Asianet Suvarna News Asianet Suvarna News

ಭ್ರಷ್ಟಾಚಾರಕ್ಕೆ ಇನ್ಮುಂದೆ ಗ್ರಾಪಂ ಅಧ್ಯಕ್ಷರೂ ಹೊಣೆ?

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಕ್ರಮಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ತಪ್ಪಿತಸ್ಥರನ್ನಾಗಿ ಮಾಡುತ್ತಿತ್ತು. ಇನ್ಮುಂದೆ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಲು ಸಿದ್ಧತೆ ನಡೆಸುತ್ತಿದೆ.  

Grama Panchayat President  also responsible for corruption in karnataka grg
Author
First Published Aug 15, 2024, 7:24 AM IST | Last Updated Aug 15, 2024, 7:24 AM IST

ಆತ್ಮಭೂಷಣ್‌

ಮಂಗಳೂರು(ಆ.15):  ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಕ್ರಮಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ತಪ್ಪಿತಸ್ಥರನ್ನಾಗಿ ಮಾಡುತ್ತಿತ್ತು. ಇನ್ಮುಂದೆ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಲು ಸಿದ್ಧತೆ ನಡೆಸುತ್ತಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿಗಳಿಂದ ವರದಿ ಕೇಳಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಹಣಕಾಸು (ಲೆಕ್ಕಪತ್ರ ಮತ್ತು ಬಜೆಟ್‌) ವಿಚಾರಗಳಲ್ಲಿ ಪಿಡಿಒ ಮತ್ತು ಅಧ್ಯಕ್ಷರ ಜಂಟಿ ಸಹಿ ವ್ಯವಸ್ಥೆ ಇದೆ. ಇವರಿಬ್ಬರ ಸಹಿ ಮಾಡಿದ ನಂತರವೇ ಕಾಮಗಾರಿಗಳಿಗೆ ಹಣ ಮಂಜೂರು ಮಾಡಲಾಗುತ್ತದೆ. ಕೆಲವು ಬಾರಿ ಹಣಕಾಸು ವ್ಯವಹಾರದಲ್ಲಿ ಲೋಪವಿದ್ದರೂ ಅನುದಾನ ಬಿಡುಗಡೆಗೆ ಅಧ್ಯಕ್ಷರು ಸಹಿ ಮಾಡುತ್ತಾರೆ. ಆಗ ಪಿಡಿಒ ಏನೂ ಮಾಡಲಾಗದೆ ಮಂಜೂರಾತಿಗೆ ಒಪ್ಪಿಗೆ ಸೂಚಿಸುತ್ತಾರೆ. ಆದರೆ, ಲೆಕ್ಕಪರಿಶೋಧನೆ ವೇಳೆ ಅಕ್ರಮ ಬಯಲಾದಾಗ ಪಿಡಿಒಗಳು ಮಾತ್ರ ಇಲಾಖಾ ವಿಚಾರಣೆ ಎದುರಿಸಬೇಕಾಗುತ್ತದೆ. ಗ್ರಾಪಂ ಅಧ್ಯಕ್ಷರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರಿಂದ ಬೇಸತ್ತಿರುವ ಕರ್ನಾಟಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘ, ಸಹಿ ಅಧಿಕಾರ ಇರುವ ಜನಪ್ರತಿನಿಧಿಗಳನ್ನೂ ಭ್ರಷ್ಟಾಚಾರದಲ್ಲಿ ತಪ್ಪಿತಸ್ತರು ಎಂದು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಚುನಾಯಿತ ಪ್ರತಿನಿಧಿಗಳಿಗೆ ಮೂಗುದಾರ ಹಾಕಲು ನಿಯಮ ರೂಪಿಸುತ್ತಿದೆ. ಈ ಕುರಿತು ಜು.30ರಂದು ಕರ್ನಾಟಕ ಪಂಚಾಯತ್‌ರಾಜ್‌ ಆಯುಕ್ತಾಲಯದ ಎಲ್ಲಾ ಸಿಇಒಗಳಿಗೆ ಸುತ್ತೋಲೆ ಹೊರಡಿಸಿದ್ದು, ಪಿಡಿಒ, ಅಧ್ಯಕ್ಷರು, ಸದಸ್ಯರು ಹಾಗೂ ಎಂಜಿನಿಯರ್‌ ಮೇಲೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಭಿಪ್ರಾಯ ಕೋರಿದೆ. ನಂತರ ಸರ್ಕಾರ ಅಂತಿಮವಾಗಿ ನಿರ್ಧರಿಸಲಿದೆ.

ಒಂದು ರೂ. ಭ್ರಷ್ಟಾಚಾರ ಮಾಡಿಲ್ಲ: ಮಾರಿಗುಡಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಮಾಣ!

756 ಪಿಡಿಒ ವಿರುದ್ಧ ಕೇಸ್‌:

ರಾಜ್ಯದಲ್ಲಿರುವ 5,963 ಗ್ರಾಪಂಗಳಲ್ಲಿ 91,437 ಮಂದಿ ಚುನಾಯಿತ ಪ್ರತಿನಿಧಿಗಳಿದ್ದಾರೆ. 5,226 ಪಿಡಿಒಗಳಿದ್ದು, ಈ ಪೈಕಿ ಕಳೆದ 2 ವರ್ಷಗಳಲ್ಲಿ 756 ಪಿಡಿಒಗಳು ಹಗರಣಗಳ ವಿಚಾರಣೆ ಎದುರಿಸುತ್ತಿದ್ದಾರೆ. ಇವರಲ್ಲಿ 125 ಮಂದಿ ಅನಾರೋಗ್ಯ ಹಾಗೂ ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ಗ್ರಾಪಂಗಳ ಹಣಕಾಸು ನಿರ್ವಹಣೆಯಲ್ಲಿ ಪಿಡಿಒ ಜೊತೆಗೆ ಅಧ್ಯಕ್ಷರಿಗೂ ಜವಾಬ್ದಾರಿ ಇದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ತಿಳಿದುಕೊಂಡರೆ ಉತ್ತಮ ಆಡಳಿತಕ್ಕೆ ಸಹಕಾರಿಯಾಗುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಅಧ್ಯಕ್ಷರನ್ನೂ ಹೊಣೆಗಾರರನ್ನಾಗಿ ಮಾಡುವುದು ಸರಿಯಾದ ಕ್ರಮ ಎಂದು ಪಿಡಿಒ ಸಂಘದ ಅಧ್ಯಕ್ಷ ನಾಗೇಶ್‌ ತಿಳಿಸಿದ್ದಾರೆ. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್‌ ಕಾಯ್ದೆ 43(ಎ) ಪ್ರಕಾರ ತಪ್ಪು ಮಾಡಿದಾಗ ಗ್ರಾಪಂ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ನಷ್ಟ ವಸೂಲಿ ಬಗ್ಗೆ ನಿರ್ದಿಷ್ಟವಾಗಿ ಎಲ್ಲೂ ಉಲ್ಲೇಖವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios