ಈ ಬಾರಿ ವಿಧಾನಸಭೆಗೆ ಪ್ರವೇಶಿಸುವ 224 ಶಾಸಕರ ಪೈಕಿ 217 ಮಂದಿ ಕೋಟ್ಯಧೀಶರಿದ್ದಾರೆ. ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇವಲ 28 ಲಕ್ಷ ರು. ಆಸ್ತಿ ಹೊಂದಿದ್ದು, ಈ ಬಾರಿ ಆಯ್ಕೆಯಾದವರಲ್ಲೇ ಅತಿ ಕಡಿಮೆ ಸಂಪತ್ತು ಹೊಂದಿದವರು ಎನಿಸಿಕೊಂಡಿದ್ದಾರೆ.

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಮೇ.17) : ಪ್ರಸಕ್ತ 16ನೇ ವಿಧಾನಸಭೆಗೆ ಆಯ್ಕೆಯಾಗಿರುವ 224 ಶಾಸಕರ ಪೈಕಿ 122 ಮಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿವೆ. ಕಳೆದ ಸಲಕ್ಕಿಂತ ಈ ಬಾರಿ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಹೆಚ್ಚು ಶಾಸಕರು ವಿಧಾನಸಭೆಗೆ ಪ್ರವೇಶಿಸುತ್ತಿದ್ದಾರೆ!

2018ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶಾಸಕರ ಪೈಕಿ 77 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರೆ, ಪ್ರಸ್ತುತ ಆಯ್ಕೆಯಾಗಿರುವ ಸದಸ್ಯರ ಪೈಕಿ 122 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇನ್ನು, ಗಂಭೀರ ಕ್ರಿಮಿನಲ್‌ ಮೊಕದ್ದಮೆ ಘೋಷಣೆ ಮಾಡಿಕೊಂಡವರೂ ಈ ಬಾರಿ ಹೆಚ್ಚಿದ್ದಾರೆ. 71 ಮಂದಿ ಗಂಭೀರ ಸ್ವರೂಪದ ಕ್ರಿಮಿನಲ್‌ ಮೊಕದ್ದಮೆ ಘೋಷಣೆ ಮಾಡಿಕೊಂಡಿದ್ದರೆ, ಕಳೆದ ಬಾರಿ 54 ಶಾಸಕರು ಗಂಭೀರ ಸ್ವರೂಪದ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು.

Karnataka election 2023: ರಾಜ್ಯದಲ್ಲಿದ್ದಾರೆ ಕ್ರಿಮಿನಲ್‌ ಹಿನ್ನೆಲೆಯ 76 ಶಾಸಕರು!

ವಿವಿಧ ಅಪರಾಧಗಳು:

ಕೊಲೆಗೆ ಸಂಬಂಧಿಸಿದ ಪ್ರಕರಣ ತಮ್ಮ ವಿರುದ್ಧ ದಾಖಲಾಗಿರುವ ಬಗ್ಗೆ ಒಬ್ಬ ಶಾಸಕರು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದರೆ, ಮೂವರು ಶಾಸಕರು ಕೊಲೆ ಯತ್ನ ಪ್ರಕರಣಗಳು ತಮ್ಮ ವಿರುದ್ಧ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. 7 ವಿಜೇತ ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಪಟ್ಟಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಏಳು ವಿಜೇತ ಅಭ್ಯರ್ಥಿಗಳ ಪೈಕಿ ಒಬ್ಬರು ಅತ್ಯಾಚಾರ ಸಂಬಂಧ ಪ್ರಕರಣವನ್ನು ಉಲ್ಲೇಖಿಸಿದ್ದಾರೆ ಎಂದು ‘ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾಮ್ಸ್‌ರ್‍’ (ಎಡಿಆರ್‌) ಸಂಸ್ಥೆಯ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಯಾವ ಪಕ್ಷದವರ ಮೇಲೆ ಎಷ್ಟುಕೇಸು?:

ಕ್ರಿಮಿನಲ್‌ ಪ್ರಕರಣ ಸಂಬಂಧ ಪಕ್ಷವಾರು ಗಮನಿಸಿದರೆ ಕಾಂಗ್ರೆಸ್‌ನಿಂದ ವಿಜೇತರಾದ 134 ಅಭ್ಯರ್ಥಿಗಳಲ್ಲಿ 78, ಬಿಜೆಪಿಯಿಂದ ಗೆಲುವು ಸಾಧಿಸಿರುವ 66 ಅಭ್ಯರ್ಥಿಗಳ ಪೈಕಿ 34 ಮತ್ತು ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ 19 ಮಂದಿ ಪೈಕಿ 9 ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿವೆ. ಇನ್ನು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವಿಜೇತ ಅಭ್ಯರ್ಥಿಯು ಸಹ ಕ್ರಿಮಿನಲ್‌ ಮೊಕದ್ದಮೆ ಇರುವ ಬಗ್ಗೆ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣ ಇವೆ ಎಂದು ಕಾಂಗ್ರೆಸ್‌ನಿಂದ 40, ಬಿಜೆಪಿಯಿಂದ 23, ಜೆಡಿಎಸ್‌ನಿಂದ 7 ಮಂದಿ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

224 ಶಾಸಕರ ಪೈಕಿ 217 ಮಂದಿ ಕೋಟ್ಯಧೀಶರು

- ಡಿಕೆಶಿ ಅತಿ ಸಿರಿವಂತ

ಭಾಗೀರಥಿ ಮುರುಳ್ಯ ‘ಬಡ ಶಾಸಕಿ’

ಬೆಂಗಳೂರು: ಈ ಬಾರಿಯ ವಿಧಾನಸಭೆಗೆ ಪ್ರವೇಶಿಸುವ 224 ವಿಜೇತರಲ್ಲಿ 217 ಮಂದಿ ಕೋಟ್ಯಧೀಶರಾಗಿದ್ದಾರೆ.

ಕಾಂಗ್ರೆಸ್‌ನಿಂದ 132, ಬಿಜೆಪಿಯಿಂದ 66, ಜೆಡಿಎಸ್‌ನಿಂದ 18 ಶಾಸಕರು ಕೋಟಿಪತಿಗಳು.

ಸರ್ವೋದಯ ಪಕ್ಷ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ತಲಾ ಒಬ್ಬರು ಹಾಗೂ ಇಬ್ಬರು ಸ್ವತಂತ್ರ ವಿಜೇತ ಅಭ್ಯರ್ಥಿಗಳು ಒಂದು ಕೋಟಿ ರು.ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC President DK Shivakumar) ಅತಿ ಹೆಚ್ಚು ಆಸ್ತಿ ಹೊಂದಿದ್ದು, ₹1413 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ಗೌರಿಬಿದನೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಇದ್ದಾರೆ. 1267 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. 1156 ಕೋಟಿ ರು. ಮೌಲ್ಯದ ಆಸ್ತಿ ಹೊಂದುವ ಮೂಲಕ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ನ ಪ್ರಿಯಾಕೃಷ್ಣ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ಕಡಿಮೆ ಆಸ್ತಿ ಮೌಲ್ಯ ಹೊಂದಿರುವವರಲ್ಲಿ ಸುಳ್ಯ ಕ್ಷೇತ್ರದ ಬಿಜೆಪಿಯ ವಿಜೇತ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುಂಚೂಣಿಯಲ್ಲಿದ್ದಾರೆ. ಕೇವಲ 28 ಲಕ್ಷ ರು. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ 48 ಲಕ್ಷ ರು. ಮತ್ತು ಮುಧೋಳ ಕ್ಷೇತ್ರದ ಆರ್‌.ಬಿ. ತಿಮ್ಮಾಪುರ ಅವರು 58 ಲಕ್ಷ ರು. ಮೌಲ್ಯದ ಆಸ್ತಿ ಹೊಂದುವ ಮೂಲಕ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಒಬ್ಬ ಅಭ್ಯರ್ಥಿ ಕೋಟ್ಯಾಧಿಪತಿಯಾದರೂ ಕಾರಿಲ್ಲ, ಮತ್ತೊಬ್ಬರ ಬಳಿ ಸ್ಕೂಟರ್‌ ಬಿಟ್ಟರೆ ಬೇರೆನಿಲ್ಲ

ಸಾಲಗಾರರಲ್ಲಿ ಪ್ರಿಯಾಕೃಷ್ಣ ನಂ.1:

ಈ ನಡುವೆ, ಸಾಲ ಹೊಂದಿರುವವರಲ್ಲಿ ಪ್ರಿಯಾಕೃಷ್ಣ 881 ಕೋಟಿ ರು. ಸಾಲ ಹೊಂದಿದ್ದು, ಮೊದಲನೇ ಸ್ಥಾನದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್‌ 265 ಕೋಟಿ ರು. ಮತ್ತು ಬೈರತಿ ಸುರೇಶ್‌ 114 ಕೋಟಿ ರು. ಸಾಲ ಹೊಂದುವ ಮೂಲಕ ಕ್ರಮವಾಗಿ ಎರಡನೇ ಮತ್ತು ಮೂರನೇ ಸಾಲಿನಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.