ಮಂಗಳೂರು(ಜೂ..04):ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಪಟ್ಟು ಕಂಟೈನ್ಮೆಂಟ್‌ ಝೋನ್‌ನ ಡೆಫಿನಿಷನ್‌(ವ್ಯಾಖ್ಯಾನ)ಅನ್ನು ಬದಲಿಸಲಾಗಿದ್ದು, ಇನ್ನು ಮುಂದೆ ಸೋಂಕಿತನ ಮನೆಯಿರುವ ಬೀದಿಯನ್ನು ಮಾತ್ರ ಕಂಟೈನ್ಮೆಂಟ್‌ ಮಾಡಿ, ಸೋಂಕಿತನ ಮನೆಯನ್ನಷ್ಟೇ ಸೀಲ್‌ಡೌನ್‌ ಮಾಡಲಾಗುವುದು. ಜೊತೆಗೆ ಸೀಲ್‌ಡೌನ್‌ ಆಗಿರುವ ಮನೆಗೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಒದಗಿಸಲಿದ್ದು, ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳವಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ತಿಳಿಸಿದ್ದಾರೆ.

ಉಡುಪಿ ಮತ್ತು ಮಂಗಳೂರು ನಗರಗಳಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಸೋಂಕಿತರ ನಿವಾಸದ ಒಂದು ಕಿ.ಮೀ. ಸುತ್ತಳತೆಯನ್ನು ಕಂಟೈನ್ಮೆಂಟ್‌ ಮಾಡಿದ್ದೆವು. ಈಗ ಸೋಂಕಿತನ ಮನೆಯ ಬೀದಿಯನ್ನು ಮಾತ್ರ ಕಂಟೈನ್ಮೆಂಟ್‌ ಮಾಡುತ್ತಿದ್ದೇವೆ. ಮುಂದೆ ಸೋಂಕಿತನ ಮನೆಯನ್ನು ಮಾತ್ರ ಸೀಲ್‌ಡೌನ್‌ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದರು.

ಕ್ವಾರಂಟೈನ್‌ ಅವಧಿಯೂ ಮೊಟಕು: ಪ್ರಸ್ತುತ ಪರಿಸ್ಥಿತಿಯಲ್ಲಿ ಸಾವಿರಾರು ಮಂದಿಗೆ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸುವುದು ಕಷ್ಟವಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‌ ಅವಧಿ 7 ದಿನಕ್ಕೆ ಮೊಟಕು ಮಾಡಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳಿದವರಿಗೆ ಮಾತ್ರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಬಾಕಿ 7 ದಿನ ಮನೆಯಲ್ಲೇ ಕ್ವಾರಂಟೈನ್‌ ವಿಧಿಸಲು ಸರ್ಕಾರ ನಿರ್ಧರಿಸಿದೆ. ಹೋಂ ಕ್ವಾರಂಟೈನ್‌ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದಕ್ಕೆ ಆದ್ಯತೆ ನೀಡಲಾಗುವುದು. ಜೊತೆಗೆ ಜನಜೀವನ ಸಹಜ ಸ್ಥಿತಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಟಾಸ್ಕ್‌ ಫೋರ್ಸ್‌ ಕಮಿಟಿ ರಚನೆ: ಕೊರೋನಾ ತಡೆಗೆ ರಾಜ್ಯದಲ್ಲಿ ಗ್ರಾಮಾಂತರ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗುವುದು, ನಗರ ಪ್ರದೇಶದಲ್ಲಿ ವಾರ್ಡ್‌, ಬೂತ್‌ವಾರ್‌ ಸಮಿತಿ ರಚಿಸಲಾಗುವುದು. ಈ ಮೂಲಕ ಹೊಸದಾಗಿ ಸೋಂಕಿತ ವ್ಯಕ್ತಿ ಬಂದಾಗ ವಿವರ ಸಂಗ್ರಹಿಸಲಾಗುವುದು. ತಂತ್ರಜ್ಞಾನವನ್ನು ಬಳಸಿಕೊಂಡು ಸೋಂಕಿತರ ಮೇಲೆ ಕಣ್ಗಾವಲು ಇರಿಸಲಾಗುವುದು ಎಂದು ತಿಳಿಸಿದ ಸಚಿವರು, ರಾಜ್ಯದಲ್ಲಿ 10 ಲಕ್ಷ ಮಂದಿ ಸೋಕಿಂತರಾದರೂ ಕಟ್ಟೆಚ್ಚರ ವಹಿಸುವಂತಹ ತಂತ್ರಜ್ಞಾನ ಸಿದ್ಧ ಮಾಡಿದ್ದೇವೆ ಎಂದರು.

ಖಾಸಗಿ ವೈದ್ಯ ಕಾಲೇಜುಗಳು ಲ್ಯಾಬ್‌ ತೆರೆಯದಿದ್ದರೆ ಕ್ರಮ

ಕೋವಿಡ್‌-19 ಸೋಂಕು ಪರೀಕ್ಷಾ ಪ್ರಯೋಗಾಲಯವನ್ನು ತೆರೆಯದ ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದ್ದು ಸರ್ಕಾರದ ನಿರ್ದೇಶನವನ್ನು ಕಡೆಗಣಿಸಿದರೆ ಕ್ರಮ ಖಚಿತ ಎಂದು ಸಚಿವ ಡಾ.ಸುಧಾಕರ್‌ ಎಚ್ಚರಿಸಿದ್ದಾರೆ. ಸೋಂಕು ವರದಿಯಾದ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ಕೇವಲ ಎರಡು ಪ್ರಯೋಗಾಲಯಗಳಿದ್ದವು. ಈಗ ಅವುಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇದೀಗ ಖಾಸಗಿ ವೈದ್ಯಕೀಯ ಕಾಲೇಜುಗಳೂ ಕೋವಿಡ್‌-19 ಸೋಂಕು ಪರೀಕ್ಷಾ ಪ್ರಯೋಗಾಲಯಗಳನ್ನು ಕಡ್ಡಾಯವಾಗಿ ಆರಂಭಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 8 ಕಾಲೇಜುಗಳಲ್ಲಿ ಈಗಾಗಲೇ 4 ಕಡೆ ಲ್ಯಾಬ್‌ಗಳನ್ನು ತೆರೆದಿವೆ. ಇನ್ನುಳಿದ ನಾಲ್ಕು ಕಾಲೇಜುಗಳು ಮುಂದಿನ ಒಂದು ವಾರದೊಳಗೆ ಪ್ರಯೋಗಾಲಯ ಆರಂಭಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.