Asianet Suvarna News Asianet Suvarna News

ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕೇಂದ್ರಕ್ಕೆ ರಾಜ್ಯ ಮೊರೆ

ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ಕ್ವಿಂಟಲ್‌ ಕೊಬ್ಬರಿಗೆ 16,730 ರು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈ ಬಗ್ಗೆ ಕೇಂದ್ರದಿಂದ ಇನ್ನೂ ಯಾವುದೇ ಸ್ಪಷ್ಟಆದೇಶ ಬಂದಿಲ್ಲ. 

Karnataka appeals to Central Govt to increase the price of coconut gvd
Author
First Published Dec 11, 2022, 8:06 AM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಡಿ.11): ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ಕ್ವಿಂಟಲ್‌ ಕೊಬ್ಬರಿಗೆ 16,730 ರು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈ ಬಗ್ಗೆ ಕೇಂದ್ರದಿಂದ ಇನ್ನೂ ಯಾವುದೇ ಸ್ಪಷ್ಟಆದೇಶ ಬಂದಿಲ್ಲ. ‘ಕೇಂದ್ರ ಸರ್ಕಾರ ಕಳೆದ ವರ್ಷ ಒಂದು ಕ್ವಿಂಟಲ್‌ ಉಂಡೆ ಕೊಬ್ಬರಿಗೆ 11 ಸಾವಿರ ಹಾಗೂ ಮಿಲ್ಲಿಂಗ್‌ಗೆ 10,590 ರು. ನಿಗದಿ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ ಬೆಲೆ ಪರಿಷ್ಕರಿಸದೇ ಅದೇ ಮೊತ್ತವನ್ನು ಮುಂದುವರೆಸಿದೆ. ಆದ್ದರಿಂದ ಬೆಳೆಗಾರರ ಹಿತರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೊಬ್ಬರಿಗೆ 16,730 ರು. ನಿಗದಿ ಮಾಡುವಂತೆ ಮನವಿ ಮಾಡಿದೆ. 

ಆದರೆ ಇದನ್ನು ಅನುಮೋದಿಸುವುದಾಗಲೀ ಅಥವಾ ಎಂಎಸ್‌ಪಿ ಪರಿಷ್ಕರಣೆ ಮಾಡುವುದನ್ನಾಗಲೀ ಕೇಂದ್ರ ಮಾಡಿಲ್ಲ’ ಎಂದು ತೋಟಗಾರಿಕಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಮತ್ತೊಂದೆಡೆ ಕೊಬ್ಬರಿ ಧಾರಣೆ ಕುಸಿದಿರುವುದರಿಂದ ಕಂಗಾಲಾಗಿರುವ ತೆಂಗು ಬೆಳೆಗಾರರು, ‘ಎಂಎಸ್‌ಪಿ ಪರಿಷ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಈ ಹಿಂದೆ ನೀಡಿದ್ದಂತೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅವಧಿಪೂರ್ವ ಚುನಾವಣೆ ಇಲ್ಲ, ಅಧಿಕಾರ ಪೂರೈಸುತ್ತೇವೆ: ಸಿಎಂ ಬೊಮ್ಮಾಯಿ

ಕೊಬ್ಬರಿ ಬೆಲೆ ಭಾರೀ ಇಳಿಕೆ: ರಾಜ್ಯದ ಪ್ರಮುಖ ಕೊಬ್ಬರಿ ವಹಿವಾಟು ಕೇಂದ್ರವಾಗಿರುವ ತುಮಕೂರು ಜಿಲ್ಲೆ ತಿಪಟೂರಿನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಇಳಿಕೆ ಕಾಣುತ್ತಿರುವುದರಿಂದ ಕೊಬ್ಬರಿಯನ್ನೇ ಪ್ರಮುಖವಾಗಿ ನಂಬಿಕೊಂಡಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ. 2021ರ ನವೆಂಬರ್‌ನಲ್ಲಿ ಕ್ವಿಂಟಲ್‌ ಕೊಬ್ಬರಿಗೆ 18,106 ರು., ಡಿಸೆಂಬರ್‌ನಲ್ಲಿ 18,300 ರು. ಇದ್ದದ್ದು ಕಳೆದ ಎರಡ್ಮೂರು ತಿಂಗಳಿನಿಂದ ಇಳಿಕೆ ಕಾಣುತ್ತಲೇ ಬಂದು ಈ ವಾರದಲ್ಲಿ 11,776 ರುಪಾಯಿಗೆ ಕುಸಿದಿದೆ.

ಕ್ವಿಂಟಲ್‌ ಕೊಬ್ಬರಿಗೆ 18 ಸಾವಿರಕ್ಕೂ ಅಧಿಕವಿದ್ದ ದರ ಇದೀಗ 11 ಸಾವಿರದ ಸುತ್ತ ಗಿರಕಿ ಹೊಡೆಯುತ್ತಿದೆ. ಎಂಎಸ್‌ಪಿ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವುದರಿಂದ ಕೇಂದ್ರ ಸರ್ಕಾರ ಗರಿಷ್ಠವೆಂದರೆ 11,750 ರು. ನಿಗದಿ ಮಾಡಬಹುದು. ಆದ್ದರಿಂದ ರಾಜ್ಯ ಸರ್ಕಾರ ಮಾರುಕಟ್ಟೆಮಧ್ಯಪ್ರವೇಶಿಸಿ ಪ್ರೋತ್ಸಾಹ ಧನ ನೀಡಬೇಕು. ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾದ ತಕ್ಷಣ ಸ್ಪಂದಿಸುವ ಸರ್ಕಾರ ತೆಂಗು ಬೆಳೆಗಾರರ ರಕ್ಷಣೆಗೂ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಬೆಳೆಗಾರರು ಹೇಳಿದ್ದಾರೆ.

ತೇವಾಂಶದ ತೊಂದರೆ: ತಜ್ಞರು ಹೇಳುವ ಪ್ರಕಾರ ಬೆಲೆ ಕುಸಿತಕ್ಕೆ ಕೊಬ್ಬರಿಯ ಅಧಿಕ ತೇವಾಂಶವೇ ಪ್ರಮುಖ ಕಾರಣವಾಗಿದೆ. ತೇವಾಂಶದ ಪ್ರಮಾಣ ಶೇ.7ಕ್ಕಿಂತ ಕಡಿಮೆ ಇದ್ದರೆ ಅಂತಹ ಕೊಬ್ಬರಿಯನ್ನು ದೂರದ ರಾಜ್ಯಗಳಿಗೆ ರವಾನೆ ಮಾಡಲು ಅನುಕೂಲವಾಗುತ್ತದೆ. ಆದರೆ ಇತ್ತೀಚೆಗೆ ತೇವಾಂಶ ಹೆಚ್ಚಾಗಿರುವ ಕೊಬ್ಬರಿಯೇ ಮಾರುಕಟ್ಟೆಗೆ ಬರುತ್ತಿರುವುದರಿಂದ ಗುಣಮಟ್ಟದ ಸರಕನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹರ್ಯಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರವಾನಿಸಲು ಸಾಧ್ಯವಾಗುತ್ತಿಲ್ಲ. ಬೆಲೆ ಇಳಿಕೆಗೆ ಇದೇ ಪ್ರಮುಖ ಕಾರಣ ಎನ್ನುತ್ತಾರೆ.

ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಭಾರಿ ಕುತೂಹಲ

ಕೇಂದ್ರ ಸರ್ಕಾರವು ಕ್ವಿಂಟಲ್‌ ಕೊಬ್ಬರಿಗೆ ಕನಿಷ್ಠ 15 ಸಾವಿರ ರು. ಬೆಂಬಲ ಬೆಲೆ ನಿಗದಿ ಮಾಡಬೇಕು. ಇದರ ಜೊತೆಗೆ ರಾಜ್ಯ ಸರ್ಕಾರವೂ ಪ್ರೋತ್ಸಾಹಧನ ನೀಡಬೇಕು. ತಕ್ಷಣ ಕೊಬ್ಬರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು.
- ಎಂ.ಬಿ.ಸಿದ್ದಬಸಪ್ಪ, ರಾಜ್ಯ ತೆಂಗು ಬೆಳೆಗಾರರ ಒಕ್ಕೂಟದ ಮಾಜಿ ಸಂಚಾಲಕ

Follow Us:
Download App:
  • android
  • ios