Asianet Suvarna News Asianet Suvarna News

ಇಂದು KSRTC, BMTC ನೌಕರರ ಮುಷ್ಕರ: ಬಸ್‌ ಸೇವೆ ಅಬಾಧಿತ

ಇಂದು ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ: ಬಸ್‌ ಸೇವೆ ಅಬಾಧಿತ| ಸಾಹಿತಿ ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಧರಣಿ| ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ 4 ನಿಗಮಗಳ ಹೋರಾಟ| ರಜೆಯಲ್ಲಿರುವ, ಬೇರೆ ಪಾಳಿಯಲ್ಲಿರುವ ನೌಕರರಿಂದ ಮಾತ್ರ ಧರಣಿ

KSRTC BMTC staff demand govt employee status stage protest bus services may partially effect
Author
Bangalore, First Published Feb 20, 2020, 8:06 AM IST

ಬೆಂಗಳೂರು[ಫೆ.20]: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ಫೆ.20ರಂದು ರಾಜಧಾನಿಯ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಆದರೆ, ಇದರಿಂದ ಬಸ್‌ ಸಂಚಾರಕ್ಕೇನೂ ತೊಂದರೆಯಾಗುವುದಿಲ್ಲ ಎಂದು ಸಾರಿಗೆ ನಿಗಮ ಹಾಗೂ ನೌಕರರಿಬ್ಬರೂ ಸ್ಪಷ್ಟಪಡಿಸಿದ್ದಾರೆ.

"

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಈ ಉಪವಾಸ ಸತ್ಯಾಗ್ರಹ ನಡೆಯಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನಿಗಮಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಭಾಗಹಿಸಲಿದ್ದಾರೆ. ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹಾಗೂ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನೌಕರರ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಿದ್ದಾರೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳಿಂದ 1.30 ಲಕ್ಷ ನೌಕರು ಇದ್ದಾರೆ. ಈ ಪೈಕಿ ಕೇವಲ ರಜೆ ಇರುವ, ಪಾಳಿ ಕರ್ತವ್ಯ ಮುಗಿಸುವ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಬಸ್‌ ಕಾರ್ಯಾಚರಣೆಗೆ ತೊಂದರೆಯಾಗದಂತೆ ಈ ಉಪವಾಸ ಸತ್ಯಾಗ್ರಹ ನಡೆಸಲು ನೌಕರರು ನಿರ್ಧರಿಸಿದ್ದಾರೆ.

ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಸಾರ್ವಜನಿಕರ ಹಿತೃದಷ್ಟಿಯಿಂದ ಬಸ್‌ ಸೇವೆ ಮುಂದುವರಿಯಲಿದೆ. ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕೆಂಬುದು ನೌಕರರ ಒಕ್ಕೊರಲ ಬೇಡಿಕೆಯಾಗಿದೆ. ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್‌ ಜಂಟಿ ಕಾರ್ಯದರ್ಶಿ ಆನಂದ್‌ ಹೇಳಿದರು.

ನೌಕರರ ರಜೆ ರದ್ದು

ನೌಕರರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಬಸ್‌ ಸೇವೆಯಲ್ಲಿ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೌಕರರಿಗೆ ತುರ್ತು ರಜೆ ಹೊರತುಪಡಿಸಿ ಸಾಮಾನ್ಯ ರಜೆ ಮಂಜೂರು ಮಾಡದಂತೆ ನಿರ್ದೇಶನ ನೀಡಿದ್ದಾರೆ. ಅಂತೆಯೆ ಮಂಜೂರಾದ ರಜೆಯನ್ನು ರದ್ದುಗೊಳಿಸಲು ಸೂಚಿಸಿದ್ದಾರೆ. ಫೆ.20ರಂದು ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನ ಕಡಿತ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

Follow Us:
Download App:
  • android
  • ios