ಬೆಂಗಳೂರು :  ಮಹಾಲಕ್ಷ್ಮೀ ಲೇಔಟ್‌ ಶಾಸಕ ಕೆ.ಗೋಪಾಲಯ್ಯ ಸೋದರ ಬಸವರಾಜ್‌ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮರ್ಯಾದೆಗೇಡು ಹತ್ಯೆ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಬಿಜೆಪಿ ನಾಯಕರ ನಿಯೋಗ ಮನವಿ ಸಲ್ಲಿಸಿದೆ.

ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಡಿಜಿಪಿ ನೀಲಮಣಿ ಎನ್‌.ರಾಜು ಅವರನ್ನು ಭೇಟಿಯಾದ ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಪಕ್ಷದ ರಾಜ್ಯ ವಕ್ತಾರ ಅಶ್ವತ್‌್ಥನಾರಾಯಣ ನೇತೃತ್ವದ ನಿಯೋಗ, ನಿಷ್ಪಕ್ಷಪಾತವಾಗಿ ತನಿಖೆ ನಡೆದರೆ ಮನು ಹತ್ಯೆ ಹಿಂದಿರುವ ಪ್ರಭಾವಿಗಳ ಕೈವಾಡ ಬಯಲಾಗಲಿದೆ ಎಂದು ಹೇಳಿತು.

ಕೆಲ ತಿಂಗಳ ಹಿಂದೆ ಶಾಸಕರ ಕಿರಿಯ ಸೋದರನ ಪುತ್ರಿ ಪಲ್ಲವಿ ಜತೆ ಪ್ರೇಮ ವಿವಾಹವಾಗಿದ್ದ ಮನು ಎಂಬಾತನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣವು ಮರ್ಯಾದೆ ಹತ್ಯೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ವಿವಾಹವಾದ ನಂತರ ಕಳೆದೊಂದು ತಿಂಗಳಿಂದ ದಂಪತಿ ತುಮಕೂರಿನಲ್ಲಿ ನೆಲೆಸಿದ್ದರು. ಮೂರು ತಿಂಗಳ ಹಿಂದೆ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಬಸವರಾಜು ದೂರು ದಾಖಲಿಸಿದ್ದರು. ಆದರೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ನಮಗೆ ಜೀವ ಭಯವಿದೆ ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಮನು ಮತ್ತು ಪಲ್ಲವಿ ಅಲವತ್ತುಕೊಂಡಿದ್ದರು. ಇದೀಗ ಅವರ ಆತಂಕದಂತೆ ಭೀಕರವಾಗಿ ಮನು ಕೊಲೆಗೀಡಾಗಿದ್ದರೆ, ಪಲ್ಲವಿ ನಿಗೂಢವಾಗಿ ಕಣ್ಮರೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡಿದ್ದರೂ ಅವರಿಗೆ ಪೊಲೀಸರು ರಕ್ಷಣೆ ನೀಡದಿರುವ ಹಿಂದೆ ರಾಜಕೀಯ ಪ್ರಭಾವಿರಬಹುದು. ಪಲ್ಲವಿ ತಂದೆ ಸಹ ರೌಡಿ ಪಟ್ಟಿಯಲ್ಲಿದ್ದರೆ, ಆಕೆಯ ದೊಡ್ಡಪ್ಪ ಆಡಳಿತ ಪಕ್ಷದ ಪ್ರಭಾವಿ ಶಾಸಕರಾಗಿದ್ದಾರೆ. ಹೀಗಾಗಿ ರಾಜಕೀಯ ಶಂಕೆ ವ್ಯಕ್ತವಾಗಿದೆ ಎಂದು ದೂರಿದ್ದಾರೆ.

ಈ ನಿಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸದಾಶಿವ, ಮಾಜಿ ಉಪ ಮೇಯರ್‌ ಹರೀಶ್‌ ಹಾಗೂ ಮುಖಂಡ ಪ್ರಕಾಶ್‌ ಸೇರಿದಂತೆ ಮತ್ತಿತರರು ಇದ್ದರು.

ನನಗೂ ಮನು ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಎರಡು ದಿನಗಳು ಊರಿನಲ್ಲಿರಲಿಲ್ಲ. ಲೋಕಸಭೆ ಚುನಾವಣೆ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆ ವಿನಃ ಅನ್ಯ ವಿಷಯಕ್ಕಲ್ಲ. ಕೊಲೆ ಪ್ರಕರಣದಲ್ಲಿ ನನ್ನ ಹೆಸರು ಪ್ರಸ್ತಾಪಿಸಿ ಸುಮ್ಮನೆ ವಿವಾದ ಮಾಡಬೇಡಿ.

-ಕೆ.ಗೋಪಾಲಯ್ಯ, ಜೆಡಿಎಸ್‌ ಶಾಸಕ.