ರಾಜ್ಯದ ವಿದ್ಯುತ್‌ ಗರಿಷ್ಠ ಬೇಡಿಕೆ ಗರಿಷ್ಠ 15 ಸಾವಿರ ಮೆ.ವ್ಯಾಟ್‌ನಷ್ಟೇ ಮುಂದುವರೆದಿರುವುದರಿಂದ ಕೆಪಿಟಿಸಿಎಲ್‌ನಿಂದ ಎಸ್ಕಾಂಗಳಿಗೆ ವಿದ್ಯುತ್‌ ಮಿತ ಬಳಕೆಯ ಒತ್ತಡ ಮುಂದುವರೆದಿದೆ. ಹೀಗಾಗಿ ಎಸ್ಕಾಂಗಳು ವಿದ್ಯುತ್‌ ಸಮಸ್ಯೆ ನೀಗಿಸಲು ಪರದಾಡುವಂತಾಗಿದೆ.

ಬೆಂಗಳೂರು(ಆ.14): ರಾಜ್ಯದಲ್ಲಿ ವಿದ್ಯುತ್‌ ಅಭಾವ ಮುಂದುವರೆದಿದ್ದು ಆ.12 ರಂದು ಶನಿವಾರ ವಿದ್ಯುತ್‌ ಉತ್ಪಾದನೆ ಮತ್ತಷ್ಟುಕುಸಿತ ಕಂಡಿದೆ. ಆ.11 ರಂದು ಶುಕ್ರವಾರ ರಾಜ್ಯದ ವಿದ್ಯುತ್‌ ಉತ್ಪಾದನೆ ಮೂಲಗಳಿಂದ 4,101 ಮೆ.ವ್ಯಾಟ್‌ನಷ್ಟಿದ್ದ ಗರಿಷ್ಠ ಉತ್ಪಾದನೆ ಆ.12 ಶನಿವಾರಕ್ಕೆ 2,995 ಮೆ.ವ್ಯಾಟ್‌ಗೆ ಕುಸಿದಿದೆ. ಕೇಂದ್ರದ ಮೂಲಗಳಿಂದಲೂ ಉತ್ಪಾದನೆ ಕುಸಿತದಿಂದ ನಿಗದಿತ ವಿದ್ಯುತ್‌ ಪೂರೈಕೆಯಿಲ್ಲದ ಕಾರಣ ಅಭಾವ ಮುಂದುವರೆದಿದೆ.

ಶುಕ್ರವಾರ 88.66 ದಶಲಕ್ಷ ಯುನಿಟ್‌ನಷ್ಟುಆಗಿದ್ದ ರಾಜ್ಯದ ವಿವಿಧ ಘಟಕಗಳ ವಿದ್ಯುತ್‌ ಉತ್ಪಾದನೆ ಶನಿವಾರಕ್ಕೆ 15.66 ದಶಲಕ್ಷ ಯುನಿಟ್‌ನಷ್ಟುಕಡಿಮೆಯಾಗಿದೆ. ಕೇಂದ್ರದ ಮೂಲಗಳ ಉತ್ಪಾದನೆ 6 ದಶಲಕ್ಷ ಯುನಿಟ್‌ನಷ್ಟು ಹೆಚ್ಚಾಗಿದ್ದರೂ, ಒಟ್ಟಾರೆ ಕೊರತೆ ನೀಗಿಲ್ಲ. ರಾಜ್ಯದ ವಿದ್ಯುತ್‌ ಗರಿಷ್ಠ ಬೇಡಿಕೆ ಗರಿಷ್ಠ 15 ಸಾವಿರ ಮೆ.ವ್ಯಾಟ್‌ನಷ್ಟೇ ಮುಂದುವರೆದಿರುವುದರಿಂದ ಕೆಪಿಟಿಸಿಎಲ್‌ನಿಂದ ಎಸ್ಕಾಂಗಳಿಗೆ ವಿದ್ಯುತ್‌ ಮಿತ ಬಳಕೆಯ ಒತ್ತಡ ಮುಂದುವರೆದಿದೆ. ಹೀಗಾಗಿ ಎಸ್ಕಾಂಗಳು ವಿದ್ಯುತ್‌ ಸಮಸ್ಯೆ ನೀಗಿಸಲು ಪರದಾಡುವಂತಾಗಿದೆ.

Gruha Jyothi Scheme Twist: ಈ ದಿನಾಂಕದೊಳಗೆ ಹಿಂಬಾಕಿ ಪಾವತಿಸದಿದ್ದರೆ ಗೃಹಜ್ಯೋತಿ ಅನ್ವಯ ಆಗೊಲ್ಲ

ಪರಿಸ್ಥಿತಿ ಹೀಗಿದ್ದರೂ, ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ವಿದ್ಯುತ್‌ ಕಡಿತ ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದ ಪ್ರದೇಶಗಳಲ್ಲಿ ಭಾನುವಾರ ಎಸ್ಕಾಂಗಳು ವಿದ್ಯುತ್‌ ಪೂರೈಕೆ ಮಾಡಿವೆ. ಇದರಿಂದ ರೈತರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದು, ಬೇರೆಡೆ ವಿದ್ಯುತ್‌ ಕಡಿತ ಯಥಾವತ್ತಾಗಿ ಮುಂದುವರೆದಿದೆ. ಇನ್ನು ವಿದ್ಯುತ್‌ ಅಭಾವದಿಂದ ಇರುವ ವಿದ್ಯುತ್‌ನಲ್ಲೇ ನಿರ್ವಹಣೆ ಮಾಡುವುದು ಅನಿವಾರ್ಯ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶನಿವಾರವೂ ಉತ್ಪಾದನೆ ಕುಸಿತ:

ರಾಜ್ಯಕ್ಕೆ ವಿದ್ಯುತ್‌ ಪೂರೈಸುವ ಕೇಂದ್ರದ ವಿದ್ಯುತ್‌ ಉತ್ಪಾದನೆ ಘಟಕಗಳಾದ ತಮಿಳುನಾಡಿನ ನೈವೇಲಿ ಉಷ್ಣವಿದ್ಯುತ್‌ ಸ್ಥಾವರದಲ್ಲಿನ ಮೂರು ಘಟಕದಲ್ಲಿ ಕಲ್ಲಿದ್ದಲು ಸೋರಿಕೆ ಕಾರಣ ನೀಡಿ ಶನಿವಾರವೂ ವಿದ್ಯುತ್‌ ಉತ್ಪಾದನೆಯಾಗಿಲ್ಲ. ಕೂಡಗಿಯಲ್ಲಿನ ಎನ್‌ಟಿಪಿಸಿ ಘಟಕದಲ್ಲಿ ಕಲ್ಲಿದ್ದಲು ಪೂರೈಕೆ ಸಮಸ್ಯೆ, ತಮಿಳುನಾಡಿನ ಎನ್‌ಟಿಸಿಇಎಲ್‌ ಟರ್ಬೈನ್‌ ಸಮಸ್ಯೆ, ಎಂಎಪಿಎಸ್‌ ಎರಡು ಘಟಕಗಳಲ್ಲಿ ನಿರ್ವಹಣೆ, ವಿಶಾಖಪಟ್ಟಣಂನ ಎನ್‌ಟಿಪಿಸಿಯಲ್ಲೂ ನಿರ್ವಹಣೆ ಕಾರಣ ನೀಡಿ ವಿದ್ಯುತ್‌ ಉತ್ಪಾದನೆ ಕಡಿಮೆ ಮಾಡಲಾಗಿದೆ.

ಇನ್ನು ರಾಜ್ಯದಲ್ಲಿನ ಆರ್‌ಟಿಪಿಎಸ್‌ 1, 2, 3, 4 ಹಾಗೂ 8ನೇ ಘಟಕ, ಬಿಟಿಪಿಎಸ್‌ನ ಎರಡು ಘಟಕ, ವೈಟಿಪಿಎಸ್‌ನ ಒಂದು ಘಟಕ ಉತ್ಪಾದನೆ ಮಾಡಿಲ್ಲ. ಹೀಗಾಗಿ ಕೊರತೆ ಮುಂದುವರೆದಿದೆ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!

ಅನಧಿಕೃತ ಕರ್ಟೈಲ್‌ಮೆಂಟ್‌ಗೆ ಮೊರೆ:

ವಿದ್ಯುತ್‌ ಉತ್ಪಾದನೆ ಕೊರತೆಯಿಂದಾಗಿ ಕೆಪಿಟಿಸಿಎಲ್‌ ಎಸ್ಕಾಂಗಳಿಗೆ ಆ.8 ರಿಂದ ಆ.11 ರವರೆಗೆ ನಿರ್ದಿಷ್ಟಸಮಯಗಳಲ್ಲಿ ಗ್ರಿಡ್‌ನಿಂದ ಇಂತಿಷ್ಟುಕಡಿಮೆ ವಿದ್ಯುತ್‌ ಡ್ರಾ ಮಾಡಬೇಕು ಎಂದು ಕರ್ಟೈಲ್‌ಮೆಂಟ್‌ (ಮಿತಿ) ಹೇರಿತ್ತು.
ಈ ಬಗ್ಗೆ ದಾಖಲೆ ಕಲೆ ಹಾಕಿ ಆ.12 ರಂದು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಆ.13 ರಂದು ಬಿಡುಗಡೆ ಮಾಡಿರುವ ಆ.12ರ ಲೋಡ್‌ ಕವ್‌ರ್‍ ವರದಿಯಲ್ಲಿ ಕರ್ಟೈಲ್‌ಮೆಂಟ್‌ ನಿಲ್‌ ಎಂದು ತೋರಿಸಲಾಗಿದೆ. ಕಳೆದ ಐದು ದಿನಗಳಿಗೆ ಹೋಲಿಸಿದರೆ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಯಥಾಸ್ಥಿತಿ ಮುಂದುವರೆದಿದೆ. ಹೀಗಿದ್ದರೂ ಕರ್ಟೈಲ್‌ಮೆಂಟ್‌ ಇಲ್ಲ ಎಂದು ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಕೆಪಿಟಿಸಿಎಲ್‌ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರೆ ವಿವಾದ ಆಗದಿರಲಿ ಎಂಬ ಕಾರಣಕ್ಕೆ ಕಾಲಂನಲ್ಲಿ ಮಾಹಿತಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು. ಹೀಗಾಗಿ ಕೆಪಿಟಿಸಿಎಲ್‌ ಅನಧಿಕೃತ ಕರ್ಟೈಲ್‌ಮೆಂಟ್‌ ಮೊರೆ ಹೋದಂತಾಗಿದೆ.

ಭಾನುವಾರ ಹಲವೆಡೆ ನಿಯಮಿತ ವಿದ್ಯುತ್‌ ಪೂರೈಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿದ್ದ ಹಲವು ಕಡೆ ಭಾನುವಾರ ವಿದ್ಯುತ್‌ ಪೂರೈಕೆ ಮಾಡಲಾಗಿದೆ. ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರದ ಹಲವು ತಾಲೂಕುಗಳಲ್ಲಿ ಅನಿಯಮಿತ ವಿದ್ಯುತ್‌ ಕಡಿತಗಳು ಹೆಚ್ಚಾಗಿದ್ದವು. ಭಾನುವಾರ ಈ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.