ಬಳ್ಳಾರಿ ರಕ್ಷಿತಾರಣ್ಯದಲ್ಲಿ ಮತ್ತೊಂದು ಗಣಿಗಾರಿಕೆಗೆ ಸರ್ಕಾರದ ಒಪ್ಪಿಗೆ!
ಸ್ವಾಮಿಮಲೆ ರಕ್ಷಿತಾರಣ್ಯದಲ್ಲಿ ಗಣಿಗಾರಿಕೆಗೆ ಓಕೆ!| ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ರಾಜ್ಯ ಸರ್ಕಾರದ ನಿರ್ಧಾರ| ಬಳ್ಳಾರಿ ಜಿಲ್ಲೆಯ ಮಲೆನಾಡು ಎಂಬ ಖ್ಯಾತಿಯಿರುವ ಬೆಟ್ಟದಲ್ಲಿ ಗಣಿಗಾರಿಕೆ| ಸಚಿವ ಸಂಪುಟದ ಒಪ್ಪಿಗೆ; ಇತರ ಇಲಾಖೆಗಳಿಂದ ಒಪ್ಪಿಗೆ ಸಿಕ್ಕರೆ ಕೆಲಸ ಶುರು| 470 ಹೆಕ್ಟೇರ್ ಪ್ರದೇಶದಲ್ಲಿ ಜೀವವೈವಿಧ್ಯ ನಾಶಕ್ಕೆ ಮುನ್ನುಡಿ
ಬೆಂಗಳೂರು[ಜ.10]: ಅತಿಯಾದ ಗಣಿಗಾರಿಕೆಗೆ ನಲುಗಿರುವ ಬಳ್ಳಾರಿ ಜಿಲ್ಲೆಯ ಸಂತ್ರಸ್ತರ ಪುನರ್ವಸತಿ ಹಾಗೂ ಪುನರುತ್ಥಾನ ಇಂದಿಗೂ ಸಾಧ್ಯವಾಗಿಲ್ಲ. ಈ ನಡುವೆಯೇ ರಾಜ್ಯ ಸರ್ಕಾರ ಸಂಡೂರು ಅರಣ್ಯ ಪ್ರದೇಶದ ಸ್ವಾಮಿಮಲೆ ರಕ್ಷಿತಾರಣ್ಯದಲ್ಲಿ ಮತ್ತೊಂದು ಗಣಿಗಾರಿಕೆ ಆರಂಭಕ್ಕೆ ಒಪ್ಪಿಗೆ ನೀಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಬಳ್ಳಾರಿ ಜಿಲ್ಲೆಯ ಮಲೆನಾಡು ಖ್ಯಾತಿ ಪಡೆದಿರುವ ಸಂಡೂರು ಅರಣ್ಯ ಪ್ರದೇಶ ಈ ಸ್ವಾಮಿಮಲೆ ರಕ್ಷಿತಾರಣ್ಯದ ಸುಮಾರು 470.40 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕುದುರೆಮುಖ ಐರನ್ ಓರ್ ಕಾರ್ಪೋರೇಷನ್ ಲಿಮಿಟೆಡ್ (ಕೆಐಒಸಿಎಲ್) ಕಂಪನಿಗೆ ಒಪ್ಪಿಗೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಹೀಗಾಗಿ ಕೆಐಒಸಿಎಲ್ ಸಂಸ್ಥೆಯು ಅರಣ್ಯ, ಪರಿಸರ ಮಾಲಿನ್ಯ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಇತರ ಇಲಾಖೆಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಿದೆ.
ಈ ಎಲ್ಲಾ ಅನುಮತಿಗಳು ದೊರೆತರೆ ಸ್ವಾಮಿಮಲೆ ರಕ್ಷಿತಾರಣ್ಯದ ಹರಿಶಂಕರ, ಭೀಮತೀರ್ಥ, ಭೈರವ ತೀರ್ಥ, ರಾಮಸ್ವಾಮಿ, ನಾರಿಹಳ್ಳ ಸೇರಿದಂತೆ ಹತ್ತು ಹಲವು ಜಲಮೂಲಗಳು ಕಣ್ಮರೆಯಾಗಲಿವೆ. 470 ಹೆಕ್ಟೇರ್ ಪ್ರದೇಶದಲ್ಲಿ ಇರುವ ಗಂಧ, ಹೊನ್ನೆ, ಬೀಟೆ, ಬೇವು, ಆಲದ ಮರ, ತೇಗ, ಮತ್ತಿ ಸೇರಿದಂತೆ ಸುಮಾರು 50ರಿಂದ 60 ಸಾವಿರಕ್ಕೂ ಹೆಚ್ಚು ಮರಗಳು, ನೂರಾರು ಜಾತಿಯ ಔಷಧಿ ಸಸ್ಯಗಳು, ಚಿರತೆ, ಕಾಡುಹಂದಿ, ನರಿ, ನವಿಲು ಸೇರಿದಂತೆ ಹಲವು ಪ್ರಾಣಿ ಮತ್ತು ಪಕ್ಷಿ ಸಂಕುಲಗಳಿಗೆ ತೊಂದರೆಯಾಗಲಿದೆ.
ಮೂರ್ನಾಲ್ಕು ತಿಂಗಳಷ್ಟೇ ಬಾಕಿ:
ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 124 ಗಣಿ ಗುತ್ತಿಗೆಗಳಿವೆ. ಅವುಗಳಲ್ಲಿ 30ಕ್ಕೂ ಹೆಚ್ಚು ಗಣಿ ಕಂಪನಿಗಳು ಗಣಿಗಾರಿಕೆ ನಡೆಸುತ್ತಿವೆ. ಸಂಡೂರು ತಾಲೂಕಿನಲ್ಲಿ 12 ಗಣಿ ಕಂಪನಿಗಳು ಕಾರ್ಯನಿರತವಾಗಿವೆ. ಈ ಸಂದರ್ಭದಲ್ಲೇ ಸಂಡೂರಿನ ದಟ್ಟಅರಣ್ಯ ಪ್ರದೇಶವಾದ ಸ್ವಾಮಿಮಲೆ ರಕ್ಷಿತಾ ಅರಣ್ಯ ಪ್ರದೇಶ ವ್ಯಾಪ್ತಿಯ ದೇವದರಿ ಅರಣ್ಯ ಬ್ಲಾಕ್‌ನಲ್ಲಿ ಸುಮಾರು 470.40 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಕೆ ಐಓಸಿಎಲ್ ಕಂಪನಿಗೆ ಪರವಾನಗಿ ನೀಡಿದೆ. ಅರಣ್ಯ, ಪರಿಸರ ಮಾಲಿನ್ಯ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಇತರ ಇಲಾಖೆಗಳಿಂದ ಈ ಕಂಪನಿ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಗಣಿಗಾರಿಕೆ ಆರಂಭಗೊಳ್ಳುವ ಭೀತಿ ಎದುರಾಗಿದೆ.
ಜೀವವೈವಿಧ್ಯ ಸೂಕ್ಷ್ಮ ಪ್ರದೇಶ:
ಸಂಡೂರು ಸುತ್ತಮುತ್ತ ಸುಮಾರು 35 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿತ್ತು. ಈಗಾಗಲೇ 7-8 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಇದೀಗ ಪುನಃ 470.40 ಹೆಕ್ಟೇರ್ ಪ್ರದೇಶ ಸೇರಿದಂತೆ 1172 ಹೆಕ್ಟೇರ್ ಜಾಗದಲ್ಲಿ ಹೊಸದಾಗಿ ಗಣಿಗಾರಿಕೆಗೆ ಪರವಾನಗಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಕೆಐಒಸಿಎಲ್ ಕಂಪನಿ ಕಣ್ಣಿಟ್ಟಿರುವ ಈ ಅರಣ್ಯ ಪ್ರದೇಶ ಜೈವಿಕ ಸೂಕ್ಷ್ಮವಲಯವಾಗಿದ್ದು, ಇಡೀ ಉತ್ತರ ಕರ್ನಾಟಕಕ್ಕೆ ಆಮ್ಲಜನಕ ಪೂರೈಸುವ ಇಕೋ ಸೆನ್ಸಿಟಿವ್ ವಲಯವಾಗಿದೆ.
ಇಲ್ಲಿ ಸುಮಾರು 6 ಮತ್ತು 7ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಪಾರ್ವತಿ-ಕುಮಾರಸ್ವಾಮಿ ದೇವಸ್ಥಾನ ಇದ್ದು, ವಿಭೂತಿ ಕಣಿವೆಯ ಪ್ರದೇಶದಿಂದ ಕೆಲವೇ ಮೀಟರುಗಳ ಅಂತರದಲ್ಲಿ ಕೆಐಒಸಿಎಲ್ ಕಂಪನಿಗೆ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಈ ಭಾಗದ ಅರಣ್ಯ ಪ್ರದೇಶದಲ್ಲಿ ಕೇಂದ್ರ ಸರ್ಕಾರಿ ಸೌಮ್ಯದ ಎನ್‌ಎಂಡಿಸಿ ಮತ್ತು ರಾಜ್ಯ ಸರ್ಕಾರದ ಅಧೀನಕ್ಕೊಳಪಟ್ಟಕರ್ನಾಟಕ ಮೈನಿಂಗ್ ಕಾರ್ಪೋರೇಷನ್ ಲಿಮಿಟೆಡ್ (ಹಳೆಯ ಹೆಸರು ಎಂಎಂಎಲ್) ಕಂಪನಿಗಳು ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸುತ್ತಿವೆ. ಇದರಿಂದ ಈ ಐತಿಹಾಸಿಕ ದೇವಾಲಯಕ್ಕೂ ಸಾಕಷ್ಟುಹಾನಿಯಾಗುತ್ತಿದೆ. ಇದೀಗ ಕುದುರೆಮುಖ ಗಣಿ ಕಂಪನಿ ಹೊಸ ತಲೆನೋವಿಗೆ ಕಾರಣವಾಗಿದೆ.
ಸಂಡೂರಿನ ರಕ್ಷಿತಾರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು 2015ರಿಂದಲೂ ಹೋರಾಟ ನಡೆಸುತ್ತಿದ್ದೇವೆ. ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಈ ಮಾತು ಮೀರಿ 2017ರಲ್ಲಿ 485 ಹೆಕ್ಟೇರ್ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಸೂಕ್ಷ್ಮ ಜೀವಸಂಕುಲ, ಜಲಮೂಲಕ್ಕೆ ಧಕ್ಕೆಯಾಗಲಿರುವ ಈ ಗಣಿಯ ಪರವಾನಗಿ ರದ್ದುಮಾಡದಿದ್ದರೆ ಹೋರಾಟ ಅನಿವಾರ್ಯ. ಜತೆಗೆ ಕಾನೂನು ಹೋರಾಟಕ್ಕೂ ನಾವು ಸಿದ್ಧವಿದ್ದೇವೆ.
- ಟಿ.ಎಂ.ಶಿವಕುಮಾರ್, ಉಪಾಧ್ಯಕ್ಷ, ಜನಸಂಗ್ರಾಮ ಪರಿಷತ್
ವರದಿ: ಸಂಪತ್ ತರೀಕೆರೆ