ಹುಬ್ಬಳ್ಳಿ [ಅ.24]:  ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ ತಿವಾರಿ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್‌ ಸಾದಿಕ್‌ ಜಾಫರ್‌ನನ್ನು ಕೇಂದ್ರ ತನಿಖಾ ತಂಡವು ಸ್ಲೀಪರ್‌ ಸೆಲ್‌ ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಪೊಲೀಸರು ಈ ಬಗ್ಗೆ ಜಂಟಿಯಾಗಿ ತನಿಖೆ ನಡೆಸುತ್ತಿದ್ದು ಶೀಘ್ರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಇದೇ ಸಂಶಯದ ಮೇರೆಗೆ ಸಾದಿಕ್‌ನನ್ನು ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದ ಮಾಹಿತಿ ಮೇರೆಗೆ ನಗರದಲ್ಲಿ ಪೊಲೀಸರು ಬಂಧಿಸಿ ಐಎಸ್‌ಡಿ ವಶಕ್ಕೆ ನೀಡಿದ್ದಾರೆ ಎಂದು ಹೇಳಿದರು.

ಆಂಧ್ರ, ಮಹಾರಾಷ್ಟ್ರಕ್ಕೆ ಪೊಲೀಸರು: ಇದೇವೇಳೆ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ವೆಗಳಿಗೆ ಉತ್ತರಿಸಿದ ಅವರು, ಆಂಧ್ರದಲ್ಲಿ ಈ ಬಗೆಯ ಸ್ಫೋಟಕವನ್ನು ಬಳಸುವ ಕುರಿತು ಪ್ರಾಥಮಿಕ ಹಂತದಲ್ಲಿ ಮಾಹಿತಿ ಸಿಕ್ಕಿದೆ. ಹೀಗಾಗಿ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ತನಿಖೆಗಾಗಿ ಪೊಲೀಸರು ತೆರಳಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ನಾಲ್ಕನೆಯ ಫ್ಲಾಟ್‌ಪಾಮ್‌ರ್‍ನಲ್ಲಿ ಸಿಕ್ಕ ಸ್ಫೋಟಕವನ್ನು ಒಂದನೆಯ ಫ್ಲಾಟ್‌ಫಾಮ್‌ರ್‍ಗೆ ತಂದು ಪರಿಶೀಲನೆ ನಡೆಸುವ ವೇಳೆ ಅದು ಸ್ಫೋಟಗೊಂಡಿತ್ತು. ಎಫ್‌ಎಸ್‌ಎಲ್‌ಗೆ ಸ್ಫೋಟಕದ ಮಾದರಿ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

ಮಹಾ ಚುನಾವಣೆ ಲಿಂಕ್‌ ಬಗ್ಗೆ ತನಿಖೆ: ಎಫ್‌ಎಸ್‌ಎಲ್‌ ರಿಪೋರ್ಟ್‌ ಬಂದ ಬಳಿಕ ಉಳಿದ ಸ್ಫೋಟಕಗಳನ್ನು ನಿಷ್ಕಿ್ರಯಗೊಳಿಸಲಾಗುವುದು. ಮಹಾರಾಷ್ಟ್ರ ಚುನಾವಣೆಗೆ ಲಿಂಕ್‌ ಇರುವ ಕುರಿತು ಹಾಗೂ ಅಲ್ಲಿನ ಶಾಸಕರೊಬ್ಬರ ಹೆಸರು ನಮೂದಾಗಿರುವ ಕುರಿತು ತನಿಖೆ ನಡೆಯುತ್ತದೆ. ಯಾವ ಕಾರಣಕ್ಕೆ ಈ ಚಿಕ್ಕಪುಟ್ಟಸ್ಫೋಟಕಗಳು ಬಂದಿವೆ ಎಂಬುದರ ಎಲ್ಲ ವಿಚಾರಗಳ ಕುರಿತಾಗಿ ಸಮಗ್ರ ತನಿಖೆ ನಡೆಯುತ್ತಿದೆ. ಹೀಗಾಗಿ ಈಗಲೇ ಪೂರ್ವಾಪರ ಹೇಳಿಕೆ ನೀಡುವುದು ಸರಿಯಲ್ಲ ಎಂದರು.