Asianet Suvarna News Asianet Suvarna News

ರೇಪ್‌ ಕಾಯ್ದೆ ತಿದ್ದುಪಡಿಗೆ ಕೇಂದ್ರಕ್ಕೆ ರಾಜ್ಯದ ಮನವಿ: ಮಾಧುಸ್ವಾಮಿ

*  ಕಾನೂನು ಇನ್ನಷ್ಟು ಕಠಿಣಗೊಳಿಸುವಂತೆ ಮನವಿ: ಮಾಧುಸ್ವಾಮಿ
*  ಮೈಸೂರು ರೇಪ್‌ ಪ್ರಕರಣದಲ್ಲಿ ಪೊಲೀಸರ ಕಾರ್ಯಕ್ಕೆ ಸಮರ್ಥನೆ
*  ರೇಪಿಸ್ಟ್‌ಗಳ ಕೈ, ಕಾಲು ಕಟ್‌ ಮಾಡಲು ಅವಕಾಶ ಇಲ್ಲ 

Karnataka Requests to The Central Government for Amend the Rape Act Says JC Madhuswamy grg
Author
Bengaluru, First Published Sep 25, 2021, 8:06 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.25): ಅತ್ಯಾಚಾರಿಗಳ ಕೈ, ಕಾಲು ಅಥವಾ ಇನ್ನೇನನ್ನೋ ಕಟ್‌ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಆದರೆ ಕಾನೂನು ವ್ಯಾಪ್ತಿಯೊಳಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಹೀಗಾಗಿ ಮತ್ತಷ್ಟು ಕಠಿಣ ಕಾನೂನು ತರಲು ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಕಾನೂನು ಸಚಿವ ಮಾಧುಸ್ವಾಮಿ(JC Madhuswamy) ಸ್ಪಷ್ಟಪಡಿಸಿದ್ದಾರೆ. 

ಅಲ್ಲದೆ, ಮೈಸೂರು(Mysuru) ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಹಾಗೂ ಈ ಪ್ರಕರಣದಲ್ಲಿ ಮೈಸೂರು ಪೊಲೀಸರು ಯಾವುದೇ ಕಾನೂನು ಲೋಪ ಎಸಗಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ಮೈಸೂರು ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರವಾಗಿ ಕಳೆದ ಎರಡು ದಿನಗಳಿಂದ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಮಾಧುಸ್ವಾಮಿ, ಮೈಸೂರಿನಲ್ಲಿ ನಡೆದ ಘಟನೆ ಅಮಾನವೀಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಎಫ್‌ಐಆರ್‌ ದಾಖಲಿಸುವಲ್ಲಿ ನಿಯಮಾವಳಿ ಪಾಲಿಸಬೇಕಾಗಿರುವುದರಿಂದ 15 ಗಂಟೆಯಾಗಿದೆ. ಪೊಲೀಸರು ನಿರ್ಲಕ್ಷ್ಯ ವಹಿಸಿಲ್ಲ ಎಂದರು.

ಮೈಸೂರು ಗ್ಯಾಂಗ್‌ ರೇಪ್‌: ಆರೋಪಿಗಳ ಗುರುತು ಪತ್ತೆ ಹಚ್ಚಿದ ಸಂತ್ರಸ್ತೆ

ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ(Sexual Harrashment) ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಲಾಗುವುದು. ಭಾರತೀಯ ದಂಡ ಸಂಹಿತೆ(ಐಪಿಸಿ), ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಗೆ ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಕಾನೂನು ಆಯೋಗದ ಮೂಲಕ ಈ ನಿಟ್ಟಿನಲ್ಲೂ ಕಾರ್ಯೋನ್ಮುಖವಾಗುತ್ತೇವೆ ಎಂದು ಭರವಸೆ ನೀಡಿದರು.

ಮೈಸೂರು ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕಿತ್ತು ಎಂಬ ಆರೋಪ ಕೇಳಿಬರುತ್ತಿದೆ. ಅವರಾಗಿಯೇ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಠಾಣಾ ವ್ಯಾಪ್ತಿ ಪರಿಗಣಿಸಿ ಎಫ್‌ಐಆರ್‌ ಹಾಕಿದ್ದರಿಂದ 15 ಗಂಟೆಯಾಗಿದೆ. ತಲೆಮರೆಸಿಕೊಂಡಿದ್ದ 6 ಆರೋಪಿಗಳು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಮನವೊಲಿಸಿ ನ್ಯಾಯಾಧೀಶರ ಎದುರು ಹೇಳಿಕೆ ಕೊಡಿಸಲಾಗಿದೆ ಎಂದು ವಿವರಿಸಿದರು.

ಶೀಘ್ರ ದೋಷಾರೋಪಪಟ್ಟಿ ಸಲ್ಲಿಸಿ ವಿಚಾರಣೆ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆಯಿಲ್ಲ. ರಾಜ್ಯದ ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಧಾರವಾಡ: ಭಿಕ್ಷಾಟನೆ ಮಾಡಿಕೊಂಡಿದ್ದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ತುಮಕೂರು ಪ್ರಕರಣ ಸವಾಲು:

ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ನಾಗರಿಕ ಸಮಾಜ ತಲೆ ತಗ್ಗಿಸವಂತಹ ಹೇಯ ಕೃತ್ಯವಾಗಿವೆ. ತುಮಕೂರು ಜಿಲ್ಲೆಯಲ್ಲಿ ದನ ಕಾಯಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಯ ಬಂಧನಕ್ಕೆ ಸಾಕಷ್ಟುಕ್ರಮ ಕೈಗೊಂಡಿದ್ದರೂ ಯಾವುದೇ ಸಾಕ್ಷ್ಯ ಸಿಗುತ್ತಿಲ್ಲ. ಆದರೂ ಇದನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದ್ದು, ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ನ(Congress) ಎಸ್‌.ಆರ್‌.ಪಾಟೀಲ್‌, ಬಿ.ಕೆ.ಹರಿಪ್ರಸಾದ್‌, ನಾರಾಯಣಸ್ವಾಮಿ, ವೀಣಾ ಅಚ್ಚಯ್ಯ ಮತ್ತಿತರರು ಮಾತನಾಡಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಜೆ ಹೊತ್ತು ಅಲ್ಲಿಗೆ ಏಕೆ ಹೋಗಬೇಕಿತ್ತು ಎಂದು ಸಂತ್ರಸ್ತೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ತಕ್ಷಣ ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸದೇ ವಿಳಂಬ ಮಾಡಿದ್ದಾರೆ. ಎಫ್‌ಐಆರ್‌ ದಾಖಲಿಸುವಲ್ಲಿ ತಡವಾಗಿದೆ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.
 

Follow Us:
Download App:
  • android
  • ios