ರಿಂದ ವಿದ್ಯಾರ್ಥಿಗಳ ಬಸ್‌ ಪಾಸ್‌ ದರ ಹೆಚ್ಚಳ ಮಾಡಿಲ್ಲ ಹಾಗೂ 2014ರ ನಂತರ ಬಿಎಂಟಿಸಿ ಮತ್ತು 2020ರ ನಂತರ ಉಳಿದ ನಿಗಮಗಳ ಪ್ರಯಾಣ ದರ ಹೆಚ್ಚಳವಾಗಿಲ್ಲ. ಆದರೆ, ಈ ಹಿಂದೆ ಪ್ರತಿದಿನ ಇಂಧನ ವೆಚ್ಚದ ರೂಪದಲ್ಲಿ ಪ್ರತಿದಿನ ₹9.16 ಕೋಟಿ ಖರ್ಚು ಮಾಡಲಾಗುತ್ತಿತ್ತು. ಆದರೆ, ಈಗ ಪ್ರತಿದಿನ ₹13.21 ಕೋಟಿ ವ್ಯಯಿಸಲಾಗುತ್ತಿದೆ. ಬರೋಬ್ಬರಿ ಒಂದು ದಿನದಲ್ಲಿ ₹4 ಕೋಟಿ ಹೆಚ್ಚುವರಿ ವೆಚ್ಚ ಬರುತ್ತಿದೆ. ಅಲ್ಲದೆ, 2023ರ ಮಾ.1ರಿಂದ ನೌಕರರಿಗೆ ವೇತನ ಪರಿಷ್ಕರಣೆ ಮೊತ್ತ ಪಾವತಿಸುತ್ತಿರುವುದರಿಂದ ಮಾಸಿಕ ₹54.23 ಕೋಟಿ ಹೆಚ್ಚುವರಿ ವೆಚ್ಚವಾಗುತ್ತಿದೆ.
ಶೇ.15ರಷ್ಟು ಪ್ರಯಾಣ ದರ ಹೆಚ್ಚಳದ ಕುರಿತು ನಿಗಮಗಳಿಂದ ಈಗಾಗಲೇ ಪ್ರಸ್ತಾವನೆ ಬಂದಿದೆ. ಜತೆಗೆ ನೌಕರರ ಸಂಘಟನೆಗಳೂ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿವೆ. ಆದರೆ, ಪ್ರಯಾಣ ದರ ಹೆಚ್ಚಳ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ದರ ಹೆಚ್ಚಳ ಏಕೆ?

- ಬಿಎಂಟಿಸಿಯಲ್ಲಿ 10 ವರ್ಷ, ಇತರೆಡೆ 5 ವರ್ಷ ಹಿಂದೆ ದರ ಹೆಚ್ಚಳ
- ಬಿಎಂಟಿಸಿ ದರ ಹೆಚ್ಚಳ ಮಾಡಿದಾಗ ಡೀಸೆಲ್‌ ದರ 55 ರು.
- ಇತರ ನಿಗಮದಲ್ಲಿ ದರ ಏರಿಸಿದಾಗ ಡೀಸೆಲ್‌ ದರ 75 ರು.
- ಈಗ ಡೀಸೆಲ್‌ ದರ 89 ರು., ಹೀಗಾಗಿ ನಿತ್ಯ ₹4 ಕೋಟಿ ನಷ್ಟ
- ಸಂಕ್ರಾಂತಿ ನಂತರ ಸಿಎಂ ಜತೆ ಸಭೆ, ದರ ಏರಿಕೆ ನಿರ್ಧಾರ?

Latest Videos
Follow Us:
Download App:
  • android
  • ios