ಬೆಂಗಳೂರು[ಡಿ.08]: ಹೈದರಾಬಾದ್‌ ಹಾಗೂ ಉತ್ತರಪ್ರದೇಶದ ಉನ್ನಾವ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಗಳಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರವು, ರಾಜ್ಯದ ಮಹಿಳೆಯರ ರಕ್ಷಣೆಗೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ತಡೆಗೆ 31 ಹೆಚ್ಚುವರಿ ನ್ಯಾಯಾಲಯ, ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕುರಿತು ತರಬೇತಿ, ಬೆಂಗಳೂರು ವ್ಯಾಪ್ತಿಗಾಗಿ ಹೊರತಂದಿರುವ ‘ಸುರಕ್ಷಾ’ ಆ್ಯಪ್‌ ರಾಜ್ಯಾದ್ಯಂತ ವಿಸ್ತರಣೆ, ಪೊಲೀಸ್‌ ವಾಹನಗಳ ಸಂಖ್ಯೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ವಿಕಾಸಸೌಧದಲ್ಲಿ ಶನಿವಾರ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಕಾನೂನು ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ 17 ಕೋರ್ಟ್‌ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ 14 ತ್ವರಿತ ನ್ಯಾಯಾಲಯಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಜಿಲ್ಲೆಗೊಂದು ಪೋಕ್ಸೋ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಇವುಗಳ ಜತೆಗೆ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಇನ್ನೂ 17 ಪೋಕ್ಸೋ ತೆರೆಯಲಾಗುತ್ತದೆ. ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ 14 ತ್ವರಿತ ನ್ಯಾಯಾಲಯಗಳನ್ನು ಹೆಚ್ಚುವರಿಯಾಗಿ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ಸ್ವಯಂರಕ್ಷಣೆ ತರಬೇತಿ:

ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಸಾಂದರ್ಭಿಕ ರಕ್ಷಣೆ ಪಡೆದುಕೊಳ್ಳುವ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 22 ತಾತ್ಕಾಲಿಕ ತರಬೇತಿ ಶಾಲೆ ಮತ್ತು 12 ನಿಯಮಿತ ತರಬೇತಿ ಶಾಲೆಗಳಿವೆ. ಇಲ್ಲಿನ ತರಬೇತುದಾರರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ಕುರಿತು ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಈ ಕ್ರಮವನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಬೇಕಾದ ಮೂಲ ಸೌಕರ್ಯ ಮತ್ತು ಅನುದಾನವನ್ನು ಸರ್ಕಾರ ನೀಡಲಿದೆ. ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜತೆಗೆ ಸ್ವಯಂ ರಕ್ಷಣೆಯ ಬಗ್ಗೆ ತರಬೇತಿ ಅಗತ್ಯತೆ ಇದೆ ಎಂಬುದನ್ನು ಅರಿತು ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ತರಬೇತಿ ಪಡೆದ ಮಹಿಳೆಯರು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಭಾರತಕ್ಕೆ ಹೋದರೆ ಎಚ್ಚರವಾಗಿರಿ: ಪ್ರಜೆಗಳಿಗೆ ಇಂಗ್ಲೆಂಡ್, ಅಮೆರಿಕ ಪ್ರವಾಸ ಸಲಹೆ!.

ಪೊಲೀಸರು- ನಾಗರಿಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿದ್ದು, ಅದರಲ್ಲಿ 30 ಲಕ್ಷ ಮಂದಿ ಸ್ವಯಂಸೇವಕ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಆ ಗ್ರೂಪ್‌ಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ನೋಂದಣಿಯಾಗಿರುವವರನ್ನು ಯಾವ ರೀತಿಯಲ್ಲಿ ಪ್ರೇರೇಪಿಸಬೇಕು ಮತ್ತು ಕ್ರಿಯಾಶೀಲರನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅದಷ್ಟುಬೇಗ ಇದನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಸಂಪರ್ಕದಲ್ಲಿರುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಸುರಕ್ಷಾ’ ರಾಜ್ಯಾದ್ಯಂತ ವಿಸ್ತರಣೆ:

ಮಹಿಳೆಯರ ರಕ್ಷಣೆ ಸಂಬಂಧ ಬೆಂಗಳೂರು ಪೊಲೀಸರು ಸುರಕ್ಷಾ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವುದರ ಜತೆ ಮತ್ತಷ್ಟುಮೇಲ್ದರ್ಜೆಗೇರಿಸಲಾಗುವುದು. ಪ್ರಸ್ತುತ 9 ನಿಮಿಷಕ್ಕೆ ಪೊಲೀಸರು ದೂರು ನೀಡಿದ ಮಹಿಳೆ ಇರುವ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿ 7 ಅಥವಾ 5 ನಿಮಿಷದಲ್ಲಿ ಸ್ಥಳಕ್ಕೆ ಭೇಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಅಗತ್ಯ ಇರುವ ವಾಹನಗಳ ಸಂಖ್ಯೆಯನ್ನು ಸಹ ಹೆಚ್ಚಳ ಮಾಡಲಾಗುವುದು. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಎಲ್ಲಾ ಮಹಿಳೆಯರ ರಕ್ಷಣೆಗೆ ಹೈಟೆಕ್‌ ವಾಹನಗಳ ಬಳಕೆ ಮಾಡಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಕಳುಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಅಭಿಯೋಜಕರು ಇಲ್ಲ ಎಂಬ ಕಾರಣಕ್ಕೆ ಪ್ರಕರಣಗಳ ತನಿಖೆ ಮಂದಗತಿಯಲ್ಲಿ ಸಾಗಬಾರದು. ಅಭಿಯೋಜಕರ ನೇಮಕ ಕುರಿತು ಕಾನೂನು ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟವರ ಜತೆ ಸಮಾಲೋಚನೆ ನಡೆಸಲಾಗುವುದು. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದಾ? ಎಂಬುದರ ಬಗ್ಗೆ ಗಮನಹರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.