Asianet Suvarna News Asianet Suvarna News

ಕುರಿ, ಕೋಳಿ ಕೊಟ್ರೆ ಜನ ಉದ್ಧಾರ ಆಗಲ್ಲ: ಡಿಸಿಎಂ ಕಾರಜೋಳ!

ಕುರಿ, ಕೋಳಿ ಕೊಡುವ ಯೋಜನೆಯಿಂದ ಹಿಂದುಳಿದವರ ಉದ್ದಾರ ಸಾಧ್ಯವಿಲ್ಲ| ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

Development Of Backward Community People Is Not Possible By Distributing Sheep and Chicken Says DyCM Govind Karjol
Author
Bangalore, First Published Jan 6, 2020, 11:15 AM IST

ಗದಗ[ಜ.06]: ಕುರಿ, ಕೋಳಿ ಕೊಡುವ ಯೋಜನೆಯಿಂದ ಹಿಂದುಳಿದ, ಶೋಷಿತರ ಉದ್ಧಾರ ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಬದುಕಿನ ಗುಣಮಟ್ಟಸುಧಾರಣೆ ಸಾಧ್ಯವಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಅವರು ಭಾನುವಾರ ನಗರದ ಡಿಸಿ ಮಿಲ್‌ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಾಬು ಜಗಜೀವನರಾಮ್‌ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರ 7 ದಶಕ ಗತಿಸಿದರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಾರಣ ಈ ಸಮುದಾಯದಲ್ಲಿರುವವರಿಗೆ ಶಿಕ್ಷಣದ ಕೊರತೆಯಾಗಿದೆ. ರಾಜ್ಯದಲ್ಲಿ 824 ವಸತಿ ಶಾಲೆಗಳಲ್ಲಿ 3.70 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಮುಂದೆ ಬರಲು ಸಾಧ್ಯ ಎನ್ನುವುದನ್ನು ಸಮುದಾಯ ಅರಿಯಬೇಕಿದೆ ಎಂದು ಹೇಳಿದರು.

‘ಇನ್ನೂ 20 ವರ್ಷ ಕಾಂಗ್ರೆಸಿನವರು ಅಂಗಿ ಗೂಟಕ್ಕೆ ಹಾಕಬೇಕು’

ಕಳೆದ ಆಯವ್ಯಯದಲ್ಲಿ . 30,445 ಸಾವಿರ ಕೋಟಿ ಹಿಂದುಳಿದ ವರ್ಗಗಳಿಗೆ ನೀಡಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ . 1 ಸಾವಿರ ಕೋಟಿ ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಸಲು ಕಾಯ್ದಿರಿಸಲು ನಿರ್ಧರಿಸಲಾಗಿದೆ. 1700 ಪ್ರಕರಣಗಳು ಭೂ ಒಡೆತನ ಅರ್ಜಿ ಬಾಕಿ ಇವೆ. ಭೂ ಒಡೆತನ ಯೋಜನೆಗೆ ಈಗಾಗಲೇ . 240 ಕೋಟಿ ಬಿಡುಗಡೆ ಮಾಡಲಾಗಿದ್ದು, ಸುಮಾರು . 150 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿಯಾಗಿ ಬಡ ಹೆಣ್ಣುಮಕ್ಕಳ ಪದವಿ ಶಿಕ್ಷಣದ ವ್ಯವಸ್ಥೆಗಾಗಿ ರಾಜ್ಯದ 4 ವಿಭಾಗಗಳಲ್ಲಿ ವಸತಿ ಶಾಲೆ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತಾವನೆಯನ್ನು ಮನ್ನಿಸಿ ಕೇಂದ್ರ ಸಚಿವರು ಪ್ರತಿ ಶಾಲೆಗೆ . 50 ಕೋಟಿ ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಈ ಪೈಕಿ . 40 ಕೋಟಿಯನ್ನು ಕೇಂದ್ರ ಸರ್ಕಾರ ಭರಿಸಲಿದ್ದು, . 10 ಕೋಟಿಯನ್ನು ರಾಜ್ಯ ಸರ್ಕಾರ ತೊಡಗಿಸಲಿದೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಮಂಗಳೂರು ವಿಭಾಗದಲ್ಲಿ ತಲಾ ಒಂದು ವಸತಿ ಶಾಲೆಯನ್ನು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಕಾರಜೋಳ ಮಾಹಿತಿ ನೀಡಿದರು.

ರಾಜ್ಯದ ಬಹುತೇಕ ಕಡೆಗಳಲ್ಲಿ ವಸತಿ ಶಾಲೆಗಳು ಸ್ವಂತ ಕಟ್ಟಡಗಳಿಲ್ಲದೇ ಕೆಲವು ಮೂಲಭೂತ ಸೌಕರ್ಯಗಳ ಮಧ್ಯೆ ನಡೆಯುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ . 480 ಕೋಟಿ ಹಣ ಬಿಡುಗಡೆ ಮಾಡಿದೆ. ರಾಜ್ಯದ ಮೊರಾರ್ಜಿ ಶಾಲೆಗಳಿಗೆ ಆಯಾ ತಾಲೂಕುಗಳ ವಿದ್ಯಾರ್ಥಿಗಳ ಮೀಸಲಾತಿಯನ್ನು ಶೇ. 25ಕ್ಕೇರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಕೇಂದ್ರದಲ್ಲಿ . 3.39 ಕೋಟಿ ವೆಚ್ಚದ ಡಾ. ಬಾಬು ಜಗಜೀವನರಾಂ ಭವನ, ಗದಗ- ಬೆಟಗೇರಿ ನಗರದಲ್ಲಿ . 2.32 ಕೋಟಿ ವೆಚ್ಚದಲ್ಲಿ ಪರಿಶಿಷ್ಟವರ್ಗಗಳ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯ, ಹುಯಿಲಗೋಳ ರಸ್ತೆಯಲ್ಲಿ . 3.38 ಕೋಟಿ ಅನುದಾನದಲ್ಲಿ ಪರಿಶಿಷ್ಟಜಾತಿ ಮೆಟ್ರಿಕ್‌ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯ, ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜನ್ನು . 1046 ಲಕ್ಷಗಳ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಪರಿಶಿಷ್ಟಜಾತಿ, ಪರಿಶಿಷ್ಟವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಯೋಜನೆಗಳಡಿ ಗದಗ- ಬೆಟಗೇರಿ ಅವಳಿ ನಗರದಲ್ಲಿ 5 ಎಕರೆ 10 ಗುಂಟೆ ಜಾಗದಲ್ಲಿ ವಸತಿರಹಿತ ಹರಣಶಿಕಾರಿ ಸಮುದಾಯದವರಿಗೆ 109 ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಅವುಗಳಲ್ಲಿ . 220.00 ಲಕ್ಷಗಳ ಅನುದಾನದಲ್ಲಿ 40 ಮನೆಗಳು, ತಾಲೂಕಿನ ವಸತಿ ನಿಲಯಗಳಲ್ಲಿರುವ ಕಂಪ್ಯೂಟರ್‌ ಲ್ಯಾಬ್‌ಗಳು, ಅಭ್ಯಾಸ ಕೊಠಡಿಗಳು ಮತ್ತು ನಿಲಯಗಳ ನವೀಕರಣ, ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು . 349 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಈ ಕಾಮಗಾರಿಗಳಿಗೆ ಡಿಸಿಎಂ ಚಾಲನೆ ನೀಡಿದರು.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮುಗಿಸುವ ಸಂಕಲ್ಪ: ಕಾರಜೋಳ

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ಅವಳಿ ನಗರದಲ್ಲಿ ನಿರ್ಮಾಣವಾಗಿರುವ ವರ್ತುಲ ರಸ್ತೆ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸದ್ಯ ಗದಗನಿಂದ ರೋಣ ಸಂಪರ್ಕಿಸುವ ಹೊರವಲಯದ ವರ್ತುಲ ರಸ್ತೆ ಕಾಮಗಾರಿ ತೀವ್ರ ಚಾಲನೆಯಾಗಬೇಕಿದೆ. ಕಾಮಗಾರಿಗಾಗಿ . 140 ಕೋಟಿ ಆರ್ಥಿಕ ನೆರವು ಸರ್ಕಾರದಿಂದ ಮಂಜೂರಿಗೆ ಉಪಮುಖ್ಯಮಂತ್ರಿ ಕಾರಜೋಳ ಮಂಜೂರಾತಿ ನೀಡಿದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡು ಈ ಭಾಗದ ಜನರ ಕನಸು ನನಸಾಗಲಿದೆ ಎಂದರು.

ಕೆಲವು ತಾಂತ್ರಿಕ ತೊಂದರೆ ಹಾಗೂ ಅಧಿಕಾರಶಾಹಿ ವಿಳಂಬನೀತಿಯಿಂದಾಗಿ ಕಳೆದೆರಡು ವರ್ಷಗಳಿಂದ ಗಾಂಧಿ ನಗರದ ಹಾಕಿ ಕ್ರೀಡಾಂಗಣ ಕಾಮಗಾರಿ ಸ್ಥಗಿತಗೊಂಡಿದ್ದು, ಇತ್ತೀಚೆಗೆ ಕಾರಜೋಳ ಅವರ ಕಾರ್ಯದಕ್ಷತೆಯಿಂದಾಗಿ ಸದ್ಯ ತೊಂದರೆ ನಿವಾರಣೆಯಾಗಿದ್ದು, ಬರುವ ಏಪ್ರಿಲ್‌ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸರ್ಕಾರದ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಕೆಯಾದಾಗ ಅಭಿವೃದ್ಧಿ ಸಾಧ್ಯ. ಚುನಾವಣೆಗಳ ನಂತರ ಪಕ್ಷ ರಾಜಕಾರಣದಿಂದ ಹೊರತಾಗಿ ರಾಜಕಾರಣ ಮಾಡುವ ಪ್ರವೃತ್ತಿ ಜಿಲ್ಲೆಯ ರಾಜಕಾರಣಿಗಳಲ್ಲಿದ್ದು, ಐತಿಹಾಸಿಕ ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಳ್ಳುವ ಜನಪರ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ವಿಪ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಗ್ರ್ಯಾಂಟ್‌ ನೀಡುವಂತೆ ಮನವಿ ಮಾಡಿದರು. ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿಪಂ ಸಿಇಒ ಡಾ. ಆನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ವಾಗತಿಸಿದರು.

ಬೆಳೆಯುತ್ತಿರುವ ಮುಧೋಳ ನಗರಕ್ಕೆ ಬೇಕಿದೆ ಗ್ರಾಮೀಣ ಪೊಲೀಸ್ ಠಾಣೆ

Follow Us:
Download App:
  • android
  • ios