Asianet Suvarna News Asianet Suvarna News

ರೈತರ ಮಕ್ಕಳ ಶಿಕ್ಷಣಕ್ಕೆ ಸ್ಕಾಲರ್‌ಶಿಪ್: ಈ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ!

* ಕೃಷಿಕರ ಮಕ್ಕಳಿಗೆ ಸ್ಕಾಲರ್‌ಶಿಪ್‌ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ-

* ರೈತರ ಮಕ್ಕಳ ಶಿಷ್ಯ ವೇತನ ಯೋಜನೆ ಲೋಕಾರ್ಪಣೆ

* ‘ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’ ಕಾರ‍್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ

* ಎಸ್‌ಎಸ್‌ಎಲ್‌ಸಿ ನಂತರದ ಎಲ್ಲ ಕೋರ್ಸುಗಳಿಗೂ ಸಿಗಲಿದೆ ವಿದ್ಯಾರ್ಥಿ ವೇತನ

Karnataka Launches Scholarship For farmers Kids pod
Author
Bangalore, First Published Sep 6, 2021, 7:33 AM IST

ಬೆಂಗಳೂರು(ಆ.06): ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ನೆರವಾಗಲು ಇಡೀ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿ ವೇತನ ನೀಡುವ ರಾಜ್ಯ ಸರ್ಕಾರದ ‘ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು.

 

ಮಣ್ಣಿನ ಮಕ್ಕಳು ಆರ್ಥಿಕ ಸಂಕಷ್ಟದ ಕಾರಣ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಕೋರ್ಸ್‌ವರೆಗೆ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ಈ ಯೋಜನೆಯಡಿ ವಿದ್ಯಾರ್ಥಿವೇತನ ನೀಡುವ ಸಂಕಲ್ಪವನ್ನು ರಾಜ್ಯ ಸರ್ಕಾರ ಮಾಡಿದ್ದು, ಸುಮಾರು 17 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಲಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಂಕೇತಿಕವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಚಾಲನೆ ನೀಡಿದರು. ಇದು ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲು ಪ್ರಕಟಿಸಿದ ಯೋಜನೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷಿಗೆ ಪೂರಕವಾದ ವಿಭಿನ್ನ ಹವಾಗುಣದ 10 ನೈಸರ್ಗಿಕ ವಲಯಗಳಿರುವುದರಿಂದ ಹಲವು ರೀತಿಯ ಬೆಳೆಗಳನ್ನು ವರ್ಷದ ಬೇರೆ ಬೇರೆ ತಿಂಗಳಲ್ಲಿ ಬೆಳೆಯಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದರು.

ರೈತರ ಸಾಲದ ಸಮಸ್ಯೆ ಬಗೆಹರಿಸಲು ಚಿಂತನೆ:

ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹ, ಸಾಗಾಣಿಕೆ, ಮಾರುಕಟ್ಟೆಮತ್ತಿತರ ಸೌಲಭ್ಯಗಳ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಸಮಗ್ರ ಕೃಷಿ ನೀತಿಯಡಿ ಕೊಯ್ಲಿನ ನಂತರದ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಮಕ್ಕಳ ವಿವಾಹ ವೆಚ್ಚ, ಅನಾರೋಗ್ಯ ಮತ್ತಿತರ ಕಾರಣದಿಂದ ರೈತರು ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಚಿವರಾದ ಮುನಿರತ್ನ, ಪ್ರಭು ಚವ್ಹಾಣ್‌, ಬಿ.ಸಿ.ನಾಗೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜ್‌ಕುಮಾರ್‌ ಖತ್ರಿ, ಆಯುಕ್ತ ಬ್ರಿಜೇಶ್‌ ಕುಮಾರ್‌, ನಿರ್ದೇಶಕ ಶ್ರೀನಿವಾಸ್‌ ಮತ್ತಿತರರು ಹಾಜರಿದ್ದರು.

ಕೇಂದ್ರ ಸಚಿವ ತೋಮರ್‌ ಮೆಚ್ಚುಗೆ

ಪ್ರಗತಿ ಪರವಾಗಿರುವ ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ವಲಯದಲ್ಲಿ ಕೈಗೊಂಡಿರುವ ಹಲವು ಯೋಜನೆಗಳು ಇತರರಿಗೆ ಮಾದರಿಯಾಗಿವೆ. ವಿಶೇಷವಾಗಿ ಡಿಜಿಟಲ… ಮಾದರಿಗಳನ್ನು ಸೆ.6 ಮತ್ತು 7ರಂದು ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂತುಷ್ಟರೈತನಿಂದ ಸಮೃದ್ಧ ಭಾರತ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರವೂ ಶ್ರಮಿಸುತ್ತಿದೆ. ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಿದ್ದು, ಇದರಲ್ಲಿ ಸುಮಾರು ಶೇ.10ರಷ್ಟುಪಾಲು ಕರ್ನಾಟಕದ್ದಾಗಿದೆ. ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಇಲಾಖೆಯಿಂದ ಜಾರಿಗೆ ತರಲಾಗಿದೆ.

-ಬಿ.ಸಿ.ಪಾಟೀಲ್‌, ಕೃಷಿ ಸಚಿವ

ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬಂದು ರೈತರ ಜಮೀನುಗಳಲ್ಲಿ ಹೊಸ ತಳಿಗಳನ್ನು ಬೆಳೆದು ಜನರ ವಿಶ್ವಾಸ ಗಳಿಸಬೇಕು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ರೈತ ಮಾತ್ರ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಸರ್ಕಾರಗಳು ರೈತನ ಶ್ರಮ, ಬೆವರಿಗೆ ಸರಿಯಾದ ಬೆಲೆ ಕೊಡುವ ಕಾಲ ಬಂದಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2024ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ರಾಜಕಾರಣಿಗಳು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟರೆ, ಮುತ್ಸದ್ದಿ ಮುಂದಿನ ಜನಾಂಗದ ಶ್ರೇಯೋಭಿವೃದ್ಧಿ ಬಗ್ಗೆ ಕಣ್ಣಿಟ್ಟಿರುತ್ತಾರೆ. ಮೋದಿ ಅವರು ಈ ಸಾಲಿನಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ, ಬಿಎಸ್‌ವೈ ಮಾರ್ಗದರ್ಶನ:

ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಮೋದಿ ಅವರು ರೈತರಿಗೆ ವರ್ಷಕ್ಕೆ 6 ಸಾವಿರ ರು. ನೆರವು ನೀಡಿದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಹೆಚ್ಚುವರಿಯಾಗಿ 4 ಸಾವಿರ ರು. ನೆರವು ಘೋಷಿಸಿ ಅನುಷ್ಠಾನಗೊಳಿಸಿದರು. ಪ್ರಧಾನಿ ಅವರ ನಾಯಕತ್ವ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ತಾವೂ ಸಹ ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸುವುದಾಗಿ ಬೊಮ್ಮಾಯಿ ತಿಳಿಸಿದರು.

ಏನಿದು ಯೋಜನೆ?

ಆರ್ಥಿಕ ಸಮಸ್ಯೆಯ ಕಾರಣಕ್ಕೆ ರೈತರ ಮಕ್ಕಳು ವ್ಯಾಸಂಗ ಮೊಟಕುಗೊಳಿಸದಂತೆ ನೋಡಿಕೊಳ್ಳುವ ಯೋಜನೆ ಇದು. ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಸ್ನಾತಕೋತ್ತರ ಕೋರ್ಸ್‌ವರೆಗೆ ರೈತರ ಮಕ್ಕಳ ಓದಿಗೆ ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತದೆ. ಇದರಿಂದ 17 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಲಿದೆ ಎಂಬ ಅಂದಾಜಿದೆ. ವಿವಿಧ ಕೋರ್ಸಿಗೆ ಅನುಗುಣವಾಗಿ 2500 ರು.ನಿಂದ 11 ಸಾವಿರ ರು.ವರೆಗೂ ವಿದ್ಯಾರ್ಥಿ ವೇತನ ದೊರೆಯಲಿದೆ.

Follow Us:
Download App:
  • android
  • ios