ಭಾರೀ ಮಳೆಯಿಂದ ಈ ವರ್ಷ ಕೃಷಿ ಇಳುವರಿ ಕುಸಿತ ಭೀತಿ..!
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ಮಳೆಯಾಗಿದೆ. ಮಳೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಮಣ್ಣಿನ ತೇವಾಂಶ ಅಧಿಕವಾಗಿ ಬೆಳೆಗಳಿಗೆ ರೋಗಬಾಧೆ ಕಾಡುತ್ತಿದ್ದು, ಇಳುವರಿ ಕಡಿಮೆಯಾಗುವ ಆತಂಕವನ್ನೂ ರೈತರು ಎದುರಿಸುತ್ತಿದ್ದಾರೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಆ.25): ಆಗಸ್ಟ್‌ನಲ್ಲಿ ರಾಜ್ಯದ 15 ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದೆ. ಇದರಿಂದ ಮಣ್ಣಿನ ತೇವಾಂಶ ಪ್ರಮಾಣ ಹೆಚ್ಚಳವಾಗಿ ಒಂದೆಡೆ ಬೆಳೆಗಳಿಗೆ ರೋಗ ಬಾಧೆ ಎದುರಾಗಿದ್ದರೆ, ಮತ್ತೊಂದೆಡೆ ಇಳುವರಿ ಕುಸಿತದ ಭೀತಿ ಉಂಟಾಗಿದೆ. ಆಗಸ್ಟ್ 1ರಿಂದ 23ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ 63.9 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 140.9 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 89.3 ಮಿ.ಮೀ.ಗೆ ಬದಲಾಗಿ 112.4 ಮಳೆಯಾಗಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಎರಡು ಪಟ್ಟು ಅಧಿಕ ವರ್ಷಧಾರೆಯಾಗಿದೆ.
ಆದರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ಮಳೆಯಾಗಿದೆ. ಮಳೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಮಣ್ಣಿನ ತೇವಾಂಶ ಅಧಿಕವಾಗಿ ಬೆಳೆಗಳಿಗೆ ರೋಗಬಾಧೆ ಕಾಡುತ್ತಿದ್ದು, ಇಳುವರಿ ಕಡಿಮೆಯಾಗುವ ಆತಂಕವನ್ನೂ ರೈತರು ಎದುರಿಸುತ್ತಿದ್ದಾರೆ.
ಟಿಬಿ ಡ್ಯಾಂ ಭರ್ತಿಯಾಗಲು ಕೇವಲ 6 ಅಡಿ ನೀರು ಬಾಕಿ..!
ಮುಂಗಾರು ಹಂಗಾಮಿನಲ್ಲಿ 15.73 ಲಕ್ಷ ಹೆಕ್ಟೇರ್ ತೊಗರಿ, 4.36 ಲಕ್ಷ ಹೆಕ್ಟೇರ್ ಹೆಸರು, 6.69 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೋಗಬಾಧೆ ಆತಂಕ ಉಂಟಾಗಿದೆ. ಅಷ್ಟೇ ಅಲ್ಲ, 3.01 ಲಕ್ಷ ಹೆಕ್ಟೇರ್ ಶೇಂಗಾ, 5.13 ಲಕ್ಷ ಹೆಕ್ಟೇರ್ ರಾಗಿ ಸೇರಿದಂತೆ ಲಕ್ಷಾಂತರ ರೈತರು ಈರುಳ್ಳಿ ಬೆಳೆದಿದ್ದು ಭೂಮಿಯ ಅಧಿಕ ತೇವಾಂಶದಿಂದ ಇಳುವರಿ ಕುಸಿತವಾಗುವ ಸಂಕಷ್ಟ ಪರಿಸ್ಥಿತಿ ಉಂಟಾಗಿದೆ.
ಕೊಳೆ ರೋಗದ ಆತಂಕ:
ಉತ್ತರ ಕರ್ನಾಟಕ ಭಾಗದ ಪ್ರಮುಖ ದ್ವಿದಳ ಧಾನ್ಯ ಬೆಳೆಯಾದ ತೊಗರಿಯನ್ನು ಜೂನ್-ಜುಲೈನಲ್ಲಿ ಬಿತ್ತಿದ್ದು ಅಂತರ ಬೆಳೆಯಾಗಿ ಹೆಸರು, ಉದ್ದು ಹೆಚ್ಚಿನ ಪ್ರಮಾಣದಲ್ಲಿ ಹಾಕಲಾಗುತ್ತದೆ. ಇದೀಗ ತೊಗರಿ ಹೂವು, ಕಾಯಿ ಕಟ್ಟುವ ಹಂತದಲ್ಲಿದ್ದು ಜಮೀನುಗಳಲ್ಲಿ ನೀರು ನಿಂತರೆ ಕೊಳೆ ರೋಗಬಾಧೆ ಕಾಡಲಿದೆ. ತಡವಾಗಿ ಬಿತ್ತನೆಯಾದ ಅಲಸಂದೆಗೆ ಚುಕ್ಕೆರೋಗ, ಹೆಸರು ಬೆಳೆಗೆ ತುಕ್ಕುರೋಗದ ಬಾಧೆ ರೈತರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಏಪ್ರಿಲ್‌ನಿಂದ ಜೂನ್‌ವರೆಗೂ ಹತ್ತಿ ಬಿತ್ತನೆಯಾಗಿದ್ದು ಈಗ ಕಾಯಿ, ನೂಲು ಹೊರಡುವ ಸಮಯವಾಗಿದೆ. ತೇವಾಂಶ ಹೆಚ್ಚಾದರೆ ಕಾಯಿಕೊರಕ ಕಾಡಲಿದೆ. ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಬೆಳೆದಿರುವ ಶೇಂಗಾ ಬಿಳಲು ಬಿಡುವ, ಗೊಂಬೆ ಕಾಳಾಗುವ ಸಮಯ ಇದಾಗಿದ್ದು ಅಧಿಕ ಮಳೆಯಿಂದಾಗಿ ಕಾಯಿಗಳು ಜೊಳ್ಳಾಗಲಿವೆ.
ಕೊಳೆಯುತ್ತಿದೆ ಈರುಳ್ಳಿ:
ಹೆಚ್ಚು ಮಳೆ ಬೀಳುತ್ತಿರುವುದರಿಂದ ರಾಗಿ ಬೆಳೆ ಮೇಲೂ ಪ್ರತೀಕೂಲ ಪರಿಣಾಮ ಉಂಟಾಗಿದೆ. ತಗ್ಗು ಪ್ರದೇಶದ ರಾಗಿ ಕೊಳೆಯುತ್ತಿದೆ. ಮತ್ತೊಂದೆಡೆ, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಈರುಳ್ಳಿಯ ತೊಂಡೆ ಕೊಳೆಯುತ್ತಿದ್ದು, ಇಳುವರಿಗೆ ಹೊಡೆತ ಬೀಳಲಿದೆ. ಇದರಿಂದಾಗಿ ಭವಿಷ್ಯದಲ್ಲಿ ಈರುಳ್ಳಿ ಬೆಲೆ ದುಬಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲ ಜಿಲ್ಲೆಗಳಲ್ಲಿ ಕಡಿಮೆ ಮಳೆ ಆಗಿರುವುದನ್ನು ಹೊರತುಪಡಿಸಿದರೆ, ನೈಋತ್ಯ ಮುಂಗಾರು ರಾಜ್ಯದಲ್ಲಿ ಈ ಬಾರಿ ಉತ್ತಮವಾಗಿದೆ. ಜೂ.1ರಿಂದ ಆ.23ರವರೆಗೂ ಒಟ್ಟಾರೆ 647 ಮಿ.ಮೀ. ವಾಡಿಕೆಯ ಮಳೆ ಆಗಬೇಕಿತ್ತು. ಆದರೆ 789 ಮಿ.ಮೀ.ಮಳೆಯಾಗಿದೆ.
ಕರ್ನಾಟಕದಲ್ಲಿ ಇನ್ನೂ 1 ವಾರ ಭಾರಿ ಮಳೆ..!
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದು, ಮಣ್ಣಿನ ತೇವಾಂಶ ಅಧಿಕವಾಗಿದೆ. ಇದರಿಂದಾಗಿ ಹತ್ತಿ, ಅಲಸಂದೆ, ತೊಗರಿ ಬೆಳೆಗಳಿಗೆ ರೋಗಬಾಧೆ ಕಾಡುವ ಸಾಧ್ಯತೆ ಹೆಚ್ಚಾಗಿದೆ. ಶೇಂಗಾ, ಈರುಳ್ಳಿ ಇಳುವರಿ ಕುಂಠಿತವಾಗುವ ಸಂಭವವಿದೆ ಎಂದು ಹವಾಮಾನ ತಜ್ಞ ಎಂ.ಎನ್.ತಿಮ್ಮೇಗೌಡ ತಿಳಿಸಿದ್ದಾರೆ.
ಆ.1ರಿಂದ 23 ರವರೆಗಿನ ಮಳೆಯ ಪ್ರಮಾಣ(ಮಿ.ಮೀ): ಜಿಲ್ಲೆ ವಾಡಿಕೆ ವಾಸ್ತವಿಕ
ತುಮಕೂರು 59.8 206.9
ಚಿತ್ರದುರ್ಗ 48.2 135.5
ಕೋಲಾರ 67.8 151.6
ಚಾಮರಾಜನಗರ 50.2 113.1
ದಾವಣಗೆರೆ 77.8 159.3
ಬೆಂಗಳೂರು ನಗರ 88.1 148
ಬೆಂಗಳೂರು ಗ್ರಾಮಾಂತರ 79.5 158
ಬಳ್ಳಾರಿ 63.2 139.2
ವಿಜಯನಗರ 70.4 173.4
ಕೊಪ್ಪಳ 62.8 125.5