ಪಣಜಿ(ಡಿ.14): ಕರ್ನಾಟಕ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಗೋವಾದಲ್ಲಿ ಗೋ ಮಾಂಸ ಮಾರಾಟಕ್ಕೆ ದೊಡ್ಡ ಹೊಡೆತ ನೀಡಲಿದೆ. ಇದು ಗೋವಾದ ಮಾಂಸ ವ್ಯಾಪರಿಗಳ ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಗೋವಾದಲ್ಲಿ ಗೋ ಮಾಂಸ ಕರಿ ಸಾಮಾನ್ಯ ಖಾದ್ಯ. ಗೋವಾದಲ್ಲಿ ನಿತ್ಯ ಸುಮಾರು 25 ಟನ್‌ ಗೋ ಮಾಂಸವನ್ನು ಸೇವಿಸಲಾಗುತ್ತಿದೆ.

ಕರ್ನಾಟಕದ ಬೆಳಗಾವಿಯಿಂದ ಗೋವುಗಳನ್ನು ಗೋವಾ ಮಾಂಸ ವ್ಯಾಪಾರಿಗಳು ಖರೀದಿ ಮಾಡುತ್ತಿದ್ದಾರೆ. ಆದರೆ, ನೂತನ ಕಾಯ್ದೆಯಿಂದ ಗೋವುಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ. ಗೋವಾದಲ್ಲೂ ಬಿಜೆಪಿ ಸರ್ಕಾರ ಗೋ ಹತ್ಯೆಗೆ ನಿಷೇಧ ಹೇರಿದ್ದು, ವಯಸ್ಸಾದ ಹಸುಗಳನ್ನು ಮಾತ್ರ ವೈದ್ಯರ ಪ್ರಮಾಣಪತ್ರ ನೀಡಿ ವಧೆ ಮಾಡಲು ಅನುಮತಿ ಇದೆ. ಅದೇ ರೀತಿ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲೂ ಗೋ ಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಹೀಗಾಗಿ ಗೋವಾದಲ್ಲಿ ಗೋ ಮಾಂಸಕ್ಕೆ ಅಭಾವ ಉಂಟಾಗಲಿದೆ.

ಕರ್ನಾಟಕ ಜಾರಿಗೊಳಿಸಲಿರುವ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಗೋವಾದಲ್ಲಿ ಗೋ ಮಾಂಸ ಸೇವನೆಯ ಮೇಲೆ ಅಷ್ಟೇ ಅಲ್ಲ, ಗೋ ಮಾಂಸ ವ್ಯಾಪಾರವನ್ನೇ ನಂಬಿಕೊಂಡಿರುವ ಸಾವಿರಾರುವ ವರ್ತಕರ ಕುಟುಂಬ ಸಂಕಷ್ಟಅನುಭವಿಸಲಿದೆ ಎಂದು ಎಂದು ಮಾಂಸ ವ್ಯಾಪಾರಿಗಳ ಸಂಘ ತಿಳಿಸಿದೆ.