Padma Shri Award ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ ದಕ್ಷಿಣ ಕನ್ನಡದ ಭಗೀರಥನಿಗೆ ಪದ್ಮಶ್ರೀ ಪ್ರಶಸ್ತಿ
* ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ ದಕ್ಷಿಣ ಕನ್ನಡದ ಭಗೀರಥನಿಗೆ ಪದ್ಮಶ್ರೀ ಪ್ರಶಸ್ತಿ
* ಕೃಷಿಯಲ್ಲಿ ಮಹಾಲಿಂಗ ನಾಯ್ಕರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ
* ಶಾಲೆ, ಕಾಲೇಜಿಗೆ ಹೋಗದಿದ್ದರೂ ನೀರನೆಮ್ಮದಿಯನ್ನು ಕಂಡು ಪ್ರಗತಿಪರ ಕೃಷಿಕರೆನಿಸಿಕೊಂಡವರು
ರಾಘವೇಂದ್ರ ಅಗ್ನಿಹೋತ್ರಿ
ಮಂಗಳೂರು, (ಜ.25): ಛಲವೊಂದಿದ್ದರೆ ಎನನ್ನೂ ಸಾಧಿಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ(Amai Mahalinga Naik) ಅವರೇ ಸಾಕ್ಷಿ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಬಂಗಾರ ಬೆಳೆದ ಭಗೀರಥ. ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಕಂಡು ಪ್ರಗತಿಪರ ಕೃಷಿಕರೆನಿಸಿಕೊಂಡವರು. ಮಹಾಲಿಂಗ ನಾಯ್ಕರ ಸಾಧನೆ ಮನ್ನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (Padma Shri Award) ಅರಸಿ ಬಂದಿದೆ.
ಹೌದು..ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಗಡಿನಾಡು ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರಿಗೆ ಕೃಷಿ(Agriculture) ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Padma Awards 2022: ಪದ್ಮವಿಭೂಷಣ ರಾವತ್, ಪದ್ಮಶ್ರೀ ಸಿದ್ದಲಿಂಗಯ್ಯ... ಸಾಧಕರಿಗೆ ಗೌರವ
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ (Republic Day) ಮುನ್ನಾದಿನದಂದು ಘೋಷಿಸಲಾಗುತ್ತದೆ. ಈ ಬಾರಿ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಅಮೈ ಮಹಾಲಿಂಗ ನಾಯ್ಕ ಪದ್ಮಶ್ರೀ ಪುರಸ್ಕಾರ ಸಂದಿದೆ.
73 ವರ್ಷದ ಮಹಾಲಿಂಗ ನಾಯ್ಕ, ಸರ್ಕಾರದಿಂದ ಸಿಗುವ ಸವಲತ್ತಿಗೆ ಕೈಚಾಚದೇ ತಮ್ಮ ಪರಿಶ್ರಮವನ್ನು ಮಾತ್ರ ನಂಬಿ ಹಾಗೇ ಜೀವಿಸಿದವರು. ಸರ್ಕಾರದಿಂದ ನೀಡುವ ಕೃಷಿ ಪಂಡಿತ ಪ್ರಶಸ್ತಿ, ಮಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಇವರ ‘ಜಲಸಾಹಸ’ ದೂರದರ್ಶನದ ‘ವಾಟರ್ ವಾರಿಯರ್’ ಧಾರಾವಾಹಿಯಲ್ಲಿ ಪ್ರಕಟವಾಗಿದೆ. ಕನ್ನಡಪ್ರಭ ಸುವರ್ಣನ್ಯೂಸ್ ಅಸಮಾನ್ಯ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಡೀ ದಿನ ಸುರಂಗ ತೋಡಿದರೆ ಊಟಕ್ಕೆ ತತ್ವಾರ. ಅದಕ್ಕೆಂದೇ ಅರ್ಧದಿನ ತೆಂಗಿನ ಮರ, ಅಡಕೆ ಮರ ಏರುವ ಕೂಲಿ ಕೆಲಸ ಮಾಡಿ, ಉಳಿದ ಅರ್ಧ ದಿನ ಮತ್ತು ರಾತ್ರಿವೇಳೆ ಸೀಮೆಎಣ್ಣೆ ದೀಪ ಬಳಸಿ 25-30 ಮೀಟರ್ ಉದ್ದದ ಒಟ್ಟು 7 ಸುರಂಗವನ್ನು ಏಕಾಂಗಿಯಾಗಿ ನಿರ್ಮಿಸಿದ ಸಾಹಸಿ ಇವರು. ಅಷ್ಟಕ್ಕೂ ಇವರಲ್ಲಿ ಸ್ವಂತ ಜಮೀನು ಇರಲಿಲ್ಲ. ತಾನು ಕೆಲಸ ಮಾಡುತ್ತಿದ್ದ ಅಮೈ ಮಹಾಬಲ ಭಟ್ಟರಲ್ಲಿ 1978ರಲ್ಲಿ ಎರಡು ಎಕ್ರೆ ಜಾಗ ‘ದರ್ಖಾಸು’ ಪಡೆದು, ಕೃಷಿಯ ಕನಸು ಬೆನ್ನತ್ತಿದರು. ಇದಕ್ಕೆ ಬೇಕಾದ ನೀರಿಗಾಗಿ ಹರ ಸಾಹಸ ಪಟ್ಟರು.
ವರ್ಷಕ್ಕೊಂದೊಂದೇ ಸುರಂಗದಂತೆ ಐದು ಸುರಂಗ ನಿರ್ಮಿಸಿಯೂ ನೀರು ಕಾಣದಾದರೂ ಮಹಾಲಿಂಗ ಅವರು ಛಲ ಬಿಡದೇ ತನ್ನ ಸಾಹಸ ಮುಂದುವರಿಸುತ್ತಾರೆ. ೬ ನೇ ಸುರಂಗದಿಂದ ಸ್ವಲ್ಪ ನೀರು ಜಿನುಗಲು ಪ್ರಾಾರಂಭವಾಗುತ್ತದೆ. ೭ ನೇ ಸುರಂಗ ನಿರ್ಮಿಸಿದಾಗ ತನ್ನ ಒಂದು ಎಕ್ರೆ ತೋಟಕ್ಕೆ ಸಾಕಾಗುವಷ್ಟು ನೀರು ಕಾಣಿಸುತ್ತಾರೆ. ಈಗ ಎರಡು ಬೋರವೆಲ್‌ಗಳನ್ನು ತೋಡಿ, ಅದಕ್ಕೆ ಪಂಪ್ ಹಾಕಿಸಿದ್ದಾರೆ. ಸುರಂಗದ ನೀರನ್ನು ಮಣ್ಣಿನ ಟ್ಯಾಂಕ್‌ಲ್ಲಿ ಸಂಗ್ರಹಿಸಿ ಜಮೀನು ಹಸನಾಗಿಸಿ ಬೆಳೆ ಬೆಳೆದಿದ್ದಾರೆ. ತೋಟದ ನಡುವೆ ಅಲ್ಲಲ್ಲಿ ಇಂಗುಗುಂಡಿ ನಿರ್ಮಿಸಿದ್ದಾರೆ.
ಬದುಕಿನ ಯಶೋಗಾಥೆ:
ಅಡಕೆ, ತೆಂಗಿನ ಮರ ಏರುವುದರಲ್ಲಿ ಪರಿಣತರಾಗಿದ್ದ ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ ೪೦ ವರ್ಷಗಳ ಹಿಂದೆ ಸ್ವಂತ ಊರಿನ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಕನಸು ಕಂಡಿದ್ದರು. ಆದರೆ ಇದಕ್ಕಾಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂ ಮಾಲಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾಲು ಕೂಲಿ ಕೆಲಸಕ್ಕೆ ಹೋಗುತ್ತಿಿದ್ದರು. ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕ್ರೆ ಜಮೀನು ನೀಡಲು ಒಪ್ಪಿಕೊಂಡರು. ಎರಡು ಎಕ್ರೆ ಗುಡ್ಡ ದರ್ಖಾಸ್ತು ರೂಪದಲ್ಲಿ ಮಹಾಲಿಂಗ ನಾಯ್ಕ ಪಡೆದರು.
ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ದೊಡ್ಡ ಸವಾಲಾಯಿತು. ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದದ್ದು ಸುರಂಗ ತಂತ್ರಜ್ಞಾನ. ದಕ್ಷಿಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿ ಭಾಗದಲ್ಲಿ ನೀರಿಗಾಗಿ ಹಲವರು ಸುರಂಗ ತೋಡುವುದನ್ನು ಕೇಳಿ ತಿಳಿದಿದ್ದರು. ಅರ್ಧ ದಿನ ಕೂಲಿ ಕೆಲಸ , ಉಳಿದರ್ಧ ದಿನ ಮತ್ತು ರಾತ್ರಿಿ ಹೊತ್ತು ತಾನೇ ಸ್ವತಃ ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನ ನಡೆಸಿದರು.
ಮೊದಲು ೩೦ ಮೀಟರ್ ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಮತ್ತೆ ಪ್ರಯತ್ನ ಮುಂದುವರಿಸಿದರು. ಸೀಮೆ ಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಸುರಂಗ ತೋಡುವ ಅಪಾಯಕಾರಿ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಸುರಂಗ ತೋಡುವಾಗ ಮಣ್ಣು ಕುಸಿದರೆ ಜೀವಕ್ಕೇ ಅಪಾಯವೂ ಇತ್ತು. ಅದನ್ನೂ ಲೆಕ್ಕಿಸದೇ ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದೆ ಕಾಯಕ ಮುಂದುವರಿಸಿದ ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು. ಈ ಪ್ರಯತ್ನದಲ್ಲಿ ಸ್ವಲ್ಪ ನೀರು ಕಾಣಿಸಿತು. ೨೫ ಮೀಟರ್ ಉದ್ದದ ಸುರಂಗದಲ್ಲಿ ಸಿಕ್ಕಿದ ನೀರಿನಲ್ಲಿ ಕೃಷಿ ಸಾಧ್ಯವಿಲ್ಲ ಎನ್ನುವುದು ಅವರಿಗೆ ಅರಿವಾಯಿತು.
6ನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀಟರ್ ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀಟರ್ ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಛ ನೀರು ಸಿಕ್ಕಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತಾ ಮತ್ತು ಮೂವರು ಮಕ್ಕಳು ಈ ಪ್ರಯತ್ನಕ್ಕೆ ಕೈ ಜೋಡಿಸಿದರು.
ಬೋಳುಗುಡ್ಡೆ ನಂದನವನವಾಯ್ತು: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಸುರಂಗ ತೋಡಿ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದರು. ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಒನ್ ಮ್ಯಾನ್ ಆರ್ಮಿ. ಪ್ರಯತ್ನಶೀಲ ಪ್ರಗತಿಪರ ಕೃಷಿಕರು. ಈಗಲೂ ಸ್ಪೂರ್ತಿಯ ಚಿಲುಮೆಯಾಗಿ ತಮ್ಮ ಕ್ಷೇತ್ರದಲ್ಲಿ ದುಡಿಯುತ್ತಾರೆ. ಬಾಳೆ, ತೆಂಗು, ಅಡಕೆ, ಕೊಕ್ಕೋ, ಕಾಳುಮೆಣಸು, ಗೇರು, ಚಿಕ್ಕು, ವಿಧ ವಿಧ ತರಕಾರಿಗಳು ಹೀಗೆ ಏನುಂಟು ಏನಿಲ್ಲವೆಂಬಂತೇ ಸ್ವಾಾವಲಂಬಿ ಜೀವನ ನಡೆಸುತ್ತಿದ್ದಾರೆ 73 ವರ್ಷದ ಮಹಾಲಿಂಗ ನಾಯ್ಕ.
ಒಂದು ಎಕರೆಯಲ್ಲಿ ಕೃಷಿ:
ಮಹಾಲಿಂಗ ನಾಯ್ಕ ಒಂದು ಎಕ್ರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕ್ರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಾಂಕಿಯಿಂದ ವಿದ್ಯುತ್ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಾಾರೆ. ಅವರ ತೋಟದಲ್ಲಿ ೩೦೦ ಅಡಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್‌ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಳಸಿಲ್ಲ. ಇಂಗು ಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾಾರೆ. ನಾಲ್ಕು ವರ್ಷಗಳ ಹಿಂದೆ ಎರಡು ಬೋರ್‌ವೆಲ್ ತೆಗೆಸಿದ್ದಾರೆ. ಮೊದಲ ಬೋರ್‌ವೆಲ್ ೪೦೦ ಅಡಿ ಸಾಗಿದ್ದರೂ ನೀರು ದೊರೆಯಲಿಲ್ಲ. ಎರಡನೇ ಬೋರ್‌ನಲ್ಲಿ ೩೭೦ ಅಡಿ ತಲುಪುವ ಹೊತ್ತಿಗೆ ಒಂದು ಇಂಚು ನೀರು ಸಿಕ್ಕಿದೆ.
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ ಅಮೈ ಮಾಹಾಲಿಂಗ ನಾಯ್ಕ. ಕೃಷಿಕಾಯಕದ ಮೂಲಕ ಸ್ವಾಾವಲಂಭಿ ಜೀವನ ಸಾಧ್ಯ ಎಂಬುದನ್ನು ಹೊಸ ತಲೆಮಾರಿಗೆ ತೋರಿಸಿಕೊಟ್ಟಿಿದ್ದಾರೆ. ಕೃಷಿಗೆ ನೀರು ಹಾಯಿಸಲು ಪಂಪ್‌ಸೆಟ್ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿಗೆ ಮೊರೆ ಹೋದರು. ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ರಹಿತವಾಗಿ ಗ್ರಾವಿಟಿ (ಗುರುತ್ವಾಕರ್ಷಣೆ) ಆಧಾರದಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ. ವಿದ್ಯುತ್ತೇ ಇಲ್ಲದೇ ಇವರ ತೋಟದಲ್ಲಿ ಸ್ಪ್ರಿಂಕ್ಲರ್‌ಗಳು ನೀರುಣಿಸುತ್ತಿವೆ.
ಸಾಲಕ್ಕಾಾಗಿ ಯಾವುದೇ ಬ್ಯಾಂಗ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಬಂದಿವೆ.