ಮೈಸೂರು[ಫೆ.22]: ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೋನಗೆ ನಕ್ಸಲರ ಜತೆ ಸಂಬಂಧವಿದೆ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಜತೆಗೆ, ತನಿಖೆಯಿಂದ ಆಕೆಗೆ ಯಾರು ಪ್ರೇರಣೆ ನೀಡುತ್ತಿದ್ದಾರೆ ಎಂಬುದು ಬೆಳಕಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗುವ ಮೂಲಕ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಷಡ್ಯಂತ್ರ ನಡೆದಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಅಮೂಲ್ಯ ಹಿಂದಿರುವ ಸಂಘಟನೆ ಯಾವುದು, ಯಾವ ರೀತಿ ಮನೋಭಾವವನ್ನು ಅವರು ಬೆಳೆಸುತ್ತಿದ್ದಾರೆ, ಅವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಇಲ್ಲದಿದ್ದರೆ ಈ ರೀತಿಯ ಘಟನೆ ಕೊನೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಅಮೂಲ್ಯ ತಂದೆಯವರೇ ಅವಳ ಕೈ ಕಾಲು ಮುರಿಯಿರಿ ಎಂದಿದ್ದಾರೆ. ಜತೆಗೆ, ಅವಳಿಗೆ ಜಾಮೀನು ಸಿಗಬಾರದು, ಅವಳ ರಕ್ಷಣೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಇದೇ ವೇಳೆ ಯಡಿಯೂರಪ್ಪ ತಿಳಿಸಿದರು.