ಯಾದಗಿರಿ[ಜ.30]: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಹೆಸರು ಕೇಳಿಬರುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋನಾಲದ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು. ಈ ವೇಳೆ ಅವರು ಕ್ಷೇತ್ರದ ಪದ್ಧತಿಯಂತೆ ದುರ್ಗಾದೇವಿ ಪದತಲದಲ್ಲಿ ಮನವಿ ಚೀಟಿ ಇಟ್ಟು ಪೂಜೆ ಮಾಡಿಸಿರುವ ಅವರು ದೇವಿಗೆ ರೇಷ್ಮೆಸೀರೆಯನ್ನು ಕಾಣಿಗೆಯಾಗಿ ಅರ್ಪಿಸಿದ್ದಾರೆ. ಮನವಿಚೀಟಿಯಲ್ಲಿ ಬರೆದಿದ್ದನ್ನು ಯಾರಿಗೂ ತಿಳಿಸದಂತೆ ಅರ್ಚಕರಿಗೆ ಡಿ.ಕೆ.ಶಿವಕುಮಾರ್‌ ಸೂಚಿಸಿರುವುದರಿಂದ ಅದನ್ನು ಗೌಪ್ಯವಾಗಿಡಲಾಗಿದೆ.

ಬೆಂಗಳೂರಿನಿಂದ ಕಲಬುರಗಿಗೆ ಬುಧವಾರ ಬೆಳಿಗ್ಗೆ ವಿಮಾನದ ಮೂಲಕ ಆಗಮಿಸಿದ ಶಿವಕುಮಾರ್‌, ಮಧ್ಯಾಹ್ನ ಅಲ್ಲಿಂದ ಗೋನಾಲಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ಹರಕೆ ತೀರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇಲ್ಲಿಗೆ ಬರಬೇಕಿತ್ತಾದರೂ ರಾಜಕೀಯ ಚಟುವಟಿಕೆಗಳ ಒತ್ತಡದಲ್ಲಿ ಆಗಿರಲಿಲ್ಲ. ಹೀಗಾಗಿ, ಈ ಬಾರಿ ಬಂದು ಪೂಜೆ ಸಲ್ಲಿಸಿದ್ದೇನೆ ಎಂದರು. ಅರ್ಚಕ ಮಹಾದೇವ ಪೂಜಾರಿ ನಿರ್ದೇಶನದಂತೆ ದುರ್ಗಾದೇವಿ ಗರ್ಭಗುಡಿಯಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಏಕಾಂತ ಸೇವೆ ಮಾಡಿದ ಮಾಡಿದ ಅವರು, ಎಲ್ಲ ದುಃಖವನ್ನು ದೂರ ಮಾಡಿ ರಾಜ್ಯಕ್ಕೆ ಸಮೃದ್ಧಿಗಾಗಿ, ಆರೋಗ್ಯ ಹಾಗೂ ನೆಮ್ಮದಿಗಾಗಿ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

ಏತನ್ಮಧ್ಯೆ ಡಿ.ಕೆ.ಶಿವಕುಮಾರ್‌ ಭೇಟಿಗೂ ಮುನ್ನ ಕನ್ನಡಪ್ರಭ ಸೋದರ ಸಂಸ್ಥೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದ ಅರ್ಚಕ ಮಹಾದೇವ ಪೂಜಾರಿ, ಈಗ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಲಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಕೂಡ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಆದರೆ ಈ ಬಗ್ಗೆ ಮಾಧ್ಯಮಗಳು ಶಿವಕುಮಾರ್‌ ಅವರನ್ನು ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದರು.

ಬುಧವಾರ ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಗುರುವಾರ ಮುಂಜಾನೆ ಶ್ರೀಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಲಿದ್ದಾರೆ.