ಬೆಂಗಳೂರು, (ಆ.25): ಕಿನ್ನಾಳ ಆಟಿಕೆ ಖ್ಯಾತಿಯ ಕೊಪ್ಪಳದಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಮೊಟ್ಟ ಮೊದಲ ಆಟಿಕೆ ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಲು ದೇಶ, ವಿದೇಶಗಳ ಆಟಿಕೆ ತಯಾರಕರಿಗೆ ರಾಜ್ಯ ಸರ್ಕಾರ ಮುಕ್ತ ಆಹ್ವಾನ ನೀಡಿದೆ.

 ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ವೋಕಲ್ ಫಾರ್ ಲೋಕಲ್ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಪೂರಕವಾಗಿ ಆಟಿಕೆ ತಯಾರಿಕೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರ, ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದಕ್ಕೆ ಪೂರಕವಾಗಿ 'ಭಾರತವನ್ನು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗಿಸುವುದು- ಜಾಗತಿಕ ನಿರೀಕ್ಷೆ ಮತ್ತು ಕರ್ನಾಟಕದಲ್ಲಿ ಅವಕಾಶಗಳು' ಕುರಿತು ನಾಲೆಡ್ಜ್‌ ಪಾರ್ಟನರ್‌ ಅರ್ನ್ಸ್ಟ್‌ ಅಂಡ್‌ ಯಂಗ್‌ ಸಹಯೋಗದಲ್ಲಿ ರಾಜ್ಯ ಸರ್ಕಾರವು ಪ್ರಮುಖ ಆಟಿಕೆ ತಯಾರಕರ ಜತೆ ಸೋಮವಾರ ವೆಬಿನಾರ್‌ ಆಯೋಜಿಸಿತ್ತು. 

ಚೀನಾದ ಮಕ್ಕಳ ಆಟಿಕೆಗೆ ಬ್ರೇಕ್: ಕೊಪ್ಪಳದಲ್ಲಿ ತಲೆ ಎತ್ತಲಿದೆ ಬೃಹತ್ ಫ್ಯಾಕ್ಟರಿ

ಸಭೆಯಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಹಾಗೂ ಕೈಗಾರಿಕಾಭಿವೃದ್ದಿ ಆಯುಕ್ತೆ  ಗುಂಜನ್‌ ಕೃಷ್ಣ, ಟಾಯ್‌ ಕ್ಲಸ್ಟರ್‌ಗೆ ಕರ್ನಾಟಕದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಿ, ಉದ್ಯಮವನ್ನು ಬೆಂಬಲಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಆಟಿಕೆ ಕ್ಲಸ್ಟರ್ ನಲ್ಲಿ ದೇಶ ಮತ್ತು ವಿದೇಶದ ಆಟಿಕೆ ತಯಾರಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿಯೂ ಹೇಳಿದರು.

ಕೊಪ್ಪಳ ಟಾಯ್ ಕ್ಲಸ್ಟರ್
ಕೊಪ್ಪಳ ಟಾಯ್ ಕ್ಲಸ್ಟರ್ ರಾಷ್ಟ್ರೀಯ ಹೆದ್ದಾರಿ 63 ರಲ್ಲಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ.  ಜತೆಗೆ, ವಾಣಿಜ್ಯ ನಗರ ಹುಬ್ಬಳ್ಳಿಗೆ ಸಮೀಪದಲ್ಲಿದೆ.  ಕುಶಲ ಕರ್ಮಿಗಳಿಗೆ ವಿಫುಲ ಉದ್ಯೋಗಾವಕಾಶ ಕಲ್ಪಿಸುವ ಆಟಿಕೆ ಉದ್ಯಮದಿಂದ  ಮುಂಬರುವ ದಿನಗಳಲ್ಲಿ ಬರೋಬ್ಬರಿ 1,00,000 ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ. 

ದೇಸಿ ಆಟಿಕೆಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಂತೆ ಹಾಗೂ ಅವುಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ಮಾರ್ಗೋಪಾಯಗಳ ಕುರಿತು ಪ್ರಧಾನಿ ನರೇಂದ ಮೋದಿ ಅವರು ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಇತ್ತೀಚೆಗೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ದೇಶಿ ಮತ್ತು ವಿದೇಶಿ ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಸಿದೆ.

ಕ್ಲಸ್ಟರ್‌ ಉದ್ದೇಶ
ದೇಶದ ಪ್ರಮುಖ ಆಟಿಕೆ ಕ್ಲಸ್ಟರ್ ಆಗಿ ಹೊರಹೊಮ್ಮಲು ಸಜ್ಜಾಗಿರುವ ಕರ್ನಾಟಕ, ಆಟಿಕೆ ತಯಾರಿಸುವ ಕೈಗಾರಿಕೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲಿದೆ.  ಇದರ ಫಲವಾಗಿ ಆಟಿಕೆ ಉದ್ಯಮ ಸಿಎಜಿಆರ್‌ನ (2010-17) ಶೇ.18ರಷ್ಟು ಪ್ರಗತಿ ಸಾಧಿಸಿದ್ದು,  2023ರ ವೇಳೆಗೆ 310 ದಶಲಕ್ಷ ಡಾಲರ್ ತಲುಪುವ ನಿರೀಕ್ಷೆಯಿದೆ.

ಕರ್ನಾಟಕವನ್ನು ಭಾರತದ ಆಟಿಕೆ ಉತ್ಪಾದನಾ ಕೇಂದ್ರವಾಗಿಸಲು ಮತ್ತು ಆಟಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಪ್ರಯತ್ನದ ಭಾಗವಾಗಿ, 'ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ' (ಪಿಎಸ್‌ಐಸಿಡಿ) ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪಾಲು ಹೆಚ್ಚಿಸುವುದು, ಕೈಗಾರಿಕಾ ಅಗತ್ಯತೆಗಳನ್ನು ಪೂರೈಸುವ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯ ಆಧಾರಿತ ಕೌಶಲ ಅಭಿವೃದ್ಧಿ ಸುಧಾರಿಸುವುದು ಮತ್ತು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮತ್ತು  700 ದಶಲಕ್ಷ ಡಾಲರ್ ಹೂಡಿಕೆ ಆಕರ್ಷಿಸುವುದು ಕ್ಲಸ್ಟರ್‌ನ ಮೂಲ ಉದ್ದೇಶ. 

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾತು
ಈ ಬಗ್ಗೆ  ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ  ಗೌರವ್ ಗುಪ್ತ, ಮತನಾಡಿ, ಆಟಿಕೆ ತಯಾರಿಕೆಯ ಭವ್ಯ ಪರಂಪರೆ ಹೊಂದಿರುವ ಕರ್ನಾಟಕ, ಈ ಉದ್ಯಮವನ್ನು ಬಲಪಡಿಸಲು ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ.  ಕೊಪ್ಪಳವನ್ನು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಎಂದು ಗುರುತಿಸಲಾಗಿದ್ದು, ಅದನ್ನು ವಿಶ್ವ ದರ್ಜೆಯ ಕ್ಲಸ್ಟರ್ ಆಗಿ ರೂಪಿಸಲು ಎಲ್ಲ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.