ರಾಜಧಾನಿ ನಾಗರಿಕರ ಸುರಕ್ಷತೆಗೆ 7500 ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ) ಕ್ಯಾಮೆರಾಗಳನ್ನು ಅಳವಡಿಸಿ ಖಾಕಿ ಕಣ್ಗಾವಲಿಡುವ ಅತ್ಯಾಧುನಿಕ ಮಟ್ಟದ ‘ಕಮಾಂಡ್ ಸೆಂಟರ್’ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.
ಬೆಂಗಳೂರು (ನ.24) : ರಾಜಧಾನಿ ನಾಗರಿಕರ ಸುರಕ್ಷತೆಗೆ 7500 ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ) ಕ್ಯಾಮೆರಾಗಳನ್ನು ಅಳವಡಿಸಿ ಖಾಕಿ ಕಣ್ಗಾವಲಿಡುವ ಅತ್ಯಾಧುನಿಕ ಮಟ್ಟದ ‘ಕಮಾಂಡ್ ಸೆಂಟರ್’ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.
ನಗರದ ಅಲಿ ಅಸ್ಗರ್ ರಸ್ತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಸೇಫ್ ಸಿಟಿ ಯೋಜನೆ (ನಿರ್ಭಯ ನಿಧಿ)ಯಡಿ ‘ಕಮಾಂಡ್ ಸೆಂಟರ್’ವನ್ನು ಬೆಂಗಳೂರು ನಗರ ಪೊಲೀಸರು ನಿರ್ಮಿಸಿದ್ದಾರೆ. ಈ ನೂತನ ಕಟ್ಟಡವನ್ನು ಶುಕ್ರವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ। ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮ್, ರಾಜೀವ್ ಚಂದ್ರಶೇಖರ್ ಸೇರಿದಂತೆ ಇತರರ ಪಾಲ್ಗೊಳ್ಳಲಿದ್ದಾರೆ.
ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬಿತ್ತು ₹500 ದಂಡ!
ಕಮಾಂಡ್ ಸೆಂಟರ್ ವಿಶೇಷತೆ:
ಬೆಂಗಳೂರು ಸುರಕ್ಷತೆ ಸಲುವಾಗಿ ನಿರ್ಭಯಾ ನಿಧಿಯಡಿ ₹661 ಕೋಟಿ ವೆಚ್ಚದಲ್ಲಿ ಸೇಫ್ ಸಿಟಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡಿವೆ. ಅದರನ್ವಯ ನಗರದ 3 ಸಾವಿರ ಸ್ಥಳಗಳಲ್ಲಿ 7500 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 3000 ಕ್ಯಾಮೆರಾಗಳು ಅಳವಡಿಕೆ ಆಗಿದ್ದು, ಇನ್ನುಳಿದ ಕ್ಯಾಮೆರಾಗಳ ಹಾಕುವ ಕಾರ್ಯಪ್ರಗತಿಯಲ್ಲಿದೆ. ಈ ವರ್ಷಾಂತ್ಯದಲ್ಲಿ ಎಲ್ಲ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ ಎಂದು ಹೆಚ್ಚುವರಿ ಆಯುಕ್ತ (ಪೂರ್ವ) ರಮಣ ಗುಪ್ತ ತಿಳಿಸಿದರು.
ಈ ಕ್ಯಾಮೆರಾಗಳ ಪೈಕಿ 6200 ಸ್ಥಿರ ಕ್ಯಾಮೆರಾ, 800 ಪಿಟಿಜಡ್ ಕ್ಯಾಮೆರಾ ಹಾಗೂ 400 ಹೈ ರೆಸಲೂಷನ್ ಕ್ಯಾಮೆರಾಗಳಿವೆ. ಈ ಎಲ್ಲ ಕ್ಯಾಮೆರಾಗಳು ಕಮಾಂಡರ್ ಸೆಂಟರ್‌ಗೆ ಸಂಪರ್ಕ ಕಲ್ಪಿಸಲಾಗಿದ್ದು, ಪ್ರತಿ ಕ್ಷಣದ ಮಾಹಿತಿ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ಡ್ರೋನ್ ಹಾಗೂ ಬಾಡಿವೋರ್ನ್ ಕ್ಯಾಮೆರಾ ಖರೀದಿಸಲಾಗುತ್ತಿದೆ ಎಂದರು.
ಅಲ್ಲದೆ ಪೊಲೀಸ್ ಆಯುಕ್ತ ಕಚೇರಿ ಕಟ್ಟಡದಲ್ಲಿದ್ದ ನಮ್ಮ-1122 (ಪೊಲೀಸ್ ನಿಯಂತ್ರಣ ಕೊಠಡಿ) ಹಾಗೂ ಸಿಸಿಟಿವಿ ಕ್ಯಾಮೆರಾ ನಿಗಾ ಘಟಕ ಸಹ ಕಮಾಂಡ್ ಸೆಂಟರ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮೆರಾಗಳಾಗಿವೆ. ಇವುಗಳಿಗೆ ಹಳೆಯ ಸುಮಾರು 30 ಸಾವಿರ ಕ್ರಿಮಿನಲ್‌ಗಳ ದತ್ತಾಂಶವನ್ನು ಸಂಯೋಜಿಸಲಾಗಿದೆ. ಆರ್ಫಿಕಲ್ ಕೇಬಲ್ ಆಧಾರಿತ ನೆಟ್ ವರ್ಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಕ್ಯಾಮೆರಾಗಳು ಸೆರೆ ಹಿಡಿಯುವ ದೃಶ್ಯಗಳು ನೇರ ಪ್ರಸಾರವಾಗಲಿವೆ. ಹಾಗೆಯೇ ಅವುಗಳಲ್ಲಿ ತಾನಾಗಿಯೇ ಚಿತ್ರೀಕರಣವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹೀಗಾಗಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ನಗರದಲ್ಲಿ ಸಂಚರಿಸಿದರೆ ಕೂಡಲೇ ಮಾಹಿತಿ ಸಿಗಲಿದೆ. ಆ ವ್ಯಕ್ತಿಯ ಮುಖಚಹರೆ ಕ್ಯಾಮೆರಾದಲ್ಲಿ ಸೆರೆಯಾದ ಕೂಡಲೇ ಆತನ ಪೂರ್ವಾಪರ ಮಾಹಿತಿ ಎಐ ಬಿತ್ತರಿಸಲಿದೆ. ಇದರಿಂದ ಅಪರಾಧ ಚಟುವಟಿಕೆಗಳಿಗೆ ಕೂಡ ಕಡಿವಾಣ ಹಾಕಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಯಾಮೆರಾದಲ್ಲಿ ಜಿಐಎಸ್
ಕ್ಯಾಮೆರಾಗಳಲ್ಲಿ ಜಿಯೋಗ್ರಾಫಿಕಲ್ ಇನ್‌ಫರ್ಮಮೇಷನ್ ಸಿಸ್ಟಮ್ (ಜಿಐಎಸ್) ಕಲ್ಪಿಸಲಾಗಿದೆ. ಇದರಿಂದ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-122)ಗೆ ಕರೆ ಮಾಡಿದರೆ ಕೂಡಲೇ ಸಂಕಷ್ಟದಲ್ಲಿ ಇರುವವರ ಲೋಕೇಷನ್ ಸಮೇತ ಮಾಹಿತಿ ಸಿಗಲಿದೆ. ಆಗ ಕ್ಷಣಾರ್ಧದಲ್ಲಿ ಸಂಕಷ್ಟದಲ್ಲಿದವರಿಗೆ ಪೊಲೀಸರು ನೆರವು ಸಿಗಲಿದೆ. ನಿಯಂತ್ರಣ ಕೊಠಡಿಯಲ್ಲಿ ಕರೆ ಸ್ವೀಕರಿಸಿದ ಕೂಡಲೇ ಲೋಕೇಷನ್ ಸಮೇತ ಆ ಸ್ಥಳದ ವ್ಯಾಪ್ತಿಯ ಠಾಣೆ ಪೊಲೀಸರು ಹಾಗೂ ಹೊಯ್ಸಳ ಸಿಬ್ಬಂದಿಗೆ ಮಾಹಿತಿಯನ್ನು ರವಾನಿಸಲಿದ್ದಾರೆ. ಅದರನ್ವಯ ಕಷ್ಟಕ್ಕೆ ಸಿಲುಕಿದವರಿಗೆ ಪೊಲೀಸರು ಸಹಾಯಹಸ್ತ ಚಾಚಲಿದ್ದಾರೆ.
ಇನ್ನು ತಮ್ಮ ಠಾಣಾ ಸರಹದ್ದಿನಲ್ಲಿರುವ ಅಳವಡಿಸಿರುವ ಈ ಕ್ಯಾಮೆರಾಗಳನ್ನು ವೀಕ್ಷಿಸುವ ಸೌಲಭ್ಯವನ್ನು 112 (ಕಾನೂನು ಮತ್ತು ಸುವ್ಯವಸ್ಥೆ) ಠಾಣೆಗಳು, 8 ಡಿಸಿಪಿ ಕಚೇರಿಗಳು ಹಾಗೂ 8 ಹೆಚ್ಚುವರಿ ವೀಕ್ಷಣಾ ಕೇಂದ್ರಗಳಿಗೆ ಕಲ್ಪಿಸಲಾಗಿದೆ. ಹಾಗೆಯೇ ಈ ಕ್ಯಾಮೆರಾಗಳಲ್ಲಿ ಅಡಕವಾದ ದತ್ತಾಂಶವು ಒಂದು ತಿಂಗಳು ಸಂಗ್ರಹಿಸಬಹುದು. ಹೀಗಾಗಿ ಅಪರಾಧ ಕೃತ್ಯಗಳು ನಡೆದಾಗ ಈ ದತ್ತಾಂಶವನ್ನು ತನಿಖೆಗೆ ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾತಿ ಗಣತಿ ಸಮಾಜ ಒಡೆಯುತ್ತದೆ ಎಂಬ ಎಚ್‌ಡಿಕೆ ಆರೋಪಕ್ಕೆ ಸಿಎಂ ತಿರುಗೇಟು
ಕ್ರೈಂ ಸ್ಫಾಟ್ ಗುರುತಿಸಲಿದೆ ಎಐ!
ನಗರದಲ್ಲಿ ಸರಗಳ್ಳತನ, ಕೊಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹೆಚ್ಚು ಅಪರಾಧ ಕೃತ್ಯ ನಡೆಯುವ ಸ್ಥಳಗಳನ್ನು ಎಐ ಕ್ಯಾಮೆರಾಗಳು ಗುರುತಿಸಲಿವೆ. ಸಾಮಾಜಿಕ ಜಾಲತಾಣಗಳು ಹಾಗೂ ಸೋಷಿಯಲ್ ಡೆಮೋಗ್ರಾಫಿಕ್ ಇಂಟೆಲಿಜೆನ್ಸ್ ನೆರವಿನಿಂದ ಅಪರಾಧ ಕೃತ್ಯಗಳು ಹಾಗೂ ಅವುಗಳು ವರದಿಯಾದ ಸ್ಥಳಗಳನ್ನು ಎಐ ವಿಶ್ಲೇಷಿಸಲಿದೆ. ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಬರುವ ಕರೆಗಳು ಹಾಗೂ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗುವ ಅಪರಾಧ ಕೃತ್ಯಗಳನ್ನು ಎಐ ಪರಾಮರ್ಶಿಸಲಿವೆ. ಈ ಮೂಲಕ ಹೆಚ್ಚು ಕ್ರೈಂ ನಡೆಯುವ ಸ್ಥಳಗಳನ್ನು ನಿಗದಿಪಡಿಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೆಂಗಳೂರಿನ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ನಾಗರಿಕರ ರಕ್ಷಣೆಗೆ ಸೇಫ್ ಸಿಟಿ ಯೋಜನೆಯಡಿ 7500 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಣ್ಣ ಅಹಿತಕರ ಘಟನೆ ಸಂಭವಿಸಿದರೂ ಕ್ಷಣಾರ್ಧದಲ್ಲಿ ಪೊಲೀಸರಿಗೆ ಮಾಹಿತಿ ಲಭ್ಯವಾಗಲಿದ್ದು, ಸಂಕಷ್ಟಕ್ಕೆ ತುತ್ತಾದವರಿಗೆ ಪೊಲೀಸರ ನೆರವು ಸಿಗಲಿದೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು
ಸೇಫ್ ಸಿಟಿ ಯೋಜನೆಯಡಿ ತಾಂತ್ರಿಕವಾಗಿ ಉನ್ನತ ಮಟ್ಟದ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ದತ್ತಾಂಶ ಸಂಯೋಜಿಸಲಾಗಿದೆ. ನಗರದಲ್ಲಿ ಶಂಕಾಸ್ಪದ ವ್ಯಕ್ತಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಓಡಾಟದ ಬಗ್ಗೆ ಕ್ಯಾಮೆರಾಗಳ ಮೂಲಕ ಕೂಡಲೇ ಮಾಹಿತಿ ಸಿಗಲಿದೆ. ನಗರ ಸುರಕ್ಷಿತವಾಗಲಿದೆ.
-ರಮಣ ಗುಪ್ತ, ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ).
