ಶರವೇಗದ ಚೀತಾ ಬಗ್ಗೆ ನಿಮಗೆ ಗೊತ್ತಾ?

ಭಾರತಕ್ಕೆ 70 ವರ್ಷ ಬಳಿಕ ಚೀತಾ ಪರಿಚಯಗೊಂಡಿವೆ. ಚೀತಾ ಸಾಮಾನ್ಯ ಪ್ರಾಣಿಯಲ್ಲ. ಅದರ ಬಗ್ಗೆ ತಿಳಿಯಬೇಕಾದ ಅನೇಕ ವಿಚಾರಗಳಿವೆ. ಬಹಳಷ್ಟುಜನರಿಗೆ ಅದರ ಬಗ್ಗೆ ಗೊತ್ತಿಲ್ಲ. ಹೀಗಾಗಿ ಚೀತಾ ಬಗ್ಗೆ ಗೊತ್ತಿರದ ಅನೇಕ ವಿಷಯಗಳನ್ನು ಇಲ್ಲಿ ಚುಟುಕಾಗಿ ಹಂಚಿಕೊಳ್ಳಲಾಗಿದೆ.

 

Do you know about Cheetahrav

ಜಗತ್ತಿನಲ್ಲೇ ಅತಿ ವೇಗದ ಪ್ರಾಣಿಯಾದ ಚೀತಾ, ಕೇವಲ 3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. ಆದರೆ ಈ ವೇಗ ಕೇವಲ 30 ಸೆಕೆಂಡ್‌ಗೆ ಸೀಮಿತ. ಅದಕ್ಕಿಂತ ಹೆಚ್ಚು ಸಮಯ ಭಾರೀ ವೇಗ ಕಾಪಾಡಿಕೊಳ್ಳಲಾಗದು.

ಕೇವಲ 30 ಸೆಕೆಂಡಲ್ಲಿ ಬೇಟೆ ಹಿಡಿಯಬೇಕು

ಚಿರತೆ ವೇಗವಾಗಿ ಓಡಲು ಕೇವಲ 30 ಸೆಕೆಂಡು ಮಾತ್ರ ಸಾಧ್ಯ. ಹೀಗಾಗಿಯೇ ಅದು ತನ್ನ ಬೇಟೆಯನ್ನು ಕೇವಲ ಈ ಸಮಯದಲ್ಲೇ ಹಿಡಿಯಬೇಕು. ಇಲ್ಲದಿದ್ದಲ್ಲಿ ಅದು ಬೇಟೆಯನ್ನೇ ಬಿಟ್ಟುಬಿಡುತ್ತದೆ. ಈ ಕಾರಣದಿಂದಲೇ ಇದರ ಬೇಟೆಯ ಯಶಸ್ಸಿನ ಪ್ರಮಾಣ ಶೇ.40- ಶೇ.50 ಮಾತ್ರ.

ಬೇಟೆಯಾಡಿದ ಮೇಲೆ ವಿಶ್ರಾಂತಿ ಬೇಕು

ಭಾರೀ ವೇಗದಲ್ಲಿ ಚಲಿಸಿ ಯಶಸ್ವಿ ಬೇಟೆಯ ಬಳಿಕ ಚೀತಾಗೆ ಕೊಂಚ ವಿಶ್ರಾಂತಿ ಬೇಕು. ಹೀಗಾಗಿ ಅದು ಬಾಯಲ್ಲಿ ಬೇಟೆ ಹಿಡಿದುಕೊಂಡು ಕೆಲ ಸಮಯ ವಿಶ್ರಾಂತಿ ಪಡೆಯುತ್ತದೆ. ಹೀಗಾಗಿಯೇ ಚೀತಾ ಬೇಟೆಯಾಡಿದ ಪ್ರಾಣಿಗಳನ್ನು ಬಹುತೇಕ ಬಾರಿ ಚಿರತೆ, ಬೇಟೆ ನಾಯಿ, ಕತ್ತೆ ಕಿರುಬ ಮೊದಲಾದ ಪ್ರಾಣಿಗಳು ಎಗರಿಸಿಕೊಂಡು ಹೋಗುತ್ತವೆ. ರಣಹದ್ದುಗಳ ಕೂಡಾ ಇಂಥ ಸಮಯದಲ್ಲಿ ಚೀತಾಗಳನ್ನು ಬೆದರಿಸಿ ಅವುಗಳ ಆಹಾರ ಕಿತ್ತುಕೊಳ್ಳುತ್ತದೆ.

Project Cheetah: ವೈಲ್ಡ್‌ಲೈಫ್‌ ತಜ್ಞರು ಕುತೂಹಲದಿಂದ ನೋಡುತ್ತಿರುವ ಪ್ರಯೋಗ

ನೀರು ಕುಡಿಯೋದು 3 ದಿನಕ್ಕೊಮ್ಮೆ

ಬಹುತೇಕ ಎಲ್ಲ ಪ್ರಾಣಿಗಳು ನಿತ್ಯ ಸಾಕಷ್ಟುನೀರು ಕುಡಿಯುತ್ತವೆ. ಆದರೆ ಚೀತಾ ನೀರು ಕುಡಿಯುವುದು 3-4 ದಿನಕ್ಕೆ ಒಮ್ಮೆ ಮಾತ್ರ. ಚೀತಾ ಕಣ್ಣಿನಿಂದ ಬಾಯಿಯ ಭಾಗದವರೆಗೆ ಎರಡೂ ಕಡೆ ಕಪ್ಪುಪಟ್ಟಿಇರುತ್ತದೆ. ಇದು ಸೂರ್ಯನ ಕಿರಣಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.

ವೇಗಕ್ಕೆ ತಕ್ಕಂತೆಯೇ ಇದೆ ದೇಹದ ವಿನ್ಯಾಸ

ಚೀತಾ ದೇಹವು, ವೇಗಕ್ಕೆ ಬೇಕಾದ ವಿನ್ಯಾಸ ಹೊಂದಿದೆ. ವಿಶಾಲ ಶ್ವಾಸಕೋಶ, ಮೂಗಿನ ಹೊಳ್ಳೆ ಭಾರೀ ಪ್ರಮಾಣದ ಆಮ್ಲಜನಕ ತೆಗೆದುಕೊಳ್ಳಲು ನೆರವಾಗುತ್ತದೆ. ದೊಡ್ಡ ಗಾತ್ರದ ಹೃದಯವು ರಕ್ತದಲ್ಲಿನ ಆಮ್ಲಜನಕವನ್ನು ಬಹುವೇಗವಾಗಿ ದೇಹದ ಎಲ್ಲಾ ಭಾಗಗಳಿಗೆ ತಲುಪಿಸುತ್ತದೆ. ಉದ್ದ, ತೆಳ್ಳನೆಯ ಕಾಲು ಮತ್ತು ಬೆನ್ನುಹುರಿಯ ವಿನ್ಯಾಸ ದೊಡ್ಡ ಹೆಜ್ಜೆ ಇಟ್ಟು ಓಡಲು ನೆರವಾಗುತ್ತದೆ. ಸಣ್ಣ ತಲೆ ಓಡುವಾಗ ಗಾಳಿಯ ತಡೆಯನ್ನು ಎದುರಿಸಲು ನೆರವಾಗುತ್ತದೆ. ಉದ್ದನೆಯ ಬಾಲ ದೇಹದ ಸಮತೋಲನಕ್ಕೆ ನೆರವಾಗುತ್ತದೆ.

ಹೆಣ್ಣು ಚಿರತೆಗಳದ್ದು ಏಕಾಂಗಿ ವಾಸ!

ಹೆಣ್ಣು ಚೀತಾಗಳು ಏಕಾಂಗಿಯಾಗಿ ವಾಸಿಸುತ್ತವೆ. ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರವೇ ಗಂಡು-ಹೆಣ್ಣು ಒಂದಾಗುತ್ತವೆ. ಮರಿಗಳು ಹುಟ್ಟಿದ ಬಳಿಕ ತಾಯಿ ಅವುಗಳ ಜೊತೆ ಮಾತ್ರ ವಾಸ ಮಾಡುತ್ತದೆ. ಆದರೆ ಗಂಡು ಚಿರತೆಗಳು ತಮ್ಮ ಸೋದರರ ಜೊತೆ ಗುಂಪಾಗಿ ಇರುತ್ತವೆ ಮತ್ತು ಒಂದಾಗಿ ಬೇಟೆಯಾಡುತ್ತವೆ. ಇವು ತಮ್ಮ ಬಹುತೇಕ ಸಮಯವನ್ನು ನಿದ್ರೆಗೆ ವ್ಯಯಿಸುತ್ತವೆ. ಚೀತಾಗಳ ಗರ್ಭಾವಸ್ಥೆ ಅವಧಿ 93 ದಿನ. ಒಮ್ಮೆಗೆ 6 ಮರಿಗಳನ್ನು ಹೆರಬಲ್ಲವು.

ಹುಲಿ, ಚಿರತೆಯಂತೆ ಗರ್ಜನೆ ಇಲ್ಲ

ಹುಲಿ, ಚಿರತೆಗಳಂತೆ ಚೀತಾ ಜೋರಾಗಿ ಘರ್ಜಿಸುವುದಿಲ್ಲ. ಅಪಾಯ ಸಮಯದಲ್ಲಿ ಮಾತ್ರ ಗುರ್ರೆನ್ನುತ್ತವೆ. ಉಳಿದಂತೆ ಚಿಪ್‌ರ್‍, ಪುರ್‌, ಮಿಯ್ಯಾಂ ಎಂದು ಸದ್ದು ಮಾಡಿಕೊಂಡಿರುತ್ತವೆ. ಏಕಾಂಗಿ ಗಂಡು ಚೀತಾ 2-5 ದಿನಗಳಿಗೆ ಒಮ್ಮೆ ಬೇಟೆಯಾಡುತ್ತದೆ.

ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ

ಚೀತಾಗಳ ಆಹಾರ ಏನೇನು?

ಜಿಂಕೆ, ಕೃಷ್ಣಮೃಗ, ಹಕ್ಕಿಗಳು, ಮೊಲ, ಇಲಿ, ಹೆಗ್ಗಣ ಮೊದಲಾದವುಗಳು. ಚಿರತೆಗಳು ಸಾಮಾನ್ಯವಾಗಿ ಮುಂಜಾನೆ ಮತ್ತು ಮಧ್ಯಾಹ್ನದ ಬಳಿಕ ಬೇಟೆಯಾಡುತ್ತವೆ. ಅರಣ್ಯದಲ್ಲಿ ಚೀತಾಗಳ ಸಾಮಾನ್ಯ ಜೀವಿತಾವಧಿ 10-12 ವರ್ಷ. ಪ್ರಾಣಿ ಸಂಗ್ರಹಾಲಯಗಳಲ್ಲಿ 17-20 ವರ್ಷ.

ಏಷ್ಯಾಟಿಕ್‌ ಚೀತಾ ಬದಲು ಆಫ್ರಿಕನ್‌ ಚೀತಾ

1952ಕ್ಕಿಂತ ಮೊದಲು ಭಾರತದಲ್ಲಿ ಇದ್ದುದು ಏಷ್ಯಾಟಿಕ್‌ ಚೀತಾ. ಈಗ ಏಷ್ಯಾಟಿಕ್‌ ಚೀತಾ ಇರಾನ್‌ನಲ್ಲಿ ಮಾತ್ರ ಇವೆ. ಆದರೆ ಭಾರತಕ್ಕೆ ಏಷ್ಯಾಟಿಕ್‌ ಚೀತಾ ಕಳಿಸಲು ಇರಾನ್‌ ನಿರಾಕರಿಸಿತು. ಹೀಗಾಗಿ ನಮೀಬಿಯಾದಿಂದ ಆಫ್ರಿಕನ್‌ ಚೀತಾ ತರಿಸಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios