ಜೀವಜಲವೇ ವಿಷವಾಗುತ್ತಿರೋದು ಏಕೆ?: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಈ ಸಮಸ್ಯೆ ಹೆಚ್ಚು

ಜಿಲ್ಲೆ ನಗ​ರ, ​ಪ​ಟ್ಟಣ ಹಾಗೂ ಗ್ರಾಮೀಣ ಭಾಗ​ಗ​ಳ​ಲ್ಲಿನ ಜನ​ರಿಗೆ ಶುದ್ಧ ಕುಡಿ​ಯುವ ನೀರು ಸರ​ಬ​ರಾಜು ಮಾಡುತ್ತಿ​ರುವ ನೀರಿನ ಟ್ಯಾಂಕ್‌(ಓ​ವರ್‌ ಹೆಡ್‌)​ಗಳ ನಿರ್ವ​ಹಣೆ ಕೊರತೆಯೇ ಕಲು​ಷಿತ ನೀರು ಪ್ರಕರಣಕ್ಕೆ ಪ್ರಮುಖ ಕಾರ​ಣ​ಗ​ಳಲ್ಲೊಂದು. 

Kannada Prabha Reality Check Why is the living water itself being poisoned gvd

ಕಳೆದ ಕೆಲ ದಿನಗಳಿಂದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಸೇರಿ ಮೂರ್ನಾಲ್ಕು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಪ್ರತಿ ಬೇಸಿಗೆಯಲ್ಲೂ ಈ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಜನ ಸಾವಿಗೀಡಾಗುವ, ಅಸ್ವಸ್ಥಗೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಪ್ರತಿ ವರ್ಷ ಇಂಥ ಘಟನೆಗಳು ಬೆಳಕಿಗೆ ಬರುತ್ತಿದ್ದರೂ ಆಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಲೇ ಇಲ್ಲ. ಮತ್ತದೇ ಘಟನೆಗಳು ಮರುಕಳಿಸಿ ಇನ್ನಷ್ಟುಮಂದಿ ಜೀವ ಕಳೆದುಕೊಳ್ಳುವುದು ನಡೆದೇ ಇದೆ. ಕುಡಿಯುವ ನೀರು ಈ ರೀತಿ ಕಲುಷಿತಗೊಳ್ಳಲು ಆಡಳಿತದ ನಿರ್ಲಕ್ಷ್ಯವೇ ಮೂಲ ಕಾರಣವಾದರೂ ಜೀವಜಲ ವಿಷವಾಗಲು ಐದು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1 ಸ್ವಚ್ಛತೆ ಕಾಣದ ನೀರಿನ ಟ್ಯಾಂಕ್‌: ಜಿಲ್ಲೆ ನಗ​ರ, ​ಪ​ಟ್ಟಣ ಹಾಗೂ ಗ್ರಾಮೀಣ ಭಾಗ​ಗ​ಳ​ಲ್ಲಿನ ಜನ​ರಿಗೆ ಶುದ್ಧ ಕುಡಿ​ಯುವ ನೀರು ಸರ​ಬ​ರಾಜು ಮಾಡುತ್ತಿ​ರುವ ನೀರಿನ ಟ್ಯಾಂಕ್‌(ಓ​ವರ್‌ ಹೆಡ್‌)​ಗಳ ನಿರ್ವ​ಹಣೆ ಕೊರತೆಯೇ ಕಲು​ಷಿತ ನೀರು ಪ್ರಕರಣಕ್ಕೆ ಪ್ರಮುಖ ಕಾರ​ಣ​ಗ​ಳಲ್ಲೊಂದು. ಕಳೆದ ವರ್ಷ ರಾಯ​ಚೂರು ನಗ​ರ​ದಲ್ಲಿ ಕಲು​ಷಿತ ನೀರಿ​ನಿಂದಾಗಿ ಏಳು ಮಂದಿ ಮೃತ​ಪಟ್ಟು, ನೂರಾರು ಮಂದಿ ಅಸ್ವ​ಸ್ಥ​ಗೊಂಡಿ​ದ್ದರು. ಅದಕ್ಕೆ ನಗ​ರ​ದ​ಲ್ಲಿ​ರುವ ಸುಮಾರು 30 ಓವರ್‌ಹೆಡ್‌ ಟ್ಯಾಂಕ್‌​ಗ​ಳನ್ನು ಹಲವು ವರ್ಷ​ಗ​ಳಿಂದ ಸ್ವಚ್ಛ​ಗೊ​ಳಿ​ಸದಿರುವುದೇ ಕಾರಣವಾಗಿತ್ತು. ಇವು​ಗ​ಳಲ್ಲಿ ಕೆಲ ಟ್ಯಾಂಕ್‌​ಗ​ಳನ್ನು ಸುಮಾರು 20 ವರ್ಷ​ಗ​ಳಿಂದ ಸ್ವಚ್ಛ​ಗೊ​ಳಿ​ಸಿಯೇ ಇಲ್ಲ ಎಂಬ ಆಘಾತಕಾರಿ ವಿಚಾರ ಆ ವೇಳೆ ಬಹಿರಂಗವಾಗಿತ್ತು. ಇಂಥ ಪರಿ​ಸ್ಥಿತಿ ಗ್ರಾಮೀಣ ಭಾಗ​ದ ಅನೇಕ ಕಡೆ ಇದೆ. ಇದ​ರಿಂದ ಸಂಗ್ರ​ಹಿ​ಸಿದ ನೀರು ಪಾಚಿ, ಬ್ಯಾಕ್ಟೀರಿಯಾಗಳು, ​ಕ್ರಿಮಿಕೀಟ​ಗಳ ತಾಣ​ವಾ​ಗುತ್ತಿದೆ. ಇಂಥ ನೀರು ಕುಡಿದ ಮಂದಿ ವಾಂತಿ, ಭೇದಿಯಂಥ ಸಮಸ್ಯೆ ಕಾಣಿಸಿಕೊಂಡು ಅಸ್ವ​ಸ್ಥ​ರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೀರು ನಿರ್ವ​ಹ​ಣೆ ಜವಾ​ಬ್ದಾ​ರಿ ಹೊಂದಿ​ರುವ ಸ್ಥಳೀಯ ಆಡ​ಳಿತ ಸಂಸ್ಥೆ​ಗಳು, ಜಿಪಂ, ​ತಾಪಂ ಹಾಗೂ ಗ್ರಾಪಂಗಳು ನೀರಿನ ಟ್ಯಾಂಕ್‌​ಗಳನ್ನು ಕಾಲ​ಕಾ​ಲಕ್ಕೆ ಸ್ವಚ್ಛ​ಗೊ​ಳಿ​ಸುತ್ತಿಲ್ಲ ಹಾಗೂ ಕ್ಲೋರಿನೇಷನ್‌ ಮಾಡಿಸುವ ಕೆಲಸವೂ ಸರಿಯಾಗಿ ನಡೆಯುತ್ತಿಲ್ಲ. ರಾಯಚೂರು ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಅನೇಕ ಕಡೆ ಇದೇ ಪರಿಸ್ಥಿತಿ ಇದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 20 ಸ್ಥಾನ: ಸಿಎಂ ಸಿದ್ದರಾಮಯ್ಯ

2 ಗುಣ​ಮ​ಟ್ಟದ ಪೈಪ್‌​ಲೈ​ನ್‌-ದುರಸ್ತಿ ವಿಳಂಬ: ಪೈಪ್‌ಗಳು ಆಗಾಗ ಒಡೆದು ಕುಡಿಯುವ ನೀರು ಕಲುಷಿತಗೊಳ್ಳುವುದು ಮಾಮೂಲಿ ಆಗುತ್ತಿದೆ. ಇದಕ್ಕೆ ಪೈಪ್‌ಗಳ ಕಳಪೆ ಗುಣಮಟ್ಟವೇ ಕಾರಣ ಎನ್ನಲಾಗುತ್ತಿದೆ. ಬಹು​ತೇಕ ಕಡೆ ಇಂಥ ಪೈಪ್‌ಗಳು ಚರಂಡಿ ಅಕ್ಕ-ಪಕ್ಕ​ದ​ಲ್ಲೇ ಹಾದು ಹೋಗಿ​ರು​ವುದು, ಪೈಪ್‌​ಗಳು ಒಡೆದು ಹೋದರೆ ತಕ್ಷಣ ದುರಸ್ತಿ ಮಾಡದೇ ಇರು​ವು​ದು ಸಹ ನೀರು ಕಲು​ಷಿ​ತ​ಗೊಳ್ಳಲು ಕಾರ​ಣ. ಕೆಲ ಗ್ರಾಮ​ಗ​ಳಲ್ಲಿ 20-30 ವರ್ಷ​ಗಳ ಹಿಂದೆ ನಿರ್ಮಿ​ಸಿದ ಟ್ಯಾಂಕ್‌ ಹಾಗೂ ಪೈಪ್‌​ಗಳ ಮೂಲ​ಕವೇ ನೀರು ಸರ​ಬ​ರಾಜು ಮಾಡ​ಲಾ​ಗು​ತ್ತಿ​ದೆ. 

ಜಲ​ಜೀ​ವನ್‌ ಮಿಷ​ನ್‌​ ಯೋಜ​ನೆ​ಯಡಿ ಸುಮಾರು 850 ಕೋಟಿ ವೆ​ಚ್ಚ​ದಲ್ಲಿ ಜಿಲ್ಲೆಯ ಎಲ್ಲ ಗ್ರಾಮ​ಗ​ಳಲ್ಲಿ 5 ಹಂತ​ಗ​ಳಲ್ಲಿ ಕೈಗೊಂಡಿ​ರುವ ಕಾಮ​ಗಾ​ರಿ​ಗ​ಳಲ್ಲಿ ಬಳ​ಸು​ತ್ತಿ​ರುವ ಪರಿ​ಕ​ರ​ಗಳು ಗುಣ​ಮ​ಟ್ಟ​ದ ಕೊರ​ತೆ ಎದು​ರಿ​ಸು​ತ್ತಿವೆ. ಜಿಲ್ಲೆ​ಯಲ್ಲಿ 5 ಬಹು​ಗ್ರಾಮ ಕುಡಿ​ಯುವ ನೀರಿನ ಯೋಜ​ನೆ ಸಂಪೂ​ರ್ಣ​ವಾಗಿ ಹಳ್ಳಹಿಡಿದಿದೆ. ಬಹು​ತೇಕ ಗ್ರಾಮ​ಗ​ಳಲ್ಲಿ ಸಮ​ರ್ಪಕ ಚರಂಡಿ ವ್ಯವ​ಸ್ಥೆಯೇ ಇಲ್ಲ. ಶೇ.90ರಷ್ಟುಹಳ್ಳಿ​ಗಳು ಇನ್ನೂ ಬಹಿ​ರ್ದೆ​ಸೆಯಿಂದ ಮುಕ್ತ​ಗೊಂಡಿಲ್ಲ. ಪೈಪ್‌​ಲೈನ್‌ ಹಾದು ಹೋಗಿ​ರುವ ಕಡೆ ಇದೇ ಪರಿ​ಸ್ಥಿ​ತಿ​ ಇರು​ವು​ದ​ರಿಂದ ಪೈಪ್‌​ಲೈನ್‌ ಒಡೆ​ದರೆ ಸಾಕು ನೀರು ಕಲು​ಷಿ​ತ​ಗೊ​ಳ್ಳುತ್ತದೆ. ಒಡೆದ ಪೈಪ್‌​ಲೈನ್‌ ಹಲವು ದಿನಗಳ ಕಾಲ ದುರಸ್ತಿ ಕಾಣದೆ ಚರಂಡಿ ನೀರಿ​ನೊಂದಿಗೆ ಬೆರೆಯು​ತ್ತಿದ್ದು, ಇದನ್ನು ಕುಡಿದ ಜನ ವಾಂತಿ-ಭೇದಿಗೆ ತುತ್ತಾ​ಗು​ತ್ತಿ​ದ್ದಾ​ರೆ.

3 ನೀರಿನ ಮೂಲವೇ ಕಲುಷಿತ: ರಾಯಚೂರು ಜಿಲ್ಲೆಯ ಅರ​ಕೇರಾ ತಾಲೂ​ಕಿನ ರೇಕ​ಲ​ಮ​ರಡಿ ಗ್ರಾಮ​ದಲ್ಲಿ ಕಲು​ಷಿತ ನೀರು ಸೇವಿಸಿ ಹಲವು ಮಂದಿ ಅಸ್ವಸ್ಥಗೊಂಡ ನಂತರ ಅಲ್ಲಿನ 38 ಕುಡಿಯುವ ನೀರಿನ ಮಾದ​ರಿ​ಗ​ಳನ್ನು ಪರೀ​ಕ್ಷೆಗೆ ಕಳು​ಹಿ​ಸಲಾಗಿತ್ತು. ಅದರಲ್ಲಿ 8 ಮಾದರಿಗಳು ಕುಡಿಯಲು ಯೋಗ್ಯ​ವಲ್ಲ ಎನ್ನು​ವುದು ವರ​ದಿ​ಯಾಗಿದೆ. ಅದೇ ರೀತಿ ಲಿಂಗ​ಸು​ಗೂರು ತಾಲೂ​ಕಿನ ಗೊರೇ​ಬಾ​ಳ​ದಲ್ಲಿ 39 ನೀರಿನ ಮಾದ​ರಿ ಪರೀ​ಕ್ಷಿ​ಸಿ​ದಾಗ ಅದರಲ್ಲಿ 13 ಮಾದರಿ ಯೋಗ್ಯ​ವ​ಲ್ಲ ಎಂದು ವರದಿ ತಿಳಿ​ಸಿ​ದೆ. ಇದಕ್ಕೆ ಕಾರಣ ನೀರಿನ ಮೂಲ ಕಲುಷಿತಗೊಂಡಿರುವುದೇ ಕಾರಣ​. ತುಂಗ​ಭ​ದ್ರಾ, ಕೃಷ್ಣಾ ನದಿ​ಗ​ಳ ಜೊತೆಗೆ ಕೆರೆ, ​ಹಳ್ಳ ಹಾಗೂ ಬೋರ್‌​ವೆಲ್‌ ಮೂಲ​ಗ​ಳಿಂದ ಜಿಲ್ಲೆಯ ಜನ​ರಿಗೆ ಕುಡಿ​ಯುವ ನೀರು ಸರ​ಬ​ರಾಜು ಮಾಡ​ಲಾ​ಗು​ತ್ತದೆ. 

ತುಂಗ​ಭದ್ರಾ-ಕೃಷ್ಣಾ ನದಿಗಳ ವ್ಯಾಪ್ತಿ ಪ್ರದೇ​ಶಕ್ಕೆ ಟಿಎ​ಲ್‌​ಬಿ​ಸಿ ಹಾಗೂ ಎನ್‌​ಆ​ರ್‌​ಬಿ​ಸಿ​ಯಿಂದ ಕೆರೆ-ಜಲಾ​ಶ​ಯ​ಗ​ಳನ್ನು ತುಂಬಿ​ಸಿ​ಕೊಂಡು, ಶುದ್ಧೀ​ಕ​ರಣ ಘಟ​ಕದ ಮೂಲಕ ನೀರು ಪೂರೈಕೆಯಾಗುತ್ತದೆ. ಬೇಸಿಗೆ ಸಮ​ಯ​ದಲ್ಲಿ ಈ ಭಾಗದ ನೀರಿನ ಮೂಲಗಳಾದ ನದಿ, ​ಕೆ​ರೆ, ಹಳ್ಳ ಹಾಗೂ ಬೋರ್‌​ವೆ​ಲ್‌​ಗಳು ಬತ್ತುವುದು ಮಾಮೂಲಿ. ಆಗ ತಳದಲ್ಲಿ ಸಂಗ್ರ​ಹ​ಗೊಂಡ ಯೋಗ್ಯ​ವ​ಲ್ಲದ ನೀರನ್ನೇ ಸರಬರಾಜು ಮಾಡಲಾಗುತ್ತದೆ. ಬೋರ್‌ವೆಲ್‌ ನೀರು ಕುಡಿಯೋಣವೆಂದರೆ ಬೇಸಿಗೆಯಲ್ಲಿ ಪ್ಲೋರೈ​ಡ್‌-ಆರ್ಸೆ​ನಿಕ್‌ ಸೇರಿ ಇತರೆ ಲವ​ಣಾಂಶ​ಗ​ಳನ್ನು ಅತೀ ಹೆಚ್ಚಿನ ಪ್ರಮಾ​ಣ​ದಲ್ಲಿ ಬೋರ್‌ ನೀರು ಹೊಂದಿರುತ್ತದೆ. ಆಗ ಬೋರ್‌ವೆಲ್‌ ಮೂಲಕ ಕುಡಿ​ಯುವ ನೀರು ಸರ​ಬ​ರಾ​ಜಾ​ಗುವ ಪ್ರದೇ​ಶ​ಗ​ಳಲ್ಲಿ ಜನರ ಆರೋಗ್ಯ ಹದಗೆಡುತ್ತದೆ. ಇನ್ನು ಸರಿಯಾದ ನಿರ್ವಹಣೆ ಇಲ್ಲದ ಕೆರೆಗಳಲ್ಲಿ ನೀರಿನಮಟ್ಟಕಡಿ​ಮೆ​ಯಾಗಿ ಪಾಚಿಪೇರಿ​ಕೊಂಡು ನೀರು ಹಸಿರು ಬಣ್ಣಕ್ಕೆ ತಿರು​ಗಿ, ವಾಸನೆ ಬರುತ್ತಿರುತ್ತದೆ. ಅನಿವಾರ್ಯವಾಗಿ ಕೆಲವೆಡೆ ಅದೇ ನೀರನ್ನು ಪೂರೈಸಲಾಗುತ್ತದೆ.

4 ಆರ್‌ಒ ಘಟಕ ನಿರ್ವ​ಹಣೆ ಸವಾ​ಲು: ರಾಯಚೂರು ಜಿಲ್ಲೆ​ಯಲ್ಲಿ 877 ಗ್ರಾಪಂಗ​ಳಲ್ಲಿ 1,170 ಹಳ್ಳಿ​ಗಳಿದ್ದು, ಅಲ್ಲಿ​ಯ ಶುದ್ಧ​ಕು​ಡಿ​ಯುವ ನೀರಿನ ಘಟ​ಕ​ಗಳ ನಿರ್ವ​ಹಣೆಯೇ ಜಿಲ್ಲಾ​ಡ​ಳಿತ ಹಾಗೂ ಜಿಪಂಗೆ ದೊಡ್ಡ ಸವಾಲಾಗಿದೆ. 887 ಗ್ರಾಪಂಗಳ ಪೈಕಿ 541 ಕಡೆ ಆರ್‌ಒ ಘಟಕ ಕೆಲಸ ಮಾಡುತ್ತಿದ್ದು, ಉಳಿದ 336 ವಿವಿ​ಧ ಕಾರ​ಣ​ಗ​ಳಿಂದ ದುರ​ಸ್ತಿ​ಯಲ್ಲಿವೆ. ಸರಿಸುಮಾರು ಶೇ.35ರಷ್ಟುಆರ್‌ಒ ಘಟ​ಕ​ಗಳು ಕೆಲಸವನ್ನೇ ಮಾಡು​ತ್ತಿಲ್ಲ. ಸಕಾ​ಲಕ್ಕೆ ಆರ್‌ಒ ಘಟ​ಕ​ಗಳ ನಿರ್ವ​ಹಣೆ ಮಾಡದೇ ಇರುವ ಕಾರ​ಣಕ್ಕೆ ಜನ​ಸಾ​ಮಾ​ನ್ಯ​ರಿಗೆ ಅದ​ರ​ಲ್ಲೂ ಗ್ರಾಮೀಣ ಭಾಗಕ್ಕೆ ಶುದ್ಧ​ ಕು​ಡಿ​ಯುವ ನೀರಿನ ಸರ​ಬ​ರಾಜಿನಲ್ಲಿ ವ್ಯತ್ಯಯ ಉಂಟಾ​ಗು​ತ್ತಿ​ದೆ. ಕೆಲಹಳ್ಳಿ​ಗ​ಳಲ್ಲಿ ಶುದ್ಧ​ಕು​ಡಿ​ಯುವ ನೀರಿನ​(​ಆ​ರ್‌ಒ) ಘಟ​ಕ​ಗ​ಳು ಹಾಳಾ​ಗಿದ್ದು, ಇನ್ನು ಕೆಲ ದುರಸ್ತಿ ಮಾಡಿ​ದರೆ ಸರಿ​ ಹೋಗುತ್ತವೆ. ಆಯಾ ತಾಪಂ,​ ಗ್ರಾ​ಪಂಗಳ ವ್ಯಾಪ್ತಿ​ಯಲ್ಲಿ ದುರ​ಸ್ತಿಗೆ ಅವ​ಕಾ​ಶ​ವಿದ್ದು ಪೂರ್ಣ ಪ್ರಮಾ​ಣ​ದಲ್ಲಿ ಹಾಳಾ​ಗಿ​ರುವ ಘಟಕಗಳನ್ನು ಏನು ಮಾಡ​ಬೇಕು ಎನ್ನು​ವುದು ಆಡ​ಳಿತ ವರ್ಗಕ್ಕೆ ತಲೆನೋವು ತಂದಿಟ್ಟಿದೆ. ಕಲು​ಷಿತ ನೀರಿನ ಪ್ರಕ​ರ​ಣ​ಗಳು ಹೆಚ್ಚು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಗ್ರಾಮೀಣ ಜನ ಶುದ್ಧ​ ಕು​ಡಿ​ಯುವ ನೀರನ್ನು ಖಾಸ​ಗಿ​ಯಾಗಿ ಖರೀ​ದಿ​ಸುವ ಪರಿ​ಸ್ಥಿತಿ ಎಲ್ಲೆಡೆ ನಿರ್ಮಾ​ಣ​ಗೊಂಡಿದೆ.

ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್‌.ಕೆ.ಪಾಟೀಲ್‌

5 ಬೇಸಿಗೆ ತಾಪದ ಪರಿ​ಣಾ​ಮ: ರಾಯಚೂರು ಮತ್ತಿತರ ಕಡೆ ವಾಂತಿ-ಭೇದಿ ಪ್ರಕರಣ ಹೆಚ್ಚಾಗಲು ನೀರಿನ ಜೊತೆಗೆ ಬೇಸಿಗೆ ತಾಪವೂ ಒಂದು ಕಾರ​ಣ​ ಎಂದು ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ 40 ರಿಂದ 44 ಗರಿಷ್ಠ ತಾಪ​ಮಾ​ನ ಇರುತ್ತದೆ. ಈ ವೇಳೆ ಕುಡಿಯುವ ನೀರಿನಲ್ಲಿ ಕೊಂಚ ವ್ಯತ್ಯಾಸವಾದರೂ ಆರೋಗ್ಯ ಏರು​ಪೇ​ರಾ​ಗು​ತ್ತದೆ. ಬೇಸಿ​ಗೆ​ಯಲ್ಲಿ ಈ ಭಾಗದಲ್ಲಿ ಬಹುಬೇಗ ಬಾಯಾರಿಕೆಯಿಂದಾಗಿ ಅನೇಕ ಬಾರಿ ಕುದಿಸಿ ಆರಿಸಿದ ನೀರಿನ ಬದಲು ಅಶುದ್ಧ ನೀರನ್ನೇ ಕುಡಿದು ಜನ ಬಹುಬೇಗ ಅನಾ​ರೋ​ಗ್ಯಕ್ಕೆ ತುತ್ತಾ​ಗು​ತ್ತಿದ್ದಾರೆ.

ಮಾಹಿತಿ: ರಾಮ​ಕೃಷ್ಣ ದಾಸರಿ

Latest Videos
Follow Us:
Download App:
  • android
  • ios