ಕೃಷಿ ಬೆಲೆ ಆಯೋಗಕ್ಕೆ 4 ತಿಂಗಳಿಂದ ಅಧ್ಯಕ್ಷರೇ ಇಲ್ಲ!

  • ಕೃಷಿ ಬೆಲೆ ಆಯೋಗಕ್ಕೆ 4 ತಿಂಗಳಿಂದ ಅಧ್ಯಕ್ಷರೇ ಇಲ್ಲ
  • ಬೆಳೆ ಉತ್ಪಾದನಾ ವೆಚ್ಚದ ವರದಿ ಸಲ್ಲಿಕೆಗೂ ಗ್ರಹಣ
  • ಕೃಷಿಕರಿಗೆ ಸಂಬಂಧಿಸಿದ ಮಹತ್ವದ ಕಾರ‍್ಯಗಳಿಗೆ ತೀವ್ರ ಹಿನ್ನಡೆ
Karnataka gricultural Price Commission has no chairman for 4 months rav

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.8) : ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ರಾಜ್ಯ ಕೃಷಿ ಬೆಲೆ ಆಯೋಗ ಅಂಬಿಗನಿಲ್ಲದ ದೋಣಿಯಂತಾಗಿದೆ. ನಾಲ್ಕು ತಿಂಗಳಾಗುತ್ತಾ ಬಂದಿದ್ದರೂ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ಆಯೋಗದ ಕೆಲಸ ಕಾರ್ಯಗಳಿಗೆ ಭಾರೀ ಹಿನ್ನಡೆ ಉಂಟಾಗಿದೆ.

Agriculture in Karnataka: ಸಾಂಪ್ರದಾಯಿಕ ಬೆಳೆ ಪದ್ಧತಿ ವಿರುದ್ಧ ಆಯೋಗ ವರದಿ

ರೈತರು ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗಬೇಕು ಎಂಬ ಮೂಲ ಉದ್ದೇಶದಿಂದ ರಾಜ್ಯ ಕೃಷಿ ಬೆಲೆ ಆಯೋಗವನ್ನು ಸ್ಥಾಪಿಸಲಾಗಿದೆ. ದುರಂತವೆಂದರೆ ಆಯೋಗದ ಅಧ್ಯಕ್ಷರಾಗಿದ್ದ ಹನುಮನಗೌಡ ಬೆಳಗುರ್ಕಿ ಅವರ ನೇಮಕವನ್ನು ಜು.12ರಂದು ಹಿಂಪಡೆದಿದ್ದು ಇಲ್ಲಿಯವರೆಗೂ ಹೊಸ ಅಧ್ಯಕ್ಷರ ನೇಮಕ ಮಾಡಿಲ್ಲ. ಇದರಿಂದಾಗಿ ಕೃಷಿಕರಿಗೆ ಸಂಬಂಧಿಸಿದ ಮಹತ್ತರ ಕಾರ್ಯಗಳಿಗೆ ವ್ಯಾಪಕ ಹಿನ್ನಡೆಯಾಗುತ್ತಿದೆ ಎಂಬ ಆರೋಪ ರೈತರು, ರೈತಪರ ಸಂಘಟನೆಗಳಿಂದ ಕೇಳಿಬಂದಿದೆ.

ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯಗಳ ವಿತರಣೆ, ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳ ಖರೀದಿ, ಬೆಲೆ ಮುನ್ನಂದಾಜು, ಮಾರುಕಟ್ಟೆಯ ಸ್ಥಿತಿಗತಿ, ಎಪಿಎಂಸಿಗಳ ವಹಿವಾಟಿನಿಂದ ಅನ್ನದಾತರಿಗೆ ಆಗುವ ಪ್ರಯೋಜನ, ಅತಿವೃಷ್ಟಿ-ಅನಾವೃಷ್ಟಿಸಂಭವಿಸಿದಾಗ ಸರ್ಕಾರ ಕೈಗೊಳ್ಳಬೇಕಾದ ಕ್ರಮ, ಬೆಳೆ ಹಾನಿ ಪರಿಹಾರ ಹೆಚ್ಚಳ, ರೈತರ ಆತ್ಮಹತ್ಯೆ ತಡೆಗೆ ಪರಿಹಾರೋಪಾಯಗಳು ಸೇರಿದಂತೆ ಆಯೋಗದ ಕಾರ್ಯವ್ಯಾಪ್ತಿ ವಿಶಾಲವಾಗಿದೆ.

ಉತ್ಪಾದನಾ ವೆಚ್ಚ ವರದಿಯೇ ಸಲ್ಲಿಕೆಯಾಗಿಲ್ಲ

ರೈತರು ಬೆಳೆಯುವ ಬೆಳೆಗಳಿಗೆ ಹೆಕ್ಟೇರ್‌ವೊಂದಕ್ಕೆ ಎಷ್ಟುಖರ್ಚಾಗುತ್ತದೆ ಎಂಬ ಮಾಹಿತಿಯನ್ನು ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕರ ಕೂಲಿ, ಎತ್ತು ಅಥವಾ ಯಂತ್ರೋಪಕರಣ ಬಳಕೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಆಯೋಗವು ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ಉತ್ಪಾದನಾ ವೆಚ್ಚದ ವರದಿ ಮೂಲಕ ನೀಡುತ್ತದೆ. 2021-22 ರ ಉತ್ಪಾದನಾ ವೆಚ್ಚದ ವರದಿ ಸಿದ್ಧವಾಗಿದೆ. ಆದರೆ ಅಧ್ಯಕ್ಷರೇ ಇಲ್ಲದಿರುವುದರಿಂದ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.

ಮತ್ತೊಂದೆಡೆ, 2022-23 ನೇ ಸಾಲಿನ ವರದಿ ತಯಾರಿಸಲು ಸೆಪ್ಟೆಂಬರ್‌ನಲ್ಲೇ ಸರ್ವೇ ಕಾರ್ಯ ಆರಂಭವಾಗಬೇಕಿತ್ತು. ಆದರೆ ನವೆಂಬರ್‌ ಬಂದರೂ ಇನ್ನೂ ಸಮೀಕ್ಷೆಯೇ ಪ್ರಾರಂಭವಾಗಿಲ್ಲ. ಸಮೀಕ್ಷೆಗಾಗಿ ರಾಜ್ಯಾದ್ಯಂತ 2700 ರೈತರನ್ನು ಸಂಪರ್ಕಿಸಿ ವೈಜ್ಞಾನಿಕವಾಗಿ ವರದಿ ಸಲ್ಲಿಸುವ ಕಾರ್ಯವನ್ನು ಆಯೋಗ ಮಾಡುತ್ತಾ ಬಂದಿದೆ. ಈ ಬಾರಿ ಅದನ್ನೂ ಕೈಗೊಳ್ಳಲು ಆಗಿಲ್ಲ.

Agricultural Price: ಸಿಎಂಗೆ ವರದಿ ನೀಡಿದ ಕೃಷಿ ಬೆಲೆ ಆಯೋಗ: ರೈತ ಪರ ಅಂಶಗಳು ಉಲ್ಲೇಖ

ಸಂಪುಟ ಉಪ ಸಮಿತಿಯಲ್ಲೂ ಪ್ರತಿನಿಧಿಯಿಲ್ಲ:

ಕೃಷಿ ಬೆಲೆ ಆಯೋಗದ ಅಧ್ಯಕ್ಷರು ‘ಬೆಲೆ ಸ್ಥಿರೀಕರಣ’ ಸಚಿವ ಸಂಪುಟ ಉಪ ಸಮಿತಿಯಲ್ಲಿ ಸದಸ್ಯರಾಗಿದ್ದು, ಹುದ್ದೆ ಖಾಲಿ ಇರುವುದರಿಂದ ಉಪ ಸಮಿತಿಗೆ ರೈತರ ಪ್ರತಿನಿಧಿಯಾಗಿ ಭಾಗವಹಿಸುವವರು ಇಲ್ಲದಂತಾಗಿದೆ. ರೈತರ ಸಮಸ್ಯೆಗಳನ್ನು ವಿವರವಾಗಿ ಮಂಡಿಸಿ ಪರಿಹಾರ ಕೈಗೊಳ್ಳುವ ಕಾರ್ಯವೂ ಕುಂಠಿತವಾಗಿದೆ. ಟೊಮೆಟೋ, ಈರುಳ್ಳಿ, ಹಸಿ ಮೆಣಸಿನಕಾಯಿ, ಆಲೂಗೆಡ್ಡೆಗೆ ಬೆಂಬಲ ಬೆಲೆ ಯೋಜನೆಯಿಲ್ಲ. ಇವುಗಳ ಬೆಲೆ ಕುಸಿದಾಗ ಪರಿಹಾರೋಪಾಯಗಳ ಬಗ್ಗೆ ಸಲಹೆ ನೀಡಲೂ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios