ಬರ ನಿರ್ವಹಣೆ: ರೈತರ ನೆರವಿಗೆ ಧಾವಿಸಲು ಸಚಿವ ಕೃಷ್ಣ ಬೈರೇಗೌಡ ತಾಕೀತು
ರಾಜ್ಯದ 223 ಬರ ಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕಾರ್ಯಪಡೆ ರಚಿಸಲಾಗಿದೆ. ಅಧಿಕಾರಿಗಳು ಸಂಭಾವ್ಯ ಬರದ ಸಮಸ್ಯೆ ಎದುರಿಸಲು ಈಗಿನಿಂದಲೇ ತಯಾರಾಗಿ, ಸಮಸ್ಯೆ ಎದುರಾದ ಮೇಲೆ ಪರಿಹಾರ ಹುಡುಕುವುದಲ್ಲ.
ಬೆಂಗಳೂರು (ನ.17): ರಾಜ್ಯದ 223 ಬರ ಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕಾರ್ಯಪಡೆ ರಚಿಸಲಾಗಿದೆ. ಅಧಿಕಾರಿಗಳು ಸಂಭಾವ್ಯ ಬರದ ಸಮಸ್ಯೆ ಎದುರಿಸಲು ಈಗಿನಿಂದಲೇ ತಯಾರಾಗಿ, ಸಮಸ್ಯೆ ಎದುರಾದ ಮೇಲೆ ಪರಿಹಾರ ಹುಡುಕುವುದಲ್ಲ. ರೈತರಿಗೆ ಬೆಳೆ ವಿಮೆ ನೆರವನ್ನು ತಲುಪಿಸಲು ಫಾಸ್ಟ್ ಟ್ರ್ಯಾಕ್‌ನಲ್ಲಿ ಕೆಲಸ ಮಾಡಿ ಎಂದು ಹಿರಿಯ ಅಧಿಕಾರಿಗಳಿಗೆ ಸಂಪುಟ ಉಪ ಸಮಿತಿ ತಾಕೀತು ಮಾಡಿದೆ. ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗಾಗಿ ರಚನೆಯಾಗಿರುವ ವಿವಿಧ ಸಚಿವ, ಶಾಸಕರನ್ನೊಳಗೊಂಡ ಸಂಪುಟ ಉಪ ಸಮಿತಿಯ ಸಭೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.
ಸಭೆಯ ಬಳಿಕ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, 223 ಬರ ತಾಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಅಧಿಕಾರಿಗಳು ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದೋ ಆ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಬೇಕು. ಸದ್ಯ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೂ, ಜನವರಿಯ ವೇಳೆಗೆ ಸಮಸ್ಯೆ ಆಗಬಹುದೆಂದು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. 324 ಕೋಟಿ ರು. ಹೆಚ್ಚುವರಿ ಬಿಡುಗಡೆ ಮಾಡಿದ್ದು, ಒಟ್ಟು 783 ಕೋಟಿ ರು. ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಲಭ್ಯವಿದೆ ಎಂದು ವಿವರಿಸಿದರು. ಈವರೆಗೆ ಮೇವಿನ ತೀವ್ರ ಸಮಸ್ಯೆ ಬಂದಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗುತ್ತದೆ.
ಪ್ರಧಾನಿ ಮೋದಿಯಿಂದ ಪ್ರಚಾರಕ್ಕೆ ಐಎಎಸ್‌ಗಳ ಬಳಕೆ: ಸಚಿವ ಮಹದೇವಪ್ಪ
ಮೇವಿನ ಕೊರತೆ ಬರಬಹುದು, ಅದನ್ನು ತಡೆಗಟ್ಟಲು ಏಳು ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ರೈತರಿಗೆ ವಿತರಿಸಲಾಗುತ್ತಿದೆ. ಹಾಗೆಯೇ ಗಡಿ ಜಿಲ್ಲೆಗಳಿಂದ ಹೊರ ರಾಜ್ಯಗಳಿಗೆ ಮೇವು ಸಾಗಣೆ ನಿರ್ಬಂಧಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರೈತರು ಬೆಳೆ ವಿಮೆಗೆ ಮಾರ್ಚ್‌ವರೆಗೆ ಕಾಯುವುದಲ್ಲ. ಜನವರಿಯಲ್ಲೇ ಜಾರಿಗೊಳಿಸಲು ಮುಂಜಾಗ್ರತೆಯಿಂದ ಫಾಸ್ಟ್ ಟ್ರ್ಯಾಕ್‌ನಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಅಭಿವೃದ್ಧಿ ಆಯುಕ್ತರು ಅನೇಕ ಸಲಹೆ ನೀಡಿದ್ದಾರೆ. ಕೃಷಿ ಹೊಂಡ ಮಾಡಿಕೊಂಡೇ ಮುಂದಿನ ಸಾಲುಗಳಲ್ಲಿ ಬರ ಬಂದಾಗ ಬೆಳೆ ಉಳಿಸಲು ಸಾಧ್ಯವಿದೆ.
ಹೀಗಾಗಿ ಇನ್ನೂರು ಕೋಟಿ ರು. ವೆಚ್ಚದಲ್ಲಿ ಕೃಷಿ ಹೊಂಡ ಅನುಷ್ಠಾನ ಮಾಡುವುದು ಹಾಗೂ ಹನಿ ನೀರಾವರಿಗೆ ಪ್ರೋತ್ಸಾಹ ಕೊಡಬೇಕು. ಎಂಟು ನೂರು ಕೋಟಿ ರು.ಗೆ ಹನಿ ನೀರಾವರಿಗೆ ಸಹಾಯಧನ ಕೊಡುವ ಪ್ರಸ್ತಾವನೆಗೆ ಒಪ್ಪಿ ತಕ್ಷಣ ಜಾರಿಗೆ ಸೂಚನೆ ನೀಡಲಾಗಿದೆ. ಇನ್ನು ಕಳೆದ ಬಾರಿಯ ವಿಮೆ ಹಣ ರೈತರಿಗೆ ತಕ್ಷಣ ಪರಿಹಾರ ಕೊಡಲು ಕೃಷಿ ಇಲಾಖೆ ಮುಂದಾಗಿದೆ. ಈ ಮುಖೇನ 230 ಕೋಟಿ ರು. ತಲುಪಿಸುತ್ತಿದ್ದು, ವಿಮೆ ಕಂಪನಿ ಕರೆಸಿ ಬಾಕಿ ಹಣವನ್ನು ರೈತರ ಖಾತೆಗೆ ವರ್ಗಾಯಿಸಲು ಸೂಚಿಸಲಾಗಿದೆ ಎಂದರು. ಈ ಸಾಲಿನಲ್ಲಿ ಯಾವುದೇ ವಿಳಂಬ ಇಲ್ಲದೇ ಬೆಳೆ ವಿಮೆ ರೈತರಿಗೆ ಸಿಗಬೇಕು, ಎರಡು ಸಾವಿರ ಕೋಟಿ ಸಿಗಬಹುದು ಎಂಬ ಅಂದಾಜಿದೆ. ರೈತರಿಗೆ ಇದು ಲಭ್ಯ ಆಗುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಉಡುಪಿ ನಾಲ್ವರ ಬರ್ಬರ ಹತ್ಯೆ ಪ್ರಕರಣ: ವರ್ಲ್ಡ್ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದ ಹಿಂದೂ ಮಂತ್ರ ಪೇಜ್!
ನರೇಗಾದಡಿ 150 ದಿನ ಉದ್ಯೋಗಕ್ಕೆ ಕೇಂದ್ರಕ್ಕೆ ಮನವಿ: ಕೃಷಿ ಚಟುವಟಿಕೆ ಕಡಿಮೆ ಆದಾಗ ಉದ್ಯೋಗ ಕೊಡಲು ನರೇಗಾದಡಿ 13 ಕೋಟಿ ಮಾನವ ದಿನ ಲಭ್ಯವಿದ್ದು 10.30 ಕೋಟಿ ಮಾನವ ದಿನಗಳು ಈಗಾಗಲೇ ಬಳಕೆ ಆಗಿದೆ. ಜಾಬ್ ಕಾರ್ಡ್ ಹೊಂದಿರುವವರೇ ಶೇ.80 ರಷ್ಟು ದಿನ ಬಳಸಿಕೊಂಡಿದ್ದಾರೆ. ಇದನ್ನು 150 ದಿನ ಬಳಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಕೇಂದ್ರಕ್ಕೆ ಮನವಿ ಮಾಡಿದ್ದು ನರೇಗಾ ದಿನವನ್ನು 18 ಕೋಟಿ ಮಾನವ ದಿನಗಳಿಗೆ ಹೆಚ್ಚಿಸಲು ನಾವು ದೆಹಲಿಗೆ ಹೋದಾಗ ಒತ್ತಾಯಿಸಲಾಗಿದೆ. ಮತ್ತೆ ಮುಖ್ಯ ಕಾರ್ಯದರ್ಶಿ ಮೂಲಕ ಮತ್ತೆ ಮನವಿ ಮಾಡಲು ಸಂಪುಟ ಉಪ ಸಮಿತಿ ನಿರ್ಧರಿಸಿತು ಎಂದು ಹೇಳಿದರು.