Asianet Suvarna News Asianet Suvarna News

ದೀಪ ಅಭಿಯಾನ ವೇಳೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ!

ದೀಪ ಅಭಿಯಾನ ವೇಳೆ ಸಮಸ್ಯೆ ಆಗದಂತೆ ಕ್ರಮ| ಭಯ ಬೇಡ-ಜಲವಿದ್ಯುತ್‌ ಮಾತ್ರ ಪೂರೈಸಿ ಸಮಸ್ಯೆ ಎದುರಿಸಲು ಸಿದ್ಧತೆ

During Light The Lamb Campaign Electricity Problem Will Not Occur Says KPTCL
Author
Bangalore, First Published Apr 5, 2020, 11:16 AM IST

ಬೆಂಗಳೂರು(ಏ.05): ಭಾನುವಾರ ರಾತ್ರಿ 9 ಗಂಟೆಗೆ ಎಲ್ಲಾ ಮನೆಗಳಲ್ಲೂ ವಿದ್ಯುತ್‌ ದೀಪಗಳನ್ನು 9 ನಿಮಿಷ ಆರಿಸುವುದರಿಂದ ರಾಜ್ಯದಲ್ಲಿ ಏಕಾಏಕಿ ಸುಮಾರು 700 ಮೆ.ವ್ಯಾಟ್‌ನಿಂದ 750 ಮೆ.ವ್ಯಾಟ್‌ನಷ್ಟು ವಿದ್ಯುತ್‌ ಬಳಕೆ ಕಡಿಮೆಯಾಗಲಿದೆ. ಈ ವೇಳೆ ವಿದ್ಯುತ್‌ ಪೂರೈಕೆ ವ್ಯವಸ್ಥೆ ಮೇಲೆ ಉಂಟಾಗುವ ತಾಂತ್ರಿಕ ದುಷ್ಪರಿಣಾಮ ತಡೆಯಲು ಜಲವಿದ್ಯುತ್‌ ಉತ್ಪಾದನಾ ಕೇಂದ್ರಗಳ ಮೇಲೆ ಹೆಚ್ಚು ಹೊರೆ ಹಾಕುವುದೂ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕೆಪಿಟಿಸಿಎಲ್‌ ಸಿದ್ಧತೆ ಮಾಡಿಕೊಂಡಿದೆ.

ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್‌ ದೀಪ ಆರಿಸಿ ಎಣ್ಣೆ ದೀಪ ಅಥವಾ ಮೋಂಬತ್ತಿ ಬೆಳಗಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರಿಂದ ಸುಮಾರು 750 ಮೆ.ವ್ಯಾಟ್‌ ವಿದ್ಯುತ್‌ ಬಳಕೆ ಹಠಾತ್‌ ಕುಸಿಯಲಿದೆ. ಈ ರೀತಿ ಏಕಾಏಕಿ ವ್ಯತ್ಯಯ ಉಂಟಾದರೆ ವಿದ್ಯುತ್‌ ಗ್ರಿಡ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗುತ್ತದೆ. ಉಷ್ಣ ವಿದ್ಯುತ್‌ ಶಕ್ತಿ ಸೇರಿದಂತೆ ಯಾವುದೇ ಗ್ರಿಡ್‌ನಿಂದ ಏಕಾಏಕಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವ ಹಾಗೂ ಪುನರ್‌ ಆರಂಭಿಸುವ ಅವಕಾಶವಿಲ್ಲ. ಈ ರೀತಿ ಲೋಡ್‌ನಲ್ಲಿ ವ್ಯತ್ಯಯ ಉಂಟಾದರೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಜನರೇಟರ್‌ಗಳು ಹಾಳಾಗುವ ಸಾಧ್ಯತೆಗಳು ಇರುತ್ತವೆ.

ಹೀಗಾಗಿ ರಾಜ್ಯ ಇಂಧನ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು (ಕೆಪಿಟಿಸಿಎಲ್‌) ತನ್ನ ಜಲವಿದ್ಯುತ್‌ ಸಾಮರ್ಥ್ಯ ಬಳಕೆ ಮಾಡಿಕೊಂಡು ಈ ಸವಾಲನ್ನು ಎದುರಿಸಲು ಮುಂದಾಗಿದೆ. ಜಲವಿದ್ಯುತ್‌ ಸ್ಥಾವರಗಳಿಂದ 1,500 ಮೆ.ವ್ಯಾಟ್‌ವರೆಗೆ ವಿದ್ಯುತ್‌ ಉತ್ಪಾದಿಸಿ ಪೂರೈಕೆ ಮಾಡುವ ಮೂಲಕ ಜಲವಿದ್ಯುತ್‌ ಮೇಲೆ ಲೋಡ್‌ ಹೆಚ್ಚಳ ಮಾಡಿಕೊಳ್ಳಲಾಗುತ್ತದೆ. ಜಲವಿದ್ಯುತ್‌ನಿಂದ ಏಕಾಏಕಿ ಶೇ.85ರಿಂದ 90ರಷ್ಟುವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸುವ ಹಾಗೂ ಪುನರ್‌ ಆರಂಭಿಸಲು ಅವಕಾಶವಿದೆ. ಹೀಗಾಗಿ 8 ಗಂಟೆಯಿಂದ 9 ಗಂಟೆ ವೇಳೆಗೆ ಏಕಾಏಕಿ ವಿದ್ಯುತ್‌ ಉತ್ಪಾದನೆಯನ್ನು ಶೇ.70ರಿಂದ 90ರಷ್ಟುಕಡಿಮೆ ಮಾಡಿಕೊಳ್ಳಲಾಗುವುದು. 9 ಗಂಟೆ 9 ನಿಮಿಷಕ್ಕೆ ಮತ್ತೆ ಜಲ ವಿದ್ಯುತ್‌ ಸ್ಥಾವರಗಳಿಂದ ವಿದ್ಯುತ್‌ ಉತ್ಪಾದನೆ ಮಾಡಿ ಯಥಾಸ್ಥಿತಿಯಲ್ಲಿ ವಿದ್ಯುತ್‌ ಪೂರೈಕೆ ಮುಂದುವರೆಸಲಾಗುವುದು ಎಂದು ಕೆಪಿಟಿಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್‌ ಉಪಕರಣ ಆನ್‌ ಮಾಡಬಹುದು:

9 ಗಂಟೆಗೆ ಕೇವಲ ವಿದ್ಯುತ್‌ ದೀಪ ಆಫ್‌ ಮಾಡಿ ಉಳಿದಂತೆ ಫ್ಯಾನ್‌, ರೆಫ್ರಿಜರೇಟರ್‌, ಕೂಲರ್‌, ಎ.ಸಿ.ಯಂತಹ ಎಲ್ಲಾ ವಿದ್ಯುತ್‌ ಉಪಕರಣಗಳನ್ನೂ ಆನ್‌ನಲ್ಲಿಡಬಹುದು. ಇದರಿಂದ ಯಾವುದೇ ವೋಲ್ಟೇಜ್‌ ಸಮಸ್ಯೆ ಉಂಟಾಗುವುದಿಲ್ಲ. ನಿಮ್ಮ ವಿದ್ಯುತ್‌ ಉಪಕರಣಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪ್ರಧಾನಮಂತ್ರಿಗಳು ನೀಡಿದ ಕರೆಯಂತೆ ನೀವು ವಿದ್ಯುತ್‌ ದೀಪ ಆರಿಸಿದರೆ ಸಾಕು ಎಂದು ಕೆಪಿಟಿಸಿಎಲ್‌ ಅಧಿಕಾರಿ ಎನ್‌. ಮಂಜುಳಾ ತಿಳಿಸಿದ್ದಾರೆ.

ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಇಳಿಕೆ:

ರಾಜ್ಯದಲ್ಲಿ ಮಾ.15ರಂದು 254 ದಶಲಕ್ಷ ಯೂನಿಟ್‌ನಷ್ಟಿದ್ದ ವಿದ್ಯುತ್‌ ಬಳಕೆ ಲಾಕ್‌ಡೌನ್‌ನಿಂದಾಗಿ ಏ.3ರ ವೇಳೆಗೆ 227.22 ಮಿಲಿಯನ್‌ ಯೂನಿಟ್‌ನಷ್ಟಾಗಿದೆ. ಮೆಗಾ ವ್ಯಾಟ್‌ನಲ್ಲಿ ಸುಮಾರು 10,500 ಮೆ.ವ್ಯಾಟ್‌ನಷ್ಟಿದ್ದ ಬೇಡಿಕೆ 8,500 ಮೆ.ವ್ಯಾಟ್‌ಗೆ ಕುಸಿದಿದೆ. ಭಾನುವಾರ 9 ನಿಮಿಷಗಳ ಕಾಲ ವಿದ್ಯುತ್‌ ದೀಪ ಆರಿಸುವುದರಿಂದ 750 ವ್ಯಾಟ್‌ನಷ್ಟುವಿದ್ಯುತ್‌ ಬಳಕೆ ಕಡಿಮೆಯಾಗುವ ಅಂದಾಜಿದೆ.

Follow Us:
Download App:
  • android
  • ios