ಕಬ್ಬು ಸಾಗಣೆ ವೆಚ್ಚ ಕಡಿತ ಪರಿಶೀಲನೆಗೆ ಸಮಿತಿ: ಸಚಿವ ಮುನೇನಕೊಪ್ಪ
ತೂಕದಲ್ಲಿ ಮೋಸವಾಗುತ್ತಿರುವ ಬಗ್ಗೆ ರೈತರ ಆರೋಪ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ: ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ
ಬೆಂಗಳೂರು(ಡಿ.13): ಕಬ್ಬಿನ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತದ ಕುರಿತು ಒಂದು ತಿಂಗಳಲ್ಲಿ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ. ಸೋಮವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೂಕದಲ್ಲಿ ಮೋಸವಾಗುತ್ತಿರುವ ಬಗ್ಗೆ ರೈತರ ಆರೋಪ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 6.22 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಕಳೆದ ಬಾರಿ ಅರೆದಿದ್ದೆವು. ಈ ಬಾರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಅರೆದರೆ ರೈತರಿಗೆ ನೀಡುವ ಲಾಭವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶವನ್ನು ಕಬ್ಬು ಬೆಳೆಗಾರರಿಗೆ ನೀಡುವ ಬಗ್ಗೆ ಈಗಾಗಲೇ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಉಪ ಉತ್ಪನ್ನದ ಲಾಭ 75 ರು.ನೀಡುವಂತೆ ರೈತರು ಕೇಳಿದ್ದಾರೆ. ಅದರೆ, ಈಗ ಮೊದಲ ಹಂತದಲ್ಲಿ 50 ರು. ನೀಡಲಾಗುತ್ತಿದೆ. ಕಬ್ಬು ಅರೆಯುವ ಕೆಲಸ ಮುಗಿದ ಬಳಿಕ ಇನ್ನು 25 ರು.ಗಿಂತ ಹೆಚ್ಚಿನ ಹಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ. ಒಟ್ಟು 202 ಕೋಟಿ ರು. ಹಣವನ್ನು ರೈತರ ಖಾತೆಗೆ ಹಾಕಲು ತೀರ್ಮಾನಿಸಲಾಗಿದೆ. ಈ ರೀತಿ ಲಾಭದ ಹಣ ರೈತರಿಗೆ ನೀಡುತ್ತಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ನಂತರ ಮೂರನೇ ರಾಜ್ಯ ಕರ್ನಾಟಕವಾಗಿದೆ ಎಂದರು.
ಅಥಣಿ: ಕಬ್ಬು ಕಟಾವು ಕುಟುಂಬದ ಮಕ್ಕಳ ಕಹಿ ಬದುಕು..!
ಕಬ್ಬು ಬೆಳೆಗಾರರಿಗೆ ನೀಡಬೇಕಿದ್ದ 19,624 ಕೋಟಿ ರು. ಹಣವನ್ನು ಪಾವತಿ ಮಾಡಲಾಗಿದೆ. ಒಂದು ರು. ಬಾಕಿ ಇರಿಸಿಕೊಂಡಿಲ್ಲ. ಕಬ್ಬು ಬೆಳೆಗಾರರಿಗೆ ಯಾವುದೇ ಬಾಕಿ ಉಳಿಸಿಕೊಳ್ಳದ ರಾಜ್ಯ ಕರ್ನಾಟಕ ಆಗಿದೆ. ಎಫ್‌ಆರ್‌ಪಿಯನ್ನು 150 ರು. ಹೆಚ್ಚಿಸಲಾಗಿದ್ದು, ವೈಜ್ಞಾನಿಕವಾಗಿ ಎಫ್‌ಆರ್‌ಪಿ 3050 ರು. ನಿಗದಿಪಡಿಸಲಾಗಿದೆ. ಸರ್ಕಾರವು ರೈತರ ಪರವಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇವೆ. ಇನ್ನೇನು ಬೇಕು ಎನ್ನುವ ಸಲಹೆಯನ್ನು ನೀಡಿದರೆ, ಅದನ್ನು ಪರಿಸಗಣಿಸಿ ಈಡೇರಿಸುವ ಕೆಲಸವನ್ನು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಎಲ್ಲಾ ಕಾರ್ಖಾನೆಗಳ ಪುನಶ್ಚೇತನಗೊಳಿಸುವ ಹೆಜ್ಜೆಯನ್ನು ಇಲಾಖೆ ಇಟ್ಟಿದೆ. ಮೈಶುಗರ್ ಸೇರಿದಂತೆ ಇತರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಇಳುವರಿ, ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಾವು ಎಲ್ಲವನ್ನೂ ಪರಿಗಣಿಸಿ ಒಂದೊಂದಾಗಿ ಪರಿಹರಿಸಿ ಹೊಸ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದೇವೆ. ಅದಕ್ಕಾಗಿಯೇ ಎಥನಾಲ್ ನೀತಿ ಜಾರಿಗೆ ಇಲಾಖೆ ಮುಂದಾಗಿದ್ದು, ಎಥನಾಲ್ ಅನ್ನು ದೊಡ್ಡಮಟ್ಟದಲ್ಲಿ ಉತ್ಪಾದನೆಗೆ ತೀರ್ಮಾನಿಸಲಾಗಿದೆ. 44 ಸಕ್ಕರೆ ಕಾರ್ಖಾನೆಗಳಿಂದ ಎಥನಾಲ್ ಉತ್ಪಾದನೆಗೆ ಅರ್ಜಿ ಬಂದಿದೆ. 33 ಕಾರ್ಖಾನೆಗಳು ಎಥನಾಲ್ ಉತ್ಪಾದಿಸುತ್ತಿವೆ ಎಂದು ಮಾಹಿತಿ ನೀಡಿದರು.