Asianet Suvarna News Asianet Suvarna News

ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌: ಚಳಿಗಾಲದಲ್ಲಿ ಕೊರೋನಾ ಆಯಸ್ಸು ಹೆಚ್ಚು...!

ಸಾಮಾನ್ಯ ಉಷ್ಣತೆಯಲ್ಲಿ 7 ಗಂಟೆ ಬದುಕಿದರೆ ಚಳಿಯಲ್ಲಿ 21 ಗಂಟೆ ಜೀವಂತ| ಈ ವರ್ಷ ಚಳಿ ಹೆಚ್ಚು| ಮತ್ತೆ ಸೋಂಕು ಏರಿಕೆ ಆತಂಕ| ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಸಮಸ್ಯೆ ಹೆಚ್ಚು| 

Coronavirus May Increase  during Winter Season grg
Author
Bengaluru, First Published Nov 9, 2020, 7:13 AM IST

ಶಂಕರ್‌.ಎನ್‌.ಪರಂಗಿ

ಬೆಂಗಳೂರು(ನ.09): ರಾಜ್ಯದಲ್ಲಿ ಈ ವರ್ಷ ಚಳಿ ವಾಡಿಕೆಗಿಂತ ಹೆಚ್ಚು ದಾಖಲಾಗುವ ಸಾಧ್ಯತೆ ಇರುವುದರಿಂದ ಮಹಾಮಾರಿ ಕೊರೋನಾ ಸೋಂಕು ಪುನಃ ಹೆಚ್ಚಾಗುವ ಆತಂಕ ಎದುರಾಗಿದೆ. ಕೊರೋನಾ ಶ್ವಾಸಕೋಶದ ಸೋಂಕಾಗಿದ್ದು, ತಂಪು ವಾತಾವರಣದಲ್ಲಿ ಉಸಿರಾಟ ಸಂಬಂಧಿ ವೈರಸ್‌ಗಳು ಹರಡುವುದು ಹೆಚ್ಚು. ಚಳಿ ಹೆಚ್ಚಿದ್ದಲ್ಲಿ ವೈರಸ್‌ಗಳ ಪ್ರಭಾವ ಕೂಡ ಹೆಚ್ಚಿರುತ್ತದೆ. ಕೊರೋನಾ ವೈರಾಣು ಗರಿಷ್ಠ ಉಷ್ಣಾಂಶವಿದ್ದಾಗ ಸುಮಾರು 5-7 ಗಂಟೆ ಬದುಕಿದರೆ, ತಂಪು ವಾತಾವರಣದಲ್ಲಿ 17-21 ಗಂಟೆ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಕೆಲವು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಆತಂಕ ಶುರುವಾಗಿದೆ.

ಕಳೆದ ವರ್ಷ ನ.7ರಂದು ಗರಿಷ್ಠ 30.9 ಹಾಗೂ ನ.26ರಂದು ಕನಿಷ್ಠ 16.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಇದು ಆ ತಿಂಗಳಲ್ಲೇ ಗರಿಷ್ಠ ಹಾಗೂ ಕನಿಷ್ಠ ಚಳಿಯ ಪ್ರಮಾಣವಾಗಿದೆ. ಆದರೆ ಬರಲಿರುವ ಚಳಿಗಾಲದಲ್ಲಿ ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು ಚಳಿ ಕಂಡು ಬರುವ ಮುನ್ಸೂಚನೆ ದೊರೆತಿದೆ. ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಸಮಸ್ಯೆ ಹೆಚ್ಚು. ಅಲ್ಲದೆ ನ್ಯೂಮೋನಿಯಾ ಸಮಸ್ಯೆ ಎದುರಿಸುತ್ತಿರುವವರಿಗೆ ಶ್ವಾಸಕೋಶದ ಸೋಂಕು, ಉಸಿರಾಟ ತೊಂದರೆ ಬಹುಬೇಗ ಆವರಿಸುತ್ತದೆ. ರಾಜ್ಯದಲ್ಲಿ ಕೆಲ ದಿನಗಳಿಂದ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಇಳಿಮುಖವಾಗಿದೆ. ಆದರೆ ಅತಿಯಾದ ಚಳಿಯಿಂದ ಬರುವ ಆರೋಗ್ಯ ಸಮಸ್ಯೆಗಳು ಕೊರೋನಾ ಹಬ್ಬಲು ಪೂರಕವಾದರೆ ಕಷ್ಟ, ಹೀಗಾಗಿ ತಜ್ಞರು ಈಗಾಗಲೇ ಚಳಿಗಾಲದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಚಳಿ ಹೆಚ್ಚಾಗಲು ‘ಲ್ಯಾನಿನೊ’ ಕಾರಣ

ಪೆಸಿಪಿಕ್‌ ಮಹಾಸಾಗರದಲ್ಲಿರುವ ‘ನಿನೊ-3’ ಎಂಬ ಪ್ರದೇಶದಲ್ಲಿ ನೀರಿನ ಮೇಲ್ಮೈ ತಾಪಮಾನ ಕಡಿಮೆ ಇದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಿಂಗಾರು ಕಡಿಮೆಯಾಗಿ ಚಳಿ ದಾಖಲೆ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ.

5 ತಿಂಗಳ ಬಳಿಕ ಬೆಂಗಳೂರಲ್ಲಿ ಕಡಿಮೆ ಕೊರೋನಾ ಕೇಸ್‌

‘ನಿನೊ-3’ದಲ್ಲಿ ನೀರಿನ ಉಷ್ಣಾಂಶ ಸಾಮಾನ್ಯವಾಗಿ 0.5 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಈ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಾದರೆ ಅದನ್ನು ‘ಎಲ್‌ನಿನೊ’ ಹಾಗೂ ಸಾಮಾನ್ಯಕ್ಕಿಂತ ನೀರಿನ ಉಷ್ಣಾಂಶ ಕಡಿಮೆಯಾದರೆ ಅದನ್ನು ‘ಲ್ಯಾನಿನೊ’ ಎಂದು ಕರೆಯಲಾಗುತ್ತದೆ. ಸದ್ಯ ನಿನೋ -3 ಪ್ರದೇಶದಲ್ಲಿನ ಉಷ್ಣಾಂಶ 0.5ಗಿಂತ ಕಡಿಮೆ ದಾಖಾಗಲಿದೆ. ಹೀಗಾಗಿ ಈ ಬಾರಿ ಚಳಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

53 ವರ್ಷಗಳ ಹಿಂದೆ ದಾಖಲೆ ಚಳಿ

ರಾಜ್ಯದಲ್ಲಿ ಚಳಿಗಾಲದ ವೇಳೆ ವಾಡಿಕೆ ಚಳಿ ನವೆಂಬರ್‌ನಲ್ಲಿ ಗರಿಷ್ಠ 27.2 ಮತ್ತು ಕನಿಷ್ಠ 18.0 ಹಾಗೂ ಡಿಸೆಂಬರ್‌ನಲ್ಲಿ ಗರಿಷ್ಠ 26.5 ಮತ್ತು ಕನಿಷ್ಠ 16.2 ಡಿಗ್ರಿ ಸೆಲ್ಸಿಯಸ್‌ ಆಗಿದೆ. ಈ ವಾಡಿಕೆ ಚಳಿಗೆ ಹೋಲಿಸಿದರೆ ರಾಜ್ಯದಲ್ಲಿ ಈವರೆಗೆ 2017ರ ನ. 29ಕ್ಕೆ ಗರಿಷ್ಠ 33.0 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಅದೇ ರೀತಿ ಅತೀ ಕಡಿಮೆ ತಾಪಮಾನ 53 ವರ್ಷಗಳ ಹಿಂದೆ 1967ರ ನ.15ರಂದು ಕನಿಷ್ಠ 9.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ಪೆಸಿಪಿಕ್‌ ಮಹಾಸಾಗರದ ವಿವಿಧ ಪ್ರದೇಶದಲ್ಲಿ ಹಲವು ರೀತಿಯ ತಾಪಮಾನ ಇರುತ್ತದೆ. ಆದರೆ ‘ನಿನೊ-3’ ಪ್ರದೇಶದಲ್ಲಿ ನೀರಿನ ಮೇಲ್ಮೈ ಉಷ್ಣಾಂಶ 0.5 ಗಿಂತ ಕಡಿಮೆ ದಾಖಲಾಗಿದೆ. ಇದು ಮುಂಗಾರು ಮತ್ತು ಚಳಿಗೆ ವರದಾನ. ಈಗಾಗಲೇ ಮುಂಗಾರು ವಾಡಿಕೆಗಿಂತ ಹೆಚ್ಚು ಬಂದಿದೆ. ಸದ್ಯ ಚಳಿ ಹೆಚ್ಚು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ. 

ಅತಿ ಗರಿಷ್ಠ-ಕನಿಷ್ಠ ತಾಪಮಾನ ದಾಖಲಾತಿ ಪಟ್ಟಿ

(ಡಿಗ್ರಿ ಸೆಲ್ಸಿಯಸ್‌ನಲ್ಲಿ) ವರ್ಷ ಗರಿಷ್ಠ ಕನಿಷ್ಠ

2019 ನ.7ಕ್ಕೆ 30.9 ನ.26 16.7
2018 ನ.15ಕ್ಕೆ 31.0 ನ.14ಕ್ಕೆ 14.8
2017 ನ.19ಕ್ಕೆ 30.0 ನ.12ಕ್ಕೆ 15.8

ಪ್ರದೇಶವಾರು ವಾಡಿಕೆ ಚಳಿ ಪಟ್ಟಿ ಪ್ರದೇಶ ಗರಿಷ್ಠ ಕನಿಷ್ಠ

ಬೆಂಗಳೂರು 28 19
ಕರಾವಳಿ 31 23
ಉ.ಒಳನಾಡು 29 18
ದ.ಒಳನಾಡು 27 15
 

Follow Us:
Download App:
  • android
  • ios