ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದ ಜನ; ನಗರದಲ್ಲಿ 'ಹಸಿರು ಪಟಾಕಿ' ಮಾರಾಟವೇ ಠುಸ್
ರಾಜ್ಯ ಸರ್ಕಾರ ಹಸಿರು ಪಟಾಕಿ ಕಡ್ಡಾಯಗೊಂಡು ಸರಿಸುಮಾರು ದಶಕವಾಗಿದೆ. ಪ್ರತಿ ದೀಪಾವಳಿ ಸಂದರ್ಭದಲ್ಲೂ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸುತ್ತದೆ. ಆದರೆ, ನಗರದಲ್ಲಿ ಮಾರಾಟವಾಗುವ ಒಟ್ಟಾರೆ ಪಟಾಕಿಯಲ್ಲಿ ಶೇ.5ರಿಂದ 10ರಷ್ಟು ಮಾತ್ರ ಹಸಿರು!
ಬೆಂಗಳೂರು (ಅ.29) : ರಾಜ್ಯ ಸರ್ಕಾರ ಹಸಿರು ಪಟಾಕಿ ಕಡ್ಡಾಯಗೊಂಡು ಸರಿಸುಮಾರು ದಶಕವಾಗಿದೆ. ಪ್ರತಿ ದೀಪಾವಳಿ ಸಂದರ್ಭದಲ್ಲೂ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸುತ್ತದೆ. ಆದರೆ, ನಗರದಲ್ಲಿ ಮಾರಾಟವಾಗುವ ಒಟ್ಟಾರೆ ಪಟಾಕಿಯಲ್ಲಿ ಶೇ.5ರಿಂದ 10ರಷ್ಟು ಮಾತ್ರ ಹಸಿರು!
ಕಳೆದ ವರ್ಷ ನಗರದಲ್ಲಿ ₹400 ಕೋಟಿಯಷ್ಟು ಪಟಾಕಿ ಮಾರಾಟವಾಗಿತ್ತು. ಅದರಲ್ಲಿ ಕೇವಲ ₹40 ಕೋಟಿ ಮಾತ್ರ ಹಸಿರು ಪಟಾಕಿ. ಈ ಬಾರಿಯೂ ಸುಮಾರು ₹500 ಕೋಟಿಯಷ್ಟು ಪಟಾಕಿ ವ್ಯಾಪಾರ ನಗರದಲ್ಲಿ ನಡೆಯುವ ನಿರೀಕ್ಷೆಯನ್ನು ಉದ್ಯಮ ಹೊಂದಿದೆ. ಅದರಲ್ಲಿ ಹಸಿರು ಪಟಾಕಿ ಕೇವಲ 40 ರಿಂದ 50 ಕೋಟಿ ಮಾತ್ರ!
ದೀಪಾವಳಿಗೆ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳೇನು? ಈ ಟಿಪ್ಸ್ ಫಾಲೋ ಮಾಡಿ
ಇದಕ್ಕೆ ಕಾರಣ ಹಸಿರು ಪಟಾಕಿ ಸಿಡಿಸಬೇಕು ಎಂಬ ಆದೇಶದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜನರು ನಿಷೇಧಿತ ಪಟಾಕಿಗಳನ್ನೇ ಖರೀದಿಸುತ್ತಿದ್ದಾರೆ. ವಿಶೇಷವಾಗಿ ನೆರೆಯ ತಮಿಳುನಾಡಿನ ಹೊಸೂರಿನಿಂದ ನಿಷೇಧಿತ ಪಟಾಕಿಗಳು ವ್ಯಾಪಕವಾಗಿ ನಗರಕ್ಕೆ ತರಲಾಗುತ್ತಿದೆ. ಹೀಗೆ ನಗರಕ್ಕೆ ತರಲಾಗುವ ಪಟಾಕಿಗಳು ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಮಾಡುವ ನಿಷೇಧಿತ ಪಟಾಕಿಗಳಾಗಿವೆ.
ದೀಪಾವಳಿ ಹಬ್ಬಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಖರೀದಿಸುವವರ ಸಂಖ್ಯೆ ಉತ್ತಮವಾಗಿದೆ. ನಗರ ಮತ್ತು ನಗರ ಹೊರವಲಯಗಳಲ್ಲೂ ನಿಷೇಧಿತ ಪಟಾಕಿಗಳು ಮಾರಾಟವಾಗುತ್ತಿವೆ. ಹೊಸೂರು ರಸ್ತೆಯ ಅತ್ತಿಬೆಲೆ, ಚಂದಾಪುರ ಭಾಗದಲ್ಲಿಯು ನಿಷೇಧಿತ ಪಟಾಕಿ ಮಾರಾಟ, ಖರೀದಿ ಜೋರಾಗಿದೆ.
‘ಕಳೆದ ವರ್ಷ ಸುಮಾರು ₹400 ಕೋಟಿಯಷ್ಟು ವಹಿವಾಟು ನಡೆದಿರುವ ಅಂದಾಜಿದೆ. ಈ ಬಾರಿ ₹500 ಕೋಟಿಯಷ್ಟು ವಹಿವಾಟು ನಡೆಯಬಹುದು ಎಂದು ಅಂದಾಜಿಸಿದ್ದೇವೆ. ಆದರೆ, ಬಹಳಷ್ಟು ಜನರು ಪಟಾಕಿ ಖರೀದಿಗೆ ನೆರೆಯ ಹೊಸೂರಿಗೆ ಹೋಗುತ್ತಿರುವುದರಿಂದ ಅಷ್ಟು ಹಣ ನೆರೆ ರಾಜ್ಯದ ಪಾಲಾಗುತ್ತದೆ. ಬೆಂಗಳೂರಿನಲ್ಲಿ ಹೆಚ್ಚೆಂದರೆ ₹50 ಕೋಟಿಯಿಂದ ₹100 ಕೋಟಿ ವಹಿವಾಟು ಆಗಬಹುದು. ಹಸಿರು ಪಟಾಕಿ ನಿಯಮ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ’ ಎಂದು ಹಲವು ವರ್ಷಗಳಿಂದ ನಗರದಲ್ಲಿ ಪಟಾಕಿ ಮಾರುತ್ತಿರುವ ಚಕ್ರವರ್ತಿ ಟ್ರೇಡರ್ಸ್‌ನ ಮಾಲೀಕ ಮದನ್ ಹೇಳಿದರು.
ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದು, ಜಿಎಸ್‌ಟಿ ಬಿಲ್ ಸಹಿತ ಪಟಾಕಿ ಮಾರಾಟ ಮಾಡುತ್ತೇವೆ. ಆದರೆ, ಅನಧಿಕೃತ ಪಟಾಕಿ ವ್ಯಾಪಾರ ದೊಡ್ಡದಿದೆ. ಅದರಲ್ಲೂ ತಮಿಳುನಾಡು-ಕರ್ನಾಟಕ ಗಡಿಯ ಹೊಸೂರಿನಲ್ಲಿ ನೂರಾರು ಮಳಿಗೆಗಳನ್ನು ತೆರೆಯಲಾಗಿದೆ. ಅದು ಹಸಿರು ಪಟಾಕಿ ಹೌದೋ? ಅಲ್ಲವೋ ಎಂಬುದು ಗೊತ್ತಿಲ್ಲ. ಡಿಸ್ಕೌಂಟ್ ಎಂಬ ಕಾರಣಕ್ಕೆ ನಗರದ ಜನರು ಅಲ್ಲಿಗೆ ಹೋಗಿ ಪಟಾಕಿ ಖರೀದಿಸುತ್ತಾರೆ. ತೆರಿಗೆ ನಷ್ಟದ ಜೊತೆಗೆ ಪರಿಸರ ಮಾಲಿನ್ಯ ಆಗುತ್ತದೆ ಎಂದು ಮದನ್ ಹೇಳಿದರು.
ಹಸಿರು ಪಟಾಕಿ ಹೀಗೆ ಗುರುತಿಸಿ: ಪಟಾಕಿ ಪೊಟ್ಟಣದ ಮೇಲೆ ‘ಸಿಎಸ್‌ಐಆರ್- ನ್ಯಾಷನಲ್ ಎನ್‌ವಿರನ್‌ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ಲೋಗೋ ಮುದ್ರಿತವಾಗಿರುತ್ತದೆ.
ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಿದರೆ ಕೇಸ್: ಸಿಎಂ ಸಿದ್ದರಾಮಯ್ಯ
ಗ್ರಾಹಕರು ಹಸಿರು ಪಟಾಕಿ ಖರೀದಿಸಲು ಅನುಕೂಲವಾಗುವಂತೆ ಸಿಎಸ್‌ಐಆರ್ ವೆಬ್‌ಸೈಟ್‌ನಲ್ಲಿ ಹಸಿರು ಪಟಾಕಿ ಉತ್ಪಾದನೆ, ಮಾರಾಟ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂತಹ ಕಂಪನಿಗಳ ಪಟಾಕಿಗಳನ್ನು ಮಾತ್ರ ಗ್ರಾಹಕರು ಖರೀದಿಸಬಹುದು. ಈ ಪಟಾಕಿಗಳು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ.
ಜನರು ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ ಸಿಡಿಸಬೇಕು. ನಿಷೇಧಿತ ಪಟಾಕಿ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಜಗದೀಶ್ ನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ